ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆನಗಲ್ ರಾಮರಾಯರು



 ಬೆನಗಲ್ ರಾಮರಾಯರು


ಬೆನಗಲ್ ರಾಮರಾಯರು ಬಹುಭಾಷಾ ವಿದ್ವಾಂಸರಾಗಿ, ಕನ್ನಡ ಪ್ರೇಮಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರು. (ಬೆನಗಲ್ ರಾಮರಾವ್ ಎಂಬ ಮತ್ತೊಬ್ಬರು ಭಾರತದ ರಿಸರ್ವ್ ಬ್ಯಾಂಕಿನ ಗೌರ್ನರ್ ಆಗಿ ಪ್ರಸಿದ್ಧರು).

ಬೆನಗಲ್ ರಾಮರಾಯರು 1876ರ ಏಪ್ರಿಲ್ 3ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ  ಮಂಜುನಾಥಯ್ಯನವರು ವಕೀಲರಾಗಿದ್ದರು. ರಾಮರಾಯರ ಪ್ರಾಥಮಿಕ ಶಿಕ್ಷಣ ಮೂಲ್ಕಿ, ಮಂಗಳೂರು ಮತ್ತು ಪುತ್ತೂರಿನಲ್ಲಿ ನೆರವೇರಿತು. ಮಂಗಳೂರಿನ ಸರ್ಕಾರಿ ಕಾಲೇಜು ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1896ರಲ್ಲಿ ಬಿ.ಎ. ಪದವಿ ಗಳಿಸಿದರು. 

ಬೆನಗಲ್ ರಾಮರಾಯರಿಗೆ ಕನ್ನಡದ ಬಗ್ಗೆ  ಅಪಾರ ಒಲವು. ಪದವಿ ಗಳಿಸಿದ ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ 1897ರಿಂದ 1900ರವರೆಗೆ ಕಾರ್ಯನಿರ್ವಹಿಸಿದರು. ಮದರಾಸಿನಲ್ಲಿದ್ದಾಗಲೇ ತೆಲುಗು ಮತ್ತು ಕನ್ನಡವನ್ನು ಪ್ರಮುಖ ವಿಷಯವನ್ನಾಗಿ ಆರಿಸಿಕೊಂಡು ಮದರಾಸು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ನಂತರ ಮೈಸೂರಿನ ನಾರ್ಮಲ್ ಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿ ಎರಡು ವರ್ಷ ಕೆಲಸ ಮಾಡಿ 1902ರಿಂದ ಎಂಟು ವರ್ಷಕಾಲ ಮುಂಬಯಿ ಸರಕಾರದ ಭಾಷಾಂತರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು.

'ಕನ್ನಡಾಂಬೆಯ ಹಿರಿಮೆ' ಎಂಬುದು ಬೆನಗಲ್ ರಾಮರಾಯರ ಪ್ರಸಿದ್ಧ ಕವಿತೆ.


ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೆ ಎನ್ನುಸಿರು ಪೆತ್ತೆನ್ನ ತಾಯಿ
ಕನ್ನಡವೆ ಧನಧಾನ್ಯ ಕನ್ನಡವೆ ಮನೆಮಾನ್ಯ
ಕನ್ನಡವೆ ಯೆನಗಾಯ್ತು ಕಣ್ಣು ಕಿವಿ ಬಾಯಿ

ಕನ್ನಡದ ಸವಿಮಾತು ಮನ್ನಣೆಯ ಪಳಮಾತು
ಕನ್ನಡ ಸರಸ್ವತಿಯು ನವ ಕಲ್ಪಲತೆಯು
ಕನ್ನಡದ ವರಚರಿತೆ ವಿಮಲ ಗಂಗಾ ಸರಿತೆ
ಕನ್ನಡವು ಸಿರಿಪೆಂಪು ಎನಗೆ ನರುಗಂಪು

ಕನ್ನಡ ಸನ್ಮಾನ ವೆನಗದುವೆ ವರಮಾನ
ಕನ್ನಡಿಗರ ಸ್ವತಂತ್ರವದೆ ಪರಮ ಮಂತ್ರ
ಕನ್ನಡದ ಕೀರ್ತಿ ಎನ್ನ ಚಿತ್ತದ ಸ್ಫೂರ್ತಿ
ಕನ್ನಡದ ಒಗ್ಗೂಟವೆನಗದೆ ಕಿರೀಟ

ಕನ್ನಡದ ಹೊಲಮಣ್ಣು ಎನಗೆ ನವನಿಧಿಹೊನ್ನು
ಕನ್ನಡದ ತಿಳಿಜಲವು ಸುಧೆಯ ಪಲ್ವಲವು
ಕನ್ನಡದ ಹೂಗಿಡವು ಎನ್ನೊಡಲಿಗದೆ ತೊಡವು
ಕನ್ನಡದ ಪಶುಪಕ್ಷಿ ಚೆಲುವಿಗದೆ ಸಾಕ್ಷಿ

ಕನ್ನಡಿಗರತಿಶಯವು ಭುವನೇಶ್ವರಿಯ ದಯವು
ಕನ್ನಡಿಗರ ಜಯವು ಕೃಷ್ಣನಾಶ್ರಯವು
ಕನ್ನಡದ ಜನಕುಲವು ಎನ್ನ ತೋಳಿಗೆ ಬಲವು
ಕನ್ನಡಾಂಬೆಯ ಮುಕ್ತಿ ರಾಮನುತೆ – ಶಕ್ತಿ

ಬೆನಗಲ್ ರಾಮರಾಯರದು ಬಹುಮುಖ ಪ್ರತಿಭೆ. ಅವರಿಗೆ ಹಲವಾರು ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ತೆಲುಗು, ಸಂಸ್ಕೃತ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ತಮಗಿದ್ದ ಪ್ರಾವೀಣ್ಯತೆಯಿಂದ ಆ ಭಾಷೆಗಳಿಂದ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದರು. ತೆಲುಗಿನಿಂದ ‘ಕಲಹ ಪ್ರಿಯ’ ಎಂಬ ನಾಟಕ, ಸತ್ಯರಾಜನ ‘ಪೂರ್ವದೇಶದ ಯಾತ್ರೆಗಳು’ ಎಂಬ ಕಾದಂಬರಿ, ಮರಾಠಿಯಿಂದ ‘ರಮಾ ಮಾಧವ’ ಎಂಬ ಕಾದಂಬರಿ, ಸಂಸ್ಕೃತದಿಂದ ‘ದೂತಾಂಗ’ ಎಂಬ ನಾಟಕ, ಬಂಗಾಳಿಯಿಂದ ‘ಕೃಷ್ಣಕುಮಾರಿ’ ಎಂಬ ಕಾದಂಬರಿ ಮುಂತಾದುವುಗಳು ಅವರ ಭಾಷಾಂತರದ ಪ್ರಮುಖ ಕೃತಿಗಳು.

ರಾಮರಾಯರ ಸ್ವತಂತ್ರ ಕೃತಿಗಳಲ್ಲಿ ಇರಾವತಿ, ಚಿಕ್ಕ ಕಥೆಗಳು, ಮಹನೀಯರ ಚರಿತ್ರೆಮಾಲೆ ಮುಂತಾದವು ಪ್ರಮುಖವಾದವು. ಇತಿಹಾಸದ ಬಗ್ಗೆಯೂ ರಾಯರಿಗೆ  ಅಪಾರ ಒಲವು. ತಂಜಾವೂರು ಮನೆತನದ ಕೈಫಿಯತ್ತು, ಹಳೇಬೀಡು ಕೈಫಿಯತ್ತು, ಹೊಳೆ ಹೊನ್ನೂರು ಕೈಫಿಯತ್ತು ಮುಂತಾದ ಅನೇಕ ಕೈಫಿಯತ್ತುಗಳ ರಚನೆ ಅವರಿಂದ ಮೂಡಿಬಂತು. ಹೀಗಾಗಿ ಅವರು  ಕೈಫಿಯತ್ತುಗಳ ರಾಮರಾಯರೆಂದೇ ವರು ಪ್ರಸಿದ್ಧಿ ಪಡೆದವರು.

ರಾಮರಾಯರು ಇತರರೊಡನೆ ಸೇರಿ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಪಾನ್ಯಂ ಸುಂದರ ಶಾಸ್ತ್ರಿಯವರೊಡಗೂಡಿ ಸಿದ್ಧಪಡಿಸಿದ ‘ಪುರಾಣನಾಮ ಚೂಡಾಮಣಿ’ ಒಂದು ಉತ್ಕೃಷ್ಟ ಆಕರ ಗ್ರಂಥ.

ರಾಮರಾಯರನ್ನು ಬೆಳಗಾವಿಯಲ್ಲಿ 1925ರಲ್ಲಿ ನಡೆದ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಕನ್ನಡ ಜನತೆ ಗೌರವ ತೋರಿತು. 

ಬೆನಗಲ್ ರಾಮರಾಯರು 1943 ವರ್ಷದ ಮೇ 8ರಂದು  ಈ ಲೋಕವನ್ನಗಲಿದರು.

On the birth anniversary of great scholar Benegal Ramarao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ