ಕೆ. ಸತ್ಯನಾರಾಯಣ
ಕೆ. ಸತ್ಯನಾರಾಯಣ
ಕೆ. ಸತ್ಯನಾರಾಯಣ ನಾಡಿನ ಹೆಸರಾಂತ ಪತ್ರಕರ್ತರಾಗಿದ್ದರು. ಅವರು ಸಾಮಾಜಿಕ - ರಾಜಕೀಯ ವಿಷಯಗಳ ಅಂಕಣಕಾರರಾಗಿ ಮತ್ತು ಆರ್ಥಿಕ ವಿಚಾರಗಳ ವಿಮರ್ಶಕರಾಗಿಯೂ ಹೆಸರಾಗಿದ್ದರು.
ಕೆ. ಸತ್ಯನಾರಾಯಣ 1935ರ ಏಪ್ರಿಲ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಾಂಡುರಂಗರಾವ್. ತಾಯಿ ರಾಜಾಬಾಯಿ. ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿಯ ನಂತರ ಪತ್ರಿಕೋದ್ಯಮ ವೃತ್ತಿಗೆ ಬಂದರು.
ಮದರಾಸಿನ ಖಾಸಾ ಸುಬ್ಬರಾಯರ ಸ್ವತಂತ್ರ ಇಂಗ್ಲಿಷ್ ಪತ್ರಿಕೆ (1955-56) ಸೇರಿದ ಸತ್ಯನಾರಾಯಣ ಅವರು, ಬೆಂಗಳೂರಿಗೆ ಮರಳಿ ತಾಯಿನಾಡು (1956-59) ಪ್ರವೇಶಿಸಿದ ನಂತರ ಇಂಡಿಯನ್ ಎಕ್ಸ್‍ಪ್ರೆಸ್ (1959-67) ವರದಿಗಾರರಾದರು. ಕನ್ನಡಪ್ರಭದಲ್ಲಿ (67-99) ಮುಖ್ಯ ವರದಿಗಾರರಾಗಿದ್ದು ಕೊನೆಗೆ ಆ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾದರು.
ಸತ್ಯನಾರಾಯಣ ಪತ್ರಿಕೆಯಿಂದ ನಿವೃತ್ತರಾದರೂ, ಕನ್ನಡ ಪ್ರಭದಲ್ಲಿ ಅವರ ಅಂಕಣ-ಬರಹ ಮುಂದುವರೆಯಿತು. ನಗರ ಪ್ರದಕ್ಷಿಣೆ, ಸಮಕಾಲೀನ, ಷೇರುಪೇಟೆ ಅವರ ಜನಪ್ರಿಯ ಅಂಕಣಗಳಲ್ಲಿ ಮುಖ್ಯವಾದವು.
ಸತ್ಯನಾರಾಯಣ ನೇರಮಾತು, ನೇರಬರಹಗಳಿಗೆ ಹೆಸರಾದವರು. ಅವರ ನೆನಪಿನ ಶಕ್ತಿ ಅಪಾರವಾದದ್ದು. ಸಭೆ, ಸಮಾರಂಭ, ಸಂದರ್ಶನಗಳ ಕಾಲದಲ್ಲಿ ಟಿಪ್ಪಣಿ ಮಾಡಿಕೊಳ್ಳದೆ, ಶೀಘ್ರವಾಗಿ ವರದಿ ಸಿದ್ಧಮಾಡುವುದಲ್ಲಿ ಸಿದ್ಧಹಸ್ತರೆನಿಸಿದ್ದರು.
ಸತ್ಯನಾರಾಯಣ ಅವರು ಕನ್ನಡ ಪ್ರಭದಲ್ಲಿರುವಾಗಲೇ, ಎಕ್ಸ್ಪ್ರೆಸ್ ಸಮೂಹದ ಆಂಗ್ಲ ಪತ್ರಿಕೆಗಳಿಗೂ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು.
ಸತ್ಯನಾರಾಯಣ ಅವರಿಗೆ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ (1985), ಟಿಯೆಸ್ಸಾರ್ ಪ್ರಶಸ್ತಿ (2002), ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿತ್ತು.
ಸತ್ಯನಾರಾಯಣ ಅವರು 2023ರ ಜನವರಿ 8 ರಂದು ನಿಧನರಾದರು.
On the birthday of journalist and columnist K. Satyanarayana
ಕಾಮೆಂಟ್‌ಗಳು