ಕಿರಣ ಶೇರಖಾನೆ
ಕಿರಣ ಶೇರಖಾನೆ
ಕಿರಣ ಶೇರಖಾನೆ ಕೇಂದ್ರ ಲಲಿತಕಲಾ ಅಕಾಡೆಮಿ ಬಹುಮಾನಿತರಾಗಿದ್ದು, ದೇಶ ವಿದೇಶಗಳಲ್ಲಿ ತಮ್ಮ ಅಮೂಲ್ಯ ಕಲಾವಂತಿಕೆಗೆ ಹೆಸರಾಗಿದ್ದಾರೆ.
ಕಿರಣ ಶೇರಖಾನೆ 1991ರ ಏಪ್ರಿಲ್ 16ರಂದು ಜನಿಸಿದರು. ಇವರು ಹುಬ್ಬಳ್ಳಿಯವರು. ಮೂರನೇ ವಯಸ್ಸಿಗೆ ಪೋಲಿಯೋಗೆ ಸಿಲುಕಿದ ಇವರ ಬದುಕು ನಿರೀಕ್ಷಿತ ಮಟ್ಟದಲ್ಲಿ ರೂಪುಗೊಳ್ಳಲಿಲ್ಲ. ವರ್ಷಗಳು ಕಳೆದವೆ ಹೊರತು ಅವರ ದೇಹವು ಸಹಜ ಬೆಳವಣಿಗೆ ಕಾಣಲಿಲ್ಲ. ಇನ್ನೊಬ್ಬರ ನೆರವಿಲ್ಲದೇ ಅವರಿಗೆ ಓಡಾಡಲು ಸಾಧ್ಯವಿಲ್ಲದಾಯಿತು. ಅವರಿಗೆ ಸಹೋದರ ರಾಹುಲ ಊರುಗೋಲಾದರು. ಆದರೆ ಅವರು ತಮ್ಮ ಕಲೆಯಿಂದ ಇಂದು ಎತ್ತರಕ್ಕೇರಿದ್ದಾರೆ.
ಕಿರಣ ಅವರು ತಮ್ಮ ಚಿಕ್ಕಪ್ಪ ರಮೇಶ ಶೇರಖಾನೆ ಅವರು ಚಿತ್ರ ಬರೆಯುವುದನ್ನು ನೋಡುತ್ತಿದ್ದರು. ರಮೇಶ ಶೇರಖಾನೆ ಅವರು ಬ್ಯಾನರ್ ಬರೆಯುತ್ತಿದ್ದರು. ಇವರ ಕಲೆಗಾರಿಕೆ ಕಂಡು ಕಿರಣ ಅವರು ಕೂಡ ಚಿತ್ರಕಲೆಯಲ್ಲಿ ಹೆಚ್ಚು ಆಸಕ್ತಿ ತೋರಿದರು. ಅದೇ ಕ್ಷೇತ್ರದಲ್ಲಿ ಮುಂದುವರಿಯಲು ಚಿಕ್ಕಪ್ಪ ಪ್ರೋತ್ಸಾಹಿಸಿದರು. ಬಳಿಕ ಕಿರಣ ಧಾರವಾಡದ ಸೃಜನಾ ಫೈನ್ ಆರ್ಟ್ಸ್ ಕಾಲೇಜಿನಲ್ಲಿ, ಬಿ.ಎಫ್.ಎ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಫ್.ಎ ಪದವಿ ಪಡೆದರು.
"ಮುಖಕ್ಕೆ ಆಮ್ಲಜನಕದ ಮಾಸ್ಕ್ ಧರಿಸಿಕೊಂಡು ಉಸಿರಾಡಲು ಪರದಾಡುವ ಒಬ್ಬ, ರೆಂಬೆ ಕೊಂಬೆಗೆ ಕೊಡಲಿಯೇಟು ಬಿದ್ದು ಅರೆಜೀವದಂತೆ ನಿಂತ ಮರ, ಎಣ್ಣೆ ಬತ್ತಿಯ ಜ್ಯೋತಿ ಆರಿದ ಲಾಟೀನು ಕೈಯಲ್ಲಿ ಹಿಡಿದ ಇನ್ನೊಬ್ಬ, ಸಮಯದ ಸಮತೋಲನಕ್ಕೆ ಕಿರು ಗಡಿಯಾರ ಹಿಡಿದ ಮತ್ತೊಬ್ಬ, ಎಲ್ಲ ಮುಖಗಳಲ್ಲೂ ವಿಷಾದದ ಛಾಯೆ.... ತಲೆಕೆಳಗಾದ ಭೂಮಂಡಲಕ್ಕೆ ಜೋಡಿಸಿದ ನಳದಲ್ಲಿ ಹನಿ ನೀರು, ಆ ಹನಿಗೆ ಬಾಯ್ದೆರೆದು ಕುಳಿತ ಹಕ್ಕಿ... " ಹೀಗೆ 'ಪಂಚಭೂತ’ಗಳ ಪರಿಕಲ್ಪನೆಯಲ್ಲಿ ಕಿರಣ ಶೇರಖಾನೆ ಅವರು ರಚಿಸಿದ ‘ದಿ ಎಲಿಮೆಂಟ್ಸ್ ಆಫ್ ಲೈಫ್’ ಎಂಬ ಚಿತ್ರಕ್ಕೆ 2023 ಸಾಲಿನ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಂದಿತು.
"ಪಂಚಭೂತಗಳನ್ನು ಅವಲಂಬಿಸಿ ನಾವು ಬದುಕುತ್ತಿದ್ದೇವೆ. ಅವು ಯಾವುದೂ ಇಲ್ಲದಿದ್ದರೆ ಬದುಕು ಅಸಾಧ್ಯ. ಮತ್ತೆ ನಾವು ಪಂಚಭೂತಗಳಲ್ಲೇ ಲೀನವಾಗುತ್ತೇವೆ. ಅವುಗಳ ಸಂರಕ್ಷಣೆ ಅಗತ್ಯ ಎಂಬ ದೃಷ್ಟಿಯಿಂದ ಈ ಚಿತ್ರ ಬರೆದೆ. ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿದೆ" ಎನ್ನುತ್ತಾರೆ ಕಿರಣ ಶೇರಖಾನೆ.
ಸಮಕಾಲೀನ ಚಿತ್ರಕಲಾ ಪ್ರಕಾರದಲ್ಲಿ ಆಸಕ್ತಿ ಹೊಂದಿರುವ ಕಿರಣ ಶೇರಖಾನೆ ಅವರು ತಮ್ಮದೇ ಆದ ಶೈಲಿ ರೂಢಿಸಿಕೊಂಡಿದ್ದಾರೆ. ಅವರ ಕಲಾಕೃತಿಗಳು ಅಭಿವ್ಯಕ್ತಿಸುವ ಪರಿಯೇ ವಿಭಿನ್ನ ಮತ್ತು ವಿಶಿಷ್ಟ. ಅವರು ಕಲಾಕೃತಿಗಳಲ್ಲಿ ತಮ್ಮ ಭಾವನೆಗಳನ್ನು ಹರಿಬಿಡಲು ಪ್ರಯತ್ನಿಸುತ್ತಾರೆ. ಹೀಗೆ ಮಾಡುವುದೇ ಅವರಿಗೆ ಖುಷಿ. ಅಕ್ರಿಲಿಕ್ ಬಣ್ಣ ಹಾಗೂ ಚಾರ್‌ಕೋಲ್ ಬಳಸಿ ಕ್ಯಾನ್ವಾಸ್ ಮೇಲೆ ತಮ್ಮದೇ ಪ್ರಪಂಚ ಸೃಷ್ಟಿಸುವ ಶೇರಖಾನೆ, ಗಾಢ ಬಣ್ಣಗಳ ಬಳಕೆಗಿಂತ ಸರಳ ಮಾದರಿಗೆ ಒತ್ತು ನೀಡುತ್ತಾರೆ. ತೆಳು ಬಣ್ಣದಲ್ಲಿಯೇ ಮೂಡುವ ಆಕೃತಿಗಳು ಅವು ಹುಟ್ಟುಹಾಕುವ ಭಾವನೆಗಳಿಂದಲೇ ಗಮನ ಸೆಳೆಯುತ್ತವೆ. ಅವರ ಹಲವು ಕಲಾಕೃತಿಗಳಲ್ಲಿ ವಿಷಾದ, ನೋವಿನ ನೆರಳು ಹೆಚ್ಚು ಕಾಣಿಸುತ್ತವೆ. ಬಣ್ಣ- ಭಾವಗಳ ನಡುವಿನ ತಂತ್ರಗಾರಿಕೆಯೇ ಅವರಿಗೆ ಕಲೆಗಾರಿಕೆ. ಈ ಕುರಿತು ಹೇಳುವ ಕಿರಣ್ "ನನ್ನನ್ನೇ ನಾನು ಕ್ಯಾನ್ವಾಸ್ ಮೇಲೆ ಪ್ರಯೋಗ ಮಾಡುತ್ತೇನೆ. ಕಲಾವಿದ ತನ್ನ ಆಲೋಚನೆ, ಭಾವನೆಗಳನ್ನು ಕಲಾಕೃತಿಗಳಲ್ಲಿ ಅಭಿವ್ಯಕ್ತಗೊಳಿಸಬೇಕು. ಕಲಾಕೃತಿಗಳಲ್ಲಿ ನನ್ನ ಭಾವನೆಗಳು ಇರುತ್ತವೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥ ಕೊಡಬಹುದು" ಎನ್ನುತ್ತಾರೆ.
ಕಿರಣ ಶೇರಖಾನೆ ಅವರಿಗೆ ಈ ಹಿಂದೆ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿಯೂ ಸಂದಿತ್ತು. ಅವರಿಗೆ ಅನೇಕ ಸಂಘ ಸಂಸ್ಥೆಗಳ ಗೌರವಗಳೂ ಸಂದಿವೆ.
ಅಮೂಲ್ಯ ಸಾಧಕರಾದ ನಮ್ಮೆಲ್ಲರ ಹೆಮ್ಮೆಯ ಕಿರಣ ಶೇರಖಾನೆ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
ಮಾಹಿತಿ ಆಧಾರ: 'ಪ್ರಜಾವಾಣಿ'ಯಲ್ಲಿ ಮಹಮ್ಮದ್ ಶರೀಫ್ ಅವರ ಸಂದರ್ಶನ ಬರೆಹ
Happy birthday Kiran Sherkhane 🌷🌷🌷
ಕಾಮೆಂಟ್‌ಗಳು