ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನ್ನಪೂರ್ಣಾದೇವಿ


 ಅನ್ನಪೂರ್ಣಾದೇವಿ


ಅನ್ನಪೂರ್ಣಾದೇವಿ ಮಹಾನ್ ಸಂಗೀತಜ್ಞೆ. ಪ್ರಚಾರದ ಮುಂಬೆಳಕನ್ನು ಧಿಕ್ಕರಿಸಿ ಜೀವಿಸಿದ ಆಕೆಯನ್ನು ಸುರಸಂಗೀತದ ಅರಸಿ ಎಂದವರುಂಟು. ಆಕೆ 2018ರಲ್ಲಿ ನಿಧನರಾದಾಗ ಆಕೆಯ ಸುರಬಹಾರ್ ಸಾರ್ವಜನಿಕವಾಗಿ ಝೇಂಕರಿಸಿ ಅರ್ಧ ಶತಮಾನ ಮೀರಿತ್ತು. ಸಂಗೀತ ಕಛೇರಿಗಳು ಮತ್ತು ರೆಕಾರ್ಡಿಂಗ್‌ಗಳಿಗೆ ಆಕೆ ಇಕ್ಕಿದ ಕದ ಕಡೆಗೂ ತೆರೆಯಲಿಲ್ಲ. 

ಅನ್ನಪೂರ್ಣಾದೇವಿ 1927ರ ಏಪ್ರಿಲ್ 23ರಂದು ಜನಿಸಿದರು. ಆಕೆ ಹಿಂದುಸ್ತಾನಿ ಸಂಗೀತದ ಮೇರು ಸಾಧಕರಲ್ಲಿ ಒಬ್ಬರೆನಿಸಿದ್ದ ಮಯಹರ ಘರಾಣಾದ ಜನಕ ಬಾಬಾ ಅಲ್ಲಾವುದ್ದೀನ್ ಖಾನ್ ಅವರ ಮಗಳು. ಅವರು ಮೈಹಾರದ ಮಹಾರಾಜಾ ಬ್ರಜನಾಥ ಸಿಂಗ್ ಅವರ ಆಸ್ಥಾನದಲ್ಲಿ ಸಂಗೀತಗಾರರಾಗಿದ್ದರು.  ಆ ಮಹಾರಾಜರೇ ಈ  ರೋಶನಾರಾಗೆ 'ಅನ್ನಪೂರ್ಣ' ಎಂಬ ಹೆಸರು ನೀಡಿದರು.

ಅನ್ನಪೂರ್ಣಾದೇವಿ ಸಿತಾರ್ ಮಾಂತ್ರಿಕ ಪಂಡಿತರವಿಶಂಕರರ ಮೊದಲ ಪತ್ನಿ. ವಿವಾಹದ ನಂತರ ರವಿಶಂಕರ್ ಮತ್ತು ಅನ್ನಪೂರ್ಣ ದೇಶದ ನಾನಾ ಭಾಗಗಳಲ್ಲಿ ಒಟ್ಟಿಗೆ ನಡೆಸಿದ ಕಛೇರಿಗಳು ಸಂಗೀತ ಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದವು. 

ಅನ್ನಪೂರ್ಣಾದೇವಿ 1956ರ ನಂತರ ಸಾರ್ವಜನಿಕ ಸಂಗೀತ ಕಛೇರಿಯಲ್ಲಿ ಆಕೆ ಕಾಣಿಸಿಕೊಳ್ಳಲಿಲ್ಲ.

ರವಿಶಂಕರ್, ಅನ್ನಪೂರ್ಣ, ಆಕೆಯ ಅಣ್ಣ ಅಲಿ ಅಕ್ಬರ್ ಖಾನ್ ಮೂವರೂ ಖಾನ್ ಶಿಷ್ಯಂದಿರಾಗಿದ್ದರು. ವಿಶ್ವವಿಖ್ಯಾತ ನೃತ್ಯ ಕಲಾವಿದ ಉದಯಶಂಕರ್ ಅವರು ರವಿಶಂಕರ್ ಅಣ್ಣ. ಉದಯಶಂಕರ್ ಬಯಕೆಯಂತೆ ಅನ್ನಪೂರ್ಣ- ರವಿಶಂಕರ್ 1942ರಲ್ಲಿ ವಿವಾಹವಾದರು. ಅಲ್ಲಾವುದ್ದೀನ್ ಖಾನ್ ಮನೆಯಲ್ಲಿ ನಿತ್ಯ ಸರಸ್ವತಿಯ ಪೂಜೆ ಮತ್ತು ನಮಾಜು ಎರಡೂ ಜರುಗುತ್ತಿದ್ದವು.

ವೈವಾಹಿಕ ಬದುಕಿನಲ್ಲಿ ಉಂಟಾದ ಉತ್ಪಾತಗಳು ಈ ನಾದದೇವಿಯನ್ನು ಏಕಾಂಗಿ ಬದುಕಿಗೆ ದೂಡಿದವು. ತಂದೆ ಅಲ್ಲಾವುದ್ದೀನ್ ಖಾನ್ ಮತ್ತು ಒಬ್ಬನೇ ಮಗ ಶುಭೇಂದ್ರ ಶಂಕರನ ಸಾವುಗಳು, ರವಿಶಂಕರ್ ಜೊತೆಗಿನ ತಳಮಳದ ದಾಂಪತ್ಯ ಆಕೆಯನ್ನು ಕಾಯಂ ತತ್ತರಕ್ಕೆ ತಳ್ಳಿದವು.

ಪತ್ನಿ ಪ್ರಖರ ಪ್ರತಿಭೆ ರವಿಶಂಕರ್‌ಗೆ ಹೊಟ್ಟೆಕಿಚ್ಚು ಹೊತ್ತಿಸಿತ್ತು. ತಾನು ಸ್ವತಃ ಸೂರ್ಯ. ತನ್ನ ವಿನಾ ಬಾನಿನಲ್ಲಿ ಇನ್ಯಾರೂ ಬೆಳಗಬಾರದು ಎಂಬ ಮಹತ್ವಾಕಾಂಕ್ಷಿ.

ಮದುವೆಯಾದ ಹೊಸತರಲ್ಲಿ 1950ರ ಆಸುಪಾಸಿನಲ್ಲಿ ಅನ್ನಪೂರ್ಣಾದೇವಿ ಮತ್ತು ರವಿಶಂಕರ್ ಜೊತೆಯಾಗಿ ಕಚೇರಿ ನೀಡುತ್ತಿದ್ದರು. ‘‘ಸಭಿಕರು ಮತ್ತು ವಿಮರ್ಶಕರಿಂದ ನನ್ನ ಸಂಗೀತಕ್ಕೆ ಪಂಡಿತ್‌ಜೀ (ರವಿಶಂಕರ್) ಅವರಿಗೆ ಸಿಗುತ್ತಿದ್ದ ಮೆಚ್ಚುಗೆಗಿಂತ ಹೆಚ್ಚು ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಪಂಡಿತ್‌ಜೀಗೆ ಅದು ಇಷ್ಟವಾಗುತ್ತಿರಲಿಲ್ಲ. ಈ ಮೆಚ್ಚುಗೆ ನಮ್ಮ ವಿವಾಹದ ಮೇಲೆ ಪ್ರತಿಕೂಲ ಪರಿಣಾಮ ಬೀರತೊಡಗಿತು. ನನ್ನ ಸಾರ್ವಜನಿಕ ಸಂಗೀತ ಕಚೇರಿಗಳನ್ನು ಅವರು ನಿರ್ದಿಷ್ಟವಾಗಿ ಹೇಳಿ ನಿಲ್ಲಿಸಲಿಲ್ಲ. ಆದರೆ ನನಗೆ ಹೆಚ್ಚು ಮೆಚ್ಚುಗೆ ದೊರೆಯುತ್ತಿದ್ದ ಸಂಗತಿ ತಮಗೆ ಇಷ್ಟವಿಲ್ಲವೆಂದು ಹತ್ತು ಹಲವು ವಿಧಾನಗಳಿಂದ ವ್ಯಕ್ತಪಡಿಸುತ್ತಿದ್ದರು. ವೈವಾಹಿಕ ಬದುಕು ಇಲ್ಲವೇ ಅಪ್ರತಿಮ ಸಂಗೀತಗಾರ್ತಿ ಎಂಬ ಖ್ಯಾತಿ, ಮನ್ನಣೆಯ ನಡುವೆ ಒಂದನ್ನು ಆರಿಸಿಕೊಳ್ಳಲೇಬೇಕಿತ್ತು.  ನಾನು ವೈವಾಹಿಕ ಬದುಕನ್ನು ಆರಿಸಿಕೊಂಡೆ. ನಾನು ಅಂತರ್ಮುಖಿಯಾಗಿದ್ದೆ, ಹೆಚ್ಚು ಕೌಟುಂಬಿಕ ವ್ಯಕ್ತಿ. ಪ್ರಸಿದ್ಧಿ, ಕೀರ್ತಿಗಳಿಗಿಂತ ಮದುವೆ ಮುರಿದು ಬೀಳದಂತೆ ಉಳಿಸಿಕೊಳ್ಳುವುದೇ ನನಗೆ ಮುಖ್ಯವಾಗಿತ್ತು. ನನ್ನ ಸಂಗೀತ ಗುರುವೂ ಆಗಿದ್ದ ನನ್ನ ತಂದೆ ಉಸ್ತಾದ್ ಅಲ್ಲಾವುದ್ದೀನ್ ಖಾನ್ ನೋವುಣ್ಣುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆ ಉಳಿಸಿಕೊಳ್ಳಲು ಸಾಧ್ಯವಿದ್ದ ಎಲ್ಲ ಪ್ರಯತ್ನ ಮಾಡಿದೆ. ಆದರೆ ಪಂಡಿತ್‌ಜೀ ಬದುಕಿನಲ್ಲಿ ಅದಾಗಲೇ ಬೇರೊಬ್ಬ ಹೆಣ್ಣಿನ ಪ್ರವೇಶ ಆಗಿತ್ತು,’’ ಎಂದಿದ್ದಾರೆ ಅನ್ನಪೂರ್ಣೆ. ಈ ಮಹಾನ್ ತ್ಯಾಗದ ನಂತರವೂ ಮಹಾನ್ ಪ್ರತಿಭೆಗಳಿಬ್ಬರ ಈ ವಿವಾಹ ಕಡೆಗೂ ಉಳಿದು ಊರ್ಜಿತ ಆಗಲಿಲ್ಲ ಎಂಬುದು ವಿಷಾದಗಾಥೆ. ಸತಿಪತಿ ಇಬ್ಬರೂ ಒಂದೇ ವೃತ್ತಿಯವರಾದರೆ ಇಂತಹುದು ನಡೆಯುತ್ತದೆ. ಅದು ಪುರುಷ ಅಹಂಕಾರ. ರವಿಶಂಕರ ಸ್ವತಃ ಸೂರ್ಯ. ತನ್ನ ಹೊರತು ಬಾನಿನಲ್ಲಿ ಇನ್ಯಾರೂ ಬೆಳಗಬಾರದು ಎಂಬ ಮಹತ್ವಾಕಾಂಕ್ಷಿ. ತನ್ನ ಪ್ರತಿಭೆಯನ್ನು ಮೀರಿದ ಪತ್ನಿಯ ಪ್ರತಿಭೆಯ ಕುರಿತು ಮತ್ಸರ ಪಡುವ ಗಂಡ.

ಹೃಷಿಕೇಶ್ ಮುಖರ್ಜಿ ನಿರ್ದೇಶನದಲ್ಲಿ 1972ರಲ್ಲಿ ತೆರೆ ಕಂಡ ಅಮಿತಾಬ್-ಜಯಾ ಬಾಧುರಿ ಅಭಿನಯದ ‘ಅಭಿಮಾನ್’ ಹಿಂದಿ ಚಲನಚಿತ್ರಕ್ಕೆ ಅನ್ನಪೂರ್ಣ - ರವಿಶಂಕರ್ ಬದುಕೇ ಸ್ಫೂರ್ತಿ.

"ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಪ್ರೀತಿ ಸಾಧ್ಯ. . .ಒಂದು ಪ್ರೀತಿ ಮತ್ತೊಂದಕ್ಕೆ ಪೂರಕ. ಪರಿಪೂರ್ಣತೆಯ ಶೋಧ. ಅನ್ನಪೂರ್ಣ ಹೃದಯವಂತಿಕೆಯ ಕಲಾವಿದೆ. ಆದರೆ ಪ್ರೀತಿಯ ವಿಷಯಗಳಲ್ಲಿ ಮನಸ್ಸು ಮುಚ್ಚಿಕೊಂಡರು" ಎಂಬುದು ರವಿಶಂಕರ್ ದೂರು. 'ವಿಭಿನ್ನ ದೇಶಗಳಲ್ಲಿ ವಿಭಿನ್ನ ಸ್ತ್ರೀಯರ ಜೊತೆ ಪ್ರೀತಿ ಸಾಧ್ಯವಿತ್ತು. ಪ್ರತಿ ಬಂದರಿನಲ್ಲೂ ಹೊಸ ಹುಡುಗಿ. ಕೆಲವು ಸಲ ಒಬ್ಬಳಿಗಿಂತ ಹೆಚ್ಚು ಮಂದಿ! ಎಂದು ತಮ್ಮ ಆತ್ಮಚರಿತ್ರೆ ‘ರಾಗ ಮಾಲಾ’ದಲ್ಲಿ ಬರೆದುಕೊಂಡಿದ್ದಾರೆ. ವಿಷಮಿಸುತ್ತಲೇ ಸಾಗಿದ ವೈವಾಹಿಕ ಬೆಸುಗೆ 1962ರ ಹೊತ್ತಿಗೆ ವಿಚ್ಛೇದನದಲ್ಲಿ ಕೊನೆಗೊಂಡಿತು. 

‘ರವಿಶಂಕರ್, ಪನ್ನಾಲಾಲ್ ಘೋಷ್ ಮತ್ತು ನನ್ನನ್ನು ಒಂದು ತಕ್ಕಡಿಯಲ್ಲೂ, ಅನ್ನಪೂರ್ಣೆಯನ್ನು ಇನ್ನೊಂದು ತಕ್ಕಡಿಯಲ್ಲೂ ಇರಿಸಿ ತೂಗಿ. ಆಗಲೂ ಅನ್ನಪೂರ್ಣೆಯ ಭಾರವೇ ಅಧಿಕ’ ಎನ್ನುತ್ತಿದ್ದರು ಆಕೆಯ ಅಣ್ಣ ಉಸ್ತಾದ್ ಅಲಿ ಅಕ್ಬರ್ ಖಾನ್.

ಹರಿಪ್ರಸಾದ ಚೌರಾಸಿಯಾ ಹೇಳಿದ್ದರು "ನನ್ನ ಪಾಲಿಗೆ ಆಕೆ ದೇವರ ವರ. ಜ್ಞಾನಸಾಗರವನ್ನೇ ತೆರೆದಿಟ್ಟರು.  ನಾನು ಗ್ರಹಿಸಿದ್ದು ಕೇವಲ ಬೊಗಸೆಯಷ್ಟು. ನನ್ನ ಗುರು ಮಾ ನನ್ನ ಪಾಲಿಗೆ ದುರ್ಗೆಯೂ ಹೌದು, ಸರಸ್ವತಿಯೂ ಹೌದು. ಆಕೆಯದು ಅಸೀಮ ಜ್ಞಾನಸಂಪತ್ತು. ವಿದ್ಯೆಯನ್ನು ನಿಸ್ವಾರ್ಥದಿಂದ ಧಾರೆ ಎರೆಯುತ್ತಾರೆ. ಸರಸ್ವತಿ ತಾಯಿಯ ನಿಜ ಅವತಾರ. ಶಿಷ್ಯರು ತಪ್ಪು ಮಾಡಿದಾಗ ದುರ್ಗೆಯಾಗುತ್ತಾರೆ. ಆದರೆ ಅಮ್ಮನೆಂದರೆ ಅಮ್ಮನೇ. ಆಕೆಯ ಕೋಪ ಕೂಡ ಪ್ರೇಮವೇ".

ಸಾರ್ವಜನಿಕವಾಗಿ ಸಂಗೀತ ಕಚೇರಿಯಲ್ಲಿ ಅನ್ನಪೂರ್ಣ ಕಡೆಯ ಬಾರಿಗೆ ಕಾಣಿಸಿಕೊಂಡದ್ದು 1956ರಲ್ಲಿ. ಆ ನಂತರ ಅನ್ನಪೂರ್ಣೆಯ ಸಂಗೀತವನ್ನು ಆಕೆಯ ಶಿಷ್ಯರ ವಿನಾ ಹೊರಜಗತ್ತಿನ ಯಾವೊಂದು ನರಪಿಳ್ಳೆಯೂ ಆಲಿಸಿಲ್ಲ. ಜಗದ್ವಿಖ್ಯಾತ ಇಂಗ್ಲಿಷ್ ಸಂಗೀತ ತಂಡ 'ಬೀಟಲ್ಸ್'ನ ಜಾರ್ಜ್ ಹ್ಯಾರಿಸನ್ ಮಾತ್ರವೇ ಈ ಮಾತಿಗೆ ಅಪವಾದ. ಇಂದಿರಾ ಗಾಂಧಿ ಅವರ ವಿಶೇಷ ಕೋರಿಕೆಯ ಮೇರೆಗೆ ಹ್ಯಾರಿಸನ್ ಅನ್ನಪೂರ್ಣೆಯ ಸಂಗೀತವನ್ನು ಮನದುಂಬಿಸಿಕೊಂಡಿದ್ದರು. ಅದೂ ತಾವು ನಿತ್ಯ ರಿಯಾಜ್ ನಡೆಸುವಾಗ ಕುಳಿತು ಕೇಳುವ ಅವಕಾಶ ಇಂಗ್ಲಿಷ್ ಸಂಗೀತಗಾರನಿಗೆ ದೊರೆತಿತ್ತು. ಹ್ಯಾರಿಸನ್ ಜೊತೆಗೆ ಕುಳಿತುಕೊಳ್ಳಬೇಕಿದ್ದ ಯೆಹುದಿ ಮೆನುಹಿನ್ ಕಡೆಯ ಗಳಿಗೆಯಲ್ಲಿ ಈ ಅವಕಾಶ ಕಳೆದುಕೊಂಡಿದ್ದರು. ಅಸ್ವಸ್ಥರಾಗಿದ್ದ ತಮ್ಮ ಬಂಧುವನ್ನು ನೋಡಲು ತುರ್ತಾಗಿ ಹಿಂದಿರುಗಿದ್ದರು.

ಅನ್ನಪೂರ್ಣದೇವಿ ಅವರಿಗೆ ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲಷಿಪ್, ವಿಶ್ವಭಾರತಿಯ ದೇಶಿಕೋತ್ತಮ ಮುಂತಾದ ಗೌರವಗಳು ಸಂದಿದ್ದವು. 

ಅನ್ನಪೂರ್ಣಾದೇವಿ 2018ರ ಅಕ್ಟೋಬರ್ 13ರಂದು ನಿಧನರಾದರು.

ಮಾಹಿತಿ ಆಧಾರ: ಡಿ. ಉಮಾಪತಿ ಅವರ ಡೆಲ್ಲಿಡೈರಿ. 

On the birth anniversary of greatest musician who hidden her talent Annapurna Devi


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ