ಕೆ. ಎಲ್. ಸೈಗಲ್
ಕೆ. ಎಲ್. ಸೈಗಲ್
ಕುಂದನ್ ಲಾಲ್ ಸೈಗಲ್ ಭಾರತೀಯ ಚಲನಚಿತ್ರೋದ್ಯಮದ ಪ್ರವರ್ಧಮಾನಕಾಲದ ಪ್ರಧಾನ ಹಿನ್ನೆಲೆ ಗಾಯಕರಾಗಿ ಮತ್ತು ನಟರಾಗಿ ಅಮರರಾಗಿರುವ ಹೆಸರು. ಚಲನಚಿತ್ರರಂಗದ ಪ್ರಥಮ ಸೂಪರ್ ಸ್ಟಾರ್ ನಟರೆಂದು ಅವರಿಗೆ ಪ್ರಖ್ಯಾತಿಯಿತ್ತು.
ಸೈಗಲ್ 1904ರ ಏಪ್ರಿಲ್ 11ರಂದು ಜಮ್ಮುವಿನ ನವಶೇಹರ್ನಲ್ಲಿ ಜನಿಸಿದರು, ಅಲ್ಲಿ ಅವರ ತಂದೆ ಅಮರ್ಚಂದ್ ಸೈಗಲ್ ಜಮ್ಮು ಮತ್ತು ಕಾಶ್ಮೀರದ ರಾಜನ ನ್ಯಾಯಾಲಯದಲ್ಲಿ ತಹಶೀಲ್ದಾರರಾಗಿದ್ದರು. ಅವರ ತಾಯಿ ಕೇಸರಬಾಯ್ ಸೈಗಲ್ ಆಳವಾದ ಧಾರ್ಮಿಕ ಹಿಂದೂ ಮಹಿಳೆ. ಅವರು ಶಾಸ್ತ್ರೀಯ ಶೈಲಿಯಲ್ಲಿ ಭಜನ್, ಕೀರ್ತನ್ ಮತ್ತು ಶಬದ್ ಮುತಾದವುಗಳನ್ನು ಹಾಡಲು ತನ್ನ ಚಿಕ್ಕ ಮಗ ಸೈಗಲ್ ಅವರಿಗೆ ಮಾರ್ಗದರ್ಶಿಸಿದ್ದರು.
ಸೈಗಲ್ ಶಾಲೆಯಿಂದ ಹೊರಬಂದು ರೈಲ್ವೆ ಟೈಮ್ಕೀಪರ್ ಆಗಿ ಕೆಲಸ ಮಾಡುವ ಮೂಲಕ ಹಣವನ್ನು ಸಂಪಾದಿಸಲು ಪ್ರಾರಂಭಿಸಿದರು. ನಂತರ, ಅವರು ರೆಮಿಂಗ್ಟನ್ ಟೈಪ್ ರೈಟರ್ ಕಂಪನಿಗಾಗಿ ಟೈಪ್ ರೈಟರ್ ಮಾರುವ ಸೇಲ್ಸ್ಮನ್ ಆಗಿ ಕೆಲಸ ಮಾಡಿದರು, ಅದು ಅವರಿಗೆ ಅಂದಿನ ಭಾರತದ ಹಲವು ಭಾಗಗಳಲ್ಲಿ ಪ್ರವಾಸ ಮಾಡುವ ಅವಕಾಶ ಕಲ್ಪಿಸಿತು.
ಲಾಹೋರ್ನಲ್ಲಿ ದೊರೆತ ಗೆಳೆಯ ಮೆಹ್ರಚಂದ್ ಜೊತೆ ಕುಂದನ್ ಕೊಲ್ಕೊತ್ತಾಗೆ ಬಂದರು. ಅಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ಕೆಲವು ಕಾಲ ಕೆಲಸ ಮಾಡಿದರು. ನೋಡಲಿಕ್ಕೆ ಸುಂದರವಾಗಿದ್ದು ಸುಶ್ರಾವ್ಯವಾಗಿ ಹಾಡುತ್ತಿದ್ದ ಸೈಗಲ್ಗೆ ಅಂದಿನ ಚಿತ್ರೋದ್ಯಮ ಕೇಂದ್ರವಾಗಿದ್ದ ಕೊಲ್ಕೊತ್ತಾ ಹೊಸಬಾಗಿಲು ತೆರೆಯಿತು.
1930ರ ದಶಕದ ಆರಂಭದಲ್ಲಿ ಶಾಸ್ತ್ರೀಯ ಸಂಗೀತಗಾರ ಮತ್ತು ಸಂಗೀತ ನಿರ್ದೇಶಕ ಹರಿಶ್ಚಂದ್ರ ಬಾಲಿ ಅವರು ಕೆ.ಎಲ್. ಸೈಗಲ್ ಅವರನ್ನು ಸಂಗೀತ ನಿರ್ದೇಶಕ ಆರ್ ಸಿ ಬೊರಾಲ್ ಅವರಿಗೆ ಪರಿಚಯಿಸಿದರು. ಹೀಗಾಗಿ ಬಿ.ಎನ್.ಸರ್ಕಾರ್ ಅವರ ಕೊಲ್ಕೊತ್ತಾ ಮೂಲದ ಫಿಲ್ಮ್ ಸ್ಟುಡಿಯೋ 'ನ್ಯೂ ಥಿಯೇಟರ್ಸ್'ನಲ್ಲಿ ಸೈಗಲ್ ಅವರಿಗೆ ತಿಂಗಳಿಗೆ ರೂ. 200 ರಂತೆ ಕಲಾವಿದನಾಗಿ ನೌಕರಿ ದೊರೆಯಿತು. ಅಲ್ಲಿ ಸೈಗಾಲ್ ಅವರು ಪಂಕಜ್ ಮಲ್ಲಿಕ್, ಕೆ. ಸಿ. ದೇ ಮತ್ತು ಪಹರಿ ಸನ್ಯಾಲ್ ಮುಂತಾದ ಸಮಕಾಲೀನ ಪ್ರತಿಭೆಗಳ ಸಂಪರ್ಕಕ್ಕೆ ಬಂದರು. ಇದೇ ಸುಮಾರಿಗೆ ಭಾರತೀಯ ಗ್ರಾಮಾಫೋನ್ ಸಂಸ್ಥೆ ಸೈಗಾಲ್ ಅವರು ಹರಿಶ್ಚಂದ್ರ ಬಾಲಿ ಸಂಗೀತದಲ್ಲಿ ಹಾಡಿದ ಧ್ನನಿತಟ್ಟೆಗಳನ್ನು ಹೊರತಂದಿತ್ತು.
1932ರಲ್ಲಿ ನ್ಯೂ ಥಿಯೇಟರ್ಸಿನ ಬಿ.ಎನ್. ಸರ್ಕಾರ್ ಅವರು ಮೊಹಬತ್ ಕೆ ಆಂಸೂ, ಸುಭಹ್ ಕಿ ಸಿತಾರಾ ಮತ್ತು ಜಿಂದಾಲಾಶ್ ಚಿತ್ರಗಳನ್ನು ನಿರ್ಮಿಸಿದರು. ಈ ಚಿತ್ರಗಳ ಮೂಲಕ ನಟ ಮತ್ತು ಗಾಯಕರಾಗಿ ಅಭಿನಯಿಸಿದ್ದ ಕೆ. ಎಲ್. ಸೈಗಲ್ ಅಪಾರ ಜನಪ್ರಿಯತೆ ಪಡೆದರು. ಆ ಚಿತ್ರಗಳಿಗೆ ಸೈಗಾಲ್ ತಮ್ಮ ಹೆಸರನ್ನು ಸೈಗಾಲ್ ಕಾಶ್ಮೀರಿ ಎಂದು ಬಳಸಿದ್ದರು. 1933ರಲ್ಲಿ ಯಹೂದಿ ಕಿ ಲಡ್ಕಿ ಚಿತ್ರದಿಂದ ಅವರು ಕೆ ಎಲ್. ಸೈಗಾಲ್ ಎಂದಾದರು. 1933ರಲ್ಲಿ ಪೂರಣ್ ಭಗತ್ ಚಿತ್ರದಲ್ಲಿ ಸೈಗಾಲ್ ಅವರು ಹಾಡಿದ ನಾಲ್ಕು ಭಜನೆಗಳು ದೇಶದಾದ್ಯಂತ ಸಂಚಲನ ಮೂಡಿಸಿದವು. ಚಂಡೀದಾಸ್, ರೂಪಲೇಖ, ಕರ್ವಾನ್ ಹಿ ಹಯತ್ ಅವರ ಆ ದಿನದ ಇತರ ಚಿತ್ರಗಳು.
ಪಿ. ಸಿ ಬರೂವ 1935ರಲ್ಲಿ ಶರತ್ ಚಂದ್ರ ಚಟರ್ಜಿಯವರ ಕಾದಂಬರಿ ಆಧರಿಸಿದ ದೇವದಾಸ್ ಚಿತ್ರವನ್ನು ರಚಿಸಿ ಖ್ಯಾತಿಗೊಂಡರು. ಅವರ ಇತರ ಚಿತ್ರಗಳಾದ ಜಿಂದಗಿ, ಮುಕ್ತಿ, ಮಂಜಿಲ್ ಮತ್ತು ಅಧಿಕಾರ್ ಭಾರತದ ಚಲಚ್ಚಿತ್ರ ರಂಗದಲ್ಲಿ ಒಂದು ಹೊಸ ದೃಷ್ಟಿಯನ್ನು ಮೂಡಿಸಿದುವು. ದೇವದಾಸದಲ್ಲಿಯೂ ಅವರ ಇತರ ಚಿತ್ರಗಳಲ್ಲಿಯೂ ಅಭಿನಯಿಸಿ ಹಾಡಿದ ಸೈಗಲ್ ದೇಶದಲ್ಲೆಲ್ಲ ಅನುಪಮ ಖ್ಯಾತಿಯನ್ನು ಪಡೆದರು. 'ಬಲಮ್ ಯೆ ಬಸೋ ಮೋರೆ ಮನ್ ಮೇ', 'ದುಃಖ್ ಕೆ ಅಬ್ ದಿನ್ ಬೀತಾತ್ ನಾಹಿ' ಮುಂತಾದ ಸೈಗಾಲ್ ಹಾಡಿದ ಗೀತೆಗಳು ದೇಶದಾದ್ಯಂತ ಜನರನ್ನು ಸಂವೇದಿಸಿದವು.
ಸೈಗಾಲ್ ಬಂಗಾಳಿ ಭಾಷೆಯನ್ನು ಚೆನ್ನಾಗಿ ಕಲಿತು ತಾವಿದ್ದ ನ್ಯೂ ಥಿಯೇಟರ್ಸ್ ಸಂಸ್ಥೆಯ ಏಳು ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಅನೇಕ ಬಂಗಾಳಿ ಗೀತೆಗಳನ್ನೂ ಹಾಡಿ ರಬೀಂದ್ರನಾಥ ಠಾಗೂರರೂ ತಲೆದೂಗುವಂತೆ ಮಾಡಿದ್ದರಂತೆ.
ಮುಂದೆ ಸೈಗಲ್ ಅವರು ದೀದಿ, ದೇಶರ್ ಮತಿ, ಸಾಥಿ ಮತ್ತು ಜೀಬನ್ ಮರಣ್ ಬಂಗಾಳಿ ಚಿತ್ರಗಳಲ್ಲಿ ನಟಿಸಿದರು. ಹಿಂದಿಯಲ್ಲಿ ಪ್ರೆಸಿಡೆಂಟ್, ಧರ್ತಿ ಮಾತಾ, ಸಾಥಿ, ಸ್ಟ್ರೀಟ್ ಸಿಂಗರ್, ದುಷ್ಮನ್, ಜಿಂದಗಿ ಚಿತ್ರಗಳಲ್ಲಿ ಹಾಡಿ ನಟಿಸಿದರು. ಸ್ರೀಟ್ ಸಿಂಗರ್ ಚಿತ್ರದ 'ಬಾಬುಲ್ ಮೋರಾ ನೈಹಾರ್ ಚ್ಚೂಟೋ ಜಾಯೆ' ಅನ್ನು ನೇರ ಚಿತ್ರಣದಲ್ಲಿ ಕ್ಯಾಮಾರಾ ಮುಂದೆಯೇ ಹಾಡಿದ ಮಹಾನ್ ಪ್ರತಿಭೆ.
1941ರ ಕೊನೆಯ ವೇಳೆಗೆ ಸೈಗಾಲ್ ರಂಜಿತ್ ಮೂವಿಟೋನ್ ಅವರಲ್ಲಿ ಉದ್ಯೋಗ ನಡೆಸಲು ಮುಂಬೈಗೆ ಬಂದರು. 1942 ವರ್ಷದ ಭಕ್ತ ಸೂರದಾಸ್, 1943 ವರ್ಷದ ತಾನ್ಸೇನ್ ಭರ್ಜರಿ ಯಶಸ್ವಿ ಕಂಡವು. ತಾನಸೇನ್ ಚಿತ್ರದ ದೀಪಕ ರಾಘದ 'ದಿಯಾ ಜಲೋ' ಅವರು ಹಾಡಿದ ಅಮರ ಗೀತೆಯಾಗಿದೆ. ಅದೇ ಚಿತ್ರದ 'ಸಪ್ತ ಸುರೊನ್', 'ರೂಮ್ ಝೂಮ್ ರೂಮ್ ಝೂಮ್ ಚಾಲ್ ತಿಹಾರಿ' ಗೀತೆಗಳೂ ಮನಮಿಡಿಯುವಂತದ್ದು.
1944 ರಲ್ಲಿ ಸೈಗಾಲ್ ಅವರು ನ್ಯೂ ಥಿಯೇಟರ್ಸಿಗೆ ಹಿಂದಿರುಗಿ 'ಮೈ ಸಿಸ್ಟರ್' ಚಿತ್ರವನ್ನು ಪೂರ್ಣಗೊಳಿಸಿದರು. ಈ ಚಿತ್ರದಲ್ಲಿ 'ದೋ ನೈನಾ ಮತವಾರೆ', 'ಯೆ ಕತಿಬ್-ಎ-ತಕದೀರ ಮುಜೆ ಇತನಾ ಬತಾ ದೆ' ಮುಂತಾದ ಹಾಡುಗಳಿದ್ದವು.
ಯಶಸ್ಸೆಂಬ ಮಾದಕತೆಗೆ ಕಲಾವಿಶ್ವದಲ್ಲಿ ಮಾದಕ ದ್ರವ್ಯಕ್ಕೆ ಸದಾ ಜೋಡಿ. ಸೈಗಾಲರಿಗೆ ಕುಡಿತ, ಅವರ ದೇಹ ಮತ್ತು ಅವರ ಕಾರ್ಯದಕ್ಷತೆಯ ಮೇಲೆ ವ್ಯತಿರಿಕ್ತತೆಯ ಛಾಪನ್ನು ಹಾಸತೊಡಗಿ ಅವರನ್ನು ಬದುಕಿನ ಕೊನೆಗೆ ಕೊಂಡೊಯ್ದಿತ್ತು.
ತಮ್ಮ ಕೊನೆಯುಸಿರಿನ ಹಿಂದಿನ ವರ್ಷ 1946 ರಲ್ಲಿ ಸೈಗಾಲ್ ಅವರು ನೌಷದ್ ಅಲಿ ಸಂಗೀತ ನೀಡಿದ 'ಶೆಹಜಹಾನ್’ ಚಿತ್ರದ ‘ಜಬ್ ದಿಲ್ ಹಿ ಟೂಟ್ ಗಯಾ’, 'ಮೆರೆ ಸಪ್ನೋಂ ಕೀ ರಾಣಿ' 'ಏ ದಿಲ್ ಬೇಕರಾರ್ ಝೂಮ್' ಗೀತೆಗಳ ಧ್ವನಿಯಾದರು.
1947ರಲ್ಲಿ ಬಿಡುಗಡೆಯಾದ 'ಪರ್ವಾನಾ' ಸೈಗಾಲ್ ಅವರು ಹಾಡಿದ ಕೊನೆಯ ಚಿತ್ರ. ಖವಾಜ ಖುರ್ಷಿದ್ ಅನ್ವರ್ ಸಂಗೀತದಲ್ಲಿ ಸೈಗಾಲರು 'ಟೂಟ್ ಗಯೆ ಸಬ್ ಸಪ್ನೆ ಮೇರೆ', 'ಮೊಹಬ್ಬತ್ ಮೇ ಕಭಿ ಅಯ್ಸೀ ಭಿ ಹಾಲತ್', 'ಜೀನೇ ಕಾ ಧಾಂಗ್ ಸಿಖಾಯೆ ಜಾ' ಮತ್ತು 'ಕಹಿನ್ ಉಲಹ್ ನ ಜಾನಾ' ಗೀತೆಗಳನ್ನು ಹಾಡಿದ್ದರು. ಚಿತ್ರ ಬಿಡುಗಡೆಯಾಗುವುದಕ್ಕೆ ಮುಂಚೆಯೇ 1947ರ ಜನವರಿ 18 ರಂದು ನಿಧನರಾದರು.
ಚಲನಚಿತ್ರಗೀತೆಗಳನ್ನು ಹಾಡುವುದಕ್ಕೆ ಕೆ.ಎಲ್. ಸೈಗಾಲ್ ಅವರು ಮುಂದಿನ ಗಾಯಕರುಗಳಿಗೆ ಹಾಕಿಕೊಟ್ಟಿದ್ದ ನೀಲಿನಕ್ಷೆ ಮರೆಯಲಾಗದ್ದು. ಇಂದಿಗೂ ಅವರ ಗೀತೆಗಳ ಸಂಚಲನ ಹೃದಯ ತಟ್ಟುವಂತದ್ದು.
On the birth anniversary of first super star and super singer of Indian Cinema K. L. Saigal
ಕಾಮೆಂಟ್‌ಗಳು