ಚೇತನ್ ಭಗತ್
ಚೇತನ್ ಭಗತ್
ಚೇತನ್ ಭಗತ್ ಭಾರತದ ಪ್ರಖ್ಯಾತ ಲೇಖಕ.
ಚೇತನ್ ಭಗತ್ 1974ರ ಏಪ್ರಿಲ್ 22ರಂದು ನವದೆಹಲಿಯಲ್ಲಿ ಜನಿಸಿದರು. ತಂದೆ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ತಾಯಿ ಸರ್ಕಾರದ ಕೃಷಿ ಇಲಾಖೆ ಉದ್ಯೋಗಿಯಾಗಿದ್ದರು.
ಬಹಳಷ್ಟು ಉತ್ತಮ ಬರಹಗಾರರು ತಮ್ಮ ಹೃದಯವನ್ನು ತೆರೆದಿಡುವುದರಲ್ಲಿ ಮತ್ತು ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಗೊಳಿಸುವುದರಲ್ಲಿ ಕಲಾತ್ಮಕತೆಯನ್ನು ಹೊರಹೊಮ್ಮಿಸುತ್ತಾರೆ. ಚೇತನ್ ಭಗತ್ ಇವೆರಡನ್ನೂ ಯಶಸ್ವಿಯಾಗಿ ತೋರಿಸಿಕೊಟ್ಟವರು. ಚಲನಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಲನಚಿತ್ರವಾದ ‘ತ್ರೀ ಈಡಿಯಟ್ಸ್’ ಚಿತ್ರದ ಮೂಲ ಚಿಂತನೆಯ ಆಳ ಚೇತನ್ ಭಗತ್ ಅವರದ್ದು.
ಭಾರತದ ಪ್ರತಿಷ್ಠಿತ ಅಧ್ಯಯನ ಕೇಂದ್ರಗಳಾದ ಐಐಟಿ, ಐಐಮ್‍ಗಳಲ್ಲಿ ವಿದ್ಯಾಭ್ಯಾಸದ ಸಾಧನೆ ಮಾಡಿರುವ ಚೇತನ್ ಭಗತ್ ಅವರ ಬುದ್ಧಿವಂತಿಕೆಗೆ ಪ್ರಮಾಣ ಪತ್ರ ಬೇರೇನೂ ಬೇಕಿಲ್ಲ. ಆದರೆ. ಭಾರತದಲ್ಲಿ ಪ್ರತೀ ವರ್ಷ ಅಂತಹ ಸಾವಿರಾರು ಪ್ರತಿಭೆಗಳು ಹೊರಬರುತ್ತವೆ ಎಂಬುದು ಕೂಡಾ ಅಷ್ಟೇ ಸತ್ಯ!. ಶಿವ್ ಖೇರ ಅವರ ‘ಯು ಕ್ಯಾನ್ ವಿನ್’ ಎಂಬ ಪುಸ್ತಕದ ಮೇಲಿರುವ ಒಂದು ವಾಖ್ಯೆ ನೆನಪಾಗುತ್ತದೆ. ‘ಗೆದ್ದವರು ಬೇರೆಯವರು ಮಾಡದಿರುವ ವಿಶೇಷವಾದದ್ದೇನನ್ನೂ ಮಾಡುವುದಿಲ್ಲ, ಅವರು ಬೇರೆಯವರು ಮಾಡುವುದನ್ನೇ ವಿಶಿಷ್ಟವಾಗಿ ಮಾಡುತ್ತಾರೆ ಅಷ್ಟೇ’. ಚೇತನ್ ಭಗತ್ ಬಹುಶಃ ಅಂತಹ ಸಾಮರ್ಥ್ಯ ತೋರಿದವರು.
ಚೇತನ್ ಭಗತ್ Five Point Someone (2004), One Night @ the Call Center (2005), The 3 Mistakes of my life (2008), 2 States (2009), Revolution 2020 (2011), Half Girlfriend (2014), One Indian Girl (2016) ಕಥಾನಕಗಳನ್ನು ಪ್ರಕಟಿಸಿದ್ದಾರೆ. The Girl in Room 105 (2018), One Arranged Murder (2020), 400 Days (2021) ಸರಣಿ ಬರಹಗಳು. What Young India wants (2012), Making India Awesome (2015), India Positive (2019), 11 Rules For Life: Secrets to Level Up. ಮುಂತಾದವು ಅವರ ಕಥಾನಕಗಳಲ್ಲದ ಬರಹಗಳು.
ಒಮ್ಮೆ ನ್ಯೂಯಾರ್ಕ್ ಟೈಮ್ಸ್ ‘ಚೇತನ್ ಭಗತ್ ಭಾರತದ ಚರಿತ್ರೆಯಲ್ಲೇ ಅತ್ಯಂತ ಪ್ರಸಿದ್ಧ ಇಂಗ್ಲಿಷ್ ಬರೆಹಗಾರ” ಎಂದು ಹೇಳಿತ್ತು. 2010ರಲ್ಲಿ ಟೈಮ್ಸ್ ಪತ್ರಿಕೆ ಚೇತನ್ ಭಗತ್ ವಿಶ್ವದ ನೂರು ಪ್ರಭಾವೀ ವ್ಯಕ್ತಿಗಳಲ್ಲೊಬ್ಬರು” ಎಂದಿತ್ತು. 2014ರಲ್ಲಿ ಅವರು ಸಿಎನ್ಎನ್ ಐಬಿಎನ್ ಭಾರತೀಯ ವರ್ಷದ ವ್ಯಕ್ತಿ ಆಗಿದ್ದರು. 2017ರಲ್ಲಿ ಫೋರ್ಬ್ಸ್ ಅವರನ್ನು ನೂರು ಪ್ರಭಾವಿ ವ್ಯಕ್ತಿ ಪಟ್ಟಿಯಲ್ಲಿರಿಸಿತ್ತು.
ಚೇತನ್ ಭಗತ್ ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿ, ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ಮಹತ್ವದ ಭಾಷಣಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವು ಚಿತ್ರಗಳಿಗೆ ಚಿತ್ರಕಥೆ ಮಾಡಿದ್ದಾರೆ. ಕಿರುತೆರೆಯ ಕಾರ್ರಕ್ರಮಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರದೇ ಯಟ್ಯೂಬ್ ಚಾನೆಲ್, ಪೋಡ್ಕಾಸ್ಟ್, ನೆಟ್‍ಫ್ಲಿಕ್ಸ್ ಶೋ ಮುಂತಾದ ಎಲ್ಲ ಮಾಧ್ಯಮಗಳಲ್ಲಿನ ಉಪಸ್ಥಿತಿ ಇದೆ.
ಒಮ್ಮೆ ಟೈಮ್ಸ್ ಪತ್ರಿಕೆಯಲ್ಲಿ ಎ. ಆರ್ ರೆಹಮಾನ್ ಹೀಗೆ ಹೇಳಿದ್ದಾರೆ:. “ನಾನು ಓದುಗರಲ್ಲಿ ಚೇತನ್ ಅವರ ಅಪಾರವಾದ ಪ್ರಭಾವವನ್ನು ಕಾಣುತ್ತಿದ್ದೇನೆ. ಆತ ‘ನೀವು ನಿಮ್ಮ ಕನಸುಗಳ ಹಿಂದೆ ಹೋಗಿ, ಮತ್ತೊಬ್ಬರ ನಿರೀಕ್ಷೆಗಳಿಗೆ ಶರಣಾಗಬೇಡಿ’ ಎಂದು ಹೇಳುತ್ತಿರುತ್ತಾರೆ. ಅದು ಕುಟುಂಬದ ಪ್ರಭಾವಗಳನ್ನು ತೀವ್ರವಾಗಿ ಹೊಂದಿರುವ ಭಾರತದಂತಹ ದೇಶದಲ್ಲಿ ಸುಲಭ ಸಾಧ್ಯವಲ್ಲ. ನಾನು ಸಂಗೀತಶಾಲೆ ನಡೆಸುತ್ತಿದ್ದೇನೆ. ಬಹಳಷ್ಟು ಜನ ತಮ್ಮ ಕೆಲಸಗಳನ್ನು ಬಿಟ್ಟು ಸಂಗೀತವನ್ನು ಅಭ್ಯಾಸ ಮಾಡಲಿಕ್ಕೆ ಬರಲು ಪ್ರಾರಂಭಿಸಿದ್ದಾರೆ. ಭಾರತದ ಯುವ ಜನಾಂಗ ಧೈರ್ಯಮಾಡಿ ತಮ್ಮ ಕನಸುಗಳಿಗೊಂದು ಅವಕಾಶ ಒದಗಿಸಲು ಪ್ರೇರಿತರಾಗಿರುವುದು ಮಹೋನ್ನತ ಸಂಗತಿ. ಚೇತನ್ ಅವರ ಬರೆವಣಿಗೆ ಅಂತಹ ಧೈರ್ಯಗಳನ್ನು ಪ್ರಚೋದಿಸುವಂತದ್ದು.”
ಕಾಲವು ವ್ಯಕ್ತಿಗಳ ಜನಪ್ರಿಯತೆ ಮತ್ತು ಪ್ರಭಾವಗಳನ್ನು ಒಂದೇ ತೆರನಾಗಿರಿಸಿರುವುದಿಲ್ಲ. ಇದಕ್ಕೆ ಚೇತನ್ ಭಗತ್ ಅವರು ಕೂಡಾ ಹೊರತಾಗಿಲ್ಲ. ಆದರೆ ಅವರು ಬರವಣಿಗೆಯಲ್ಲಿ ಮೂಡಿಸಿದ್ದ ಹೊಸಗಾಳಿಯನ್ನು ಮತ್ತು ಅವರಿಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
Chethan Bhagat
ಕಾಮೆಂಟ್‌ಗಳು