ಎಚ್. ಕೆ. ರಾಮರಾವ್
ಎಚ್. ಕೆ. ರಾಮರಾವ್
ಹೊಸಅಗ್ರಹಾರ ಕೃಷ್ಣಮೂರ್ತಿ ರಾಮರಾವ್ ಅದ್ಭುತ ನಾಣ್ಯ ಸಂಗ್ರಾಹಕರು. ಸಾಮಾನ್ಯವಾಗಿ ನಾಣ್ಯ ಸಂಗ್ರಹಣೆ ಅಂದರೆ ಬೇರೆ ಬೇರೆ ದೇಶಕ್ಕೆ ಹೋಗಿ ಬಂದವರಿಂದ ಕೆಲ ನಾಣ್ಯಗಳನ್ನು ಇಟ್ಟುಕೊಂಡು ನನಗೂ ಹವ್ಯಾಸ ಇದೆ ಎನ್ನುವ ಚಪಲ ನನ್ನಂತಹವರಿಗಿದೆ. ಆದರೆ ರಾಮರಾವ್ ಅವರ ನಾಣ್ಯ ಸಂಗ್ರಹಣೆಯ ಹಿಂದೆ ಚರಿತ್ರಾರ್ಹ ಹಿನ್ನೋಟವಿದ್ದು, ಆ ಕುರಿತು ಮುಂದಿನ ಜನಾಂಗಕ್ಕೆ ವಿಷಯ ತಿಳಿಸಿಕೊಡುವ ಔದಾರ್ಯದ ಅಂತರಾಳವಿದೆ.
ಹೆಚ್. ಕೆ. ರಾಮರಾವ್ ಅವರು 1938ರ ಮೇ. 24ರಂದು ಮೈಸೂರಿನಲ್ಲಿ ಜನಿಸಿದರು. ರಾಮರಾವ್ ಅವರು ಮೈಸೂರಿನ ಬನುಮಯ್ಯ ಶಾಲೆ ಮತ್ತು ಸೈಂಟ್ ಫಿಲೋಮಿನಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಮೆಕ್ಯಾನಿಕಲ್ ಇಂಜಿನಿಯರ್ ವೃತ್ತಿ ನಿರ್ವಹಿಸಿ ನಿವೃತ್ತರಾಗಿದ್ದಾರೆ.
ರಾಮರಾವ್ ಅವರು ತಾವು ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ, ಕಾರ್ಯನಿಮಿತ್ತ ದೇಶದ ನಾನಾ ರಾಜ್ಯಗಳಿಗೆ ತೆರಳಿದ್ದ ವೇಳೆ ಅಲ್ಲಿ ಕೆಲಸ ಮುಗಿಸಿದ ನಂತರ ಸಮಯ ವ್ಯರ್ಥ ಮಾಡದೇ ಆ ರಾಜ್ಯದ ಇತಿಹಾಸ ತಿಳಿಯುವುದು ಅಲ್ಲಿನ ಪುರಾತನ ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಹಿಸುವುದನ್ನು ಮೈಗೂಡಿಸಿಕೊಂಡಿದ್ದರು. ಕರ್ನಾಟಕದ ವಿವಿಧ ಸ್ಥಳಗಳಲ್ಲದೆ, ಮಧ್ಯಪ್ರದೇಶ ರಾಜಸ್ಥಾನ ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ, ನಾಗಾಲ್ಯಾಂಡ್, ಮಧ್ಯಪ್ರದೇಶಗಳಿಂದ ಪುರಾತನ ನಾಣ್ಯಗಳ ಸಂಗ್ರಹಿಸಿರುವ ರಾಮರಾಯರು ಕೆಲಸದಿಂದ ನಿವೃತ್ತ ಹೊಂದಿ 27 ವರ್ಷಗಳು ಕಳೆದಿವೆ.
ರಾಮರಾಯರು ನಿವೃತ್ತಿಯ ನಂತರದಲ್ಲಿ ತಾವು ಹೀಗೆ ಕಳೆದ ಆರು ದಶಕಗಳಲ್ಲಿ ಸಂಗ್ರಹಿಸಿದ ಪುರಾತನ ನಾಣ್ಯಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ 'ಭಾರತ ದರ್ಶನ' ಎಂಬ ಶೀರ್ಷಿಕೆ ಇಟ್ಟುಕೊಂಡು ರಾಜ್ಯ ಸಂಚಾರ ಮಾಡತೊಡಗಿದರು. 87ರ ವಯಸ್ಸಿನಲ್ಲೂ ಭಾರತ ದರ್ಶನ ಮಾಡುತ್ತಿರುವ ಇವರು ನೂರಾರು ತಾಲೂಕು ಕೇಂದ್ರಗಳಲ್ಲಿ ಸಂಚಾರ ಮಾಡಿ ಭಾರತ ಇತಿಹಾಸವನ್ನು ಯುವಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ. ರಾಮರಾವ್ ಅವರು ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಪ್ರದರ್ಶನ ಮಾಡಿ ಅಲ್ಲಿನ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಇದಲ್ಲದೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಮಳಿಗೆ ತೆರೆದು ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ದೇಶದ ಪುರಾತನ ನಾಣ್ಯಗಳ ಮಾಹಿತಿ ನೀಡಿದ್ದಾರೆ.
ರಾಮರಾವ್ ಅವರು ಕಳೆದ ಆರು ದಶಗಳಿಂದ ನಾಣ್ಯ ಸಂಗ್ರಹಕ್ಕೆ ಲಕ್ಷಾಂತರ ರೂ. ವೆಚ್ಚ ಮಾಡಿರುವುದಲ್ಲದೇ ಸಂಗ್ರಹವಾಗಿರುವ ಪುರಾತನ ಪ್ರತಿ ನಾಣ್ಯದ ಮಾಹಿತಿಯನ್ನು ಉತ್ತಮವಾಗಿ ದಾಖಲಿಸಿದ್ದಾರೆ. ಹೀಗಾಗಿ ಯಾವ ಅರಸರ ಕಾಲದಲ್ಲಿ ಯಾವ ನಾಣ್ಯ ಚಲಾವಣೆಯಲ್ಲಿ ಇತ್ತು ಇದನ್ನು ಹೇಗೆ ತಯಾರು ಮಾಡಿದ್ದಾರೆ ಎಂಬ ಮಾಹಿತಿ ಆಸಕ್ತರಿಗೆ ಲಭಿಸುತ್ತಿದೆ.
ರಾಮರಾವ್ ಅವರ ಸಂಗ್ರಹಣೆಯಲ್ಲಿ ಅಲ್ಯುಮಿನಿಯಮ್, ಸೀಸ, ಮಿಶ್ರಲೋಹ, ಚಿನ್ನ, ತಾಮ್ರ, ಬೆಳ್ಳಿ, ಪಂಚಲೋಹದಿಂದ ತಯಾರಾಗಿರುವ ಅಪರೂಪದ ನಾಣ್ಯಗಳನ್ನು ನೋಡಬಹುದು. ಕ್ರಿ.ಪೂ. ಕಾಲದ ನಾಣ್ಯಗಳು, ಕ್ರಿ.ಶ. 200ರ ಕಾಲದವು, ಚಂದ್ರಗುಪ್ತ ಮೌರ್ಯ, 12ನೇ ಶತಮಾನದ ಹೊಯ್ಸಳ, 13ನೇ ಶತಮಾನದ ವಿಕ್ರಮಾದಿತ್ಯ, ದೇವಗಿರಿ, ದೆಹಲಿ ಸುಲ್ತಾನ, 14ರಿಂದ 16ನೇ ಶತಮಾನದ ಬಹಮನಿ ಸುಲ್ತಾನ, ಕ್ರಿ.ಶ. 1798 ರಿಂದ 1810ರ ಟಿಪ್ಪು ಸುಲ್ತಾನ, ಮೊಗಲ್ ಸಾಮ್ರಾಜ್ಯ, ಹಂಪಿ ವಿಜಯನಗರ ಸಾಮ್ರಾಜ್ಯ, ಬಾದಾಮಿ ಚಾಲಕ್ಯರು, ಕುಶಾನರು, ಬ್ರಿಟಿಷರ ಕಾಲದ ನಾಣ್ಯ ಸೇರಿದಂತೆ ಆಧುನಿಕ ಭಾರತದಲ್ಲಿ ಚಲಾವಣೆಯಲ್ಲಿ ಇರುವ ನಾಣ್ಯಗಳು ಹಾಗೂ ನೋಟುಗಳು ರಾಮರಾಯರ ಸಂಗ್ರಹದಲ್ಲಿವೆ.
ಮುಸ್ಲಿಂಮರು ಗ್ರಾಮೀಣ ಪ್ರದೇಶಗಳಲ್ಲಿ ಹಳೆ ವಸ್ತುಗಳನ್ನು ಖರೀದಿಸುವಾಗ ಚಲಾವಣೆಯಲ್ಲಿ ಇಲ್ಲದ ನಾಣ್ಯಗಳನ್ನು ಕೇಜಿ ಲೆಕ್ಕದಲ್ಲಿ ತಂದು ಪ್ರವಾಸಿ ತಾಣಗಳಲ್ಲಿ ಒಂದೊಂದು ನಾಣ್ಯಕ್ಕೆ ಬೆಲೆ ನಿಗದಿ ಮಾಡಿ ಮಾರಾಟ ಮಾಡುತ್ತಾರೆ. ಅಲ್ಲಿಂದ ಖರೀದಿಸಿದ ನಾಣ್ಯಗಳನ್ನು ತಾವು ಸಂಗ್ರಹಿಸಿರುವುದಾಗಿ ರಾಮರಾವ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಾಮರಾವ್ ಅವರು ಲಕ್ಷಾಂತರ ವೆಚ್ಚ ಮಾಡಿ ಸಂಗ್ರಹಿಸಿರುವ ಐತಿಹಾಸಿಕ ನಾಣ್ಯಗಳನ್ನು ಪ್ರದರ್ಶನ ಮಾಡಲು ಯಾವುದೇ ಸಂಭಾವನೆ ಪಡೆಯುವುದಿಲ್ಲ, ಉಚಿತವಾಗಿ ಪ್ರದರ್ಶನ ಮಾಡಿ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ಮಾಹಿತಿ ನೀಡುತ್ತಾ ಬಂದಿದ್ದಾರೆ. ಪ್ರತಿ ಶಾಲೆ ಕಾಲೇಜಿನಲ್ಲಿ ಪ್ರದರ್ಶನ ಪಡೆಯುವ ಬದಲಾಗಿ ತಾಲೂಕಿನಲ್ಲಿ ಎಲ್ಲಾ ಶಾಲೆ ಕಾಲೇಜಿನವರು ಒಟ್ಟಿಗೆ ಸೇರಿ ಸ್ಥಳವಕಾಶ ಮಾಡಿಕೊಟ್ಟರೆ ಅನುಕೂಲವಾಗುತ್ತದೆ ಎಂಬುದು ರಾಮರಾವ್ ಅವರ ಅನಿಸಿಕೆ.
ರಾಮರಾವ್ ಅವರ ನಾಣ್ಯಗಳ ಕುರಿತಾದ ಮಾಹಿತಿಗಳು ಪತ್ರಿಕಾ ಲೇಖನಗಳು, ಫೇಸ್ಬುಕ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಮೂಡಿಬರುತ್ತಿವೆ.
ಮಹಾನ್ ಸಂಗ್ರಾಹಕರೂ, ಇತಿಹಾಸ ಆಸಕ್ತರೂ, ಮುಕ್ತವಾಗಿ ಜ್ಞಾನ ಹಂಚುತ್ತಿರುವವರೂ ಆದ ಹೊಸ ಅಗ್ರಹಾರ ಕೃಷ್ಣಮೂರ್ತಿ ರಾಮರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of great coin collector and exhibitor Hosaagrahara Krishnamurthyk Ramarao
ಕಾಮೆಂಟ್‌ಗಳು