ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನರಸಿಂಹ ಜಯಂತಿ


 ನರಸಿಂಹ ಜಯಂತಿ


ಇಂದು ನರಸಿಂಹ ಜಯಂತಿ.      ಮನುಷ್ಯ ಮತ್ತು ಸಿಂಹ ಇವೆರಡರ ಸಂಮಿಲಿತಗೊಂಡ ವಿಷ್ಣುವಿನ ಅವತಾರವೇ ನರಸಿಂಹಾವತಾರ.  ಮನುಷ್ಯ ಉನ್ನತಿಗೆ ಏರಿದಂತೆಲ್ಲಾ ತನ್ನ ಅಹಂ ಅನ್ನು ಬೆಳೆಸಿಕೊಳ್ಳುತ್ತಾ, ತಾನು ಪರಮಾತ್ಮನ ಸೃಷ್ಟಿಯ ಒಂದು ಭಾಗ ಎಂಬ ಅರಿವಿನ ಜಾಗೃತಿಯ ಪರಿವೆಯನ್ನು ಪ್ರಯತ್ನಪೂರ್ವಕವಾಗಿ ಮರೆಮಾಡಿಕೊಳ್ಳುತ್ತಾ,  ತಾನೇ ಮಿಗಿಲು, ತನ್ನ ಸುತ್ತಲಿನ ಪ್ರಾಣಿ ಪ್ರಪಂಚ ಕೀಳು, ತನ್ನ ಹೆಂಡತಿ ಮಕ್ಕಳಿಗೇನು ಗೊತ್ತು, ನಾನು ಎಲ್ಲಾ ಸಂಪಾದಿಸುತ್ತಿದ್ದೇನೆ, ಇಡೀ ವಿಶ್ವವನ್ನೇ ಜಯಿಸುವಾಗ ಈ ವಿಶ್ವಕ್ಕೆ ಯಾವ ದೊಣ್ಣೆ ನಾಯಕ ಸೃಷ್ಟಿಕರ್ತ, ನಾನು ಏನು ಮಾಡಿದರೂ ನಡೆಯುತ್ತದೆ, ಎಲ್ಲರೂ ನನ್ನನ್ನೇ ಪ್ರಭುವೆಂದು ಕೊಂಡಾಡಬೇಕು -  ಇಂತಹ ವಾಂಛಲ್ಯ, ದುರಭಿಮಾನ, ಅನ್ಯಮನಸ್ಕತೆ, ದುರಹಂಕಾರ ವೃದ್ಧಿಸುತ್ತಾ ಹೋಗುತ್ತದೆ.  ಈ ರೀತಿಯಾಗಿ ತನ್ನ  ಬದುಕೆಂಬ ಅನುಭವದ ಯಾತ್ರೆಯಲ್ಲಿ, ಪುನೀತನಾಗುವ ಅವಕಾಶವನ್ನು ಕಳೆದುಕೊಳ್ಳುವ ಮಾನವ, ದಾನವನಾಗಿ ಪರಿವರ್ತಿತಗೊಂಡು ಭಯದ, ಲೋಭಧ, ಮೋಹದ, ಕ್ರೋಧದ ದಾನವತೆಯನ್ನು ಬಾಳುತ್ತಾ ಮುಂದೆ ಸಾಗುತ್ತಾನೆ.  

ಹಿರಣ್ಯಾಕ್ಷ, ಹಿರಣ್ಯಕಶಿಪು ಅಂತಹ ರಾಕ್ಷಸರ ಬಾಳು ಇಂದಿನ ಬಹುತೇಕ ದಾಹಿಗಳ ಬದುಕಿನ ಒಂದು ನೆರಳಿನಂತೆ ಕಾಣುತ್ತದೆ.  ಇಂತಹವರು ಇಂದು ಹೇರಳವಾಗಿ ಕಾಣುತ್ತಾರೆ,  ಅಷ್ಟೇ ಅಲ್ಲ!  ನಾವು ಸರಿಯಾಗಿದ್ದೇವೆ ಎಂದು ಹೇಳಿಕೊಳ್ಳುವ ನಮ್ಮ  ಸ್ವಯಂ ಪ್ರತಿಷ್ಠೆಯಲ್ಲೂ ನಮ್ಮಲ್ಲಿ ನಾವೇ  ಈ ಗುಣಗಳನ್ನು  ಆಗಾಗ ಕಂಡುಕೊಳ್ಳುತ್ತಿರುತ್ತೇವೆ.  ಬಹಳಷ್ಟು ವೇಳೆ ನಮ್ಮ ಪುಟ್ಟ ಮಕ್ಕಳು  ತಮ್ಮ ಮುಗ್ಧತೆಯಲ್ಲಿ ತೋರುವ ದಿವ್ಯತೆಯನ್ನು ಸಹಾ ನಮಗೆ  ಅನುಭಾವಿಸಲು ಸಾಧ್ಯವಾಗದೆ, ನಮ್ಮ ಬಾಳನ್ನು ದುಸ್ತರವಾಗಿ ಬದುಕುತ್ತಿರುತ್ತೇವೆ.  

ನಾವು ಸೂಕ್ಷ್ಮವಾಗಿ ನಮ್ಮ ಬದುಕನ್ನು ಅಧ್ಯಯಿಸಿಕೊಂಡು ಮಗುವಿನ ನಿರ್ಮಲ ಮನಸ್ಸಿನಿಂದ ಎಲ್ಲವೂ ನಿನ್ನದೇ, ನನ್ನದೇನಿದೆ ಎಂಬಂತಹ ಪ್ರೀತಿಯಾದ ಭಕ್ತಿಯನ್ನು  ಅಳವಡಿಸಿಕೊಳ್ಳತೊಡಗಿದಾಗ ನಮ್ಮ ಮಾನವತನ ಮತ್ತು ಸಿಂಹತನದ ಅಗಾಧ ಶಕ್ತಿ ರಾಜ ಗಾಂಭೀರ್ಯಗಳು ನಮ್ಮ ಬಲವಾಗಿ, ಅದೇ ದೈವಶಕ್ತಿಯಾಗಿ ರೂಪುಗೊಂಡು ನಮ್ಮಲ್ಲಿರುವ ಎಲ್ಲ ರಾಕ್ಷಸಪ್ರವೃತ್ತಿಗಳೂ  ಅಸುನೀಗುತ್ತವೆ.     ಹೀಗಾಗಿ ಪ್ರಹ್ಲಾದನ ಮುಗ್ಧ ಪ್ರೀತಿ, ನರಸಿಂಹ ಎಂಬ ದಿವ್ಯತೆ ಮತ್ತು ಹಿರಣ್ಯಾಕ್ಷ - ಹಿರಣ್ಯಕಶಿಪುಗಳೆಂಬ ಅವಗುಣಗಳ ನಾಶದ ಕತೆಯನ್ನು  ನಮ್ಮ ಕತೆಯನ್ನಾಗಿಯೇ ಕಂಡುಕೊಂಡು ನಮ್ಮ ಬದುಕನ್ನು ಉತ್ತಮತೆಯ ಕಡೆಗೆ ನಡೆಸಿಕೊಳ್ಳುವ ಸಾಧ್ಯತೆ ಇದೆ.

ನರಸಿಂಹಾವತಾರ
-ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು

ಗರ್ಭದಲ್ಲೇ ವಿಷ್ಣುದೀಕ್ಷೆ:

ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಹಿರಣ್ಯಾಕ್ಷನ ವಧೆಗಾಗಿ ನಡೆದದ್ದು ವರಾಹಾವತಾರ.  ಅವನ ಸೋದರ ಹಿರಣ್ಯಕಶಿಪುವಿನ ವಧೆಗಾಗಿ ನಡೆದದ್ದು ನರಸಿಂಹಾವತಾರ.

ಜಯ-ವಿಜಯರು ಸನಕಾದಿಗಳ ಶಾಪದಿಂದ ಹಿರಣ್ಯಕಶಿಪು – ಹಿರಣ್ಯಾಕ್ಷ ಆಗಿ ಜನಿಸಿದರು. ಹಿರಣ್ಯಾಕ್ಷ ವರಾಹನಿಂದ ಸತ್ತಾಗ ಹಿರಣ್ಯಕಶಿಪು ಕಿಡಿಕಿಡಿಯಾದ. ಸೇಡು ತೀರಿಸಲು ಘೋರ ತಪಸ್ಸು ಮಾಡಿದ.  ಬ್ರಹ್ಮ ಪ್ರತ್ಯಕ್ಷನಾದಾಗ ಹೀಗೊಂದು ವರವನ್ನು ಬೇಡಿದ: 

“ಒಳಗೆ ಅಥವಾ ಹೊರಗೆ, ಹಗಲಲ್ಲಿ ಅಥವಾ ರಾತ್ರಿಯಲ್ಲಿ , ಭೂಮಿಯಲ್ಲಿ ಅಥವಾ ಆಕಾಶದಲ್ಲಿ, ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ತನಗೆ ಸಾವು ಬರಬಾರದು.  ಯಾವುದೇ ಆಯುಧಗಳಿಂದ,ಒಟ್ಟು ಬ್ರಹ್ಮಸೃಷ್ಟಿಯ ಯಾವುದರಿಂದಲೂ ತನಗೆ ಸಾವು ಬರಬಾರದು.”

ಬ್ರಹ್ಮ ಅಸ್ತು ಎಂದ. ಇಂಥ ವರ ಪಡೆದು ಹಿರಣ್ಯಕಶಿಪು ಮದೋನ್ಮತ್ತನಾದ.  ದೇವತೆಗಳನ್ನು ಪೀಡಿಸತೊಡಗಿದ.  ವರ್ಷಗಟ್ಟಲೆ ಅವನ ದಂಡಯಾತ್ರೆ ನಡೆಯಿತು.  ಸದಾಕಾಲ ಯುದ್ಧ. ಸ್ವಂತ ರಾಜ್ಯದ ಕಡೆಗೆ ಗಮನವೀಯಲಿಲ್ಲ. 

ಹಿರಣ್ಯಕಶಿಪು ತಪಸ್ಸಿನಲ್ಲಿದ್ದ ಸಮಯ ನೋಡಿ ದೇವತೆಗಳು ಅವನ ಅರಮನೆಗೆ ದಾಳಿ ಮಾಡಿದರು. ಅವನ ಪತ್ನಿ ಕಯಾಧುವನ್ನು ಸೆರೆ ಹಿಡಿದರು. ಆಗ ಆಕೆ ಗರ್ಭಿಣಿ.  ನಾರದರು ಕಯಾಧುವನ್ನು ತನ್ನ ಆಶ್ರಮಕ್ಕೆ ಕರೆದು ತಂದು ಸಾಕಿದರು. ದಿನನಿತ್ಯ ಆಕೆಗೆ ದೇವರ ಮಹಿಮೆಯ ಕಥೆಗಳನ್ನು ಹೇಳುವುದು ನಾರದರ ಪರಿಪಾಠವಾಯಿತು. ಹೀಗೆ ಪ್ರಹ್ಲಾದನ ಜನನವಾಯಿತು.

ಗರ್ಭದ ಬೆಳವಣಿಗೆಯ ಕಾಲದಲ್ಲಿ ಹೆಣ್ಣುಮಕ್ಕಳು ಯಾವ ವಿಷಯವನ್ನು ಪದೇ ಪದೇ ಕೇಳುತ್ತಾರೋ ಆ ಸಂಸ್ಕಾರ ಗರ್ಭದ ಮೇಲೂ ಆಗುತ್ತದೆ.  ಹಾಗೆ, ಈ ಪ್ರಹ್ಲಾದ ಗರ್ಭದಲ್ಲೇ ನಾರದರಿಂದ ಉಪದೇಶ ಪಡೆದ.  ಹುಟ್ಟುವಾಗಲೇ ಭಗವದ್ ಭಕ್ತಿಯನ್ನು ಬೆಳೆಸಿಕೊಂಡು ಬಂದ.

ಎಲ್ಲಿದ್ದಾನೆ ಭಗವಂತ?

ಹಿರಣ್ಯಕಶಿಪುವಿಗೆ ನಾಕು ಮಂದಿ ಗಂಡುಮಕ್ಕಳು:  ಪ್ರಹ್ಲಾದ, ಸಂಹ್ಲಾದ, ಅನುಹ್ಲಾದ ಮತ್ತು ಹ್ಲಾದ.

ಶುಕ್ರಾಚಾರ್ಯರು ಆ ಸಮಯದಲ್ಲಿ ರಾಜಧಾನಿಯಲ್ಲಿರಲಿಲ್ಲ.  ಅವರ ಮಕ್ಕಳಾದ ಶಂಡ ಮತ್ತು ಮರ್ಕ ರಾಜಗುರುವಿನ ಕೆಲಸ ನಿರ್ವಹಿಸುತ್ತಿದ್ದರು.  ಹಿರಣ್ಯಕಶಿಪು ತನ್ನ ಮಕ್ಕಳನ್ನು ಅವರ ಬಳಿ ಪಾಠಕ್ಕೆ ಕಳಿಸಿದ.

ಒಂದು ದಿನ ಹಿರಣ್ಯಕಶಿಪು ಪ್ರಹ್ಲಾದನನ್ನು ಕರೆಸಿ ಕೇಳಿದ:  “ಏನು ಪಾಠ ಓದಿದಿ?”

ಪ್ರಹ್ಲಾದ ಉತ್ತರಿಸಿದ:

“ಭಗವಂತನ ಮಹಿಮೆಯನ್ನು ಕೇಳಬೇಕು.  ಕೇಳಿ ಹಾಡಬೇಕು.  ಮನಸ್ಸು ಭಗವಂತನ ಗುಣಗಳನ್ನು ನೆನೆಯುತ್ತಿರಬೇಕು.  ಭಗವಂತನ, ಭಾಗವತರ ಸೇವೆ ಮಾಡಬೇಕು.  ಅವನನ್ನು ಪೂಜಿಸಬೇಕು.  ಅವನಿಗೆರಗಬೇಕು.  ಅವನ ದಾಸನಾಗಿ ಬದುಕಬೇಕು.  ಆತ್ಮೀಯ ಗೆಳೆಯನಂತೆ ಭಗವಂತನಲ್ಲಿ ಸರಸವಾಡಬೇಕು.  ಇಡಿಯ ಬದುಕನ್ನೆ ಭಗವಂತನಿಗೊಪ್ಪಿಸಿ ನಮ್ಮೊಳಗೆ ಅವನನ್ನು ಕಾಣಬೇಕು.  ಹೀಗೆ ನವವಿಧ ಭಕ್ತಿಯನ್ನು ಮಾಡಬೇಕು.  ಯಾರು ಶ್ರೀಹರಿಯನ್ನು ಹೀಗೆ ಒಂಭತ್ತು ಬಗೆಯ ಭಕ್ತಿಯ ಉಪಾಸನೆಯಿಂದ ಒಲಿಸಿಕೊಂಡಿದ್ದಾನೆಯೋ ಆತನೇ ನಿಜವಾಗಿ ಓದಿದವನು; ಚೆನ್ನಾಗಿ ಕಲಿತವನು.  ಆತನ ಓದು ಸಾರ್ಥಕ ಎಂದು ನನ್ನ ನಂಬಿಕೆ.”

“ಅದರಿಂದ ಗೋವಿಂದನಲ್ಲಿ ಅನನ್ಯಭಕ್ತಿಯೇ ಜೀವನದ ಸಾರಸರ್ವಸ್ವ.  ಭಗವಂತನನ್ನು ಎಲ್ಲೆಡೆ ಕಾಣುವುದಕ್ಕಿಂತ ಮಿಗಿಲಾದ ಪುರುಷಾರ್ಥ ಬೇರೆ ಇಲ್ಲ.”

ಹಿರಣ್ಯಕಶಿಪು ಕೇಳಿ ಕಿಡಿಕಿಡಿಯಾದ.  ಗುರುಪುತ್ರರನ್ನು ಗದರಿದ.  “ನಮ್ಮ ಶತ್ರುವಿನ ಬಗ್ಗೆ ಪಾಠ ಕಲಿಸಿದರೇನು?”

ಅವರು ವಿನೀತರಾಗಿ ಹೇಳಿದರು:  “ರಾಜನ್, ಇದು ನಾವು ಹೇಳಿಕೊಟ್ಟ ಪಾಠವಲ್ಲ.  ಅವನಾಗಿಯೇ ಕಲಿತುಕೊಂಡದ್ದು.”

ಮತ್ತೆ ಗುರುಕುಲಕ್ಕೆ ಮರಳಿದ ಪ್ರಹ್ಲಾದ ತನ್ನ ವಿಷ್ಣುದೀಕ್ಷೆಯನ್ನು ಬಿಡಲಿಲ್ಲ.  ಈ ವಿಷ್ಣುಭಕ್ತಿಯ ಸಂದೇಶವನ್ನು ತನ್ನ ಸಹಪಾಠಿಗಳಿಗೂ ಭಿತ್ತರಿಸಿದ:  “ದೈತ್ಯಬಾಲಕರೆ, ವಿಷ್ಣುಭಕ್ತಿಯನ್ನು ಬೆಳೆಸಿಕೊಳ್ಳಿ.  ತಾಮಸವಾದ ಈ ದೈತ್ಯಸ್ವಭಾವ ಬಿಟ್ಟುಬಿಡಿ.  ಭಗವಂತನನ್ನು ನಂಬಿ.  ಅವನು ನಿಮ್ಮನ್ನು ರಕ್ಷಿಸುತ್ತಾನೆ.  ನಿರಂತರ ಅವನ ಭಜನೆ ನಡೆಯಲಿ.”

ಹಿರಣ್ಯಕಶಿಪು ಮತ್ತಷ್ಟು ಕೆರಳಿದ.  ಪ್ರಹ್ಲಾದನನ್ನು ಕರೆಸಿ ಗದರಿದ.  ಸಾಕಷ್ಟು ಹಿಂಸೆ ಕೊಟ್ಟ.  ಕೊಲ್ಲುವ ಯತ್ನವೂ ನಡೆಯಿತು.  ಯಾವುದೂ ಫಲಿಸಲಿಲ್ಲ.

ಕೊನೆಯಲ್ಲಿ ಹಿರಣ್ಯಕಶಿಪು ಪ್ರಹ್ಲಾದನನ್ನು ಕೇಳಿದ:  “ನನಗೆ ಎದುರು ನಿಲ್ಲುವ ಧೈರ್ಯ ನಿನಗೆ ಹೇಗೆ ಬಂತು?”

ಅದಕ್ಕೆ ಪ್ರಹ್ಲಾದನ ಉತ್ತರ ಸಿದ್ಧವಾಗಿತ್ತು:  “ನನಗೆ ಮಾತ್ರವಲ್ಲ.  ನಿನಗೂ, ಈ ಜಗತ್ತಿನ ಎಲ್ಲರಿಗೂ ಬಲ ನೀಡುವ ಪ್ರಭು ವಿಷ್ಣು.  ಅವನ ಅನುಗ್ರಹವೇ ನನ್ನ ಬಲ.”

ಹಿರಣ್ಯಕಶಿಪು ಕನಲಿ ಕೇಳಿದ:  “ಎಲ್ಲಿದ್ದಾನೆ ನಿನ್ನ ಆ ದೇವರು?”

“ಎಲ್ಲಿ ಅಂದರೆ ಅಲ್ಲಿ.  ಅವನು ಇರದ ಕಡೆಯಿಲ್ಲ.”

“ಎಲ್ಲ ಕಡೆ ಎಂದರೆ ಎಲ್ಲಿ?  ಎಲ್ಲ ಕಡೆ ಇರುವ ನಿನ್ನ ದೇವರು ಈ ಕಂಬದಲ್ಲಿ ಏಕಿಲ್ಲ?”  ಹೀಗೆ ಹೇಳುತ್ತ ಕತ್ತಿ ಜಳಪಿಸುತ್ತ ಬಂದು, ಕಂಬಕ್ಕೆ ಬಲವಾಗಿ ಗುದ್ದಿದ.

ಭೂಕಂಪವಾದಂತೆ ಸದ್ದು.  ಕಂಬ ಒಡೆದು ಬಿತ್ತು.  ವಿಚಿತ್ರವಾದ ನರಸಿಂಹರೂಪ ಕಾಣಿಸಿಕೊಂಡಿತು.

ಅವತಾರಗಳ ಬಗ್ಗೆ ಒಂದು ಮಾತು ತಿಳಿದಿರಬೇಕು.  ಹತ್ತು ಅವತಾರಗಳಲ್ಲಿ ಮೊದಲು ಐದು ಅವತಾರಗಳು ವಿಶೇಷತಃ ಸಂಬಂಧಪಟ್ಟವರಿಗಷ್ಟೆ ಕಂಡ ದಿವ್ಯ ದರ್ಶನಗಳು.  ಕೊನೆಯ ಐದು ಅವತಾರಗಳು ದೈಹಿಕವಾಗಿ ಈ ಭೂಮಿಯಲ್ಲಿ ಕಾಣಿಸಿಕೊಂಡ ರೂಪಗಳು.  

ಭಗವಂತ ನರಸಿಂಹರೂಪದಿಂದ ಕಾಣಿಸಿಕೊಂಡು ಹಿರಣ್ಯಕಶಿಪುವನ್ನು ಕೊಂದ.  ನೆಲದಲ್ಲಲ್ಲ; ಆಕಾಶದಲ್ಲಲ್ಲ; ಭಗವಂತನ ತೊಡೆಯಲ್ಲಿ.  ನರನಿಂದಲ್ಲ; ಮೃಗದಿಂದಲ್ಲ; ನರಸಿಂಹ ರೂಪದಿಂದ.  ಹಗಲೂ ಇಲ್ಲ; ರಾತ್ರಿಯೂ ಆಲ್ಲ; ಮುಸ್ಸಂಜೆಯ ಹೊತ್ತು.  ಯಾವ ಆಯುಧದಿಂದಲೂ ಅಲ್ಲ; ಕೇವಲ ಉಗುರಿನಿಂದ ಹಿರಣ್ಯಕಶಿಪುವಿನವಧೆ ಆಯಿತು.

ಆ ಉಗ್ರರೂಪವನ್ನು ಕಂಡ ದೇವತೆಗಳು ಹೆದರಿದರು.  ಪುಟ್ಟ ಹುಡುಗ ಪ್ರಹ್ಲಾದನನ್ನು ಮುಂದೆ ಮಾಡಿ ‘ದೇವರನ್ನು ಒಲಿಸಿಕೋ’ ಎಂದರು.

ಪ್ರಹ್ಲಾದ ಮುಂದೆ ಬಂದು ಪ್ರಾರ್ಥಿಸಿಕೊಂಡ: ‘ನನಗೇನೂ ಹೆದರಿಕೆಯಾಗಲಿಲ್ಲ.  ನನಗೆ ಹೆಮ್ಮೆಯೆನಿಸುತ್ತದೆ.  ನನ್ನಂಥ ಅಲ್ಪಜ್ಞ ಪುಟ್ಟ ಹುಡುಗನೆಲ್ಲಿ?  ನೀನೆಲ್ಲಿ?  ನನ್ನನ್ನು ಪರೀಕ್ಷೆಗೆ ಒಡ್ಡಿದಾಗ ನೀನು ಬಂದು ಕಾಣಿಸಿಕೊಂಡೆಯಲ್ಲ?  ಈ ಬಾಲಕನಿಗೊಲಿದು ಬಂದೆಯಲ್ಲ?  ಇದೇನು ಸಣ್ಣ ಸಂಗತಿಯೆ?  ನನ್ನ ಭಾಗ್ಯ ದೊಡ್ಡದು.”

ವಿಪ್ರಾದ್ ದ್ವಿಷಡ್ ಗುಣಯುತಾದರವಿಂದನಾಭ-
ಪಾದಾರವಿಂದವಿಮುಖಾಚ್ಛ್ವಪಚಂ ವರಿಷ್ಠಮ್ |
ಮನ್ಯೇ ತದರ್ಪಿತಮನೋವಚನಾತ್ಮಗೇಹ-
ಪ್ರಾಣಃ ಪುನಾತಿ ಸಕಲಂ ನತು ಭೂರಿಮಾನಃ||

ಪ್ರಹ್ಲಾದ ನುಡಿದ ಮುಂದಿನ ಮಾತು ತುಂಬ ಮಹತ್ವದ್ದು.  ಇವತ್ತಿನ ಪ್ರಸಂಗದಲ್ಲಿ ತುಂಬ ಅರ್ಥಪೂರ್ಣವಾದದ್ದು:  “ಒಬ್ಬ ಬ್ರಾಹ್ಮಣನಿರಬಹುದು.  ದೊಡ್ಡ ವಿದ್ವಾಂಸನಿರಬಹುದು.  ತುಂಬ ಆಚಾರವಂತನಿರಬಹುದು.  ಆದರೆ ದೇವರಲ್ಲಿ ಭಕ್ತಿ ಇಲ್ಲ.  ಆತ ದೇವರ ಬಗ್ಗೆ ಮಾತನಾಡುವುದು ಉಳಿದವರನ್ನು ಮೋಸಗೊಳಿಸಲಿಕ್ಕೆ ಅಥವಾ ತನ್ನ ಶುಷ್ಕ ಪಾಂಡಿತ್ಯ ಪ್ರದರ್ಶನಕ್ಕೆ!

“ಇನ್ನೊಬ್ಬ ಹೊಲೆಯನಿರಬಹುದು.  ಯಾವ ವಿದ್ಯೆಯೂ ಇಲ್ಲ.  ನಾಯಿಯ ಮಾಂಸ ತಿನ್ನುವ ಹೀನ ಬಾಳು.  ಸಮಾಜದಿಂದ ಬಹಿಷ್ಕೃತವಾದ ಬದುಕು.  ಆದರೆ ಆತ ಭಗವಂತನ ಭಕ್ತನಾಗಿದ್ದರೆ ಬರಿಯ ಶಾಸ್ತ್ರ ಪಂಡಿತನಾದ ಬ್ರಾಹ್ಮಣನಿಗಿಂತ ಆತನೇ ಮೇಲು.  

“ಆತ ತನ್ನ ಬದುಕನ್ನೆ ಭಗವಂತನಿಗೆ ಅರ್ಪಿಸಿದ್ದಾನೆ.  ಮನಸ್ಸು ಭಗವಂತನನ್ನೆ ನೆನೆಯುತ್ತಿದೆ.  ಪವಿತ್ರನಾದ ಭಗವಂತನನ್ನು ಹೃದಯದಲ್ಲಿ ಹೊತ್ತವ ಚಂಡಾಲನಾದರೂ ಆತ ಪವಿತ್ರ.  ನಾನು ಬ್ರಾಹ್ಮಣ, ದೊಡ್ಡ ವಿದ್ವಾಂಸ ಎಂಬ ಹಮ್ಮು ಯಾರಿಗಿದೆ ಆ ಅಹಂಕಾರವೆ ಮೈಲಿಗೆ, ಹೊಲೆತನ.”

ಏನೂ ಅರಿಯದ ಹಸುಳೆ ತಾನು; ತನ್ನ ಕರೆಗೂ ಭಗವಂತ ಒಲಿದು ಬಂದ ಎಂದಾಗ ಪ್ರಹ್ಲಾದನ ಬಾಯಿಂದ ಬಂದ ಮಾತು ಇದು.  ಮೇಲು ಕೀಳು ವ್ಯವಸ್ಥೆಗೆ ಸಮಾಜದ ಮಾನದಂಡ ಬೇರೆ.  ಭಗವಂತನ ಮಾನದಂಡ ಬೇರೆ.  ನಾವು ಹೊರಗಿನ ಥಳಕಿಗೆ, ಬೆಳಕಿಗೆ, ಪ್ರದರ್ಶನಕ್ಕೆ ಬೆಲೆ ಕೊಟ್ಟರೆ ಭಗವಂತ ಒಳಗಿನ ಮೌಲ್ಯಗಳಿಗೆ ಮಾತ್ರವೆ ಬೆಲೆ ಕೊಡುತ್ತಾನೆ.

ಪ್ರಹ್ಲಾದನ ಮುಗ್ಧಭಕ್ತಿಗೆ ನರಸಿಂಹ ಪ್ರಸನ್ನನಾದ:  “ಬೇಕಾದ ವರ ಕೇಳು” ಎಂದ.  ಆಗ ಪ್ರಹ್ಲಾದ ಹೇಳಿದ:

“ನಾನು ನಿನ್ನ ಬಳಿ ವರ ಕೇಳಬೇಕೆ?  ನಾನು ನಿನ್ನನ್ನು ನಂಬಿದ್ದು ವ್ಯಾಪಾರಕ್ಕಾಗಿಯೆ?  ಭಕ್ತಿ ಮಾಡಿದ್ದು ಪ್ರತಿಫಲಾಪೇಕ್ಷೆಯಿಂದಲೇ? ನನ್ನದು ಭಕ್ತಿಗಾಗಿ ಭಕ್ತಿ.  ಅದಕ್ಕೆ ಪ್ರತಿಯಾಗಿ ನಾನೇನೂ ಕೇಳುವುದಿಲ್ಲ.  ನನಗೇನೂ ಬೇಕಿಲ್ಲ.  ಆದರೂ ಕೇಳಲೇಬೇಕೆನುತ್ತೀಯಾ?  ಹಾಗಾದರೆ ಒಂದು ವರ ಕೇಳುತ್ತೇನೆ:

“ಯಾವ ಬಯಕೆಯೂ ಎಂದೂ ನನ್ನನ್ನು ಕಾಡದಿರಲಿ.  ನಿನ್ನಲ್ಲಿ ಯಾವತ್ತೂ ಯಾವ ವರವನ್ನೂ ಕೇಳದಿರುವ ಬುದ್ಧಿ ನನಗೆ ಬರುವಂತೆ ವರ ಕೊಡು.  ಇನ್ನೊಂದು ವರ:

“ನನ್ನ ತಂದೆ ನಿನ್ನ ಮಹಿಮೆಯನ್ನರಿಯದೆ ನಿನ್ನನ್ನು ನಿಂದಿಸಿದ.  ತಮಸ್ಸಿನ ದಾರಿ ತುಳಿಯುವ ಮಹಾಪರಾಧ ಮಾಡಿದ.  ಏನಿದ್ದರೂ ನನ್ನ ತಂದೆ.  ಅದಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ.  ಅವನು ಮಾಡಿರತಕ್ಕ ಪಾತಕಗಳನ್ನು ಕ್ಷಮಿಸಿ, ನಿನ್ನ ಭಕ್ತನಾದ ಮಗನನ್ನು ಹೆತ್ತ ಆ ತಂದೆಯನ್ನು ದುರಂತದಿಂದ, ದುರ್ಗತಿಯಿಂದ ಪಾರುಮಾಡು.”

ಇಲ್ಲಿ ಈ ಕಥೆಯ ಹಿನ್ನೆಲೆಯನ್ನು ಗಮನಿಸಬೇಕು.  ಜಯ-ವಿಜಯರು ಶಾಪಗ್ರಸ್ತರಾಗಿ ಮೂರು ಬಾರಿ ಅಸುರಜನ್ಮವನ್ನು ಪಡೆದು ಬಂದರು.  ಮೊದಲ ಜನ್ಮದಲ್ಲಿ ಹಿರಣ್ಯಾಕ್ಷ-ಹಿರಣ್ಯಕಶಿಪುಗಳಾದಾಗ ಅವರ ಉದ್ಧಾರಕ್ಕಾಗಿ ಭಗವಂತ ವರಾಹನಾದ; ನರಸಿಂಹನಾದ.

ಮುಂದಿನ ಜನ್ಮದಲ್ಲಿ ಇವರೆ ರಾವಣ-ಕುಂಭಕರ್ಣರಾದರು.  ಆಗ ಭಗವಂತ ರಾಮಾವತಾರ ತಾಳಿದ.  ಅನಂತರ ಮೂರನೆಯ ಜನ್ಮದಲ್ಲಿ ಶಿಶುಪಾಲ – ದಂತವಕ್ತ್ರರಾದಾಗ ಭಗವಂತ ಕೃಷ್ಣನಾದ. 

ಇವರನ್ನು ಉದ್ಧಾರ ಮಾಡುವುದು ಭಗವದವತಾರದ ಉದ್ದೇಶ.  ಸಂಹಾರದ ಮುಖದಿಂದ ಉದ್ಧಾರ.  ಇವರು ಜನ್ಮತಃ ಅಸುರರಾದರೂ ಸ್ವಭಾವತಃ ದೇವತೆಗಳೇ ತಾನೆ?  ಅದರಿಂದ ಪ್ರಹ್ಲಾದನ ಪ್ರಾರ್ಥನೆಗೆ ಭಗವಂತ ಅಸ್ತು ಎಂದ.  ಹಿರಣ್ಯಕಶಿಪುವಿನ ಒಳಗಿದ್ದ ಸಾತ್ವಿಕ ಜೀವದ ಉದ್ಧಾರವಾಯಿತು. 

Narasimha Jayanthi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ