ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಸೌಮ್ಯಾ


 ಎಸ್. ಸೌಮ್ಯಾ

ವಿದುಷಿ ಎಸ್ ಸೌಮ್ಯಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರಾಂತ ಗಾಯಕಿ ಎನಿಸಿದ್ದಾರೆ.

ಸೌಮ್ಯಾ 1969ರ ಏಪ್ರಿಲ್‌ 16ರಂದು ತಮಿಳುನಾಡಿನಲ್ಲಿ ಜನಿಸಿದರು. ತಮ್ಮ ತಂದೆ ಡಾ. ಶ್ರೀನಿವಾಸನ್ ಅವರಿಂದ ಪ್ರಾರಂಭಿಕ ಸಂಗೀತ ಶಿಕ್ಷಣ ಪಡೆದ ಸೌಮ್ಯ ಮುಂದೆ ಡಾ. ಎಸ್. ರಾಮನಾಥನ್ ಮತ್ತು ಟಿ. ಮುಕ್ತ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಸಂಗೀತಾಭ್ಯಾಸ ಕೈಗೊಂಡರು.  ಸೌಮ್ಯಾ ಅವರು ಸಂಗೀತದಲ್ಲಿ ಪ್ರಥಮ ರ್‍ಯಾಂಕ್ ಸ್ನಾತಕೋತ್ತರ ಸಾಧನೆಯ ಜೊತೆಗೆ ರಸಾಯನ ಶಾಸ್ತ್ರದಲ್ಲಿ ದ್ವಿತೀಯ ರ‍್ಯಾಂಕ್ ಸಾಧನೆಗಳೊಂದಿಗೆ ಬಿ.ಎಸ್‍ಸಿ ಮತ್ತು ಐಐಟಿ ಮದ್ರಾಸಿನ ಎಂ.ಎಸ್‍ಸಿ ಪದವಿಗಳನ್ನೂ ಗಳಿಸಿದವರು. ಹವಾಮಾನದಲ್ಲಿನ ವೆತ್ಯಾಸಗಳಿಂದ ಮೃದಂಗ ವಾದ್ಯದಲ್ಲಿನ ತರಂಗಳ ಮೇಲುಂಟಾಗುವ ಬದಲಾವಣೆಗಳ ಕುರಿತು  ಸಂಶೋಧನಾತ್ಮಕ ಪ್ರಬಂಧ ಮಂಡಿಸಿ ಪಿಎಚ್.ಡಿ ಗಳಿಸಿದ್ದಾರೆ.

ಸೌಮ್ಯ ಅವರು 'ಕರ್ನಾಟಿಕ' ಎಂಬ ಸಂಗೀತ ನೃತ್ಯ ಕಲಿಕೆ, ಪರಂಪರೆ ಮತ್ತು ಪ್ರತಿಭಾ ಪೋಷಣೆಗೆ ಮುಡಿಪಾದ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದಾರೆ. ಕರ್ನಾಟಕ ಸಂಗೀತದ ಕುರಿತಾದ ಸಮಗ್ರ ಅನುಭವಗಳ ಕುರಿತು ಬೆಳಕು ಚೆಲ್ಲುವ 'ನಾದಾನುಭವ' ಎಂಬ ಕಾಂಪ್ಯಾಕ್ಟ್ ಡಿಸ್ಕಿಗೆ ಸಹರಚನಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸಂಗೀತದ ಉನ್ನತಾಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕಿಯಾಗಿ, ಮದ್ರಾಸು ಸಂಗೀತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ಕಲಾಕ್ಷೇತ್ರ ಫೌಂಡೇಷನ್ನಿನ ಆಡಳಿತ ಮಂಡಳಿಯ ಸದಸ್ಯರಾಗಿ ಕೊಡುಗೆ ನೀಡುತ್ತಿದ್ದಾರೆ

ಸೌಮ್ಯ ಅವರು ನೆಲ್ಲೂರಿನಲ್ಲಿರುವ ಸದಾಶಿವ ಬ್ರಹ್ಮೇಂದ್ರರ ಪುಣ್ಯ ಸಮಾಧಿಸ್ಥಳದಲ್ಲಿ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ಪ್ರಥಮ ಸಂಗೀತ ಕಛೇರಿ ನೀಡಿದರು. 1986ರಲ್ಲಿ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ಕಛೇರಿ ನೀಡಿದರು. ನಂತರದಲ್ಲಿ ಭಾರತ ಮತ್ತು ವಿಶ್ವದೆಲ್ಲೆಡೆ ಅವರ ಸಂಗೀತ ವ್ಯಾಪಿಸಿದೆ. ಕೆಲವೊಂದು ಚಲನಚಿತ್ರಗಳಿಗೆ ಹಾಡಿದ್ದಾರೆ ಮತ್ತು ಪಾತ್ರವಹಿಸಿದ್ದಾರೆ. ಕಿರುತೆರೆಯ ಸಂಗೀತ ಕಾರ್ಯಕ್ರಮಗಳ ತೀರ್ಪುಗಾರರಾಗಿ ಮತ್ತು ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಡಾ. ಎಸ್‌.ಸೌಮ್ಯಾ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.

On the birthday of classical vocalist Dr. S. Soumya 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ