ಕಪಿಲಾ ಶ್ರೀಧರ್
ಕಪಿಲಾ ಶ್ರೀಧರ್
ಕಪಿಲಾ ಶ್ರೀಧರ್ ಅಂದರೆ ವಿಜ್ಞಾನ - ಅಧ್ಯಾತ್ಮ - ಮನಃಶಾಸ್ತ್ರ - ಸಾಹಿತ್ಯ - ಸಂಗೀತ - ಸಂಸ್ಕೃತಿ ಸೇರಿದಂತೆ ಬಹುಮುಖಿ ಪ್ರತಿಭೆಗಳು ಏಕತ್ರ ಸಂಯೋಗಗೊಂಡ ವ್ಯಕ್ತಿತ್ವ ಕಣ್ಣಮುಂದೆ ಬರುತ್ತದೆ. ವಿಜ್ಞಾನಿಗಳು, ವಿದ್ವಾಂಸರುಗಳ ಮಟ್ಟದಲ್ಲಿ ನಿಂತು ಸಂವಹನ ನಡೆಸುವಷ್ಟೇ ಸರಾಗವಾಗಿ ಸಾಮಾನ್ಯರಲ್ಲಿ ಸಾಮಾನ್ಯರೊಂದಿಗೆ ಸಹ ಅವರು ಬೆರೆಯುವ ರೀತಿ ವಿಸ್ಮಯರೂಪದ ಅಚ್ಚರಿ ಅಕ್ಕರೆಗಳನ್ನು ಮೂಡಿಸುತ್ತವೆ. ಯಾವುದೇ ವಿಚಾರವನ್ನು ಮಂಡಿಸುವಾಗಲು ಅವರಿಗಿರುವ ವಿನಯಪೂರ್ವಕ ಸುಸ್ಪಷ್ಟತೆ
ಮನನೀಯವಾದದ್ದು.
ಏಪ್ರಿಲ್ 22, ಕಪಿಲಾ ಅವರ ಜನ್ಮದಿನ. ತಂದೆ ರಾಮರಾವ್, ತಾಯಿ ಸುಧಾ ರಾಮರಾವ್. ಈ ದಂಪತಿಗಳಿಗೆ ಜ್ಯೇಷ್ಠ ಪುತ್ರಿಯಾಗಿ ನಂಜನಗೂಡಿನಲ್ಲಿ ಜನಿಸಿದ ಇವರು ಮೂಲತಃ ತೀರ್ಥಹಳ್ಳಿಯವರು. ನಂಜನಗೂಡು ಮತ್ತು ಮೈಸೂರಿನಲ್ಲಿ ವಿಧ್ಯಾಭ್ಯಾಸ ನಡೆಸಿದ ಇವರು ಮೈಸೂರು ವಿಶ್ವವಿಧ್ಯಾನಿಲಯದಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ಲಯನ್ಸ್ ಸಂಸ್ಥೆಯೊಂದಿಗಿನ ಒಡನಾಟದಲ್ಲಿ, ವಿಶ್ವಸಂಸ್ಥೆಯ ಪ್ರಾಯೋಜಿತ ಹದಿಹರೆಯದ ಮಕ್ಕಳ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನ ಕಾರ್ಯಾಗಾರ Questನಲ್ಲಿ ತರಬೇತಿ ಪಡೆದಿರುವ ಕಪಿಲಾ ಅವರು, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿಗಳನ್ನು ಕೂಡ ಗಳಿಸಿದ್ದಾರೆ.
ಕಪಿಲಾ ಅವರು ಆರೋಗ್ಯ ಧಾನ್ಯಗಳ ಉತ್ತಮ ಇಳುವರಿಗಾಗಿ ಶ್ರಮಿಸುವುದರಲ್ಲಿ ಹೆಸರಾದ AFPRO ಸಂಸ್ಥೆಯಲ್ಲಿ ನೇಮಕೊಂಡ ಮೊದಲ ಮಹಿಳಾ ಭೂವಿಜ್ಞಾನಿ. ಈ ಹುದ್ದೆಯ ಮೂಲಕ ಅವರು ದಕ್ಷಿಣ ಭಾರತದ ಚಿಕ್ಕ ಪುಟ್ಟ ಹಳ್ಳಿಗಳಿಂದ ಮೊದಲ್ಗೊಂಡು, ಮಹಾನಗರಗಳವರೆಗೂ ಅನೇಕ ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಹಳ್ಳಿಗಾಡಿನ ಕಟ್ಟಕಡೆಯ ನಿರ್ಲಕ್ಷಿತ ಭೂಮಿಯಲ್ಲೂ ಭೂವಿಜ್ಞಾನಿಯಾಗಿ ದುಡಿದ ಅನುಭವ ಇವರೊಂದಿಗಿದೆ.
ಮುಂದೆ ಕಪಿಲಾ ಅವರು ಬೆಂಗಳೂರಿನ ರಾಷ್ಟ್ರೀಯ ವಿದ್ಯಾಲಯ (R V) ಇಂಜಿನೀಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆ ನಿರ್ವಹಿಸಿದರು. ನಂತರ ಬೆಂಗಳೂರಿನಲ್ಲಿ ಮಾನಸಿಕ ಸಲಹಾತಜ್ಜೆಯಾಗಿ ಕೆಲಸ ಮಾಡುತ್ತಿದ್ದಾರೆ. ಮನೋವಿಜ್ಞಾನಕ್ಕೆ ಸಂಬಂಧಿಸಿದ ಹಲವಾರು ಕಾರ್ಯಾಗಾರಗಳು, ಶಾಲಾ-ಕಾಲೇಜಿನಲ್ಲಿ ಪ್ರಾತ್ಯಕ್ಷಿಕೆಗಳು, ಉಪನ್ಯಾಸ ಹಾಗೂ ಸಮಾಲೋಚನೆಗಳೊಡನೆ ಸಮಾಜಮುಖಿ ನಡೆಗಳು ಇವರ ಕಾರ್ಯವ್ಯಾಪ್ತಿಯಲ್ಲಿ ಜೊತೆಗೂಡಿವೆ. ರಾಷ್ಟ್ರೀಯ ಸೇವಾ ಯೋಜನೆಯ ಹೆಮ್ಮೆಯ ಸ್ವಯಂ ಸೇವಕಿಯೂ ಆಗಿರುವ ಇವರು ದೆಹೆಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿ ಗಳಿಸಿದ್ದಾರೆ.
ಸಂಗೀತ, ಸಾಹಿತ್ಯ ಎರಡೂ ಶ್ರೀಮತಿ ಕಪಿಲಾ ಶ್ರೀಧರ್ ಅವರ ಅಭಿವ್ಯಕ್ತಿಯ ಸಶಕ್ತ ಮಾಧ್ಯಮಗಳು. ಭಕ್ತಿಮಾರ್ಗದಲ್ಲಿ ಸಂಗೀತದ ಸ್ವರಗಳೊಂದಿಗೆ ತಮ್ಮ ಪಯಣವನ್ನು ಮುಂದುವರೆಸಿರುವ ಕಪಿಲಾ ಅವರು ಸ್ವತಂತ್ರ ಮನೋಧರ್ಮದ ಗಾಯಕಿಯಾಗಿದ್ದಾರೆ. ಅನೇಕ
ಪ್ರತಿಷ್ಠಿತ ವೇದಿಕೆಗಳಲ್ಲಿ ಗಾಯನವನ್ನೂ ಮಾಡಿದ್ದಾರೆ. ನಗರ ಹಾಗು ಗ್ರಾಮೀಣ ಶಾಲೆಗಳಲ್ಲಿನ ಶಿಕ್ಷಕರು ಹಾಗೂ ಮಕ್ಕಳಿಗೆ ವ್ಯಕ್ತಿತ್ವ ವಿಕಸನದ ಬಗೆಗಿನ ಮಾತುಕತೆ ಹಾಗೂ ಪ್ರಾತ್ಯಕ್ಷಿಕೆ ಪ್ರಸ್ತುತಿಗಳ ಮೂಲಕ ಸಧೃಢ ಮನಸ್ಸಿನ, ಆರೋಗ್ಯಕರ ವಿಚಾರಧಾರೆಯುಳ್ಳ ಪೀಳಿಗೆಯನ್ನು ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ವೃತ್ತಿನಿರತ ಮನೋವಿಜ್ಞಾನಿಯಾಗಿ, ಮಾನಸಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದವರಿಗೆ ಆಪ್ತಸಲಹಾ ಚಿಕಿತ್ಸಕಿಯಾಗಿ ಸಮಾಜದ ವಿವಿಧ ಸ್ತರಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕಪಿಲಾ ಅವರ ವೃತ್ತಿ ಬದುಕಿನ ಅನುಭವ ಹಾಗೂ ವೈವಿಧ್ಯತೆಗಳು ಅಪಾರವಾಗಿದೆ. ವಿವಿಧ ಸಂಘ ಸಂಸ್ಥೆಗಳೊಂದಿಗಿನ ಒಡನಾಟದಲ್ಲಿ ಉಚಿತ ವೈದ್ಯಕೀಯ ನೆರವಿನ ಸೇವೆಯನ್ನೂ ನಿರ್ವಹಿಸುತ್ತಿದ್ದಾರೆ.
ಕಪಿಲಾ ಅವರ ವಿಚಾರಯುಕ್ತ ಮತ್ತು ಆಪ್ತ ರೀತಿಯ ಬರೆಹಗಳು ಸಾಹಿತ್ಯಕವಾಗಿ ಗಮನ ಸೆಳೆದಿವೆ. "ಧೇನುಧ್ಯಾನ" ಇವರ ಪ್ರಕಟಿತ ಕವನ ಸಂಕಲನ. ಇವರು ರಚಿಸಿದ ಕಥೆಗಳು ನಾಡಿನ ಹಲವಾರು ಪ್ರಮುಖ ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ಬೆಂಗಳೂರಿನ ಕನ್ನಡ ಪ್ರಕಾಶನ ಪ್ರಕಟಿಸಿರುವ. ಮೂರು ತಲೆಮಾರಿನ ಕನ್ನಡಲೇಖಕಿಯರಉತ್ತಮ 108 ಕಥೆಗಳ ಸಂಕಲನವಾದ "ಮಹಿಳಾ ಕಥಾಸಂಪದ"ದಲ್ಲಿ ಕಪಿಲಾ ಅವರ ಕಥೆ ಕಂಗೊಳಿಸಿದೆ. ಅಮೆರಿಕದ ಅಕ್ಕ ಸಮ್ಮೇಳನದಲ್ಲಿ ಇವರ ಕತೆ ಪ್ರಶಸ್ತಿಗೆ ಭಾಜನವಾಗಿದೆ. ಇವಲ್ಲದೆ ಹಲವಾರು ವೈದ್ಯಕೀಯ, ಮನೋಚಿಕಿತ್ಸಕ ಲೇಖನಗಳು, ಪ್ರಬಂಧಗಳು, ಅಧ್ಯಾತ್ಮ ವಿಚಾರ, ಆಪ್ತ ಅನುಭಾವದ ಲಹರಿಗಳೂ ಇವರ ಬರೆಹಗಳಲ್ಲಿ ನಿರಂತರ ಕಂಗೊಳಿಸುತ್ತಿವೆ.
ಕಪಿಲಾ ಅವರು ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆಕಾಶವಾಣಿಯಲ್ಲೂ ಕಾರ್ಯಕ್ರಮ ಪ್ರಸ್ತುತಿ ಮಾಡಿದ್ದಾರೆ. ಅವರ ಸಂದರ್ಶನಗಳು ಬಾನುಲಿಯಲ್ಲಿ, ದೂರದರ್ಶನದಲ್ಲಿ ಪ್ರಸಾರಗೊಂಡಿದ್ದು ಅವರ ವಿಷಯಾಭಿವ್ಯಕ್ತಿಯ ಸಾಮರ್ಥ್ಯಗಳು ಅಪಾರ ಜನಮೆಚ್ಚುಗೆ ಗಳಿಸಿವೆ.
ಯಾವುದೇ ಪ್ರಚಾರವಿಲ್ಲದೆ ಶ್ರದ್ಧಾ ಮನೋಭಾವದ ಆತ್ಮಸಂತಸದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಪಿಲಾ ಅವರನ್ನು 'ಕನ್ನಡ ಭೂಷಣ', 'ಉದಯಭಾನು ಸುವರ್ಣ ವೈದ್ಯರತ್ನ' ಮುಂತಾದ ಅನೇಕ ಗೌರವಗಳು ಅರಸಿ ಬಂದಿವೆ.
ಕಪಿಲಾ ಅವರು ಹಬ್ಬದ ಸಂದರ್ಭಗಳಲ್ಲಿ ಸಾರ್ವಜನಿಕ ವಲಯಗಳಲ್ಲಿ ಕೆಲಸ ಮಾಡುವ ಸದ್ಗುಣಶಾಲಿಗಳಾದ ಸಾಮಾನ್ಯ ಸ್ತ್ರೀಯರು, ಬೀದಿ ಕಾರ್ಮಿಕರು, ತರಕಾರಿ ಮಾರುವವರು ಮುಂತಾದವರನ್ನು ಹುಡುಕಿಕೊಂಡು ಹೋಗಿ ಹಬ್ಬದ ಬಾಗಿನದಂತಹ ಗೌರವಗಳನ್ನು ಸಲ್ಲಿಸುವ ಹೃದಯ ವೈಶಾಲ್ಯತೆ ಮನಮುಟ್ಟುವಂತದ್ದು.
ಎಲ್ಲರೊಂದಿಗೆ ಸರಳವಾಗಿ ಹಸನ್ಮುಖತೆಯಿಂದ ಕಪಿಲಾ ಅವರು ಬೆರೆಯುವ ಪರಿ, ಅವರ ಸಂಪರ್ಕದಲ್ಲಿರುವ ನಮಗೂ ಏನೋ ಬೆಳಕು ತಂದಂತಹ ಭಾವ ಮೂಡಿಸುತ್ತಿದೆಯೇನೊ ಅನಿಸುತ್ತದೆ.
ನಮಗೂ ಕಪಿಲಾ ಶ್ರೀಧರ್ ಅವರು ಆತ್ಮೀಯರು ಎಂಬುದು ನಮ್ಮ ಹೆಮ್ಮೆ. ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Kapila Sridhar 🌷🙏🌷
ಕಾಮೆಂಟ್‌ಗಳು