ಪಂಡಿತಾ ರಮಾಬಾಯಿ
ಪಂಡಿತಾ ರಮಾಬಾಯಿ ಸರಸ್ವತಿ
ಪಂಡಿತಾ ರಮಬಾಯಿ ಸರಸ್ವತಿ ಭಾರತೀಯ ಸಮಾಜ ಸುಧಾರಕರಾಗಿ, ಮಹಿಳಾ ಶಿಕ್ಷಣಕ್ಕಾಗಿ ದುಡಿದವರಾಗಿ ಹೆಸರಾಗಿದ್ದಾರೆ.
ರಮಾಬಾಯಿ ಸರಸ್ವತಿ 1858ರ ಏಪ್ರಿಲ್ 23ರಂದು ಜನಿಸಿದರು. ತಂದೆ ಸಂಸ್ಕೃತ ವಿದ್ವಾಂಸ ಅನಂತ್ ಶಾಸ್ತ್ರಿ ಡೊಂಗ್ರೆ. ತಾಯಿ ಲಕ್ಷ್ಮಿಬಾಯಿ ಡೊಂಗ್ರೆ. ರಮಾಬಾಯಿ ತಂದೆಯವರಿಂದ ಸಂಸ್ಕೃತ ಕಲಿತರು.
1877ರ ಕ್ಷಾಮದಲ್ಲಿ ಪೋಷಕರು ಮರಣಹೊಂದಿದಾಗ, ರಮಾಬಾಯಿ ಮತ್ತು ಅವರ ಸಹೋದರ, ಶ್ರೀನಿವಾಸ್ ತಮ್ಮ ತಂದೆಯ ಕೆಲಸವನ್ನು ಮುಂದುವರಿಸಲು ನಿರ್ಧರಿಸಿ, ಭಾರತದಾದ್ಯಂತ ಪ್ರಯಾಣಿಸಿದರು. ಉಪನ್ಯಾಸಕಿಯಾಗಿ ರಮಬಾಯಿಯವರ ಖ್ಯಾತಿ ಕಲ್ಕತ್ತಾವನ್ನು ತಲುಪಿತು. 1878ರಲ್ಲಿ, ಕಲ್ಕತ್ತಾ ವಿಶ್ವವಿದ್ಯಾನಿಲಯವು ಪಂಡಿತಾ ಎಂಬ ಹೆಸರಿನ ಪ್ರಶಸ್ತಿಯನ್ನು ನೀಡಿತು ಮತ್ತು ವಿವಿಧ ಸಂಸ್ಕೃತ ಕೃತಿಗಳ ವ್ಯಾಖ್ಯಾನಗಳನ್ನು ಗುರುತಿಸಿ ಸರಸ್ವತಿ ಎಂಬ ಅತ್ಯುನ್ನತ ಪ್ರಶಸ್ತಿಯನ್ನು ನೀಡಿತು.
1880ರಲ್ಲಿ ಸೋದರ ಶ್ರೀನಿವಾಸ್ ಮರಣದ ನಂತರ, ರಮಾಬಾಯಿ ಬೆಂಗಾಲಿ ವಕೀಲರಾದ ಬಿಪಿನ್ ಬಿಹಾರಿ ಮೆಧ್ವಿ ಅವರನ್ನು ಮದುವೆಯಾದರು. ಈ ದಂಪತಿಗಳಿಗೆ ಮನೋರಮಾ ಎಂಬ ಹೆಣ್ಣು ಮಗುವಾಯಿತು.
ರಮಾಬಾಯಿ ಭಾರತೀಯ ಮಹಿಳೆಯರು, ವಿಶೇಷವಾಗಿ ಹಿಂದೂ ಸಂಪ್ರದಾಯಗಳನ್ನು ಸುತ್ತುವರೆದಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿದರು ಮತ್ತು ಚರ್ಚಿಸಿದರು.
1882ರಲ್ಲಿ ತಮ್ಮ ಪತಿ ಮೆಧ್ವಿ ಅವರ ಮರಣದ ನಂತರ, ರಮಾಬಾಯಿ ಪುಣೆಗೆ ತೆರಳಿದರು. ಅಲ್ಲಿ 'ಆರ್ಯ ಮಹಿಳಾ ಸೊಸೈಟಿ' ಎಂಬ ಸಂಸ್ಥೆ ಸ್ಥಾಪಿಸಿದರು. ಬಾಲ್ಯ ವಿವಾಹದಿಂದ ದುರ್ದೆಶೆಗೊಳಗಾದ ಮಹಿಳೆಯರಿಗೆ ಶಿಕ್ಷಣ ನೀಡಿ ಅವರಿಗೆ ಉಂಟಾದ ತೊಂದರೆಗಳಿಂದ ವಿಮೋಚನೆಯನ್ನು ಉತ್ತೇಜಿಸುವುದು ಆ ಸಮಾಜದ ಉದ್ದೇಶ. 1882ರಲ್ಲಿ ಶಿಕ್ಷಣದ ಸ್ಥಿತಿಗತಿಗಳನ್ನು ವಿಮರ್ಶಿಸಲು ಭಾರತ ಸರ್ಕಾರವು ಆಯೋಗವನ್ನು ನೇಮಿಸಿದಾಗ, ರಮಾಬಾಯಿ ಸಾಕ್ಷ್ಯ ನೀಡಿದರು. ಲಾರ್ಡ್ ರಿಪನ್ ಮುಂದಾಳ್ತನದ ಶಿಕ್ಷಣ ಕಮಿಷನ್‌ಗೆ ನೀಡಿದ ಭಾಷಣದಲ್ಲಿ, "ನೂರರಲ್ಲಿ ತೊಂಬತ್ತು ಪ್ರಕರಣಗಳಲ್ಲಿ ಈ ದೇಶದ ವಿದ್ಯಾವಂತ ಪುರುಷರು, ಸ್ತ್ರೀ ಶಿಕ್ಷಣ ಮತ್ತು ಮಹಿಳೆಯರಿಗೆ ಸರಿಯಾದ ಸ್ಥಾನ ನೀಡಲು ವಿರೋಧಿಸಿದ್ದಾರೆ. ನಾಡಿನಲ್ಲಿ ಸಾಸಿವೆ-ಬೀಜದ ಧಾನ್ಯದಂತೆ ಇರುವ ಧಾರ್ಮಿಕ ದಯೆಯು, ಪರ್ವತದಷ್ಟಿರುವ ದಾರುಣತೆಯನ್ನು ಹೆಚ್ಚಿಸಿ ಮಹಿಳೆಯ ಸ್ವಾತಂತ್ರ್ಯವನ್ನು ಹಾಳುಮಾಡಲು ಪ್ರಯತ್ನಿಸಿದೆ” ಎಂಬುದು ರಮಾಬಾಯಿಯವರ ನುಡಿಯಾಗಿತ್ತು.
ಮಹಿಳಾ ಶಿಕ್ಷಕರಿಗೆ ತರಬೇತಿ ನೀಡಲು ಮತ್ತು ಮಹಿಳಾ ಶಾಲೆಯ ತನಿಖಾಧಿಕಾರಿಗಳನ್ನು ನೇಮಕ ಮಾಡಲು ರಮಾಬಾಯಿ ಸಲಹೆ ನೀಡಿದರು. ಇದಲ್ಲದೆ, ಭಾರತದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ ನೀಡಬಹುದೆಂದು ಭಾರತೀಯ ಮಹಿಳಾ ವೈದ್ಯಕೀಯ ಕಾಲೇಜುಗಳು ಒಪ್ಪಿಕೊಳ್ಳಬೇಕು ಎಂದು ಅವರು ಹೇಳಿದರು. ರಮಾಬಾಯಿಯವರ ಸಾಕ್ಷಿಯು ಒಂದು ದೊಡ್ಡ ಸಂವೇದನೆಯನ್ನು ಸೃಷ್ಟಿಸಿತು ಅದು ರಾಣಿ ವಿಕ್ಟೋರಿಯಾರನ್ನು ತಲುಪಿತು. ಲೇಡಿ ಡಫ್ಫೆರಿನ್ ಅವರ ಮಹಿಳಾ ವೈದ್ಯಕೀಯ ಚಳವಳಿಯ ಪ್ರಾರಂಭದಿಂದ ಇದು ಸಫಲತೆಯನ್ನು ಕಂಡಿತು.
ರಮಾಬಾಯಿ ಅವರು ಕವಯತ್ರಿಯಾಗಿದ್ದರು. ಮಹಿಳೆಯರ ಶಿಕ್ಷಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಭಾರತದಲ್ಲಿ ಮಹಿಳೆಯರ ಸ್ವಾವಲಂಬನೆಯ ಮನೊಭಾವ ಜಾಗೃತಗೊಳಿಸಬೇಕು ಎಂಬ ನಿಟ್ಟಿನಲ್ಲಿ ಭಾರತದಲ್ಲೆಲ್ಲ ವ್ಯಾಪಕವಾಗಿ ಸಂಚರಿಸಿದರು.
ರಮಾಬಾಯಿ ಅವರು 1883ರಲ್ಲಿ ವೈದ್ಯಕೀಯ ತರಬೇತಿಗಾಗಿ ಬ್ರಿಟನ್‌ಗೆ ತೆರಳಿದರು. ಆ ಸಮಯದಲ್ಲಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ಬ್ರಿಟನ್ನಿಂದ ಅವರು 1886ರಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿದರು. ಮೊದಲ ಭಾರತೀಯ ಮಹಿಳಾ ವೈದ್ಯರಾದ ಆನಂದಿಬಾಯಿ ಜೋಶಿ ಅವರಿಂದ ಸ್ಪೂರ್ತಿ ಪಡೆದು ಪದವಿಯನ್ನು ಎರಡು ವರ್ಷಗಳ ಕಾಲದಲ್ಲಿ ಪಡೆದರು. ಈ ಸಮಯದಲ್ಲಿ ಅವರು ಪಠ್ಯಪುಸ್ತಕಗಳನ್ನು ಭಾಷಾಂತರಿಸಿದರು ಮತ್ತು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಾದ್ಯಂತ ಉಪನ್ಯಾಸಗಳನ್ನು ನೀಡಿದರು.
ರಮಾಬಾಯಿ 'ಹೈ-ಕ್ಯಾಸ್ಟ್ ಹಿಂದೂ ವುಮನ್' ಎಂಬ ಮೊದಲ ಪುಸ್ತಕ ಪ್ರಕಟಿಸಿದರು. ಇದನ್ನು 1887ರ ಫೆಬ್ರುವರಿಯಲ್ಲಿ ನಿಧನರಾದ ಡಾ. ಆನಂದಿ ಬಾಯಿ ಜೋಶಿಯವರಿಗೆ ಅರ್ಪಿಸಿದರು.
1896ರಲ್ಲಿ ತೀವ್ರ ಕ್ಷಾಮದ ಸಮಯದಲ್ಲಿ ರಮಾಬಾಯಿ ಮಹಾರಾಷ್ಟ್ರದ ಹಳ್ಳಿಗಳಲ್ಲಿ ಎತ್ತಿನಬಂಡಿಗಳಲ್ಲಿ ಸಂಚರಿಸಿ ಸಾವಿರಾರು ಜನ ಬಹಿಷ್ಕೃತ ಮಕ್ಕಳು, ವಿಧವೆಯರು, ಅನಾಥರು ಮತ್ತು ನಿರಾಶ್ರಿತರ ಮಹಿಳೆಯರನ್ನು ರಕ್ಷಿಸಿ ಶಾರದಾ ಸದನಗಳ ಆಶ್ರಯಸ್ಥಾನಕ್ಕೆ ಕರೆತಂದರು. ಏಳು ಭಾಷೆಗಳಲ್ಲಿ ಪರಿಣತಿ ಪಡೆದಿದ್ದ ರಾಮಾಬಾಯಿ, ಬೈಬಲ್ ಅನ್ನು ಮರಾಠಿಗೆ ಭಾಷಾಂತರಿಸಿದರು.
1990ರ ಹೊತ್ತಿಗೆ 1500 ನಿವಾಸಿಗಳು ಮತ್ತು ಸುಮಾರು ನೂರು ಜಾನುವಾರುಗಳಿಗೆ ಮುಕ್ತಿ ಮಿಷನ್ನಲ್ಲಿ ಅವಕಾಶ ನೀಡಲಾಯಿತು. ಮುಕ್ತಿ ಮಿಷನ್ ಮೂಲಕ ಚರ್ಚ್ ಅನ್ನು ಸ್ಥಾಪಿಸತೊಡಗಿದರು. ಪಂಡಿತ ರಮಾಬಾಯಿ ಮುಕ್ತಿ ಮಿಷನ್ ಇಂದಿಗೂ ಸಕ್ರಿಯವಾಗಿದೆ. ವಿಧವೆಯರು, ಅನಾಥರು ಮತ್ತು ಕುರುಡರು ಸೇರಿದಂತೆ ಅನೇಕ ಅಗತ್ಯ ಗುಂಪುಗಳಿಗೆ ವಸತಿ, ಶಿಕ್ಷಣ, ವೃತ್ತಿಪರ ತರಬೇತಿ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವುದು ಈ ಮಿಷನ್ನಿನ ಗುರಿ.
ಪಂಡಿತಾ ರಮಾಬಾಯಿ ತಮ್ಮ ಪುತ್ರಿ ಮನೋರಮಾ ಬಾಯಿಗೆ ಶಿಕ್ಷಣ ನೀಡಿದ್ದರು. ಮನೋರಮಾ ಬಾಂಬೆ ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಪದವಿ ಪಡೆದು, ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ
ಹೋದರು. ಪದವಿ ಪಡೆದು ಭಾರತಕ್ಕೆ ಮರಳಿ ಮುಂಬೈಯ ಶಾರದಾ ಸದನ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಅವರ ಸಹಾಯದಿಂದ, ಪಂಡಿತಾ ರಮಾಬಾಯಿ 1912ರಲ್ಲಿ ಗುಲ್ಬರ್ಗದಲ್ಲಿ ಕ್ರಿಶ್ಚಿಯನ್ ಪ್ರೌಢಶಾಲೆ ಸ್ಥಾಪಿಸಿದರು. ಈ ಶಾಲೆಗೆ ರಮಾಬಾಯಿ ಪುತ್ರಿ ಮನೋರಮಾ ಪ್ರಿನ್ಸಿಪಾಲ್ ಆಗಿದ್ದರು. ಪಟ್ಟುಹಿಡಿದ ಟೀಕೆಗಳ ನಡುವೆಯೂ, ರಮಾಬಾಯಿ ವಿಧವೆಯರಿಗೆ ಸಹಾಯ ಮಾಡುವ ಗುರಿಯ ಮೇಲೆ ತಮ್ಮ ಚಿತ್ತವನ್ನು ಕೇಂದ್ರೀಕರಿಸಿದರು.
ಮನೋರಮಾ 1921ರಲ್ಲಿ ಮರಣಹೊಂದಿದರು. ಮಗಳ ಸಾವು ರಮಾಬಾಯಿ ಅವರಿಗೆ ಆಘಾತ ತಂದಿತು. ರಮಾಬಾಯಿ 1922ರ ಏಪ್ರಿಲ್ 5ರಂದು ತಮ್ಮ 64ನೇ ವಯಸ್ಸಿನಲ್ಲಿ ನಿಧನರಾದರು.
On the birth anniversary of Pandita Ramabai Saraswathi
ಕಾಮೆಂಟ್‌ಗಳು