ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಲಿಯಂ ಷೇಕ್‌ಸ್ಪಿಯರ್


 ವಿಲಿಯಂ ಷೇಕ್‌ಸ್ಪಿಯರ್


ಸಾಹಿತ್ಯ ಜಗತ್ತಿನ ಅಮರ ವ್ಯಕ್ತಿ ವಿಲಿಯಂ ಷೇಕ್‌ಸ್ಪಿಯರ್ ಜನಿಸಿದ ದಿನವಿದು. 

ವಿಲಿಯಂ ಷೇಕ್‌ಸ್ಪಿಯರ್  1564 ವರ್ಷದ ಏಪ್ರಿಲ್ 23ರಂದು ಜನಿಸಿದರು ಎಂದು ನಂಬಲಾಗಿದೆ.  ಅವರು ಬಾಳಿ ಬದುಕಿದ್ದು ಕೇವಲ 52 ವರ್ಷಗಳಷ್ಟೇ. ಷೇಕ್‌ಸ್ಪಿಯರ್ ಇಂಗ್ಲೆಂಡಿನಲ್ಲಿ ಹುಟ್ಟಿ ಇಂಗ್ಲೀಷ್‌ನಲ್ಲಿ ಕೃತಿ ರಚನೆ ಮಾಡಿದರೂ ಪ್ರತಿಯೊಂದು ದೇಶವೂ ಅವರನ್ನು ತನ್ನದೇ ರೀತಿಯಲ್ಲಿ ತಮ್ಮವನನ್ನಾಗಿ  ಮಾಡಿಕೊಂಡಿದೆ. ಹೀಗೆ 'ಎಲ್ಲರೊಳಗೊಂದಾಗಿರುವುದು' ಎಂಬುದನ್ನು ಕಲ್ಪಿಸುವುದೇ ರೋಮಾಂಚನಕಾರಿಯಾದುದು!

1881 ರಿಂದ ಪ್ರಸ್ತುತ ಸಂದರ್ಭದವರೆಗೂ ಷೇಕ್‌ಸ್ಪಿಯರ್ ಸಾಹಿತ್ಯ, ಕನ್ನಡ ಸಂವೇದನೆಯನ್ನೂ ಒಂದಲ್ಲಾ ಒಂದು ಬಗೆಯಲ್ಲಿ ಪ್ರಭಾವಿಸುತ್ತಲೇ ಬಂದಿದೆ. 1964ರಲ್ಲಿ ಕನ್ನಡ ಜಗತ್ತು ಈ ಮಹಾಕವಿಯ 400ನೇ ವರ್ಧಂತಿಯನ್ನು ವಿಜೃಂಭಣೆಯಿಂದ ಆಚರಿಸಿತ್ತು. ಅದರ ಸವಿನೆನಪಿನ ಗುರುತಾಗಿ ಶಾ. ಬಾಲೂರಾಯರ ಸಂಪಾದಕತ್ವದಲ್ಲಿ ‘ಷೇಕ್‌ಸ್ಪಿಯರಿಗೆ ನಮಸ್ಕಾರ’ ಎಂಬ ಸ್ಮಾರಕ ಗ್ರಂಥವನ್ನು (ಪ್ರಕಾಶಕರು: ಕನ್ನಡ ಭಾರತಿ, ಹೊಸದಿಲ್ಲಿ ,1966) ಅರ್ಪಿಸಲಾಗಿತ್ತು. ಖ್ಯಾತ ಕಲಾವಿದರಾದ ಆರ್. ಎಸ್. ನಾಯಿಡು ಅವರು ಬರೆದ ಅರವತ್ತಕ್ಕೂ ಅಧಿಕ ಕಲಾಕೃತಿಗಳಿಂದ ಕೂಡಿರುವ ಆ ಗ್ರಂಥಕ್ಕೆ ಸರಿದೂಗುವ ಸ್ಮಾರಕಗ್ರಂಥ ಕನ್ನಡಲ್ಲಿ ಹೆಚ್ಚು ಇಲ್ಲ ಎಂಬ ಮಾತಿದೆ.

ವಿಲಿಯಂ ಷೇಕ್‌ಸ್ಪಿಯರ್ ಇಂಗ್ಲೆಂಡಿನ ಮಧ್ಯಭಾಗದ, ಲಂಡನ್‌ನಿಂದ  92 ಮೈಲಿ ದೂರದ ಏವನ್ ನದಿಯ ದಡದ ಮೇಲಿರುವ ಸ್ಟ್ರಾಟ್‌ಫರ್ಡ್‌ ಎಂಬಲ್ಲಿ ಜನಿಸಿದರು. ಸ್ಟ್ರಾಟ್‌ಫರ್ಡ್‌ನ ಪ್ಯಾರಿಸ್ ಚರ್ಚಿನ ದಾಖಲೆಗಳಲ್ಲಿನ ವಿವರಗಳಂತೆ ಷೇಕ್‌ಸ್ಪಿಯರ್‌ಗೆ ಧರ್ಮಸ್ನಾನವಾದುದು (ಬ್ಯಾಪ್ಟಿಸಂ) ಏಪ್ರಿಲ್ 26ಕ್ಕೆ. ಅವರ ತಂದೆ ಜಾನ್ ಷೇಕ್‌ಸ್ಪಿಯರ್ , ತಾಯಿ ಮೇರಿ ಆರ್ಡೆನ್. ಅವರದು ಕೃಷಿಕ ಕುಟುಂಬ. ಈ ದಂಪತಿಗಳ ಮೂರನೇ ಮಗನೇ ವಿಲಿಯಂ ಷೇಕ್‌ಸ್ಪಿಯರ್.

ಮಹಡಿ ಮನೆಗಳಿಂದ ಕೂಡಿದ ಬೀದಿಗಳು, ಅಂಗಡಿ ಸಾಲು, ಚರ್ಚು, ಒಂದು ಗ್ರಾಮರ್ ಸ್ಕೂಲ್, ಹಸಿರು ಹುಲ್ಲು ಬಯಲುಗಳಿಂದ ಕೂಡಿದ್ದ ಸ್ಟ್ರಾಟ್‌ಫರ್ಡ್ ಊರು ಷೇಕ್‌ಸ್ಪಿಯರ್ ಬಾಲ್ಯದ ಮೇಲೆ ಬಹಳ ಪ್ರಭಾವ ಬೀರಿದೆ. ಹತ್ತೊಂಬತ್ತು ವರ್ಷ ತುಂಬುವ ಮೊದಲೇ ಷೇಕ್‌ಸ್ಪಿಯರ್ ತಮಗಿಂತ ಎಂಟು ವರ್ಷದಷ್ಟು ಹಿರಿಯವರಾದ ಆ್ಯನ್ ಹ್ಯಾತವೇ ಎಂಬಾಕೆಯನ್ನು ಮದುವೆಯಾದರು.

ಪಾಶ್ಚಾತ್ಯ ಸಂಸ್ಕೃತಿಯ ಸಂಪರ್ಕದಿಂದ ಅನೇಕ ದಾರ್ಶನಿಕರ, ವೈಜ್ಞಾನಿಕರ, ಕವಿ ಮತ್ತು ನಾಟಕಕಾರರ ಕೃತಿಗಳು ಮತ್ತು ವಿಚಾರಗಳು ನಮ್ಮ ಕನ್ನಡ ಸಂಸ್ಕೃತಿಯ ಭಾಗವಾಗಿವೆ. ಈ ಪ್ರಕ್ರಿಯೆಯನ್ನು ಕುವೆಂಪು ಅವರು ‘ಪುಣ್ಯ ಜೀವನದ ಗರ್ಭಿತವಾದ ಸುಮುಹೂರ್ತ’ವೆಂದು ಕರೆದಿದ್ದಾರೆ.

1881ರಿಂದ ಆರಂಭಗೊಂಡ ಷೇಕ್‌ಸ್ಪಿಯರ್ ಭಾಷಾಂತರಗಳು ಇಂದಿಗೂ ನಿಂತಿಲ್ಲ. ಹತ್ತು ಹಲವು ಪ್ರಯೊಗಗಳೊಂದಿಗೆ ನಿರಂತರವಾಗಿ ಕನ್ನಡ ಸಾಹಿತ್ಯಕ್ಕೆ ಬರುತ್ತಿವೆ. 19ನೇ ಶತಮಾನದ ಕೊನೆಯ ಹಾಗೂ 20ನೇ ಶತಮಾನದ ಆರಂಭದ ದಶಕಗಳಲ್ಲಿ ಷೇಕ್‌ಸ್ಪಿಯರ್ ನಾಟಕಗಳನ್ನು ನಮ್ಮವರು ರಂಗ ಪ್ರಯೋಗಗಳಾಗಿ ಅನುವಾದಿಸಿಕೊಂಡರು. ಈ ಕಾಲಮಾನದ ಭಾಷಾಂತರಗಳ ಪ್ರಕ್ರಿಯೆಯನ್ನು "ಷೇಕ್‌ಸ್ಪಿಯರ್ ನಾಟಕಗಳ ಭಾಷಾಂತರವೆನ್ನುವುದಕ್ಕಿಂತ, ಭಾಷಾಂತರ-ರೂಪಾಂತರಗಳ ಕಸಿ ಎಂದರೆ ಹೆಚ್ಚು ಒಪ್ಪುತ್ತದೆ" ಎಂದು ಎ.ಎನ್. ಮೂರ್ತಿರಾಯರು ನುಡಿದಿದ್ದಾರೆ. 

ಷೇಕ್‌ಸ್ಪಿಯರ್ ಮಹಾಕವಿಯ ನಾಟಕಗಳಲ್ಲಿ
ರೋಮಿಯೊ ಜ್ಯೂಲಿಯೆಟ್, ಒಥೇಲೊ, 
ಟೆಂಪೆಸ್ಟ್ , ಹೆನ್ರಿ-5, ಎ ಮಿಡ್ ಸಮ್ಮರ್ ನೈಟ್ ಡ್ರೀಮ್, ಮ್ಯಾಕ್ಬೆತ್, ಮರ್ಚೆಂಟ್ ಆಫ್ ವೆನಿಸ್, ಕಿಂಗ್ ಲಿಯರ್, ಕಾಮೆಡಿ ಆಫ್ ಎರರ್ಸ್‌, ಟ್ವೆಲ್ತ್ ನೈಟ್, ಟೇಮಿಂಗ್ ಆಫ್ ಶ್ರೂ ಬಹು ಕೇಳಿಬರುವ ಹೆಸರುಗಳು.

ಕನ್ನಡದ ಮಹತ್ವದ ವಿಮರ್ಶಕರು, ಅನುವಾದಕರು, ರಂಗತಜ್ಞರುಗಳಾದ ಕೆ. ವಿ. ಸುಬ್ಬಣ್ಣ, ಜಿ. ಎನ್. ‌ರಂಗನಾಥ ರಾವ್, ಜಿ. ಕೆ. ಗೋವಿಂದರಾವ್, ರಾಜೇಂದ್ರ ಚೆನ್ನಿ, ಪ್ರಸನ್ನ, ಲಿಂಗದೇವರು ಹಳೆಮನೆ, ಕೆ. ವಿ. ಅಕ್ಷರ, ನಿಸಾರ್ ಅಹಮದ್ ಇನ್ನೂ ಮೊದಲಾದ ರಂಗತಜ್ಞರು ಷೇಕ್‌ಸ್ಪಿಯರ್ ನಾಟಕಗಳನ್ನೂ ಕಾವ್ಯವನ್ನೂ ಕುರಿತು ಬಹಳಷ್ಟು ಚಿಂತನೆ ನಡೆಸಿದ್ದಾರೆ. ಮಾಸ್ತಿ ವೆಂಕಟೇಶ ಅಯ್ಯಂಗಾರರು ಷೇಕ್‌ಸ್ಪಿಯರ್‌ ಅವರ ಬಹುಪಾಲು ಕೃತಿಗಳನ್ನು ಅನುವಾದಿಸಿದ್ದಾರೆ; ವಿಮರ್ಶೆಗೆ ಗುರಿಪಡಿಸಿದ್ದಾರೆ. ತಾವು ಉಂಡ ಷೇಕ್‌ಸ್ಪಿಯರ್ ಸಾಹಿತ್ಯದ ಸವಿಯನ್ನು ಕನ್ನಡ ಓದುಗರಿಗೆ ಉಣಬಡಿಸಿದ್ದಾರೆ. 

ಡಿ. ವಿ. ಗುಂಡಪ್ಪನವರ  ‘ಮ್ಯಾಕ್ಬೆತ್’ ಅನೇಕ ದೃಷ್ಟಿಗಳಿಂದ ಗಮನಿಸಬೇಕಾದ ಅನುವಾದ. 1936ರಲ್ಲಿ ಮೂಡಿದ ಈ ಕೃತಿಯಲ್ಲಿ ಈ ಮಾತುಗಳಿವೆ: '"ಷೇಕ್‌ಸ್ಪಿಯರ್‌ನ ಜಗತ್ತನ್ನು ಯಥಾವತ್ತಾಗಿ ಇರುವುದು ಇರುವಂತೆಯೇ ತೋರಿಸಬೇಕೆಂಬುದು ನನ್ನ ಸಂಕಲ್ಪ; ಬರಿಯ ಕಥೆಯನ್ನು ಹೇಳಬೇಕೆಂಬಷ್ಟು ಮಾತ್ರವೇ ಅಲ್ಲ. ಆತನು ಉಪಯೋಗಿಸಿರುವ ಹೆಸರುಗಳು, ಆತನು ನಿರ್ಮಿಸಿರುವ ವಾತಾವರಣ, ಆತನ ವರ್ಣನೆ, ವಾಕ್ಯಾಲಂಕಾರಗಳು ಆತನ ಪೂರ್ವೋದಾಹರಣೆಗಳು ಇವೆಲ್ಲವನ್ನೂ ಒಟ್ಟಿನ ಮೇಲೆ ಆತನ ಲೋಕದ ಪ್ರತಿಬಿಂಬವನ್ನು ಸಾಧ್ಯವಿರುವಷ್ಟು ಮಟ್ಟಿಗೂ ಇಲ್ಲಿ ಇಳಿಸಬೇಕೆಂಬುದು ನನ್ನ ಪ್ರಯತ್ನ. ಕನ್ನಡ ಸಾಹಿತ್ಯವು ಬೆಳೆಯುವುದಕ್ಕೂ ಕನ್ನಡಿಗರ ಮನೋಬುದ್ಧಿಗಳು ವಿಕಾಸ ಹೊಂದುವುದಕ್ಕೂ ಅವರ ಜೀವನ ದೃಷ್ಟಿಯು ವಿಶ್ವವಿಶಾಲವಾಗುವುದು ಅವಶ್ಯವೆಂದು ನಾನು ನಂಬಿದ್ದೇನೆ" ಹೀಗೆ ತಮ್ಮ ಭಾಷಾಂತರದ ಆಶಯವನ್ನು ಡಿವಿಜಿ ತಿಳಿಸಿದ್ದಾರೆ.

ಷೇಕ್‌ಸ್ಪಿಯರ್‌ ಕಾವ್ಯವನ್ನು ಅನುವಾದಿಸಿದವರಲ್ಲಿ ಬಿಎಂಶ್ರೀ, ಹಟ್ಟಿಯಂಗಡಿ ನಾರಾಯಣ ರಾವ್, ಎಸ್. ಜಿ. ನರಸಿಂಹರಾವ್, ಕೆ. ಎಸ್. ನರಸಿಂಹಸ್ವಾಮಿ, ಬಿ. ಎ. ಸನದಿ, ಚನ್ನವೀರ ಕಣವಿ, ರಾಮಚಂದ್ರ ಶರ್ಮ, ಪುತಿನ, ವಿನಾಯಕ, ಎಂವೀಸೀ, ಜಿ. ಎಸ್. ಶಿವರುದ್ರಪ್ಪ, ರಂ. ಶ್ರೀ. ಮುಗಳಿ,  ಶಾ. ಬಾಲುರಾವ್, ತೀನಂಶ್ರೀ, ಅಂಬಿಕಾತನಯದತ್ತ ಮೊದಲಾದವರು ಮುಖ್ಯರು. 

ವೈ. ಎಂ. ಷಣ್ಮುಖಯ್ಯ (45), ಎಸ್ ಎಸ್ ಲಕ್ಷ್ಮೀನಾರಾಯಣ ಭಟ್ಟ (100), ಎಸ್ ಆರ್ ರೋಹಿಡೇಕರ್ ಅವರು ಸಮಗ್ರ (154) ಸಾನೆಟ್‌ಗಳನ್ನು ಕನ್ನಡಕ್ಕೆ ತಂದಿದ್ದಾರೆ.  

ಕುವೆಂಪುರವರ ಬಿರುಗಾಳಿ (ಟೆಂಪೆಸ್ಟ್ ರೂಪಾಂತರ) ಮತ್ತು ರಕ್ತಾಕ್ಷಿ (ಹ್ಯಾಮ್ಲೆಟ್ ನಾಟಕದ ಅಳವಡಿಕೆ) ನಾಟಕಗಳು ಮುಕ್ತ ಛಂದಸ್ಸನ್ನು ದುಡಿಸಿಕೊಂಡಿರುವ ಕ್ರಮ, ಸ್ಥಳೀಯ ಚರಿತ್ರೆ, ಸನ್ನಿವೇಶಕ್ಕೆ ಒಗ್ಗಿಸಿಕೊಂಡಿರುವ ಕ್ರಮ ವಿಶಿಷ್ಟವಾದುದು.

ಮಾಸ್ತಿಯವರು ‘ಷೇಕ್‌ಸ್ಪಿಯರ್‌ಗೆ’ ಎಂಬ ಹೆಸರಿನ ಸಾನೆಟ್‌ನಲ್ಲಿ ಹೀಗೆನ್ನುತ್ತಾರೆ

ಕವಿಲೋಕದಲಿ ನೀನು ಸಾರ್ವಭೌಮನೇ ಸತ್ಯ 
ಷೇಕ್‌ಸ್ಪಿಯರ್. ಮನುಜಕುಲದೆದೆಯ ಕವಿಗಳ ಲೋಕ 
ಇದರೊಳಾವುದು ಹಿರಿದು, ಒಳಿತು, ಅಂತೆಯೇ ಕಾಕು 
ಕುಟಿಲ ಕುತ್ಸಿತ ಅಹುದು, ಎಲ್ಲದ ಯಥಾರ್ತ್ಯ 
ನಿನ್ನಭಾವದ ಬಲವನ್ನೊಪ್ಪಿಕೊಂಡು, ಅಗತ್ಯ 
ನಿನ್ನ ಅಧಿರಾಜ ಎಂದವು; ನಟ್ಟ ನಡುವಗಲ 
ತೆರದ ನಿನ್ನರಿವಿಂದ. ಇದರೊಳಂಗೈಯಗಲ 
ಮರೆಯದಡಗಿತು. ನಿನ್ನ ನುಡಿಯ ಕೊಡೆಯಡಿ ನಿತ್ಯ, 
ಬಾಳುವೆಯ ಭೋಜನದ ಆರು ರಸವನು ಸವಿದು 
ನೊಂದು ನೋವನು ಗೆಲಿದು, ನೆರೆಯ ನಗೆಯನು ಕಂಡು 
ನಾನೆಂತು ಜೀವ ಅಂತೇ ಮೊಲ ಮಶಕ 
ಎಂಬ ತಿಳಿವಿನೊಳಾಳಿ, ನಿನ್ನುಸಿರಿನನುಭವದ 
ರಸವ ಕಾವ್ಯಾಶ್ವಮೇಧದ ಅಗ್ನಿಯಲಿ ಹಿಂಡಿ 
ಅಮರತೆಯ ಸಾಧಿಸಿದೆ. ನೀ ಯೋಗಿ, ಚಿರರಸಿಕ. 

ಶಿವಪ್ರಕಾಶರು ಯಥಾವತ್ತಾದ ಅನುವಾದಕ್ಕಿಂತ ರೂಪಾಂತರ ಹೆಚ್ಚು ಸೂಕ್ತವೆಂದು ಭಾವಿಸಿದ್ದರ ಫಲ ‘ಮಾರನಾಯಕನ ದೃಷ್ಟಾಂತ’ (ಮ್ಯಾಕ್ಬೆತ್‌ನ ರೂಪಾಂತರ). ‘ಷೇಕ್‌ಸ್ಪಿಯರ್ ಸ್ವಪ್ನ ನೌಕೆ’ಯು ಷೇಕ್‌ಸ್ಪಿಯರ್‌ನ ಬದುಕು, ಕೃತಿಗಳನ್ನು ಆಧರಿಸಿ ಮಹಾಲೇಖಕನೊಬ್ಬನ ಅಂತರಂಗವನ್ನು ಹೊಕ್ಕುವ ಪ್ರಯತ್ನವನ್ನು ಮಾಡಿದಂತಿದೆ. 

ನರಲೋಕವೆಲ್ಲ ನಾಟಕ ಶಾಲೆಯಂತಿರುತ 
ಪುರುಷವನಿತೆಯರು ಬರಿಯಾಟದವರು 
ಮೆರೆದವರು ನಿಷ್ಕ್ರಮಿಸಿ ಹೆರರು ಪ್ರವೇಶಿಸುತ 
ಪರಿಪರಿಯ ವೇಷಗಳ ನಟಿಸುತಿಹರು. 

ದೀವಟಿಕೆಗಳ ಪರರ ಹಿತಕ್ಕೆ ಹೊತ್ತಿಸಿದಂತೆ 
ದೇವರು ಮನುಷ್ಯನನ್ನು ಯೋಜಿಸುವನು 
ಸೇವೆಯಿಂದುತ್ಕೃಷ್ಟ ಕಾರ್ಯಗಳ ಸಾಧನಕ 
ಜೀವಗುತ್ತಮ ಶಕ್ತಿ ಪಾಲಿಸುವನು. 

ಈ ಮೇಲಿನ ಹಟ್ಟಿಅಂಗಡಿ ನಾರಾಯಣರಾಯರು ಅನುವಾದಿಸಿದ ಪುಟ್ಟ ಕವಿತೆಯ ಸಾಲುಗಳಲ್ಲಿ ಶೇಕ್ಸ್‌ಪಿಯರ್ ಸಾಹಿತ್ಯದ ದಿವ್ಯದರ್ಶನ ಸಾಕ್ಷಾತ್ಕರಿಸುತ್ತದೆ.

ಷೇಕ್ಸ್‌ಪಿಯರ್ ತನ್ನ ಜೀವಿತಾವಧಿಯಲ್ಲಿ 38 ನಾಟಕಗಳನ್ನು ಬರೆದರು. ಇವನ್ನು ಕಾಮಿಡಿ, ಟ್ರ್ಯಾಜಿಡಿ ಮತ್ತು ಇತಿಹಾಸವನ್ನು ಆಧರಿಸಿದ ನಾಟಕಗಳು ಎಂದು ವರ್ಗೀಕರಿಸಲಾಗಿದೆ. ಶತಮಾನಗಳಿಂದಲೂ ಈ ನಾಟಕಗಳು ರಂಗವೇದಿಕೆಯಿಂದ ಬೆಳ್ಳಿತೆರೆಗೆ ಹಾರಿವೆ; ಯಶಸ್ಸನ್ನು ಕಂಡಿವೆ. ಜಗತ್ತಿನ ಹತ್ತಾರು ಭಾಷೆಗಳಲ್ಲಿ ಅವರ ನಾಟಕಗಳು ಚಿತ್ರಗಳಾಗಿ ಜನಪ್ರಿಯವಾಗಿವೆ.

ಷೇಕ್ಸ್‌ಪಿಯರ್ ಕಾವ್ಯವೆಂದರೆ ನೆನಪಾಗುವುದು ಅವರ ಅದ್ಭುತ ಸಾನೆಟ್‌ಗಳು. ಇದನ್ನು ಬಿಟ್ಟರೆ ಅವರು ‘ವೀನಸ್ ಅಂಡ್ ಅಡೋನಿಸ್’ ಮತ್ತು ‘ದಿ ರೇಫ್ ಲಾರಿಸ್’ ಎಂಬ ಎರಡು ದೀರ್ಘ ಕವಿತೆಗಳನ್ನು ಬರೆದಿದ್ದಾರೆ. ಆದರೆ ಸಾನೆಟ್‌ಗಳು ಇಂದಿಗೂ ಪ್ರೇಮದ ಅಭಿವ್ಯಕ್ತಿಗೆ ಮಾದರಿಯಂತಿವೆ. ಅವರು ಬರೆದದ್ದು ಒಟ್ಟು 154 ಸಾನೆಟ್‌ಗಳು. ಇದರಲ್ಲಿ ಮೊದಲ 126 ಸಾನೆಟ್‌ಗಳು ಒಬ್ಬ ಸ್ಫುರದ್ರೂಪಿ ಯುವಕನ ಉಲ್ಲೇಖದಿಂದ ತುಂಬಿವೆ. ರಮ್ಯವಾಗಿದ್ದು, ಪ್ರೇಮ ಮತ್ತು ಕಾಮದ ಸಂಕೇತಗಳಿಂದ ಕೂಡಿರುವ ಈ ಸುನೀತಗಳು ಅತ್ಯಂತ ಜನಪ್ರಿಯವಾಗಿವೆ. ಷೇಕ್ಸ್‌ಪಿಯರ್‌ ಸುನೀತಗಳು 1609ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡವು. ಈ ಕೃತಿಯನ್ನು ಷೇಕ್ಸ್‌ಪಿಯರ್ ‘ಮಿಸ್ಟರ್ ಡಬ್ಲ್ಯುಎಚ್’ಗೆ ಅರ್ಪಿಸಿದ್ದರು. ಈ ನಿಗೂಢ ವ್ಯಕ್ತಿ ಯಾರು ಎಂಬುದು ಇಂದಿಗೂ ಗುಟ್ಟಾಗಿ ಅಥವ ಊಹಾಪೋಹಗಳಲ್ಲಿ ಉಳಿದಿದೆ. ಅವರ ಬದುಕಿನ ಬಗೆಗಿನ ಹಲವು ಚಿಂತನೆ ಮತ್ತು ಸಂಶೋಧನೆಗಳೂ ಹಾಗೆಯೇ ಇದೆ. ಆತ ಕೊಟ್ಟ ಕೊಡುಗೆ ಕಣ್ಮುಂದೆ ಇರುವಾಗ ಆ ಊಹಾಪೋಹ ಚಿಂತನೆಗಳು ಅನುಪಯುಕ್ತ.

ವಿಲಿಯಂ ಷೇಕ್ಸ್‌ಪಿಯರ್ ನಿಧನರಾದದ್ದೂ ಅವರು ಜನಿಸಿದ ಏಪ್ರಿಲ್ 23 ರಂದೇ.  ಅವರು ತಮ್ಮ 52 ವರ್ಷದ ಜೀವನ ಮುಗಿಸಿ ತೆರಳಿದ್ದು 1616 ವರ್ಷದ ಏಪ್ರಿಲ್ 23ರಂದು. ಅವರು ತಮ್ಮ ಕೊಡುಗೆಗಳಿಂದ ಅಮರರು.

ಮಾಹಿತಿ ಕೃಪೆ: ಕೆ.ಸಿ. ಶಿವಾರೆಡ್ಡಿ ಅವರು 2014 ವರ್ಷದಲ್ಲಿ ಷೇಕ್ಸ್‌ಪಿಯರ್ 450 ತುಂಬಿದ ಸಂದರ್ಭದಲ್ಲಿ ವಿಜಯ ಕರ್ನಾಟಕದಲ್ಲಿ ಮೂಡಿಸಿರುವ ಲೇಖನ

On the birth anniversary of William Shakespeare 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ