ಬಿ. ಪುಟ್ಟಸ್ವಾಮಯ್ಯ
ಬಿ. ಪುಟ್ಟಸ್ವಾಮಯ್ಯ
ಬಿ. ಪುಟ್ಟಸ್ವಾಮಯ್ಯನವರು ಕನ್ನಡ ನಾಡಿನಲ್ಲಿ ಪತ್ರಿಕೋದ್ಯಮಿಯಾಗಿ, ಶ್ರೇಷ್ಠ ಕಾದಂಬರಿಕಾರರಾಗಿ, ಪ್ರಖ್ಯಾತ ನಾಟಕಕಾರರಾಗಿ ವಿಖ್ಯಾತ ಚಲನಚಿತ್ರ ಕಲಾವಿದರಾಗಿ ಹಲವಾರು ರೀತಿಯಿಂದ ಚಿರಸ್ಮರಣೀಯರು.
ಬಿ. ಪುಟ್ಟಸ್ವಾಮಯ್ಯನವರು 1897ನೆಯ ಮೇ 24ರಂದು ಜನ್ಮ ತಾಳಿದರು.
ಪುಟ್ಟಸ್ವಾಮಯ್ಯನವರು 9ನೆ ತರಗತಿಯಲ್ಲಿ ಓದುತ್ತಿದ್ದಾಗಲೇ ಅವರ ತಂದೆ ಬಸಪ್ಪನವರು ಕಾಲಾಧೀನರಾದರು. ತಾಯಿ ಮಲ್ಲಮ್ಮನವರಿಗೆ ದಿಕ್ಕು ತೋರದಾಯಿತು. ಬಾಲಕ ಪುಟ್ಟಸ್ವಾಮಯ್ಯನಿಗೆ ಓದುವುದನ್ನು ಬಿಟ್ಟು ದುಡಿಯುವ ಪರಿಸ್ಥಿತಿ ಏರ್ಪಟ್ಟಿತು. ಹಲವು ಖಾಸಗಿ ಸಂಸ್ಥೆಗಳಲ್ಲಿ ದುಡಿದ ನಂತರ ಮೈಸೂರಿನಿಂದ ಪ್ರಕಟವಾಗುತ್ತಿದ್ದ 'ಮೈಸೂರು ಸ್ಟಾರ್’ ವಾರಪತ್ರಿಕೆಯ ವರದಿಗಾರರಾಗಿ ಬೆಂಗಳೂರಿನಲ್ಲಿ ಕೆಲಸಕ್ಕೆ ತೊಡಗಿದರು. 1925ರಲ್ಲಿ ನಾರಾಯಣ ಶೆಟ್ಟಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ನ್ಯೂ ಮೈಸೂರು’ ಎನ್ನುವ ವಾರಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಐದಾರು ವರ್ಷ ಅಲ್ಲಿ ಜನಪ್ರಿಯ ಸೇವೆ ಸಲ್ಲಿಸಿದ ನಂತರದಲ್ಲಿ ಆಗ ತಾನೇ ಜನ್ಮ ತಾಳಿದ್ದ ‘ಒಕ್ಕಲಿಗ ಪತ್ರಿಕೆ’ಯ ಸಂಪಾದಕರಾಗಿ ನೇಮಕಗೊಂಡರು. ಆಮೇಲೆ ‘ಜನವಾಣಿ’ ಸಂಪಾದಕತ್ವವನ್ನು ವಹಿಸಿ ‘ಜನವಾಣಿ’ ಜನರಲ್ಲಿ ಅನ್ವರ್ಥಕವಾಗುವಂತೆ ಮಾಡಿದರು. ಮುಂದೆ 'ಮಾತೃಭೂಮಿ’ ಪತ್ರಿಕೆಯಲ್ಲಿ ಕೂಡಾ ದುಡಿದರು. ಕೆಲವು ಕಾಲ ತಮ್ಮದೇ ‘ಪ್ರತಿಭಾ’ ಎಂಬ ಪತ್ರಿಕೆ ಕೂಡಾ ನಡೆಸಿದ್ದರು.
ಹೀಗೆ ಹಲವು ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಪುಟ್ಟಸ್ವಾಮಯ್ಯನವರು ‘ಪ್ರಜಾವಾಣಿ’ಯ ಪ್ರಥಮ ಸಂಪಾದಕರಾದರು. ‘ಪ್ರಜಾವಾಣಿ’ ಪತ್ರಿಕೆ ಜನಪ್ರಿಯತೆಯನ್ನು ಪಡೆಯಲು ಪುಟ್ಟಸ್ವಾಮಯ್ಯನವರ ದೂರದೃಷ್ಟಿಯೇ ಕಾರಣ. ಅವರು ಪ್ರಾರಂಭಿಸಿದ ಶೀರ್ಷಿಕೆಗಳು, ವಿಭಾಗಗಳು, ಸಂಪಾದಕೀಯ ಲೇಖನಗಳು ಪತ್ರಿಕೆಯ ಅಭ್ಯುದಯಕ್ಕೆ ಕಾರಣವಾದವು. ಆಮೇಲೆ ‘ಜನ್ಮಭೂಮಿ’ ಪತ್ರಿಕೆಯ ಸಂಪಾದಕರಾದರು. ಜನ್ಮಭೂಮಿ ನಿಂತ ಮೇಲೆ ಪತ್ರಿಕೋದ್ಯಮಕ್ಕೆ ಶರಣು ಹೊಡೆದು ನಾಟಕ, ಕಾದಂಬರಿಗಳತ್ತ ಹೊರಳಿದರು. ಪುಟ್ಟಸ್ವಾಮಯ್ಯನವರು ಬೆಳೆಸಿದ ‘ಕಿಡಿ’ಯ ಶೇಷಪ್ಪ, ‘ಛೂಬಾಣ’ದ ಟಿಎಸ್ಸಾರ್, ‘ವರದಿ’ಯ ಜಯಶೀಲರಾವ್ ಮತ್ತು ನೂರಾರು ಯುವಜನಾಂಗದ ಶಕ್ತಿಗಳ ಪಡೆಯನ್ನೇ ನಾಡು ಕಂಡಿತು.
ಓದು ಮತ್ತು ಓಡಾಟ ಪುಟ್ಟಸ್ವಾಮಯ್ಯನವರಿಗೆ ಬಲು ಪ್ರಿಯ. ‘ರೀಡಿಂಗ್ ಮತ್ತು ವಾಕಿಂಗ್’’ ಇವೆರಡನ್ನೂ ಎಂದೂ ಯಾವ ಕಾರಣಕ್ಕೂ ಅವರು ತಪ್ಪಿಸುತ್ತಿರಲಿಲ್ಲ. ಅವರ ‘ಸತತ ಅಭ್ಯಾಸ’ದ ಪ್ರಯತ್ನವೇ ಅವರ ಮೇರುಕೃತಿಗಳ ರಚನೆಗೆ ಹಿನ್ನೆಲೆಯಾಯಿತು. ಪುಟ್ಟಸ್ವಾಮಯ್ಯನವರಿಗೆ ಡಾ. ಎಂ. ಶಿವರಾಂ (ರಾ.ಶಿ) ಅಚ್ಚುಮೆಚ್ಚಿನ ಗೆಳೆಯರು. ಅಸ್ತವ್ಯಸ್ತದ ಅವರ ಜೀವನದಲ್ಲಿ ಅವರು ಅಷ್ಟು ದೀರ್ಘಕಾಲ ಬಾಳಲು ಡಾಕ್ಟರ್ ರಾ.ಶಿ ಅವರೇ ಕಾರಣ. ಕೈಲಾಸಂ ಮತ್ತು ಕೆ.ವಿ ಅಯ್ಯರ್ ಅವರುಗಳೂ ಕೂಡ ಅವರನ್ನು ಆಗಾಗ ಸಂಧಿಸುತ್ತಿದ್ದ ಗೆಳೆಯರು.
ಬಿ. ಪುಟ್ಟಸ್ವಾಮಯ್ಯನವರಿಗೆ ವಿಫುಲವಾದ ಕೀರ್ತಿಯನ್ನು ತಂದುಕೊಟ್ಟ ಕ್ಷೇತ್ರವೆಂದರೆ ನಾಟಕ ವಿಭಾಗ. ಕನ್ನಡ ನಾಟಕದ ಇತಿಹಾಸದಲ್ಲಿ ಪುಟ್ಟಸ್ವಾಮಯ್ಯನವರು ಕ್ರಾಂತಿ ಪುರುಷರು. ರಾಮಾಯಣ, ಮಹಾಭಾರತಗಳ ವಸ್ತುಗಳನ್ನು ಆರಿಸಿಕೊಂಡು ವಿನೂತನವಾದ ನಾಟಕಗಳನ್ನು ರಚಿಸಿಕೊಟ್ಟರು. ಅವರ ನಾಟಕಗಳ ಸಹಸ್ರಾರು ಪ್ರದರ್ಶನಗಳು ಒಂದೇ ಸಮನೆ ಜಯಭೇರಿ ಹೊಡೆದು ಜನರಲ್ಲಿ ಕ್ರಾಂತಿಯನ್ನೆಬ್ಬಿಸಿದುವು. ಪುಟ್ಟಸ್ವಾಮಯ್ಯನವರ ‘ಕುರುಕ್ಷೇತ್ರ’, ‘ದಶಾವತಾರ’ ಮತ್ತು ‘ಸಂಪೂರ್ಣ ರಾಮಾಯಣ’ ನಾಟಕಗಳು ಕನ್ನಡನಾಡಿನಲ್ಲಿ ಮನೆಮಾತು. ಈ ನಾಟಕಗಳು ಹಲವಾರು ಬಾರಿ ಅಚ್ಚಾಗಿರುವುದೇ ಅಲ್ಲದೆ ನಿರಂತರವಾಗಿ ರಂಗದ ಮೇಲೆ ಪ್ರದರ್ಶಿತವಾಗಿರುವುದು ಆ ನಾಟಕಗಳ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಅವರು ‘ಕುರುಕ್ಷೇತ್ರ’, ‘ದಶಾವತಾರ’, ‘ಸಂಪೂರ್ಣ ರಾಮಾಯಣ’, ‘ಅಕ್ಕಮಹಾದೇವಿ’, ‘ಷಾಜಹಾನ್’, ‘ಗೌತಮಬುದ್ಧ’, ‘ಚಿರಕುಮಾರಸಭಾ’, ‘ಯಜ್ಞಸೇನಿ’, ‘ಸತೀತುಳಸಿ’, ‘ಪ್ರಚಂಡ ಚಾಣಕ್ಯ’, ‘ಜಯದೇವ’, ‘ಅಭಿನೇತ್ರಿ’, ‘ಚಂಗಲೆಯ ಬಲಿದಾನ’, ‘ಶ್ರೀದುರ್ಗ’, ‘ಬಭ್ರುವಾಹನ’, ‘ಬಿಡುಗಡೆಯ ಬಿಚ್ಚುಗತ್ತಿ’, ‘ರಾಣಿ’, ‘ತಾರಕವಧೆ’ ಮತ್ತು ‘ಇವನಲ್ಲ’ ಹೀಗೆ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳೂ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ.
“ಪದ್ಯಂ ವದ್ಯಂ ಗದ್ಯಂ ಹೃದ್ಯಂ” ಎಂಬ ಕವಿ ವಾಣಿಗೆ ಅನುಸಾರವಾಗಿ ನಾಟಕಗಳನ್ನು ಹೆಚ್ಚಾಗಿ ಗದ್ಯರೂಪದಲ್ಲಿ ಅಲ್ಲಲ್ಲಿ ಸಂಗೀತ ಸೇರಿಸಿ ಮುತ್ತು ಹವಳದಂತೆ ಒಗ್ಗೂಡಿ ಬರುವಂತೆ ಬರೆದವರಲ್ಲಿ ಬಿ. ಪುಟ್ಟಸ್ವಾಮಯ್ಯನವರು ಅಗ್ರಗಣ್ಯರು. ಈ ದೃಷ್ಟಿಯಿಂದ ಅವರು ನಾಟಕರಂಗಕ್ಕೆ ಸಲ್ಲಿಸಿದ ಸೇವೆ ಅದ್ವಿತೀಯವಾದುದು. ಅವರ ‘ಕುರುಕ್ಷೇತ್ರ’ ನಾಟಕ ಪ್ರದರ್ಶನದ ದಾಖಲೆಯನ್ನು ಸ್ಥಾಪಿಸಿತು. ಒಬ್ಬನೇ ನಾಟಕಕಾರನ ಹಲವು ನಾಟಕಗಳು ಈ ರೀತಿಯಲ್ಲಿ ಪ್ರಚಂಡ ಯಶಸ್ಸು ಗಳಿಸಿರುವುದು ಇಡೀ ನಾಡಿನಲ್ಲಿಯೇ ಅಪರೂಪ.
ಬಿ. ಪುಟ್ಟಸ್ವಾಮಯ್ಯನವರು ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಗಳಿಸಿ ನಾಟಕರಂಗದಲ್ಲಿ ಕೈಯಾಡಿಸಿ ಕಾದಂಬರಿ ಕ್ಷೇತ್ರಕ್ಕೆ ಧುಮುಕಿದರು. 1953ರಲ್ಲಿ ಅವರ ಪ್ರಥಮ ಕಾದಂಬರಿ ‘ರೂಪಲೇಖಾ’ ಪ್ರಕಟವಾಯಿತು. ‘ಅಭಿಸಾರಿಕೆ’, ‘ಸುಧಾಮಯೀ’, ‘ಮಲ್ಲಮ್ಮನ ಪವಾಡ’, ‘ರತ್ನಹಾರ’, ‘ಚಾಲುಕ್ಯ ತೈಲಪ’, ‘ತೇಜಸ್ವಿನಿ’, ‘ನಾಟ್ಯ ಮೋಹಿನಿ’, ‘ಪ್ರಭುದೇವ’, ‘ಉದಯರವಿ’, ‘ರಾಜ್ಯಪಾಲ’, ‘ಕಲ್ಯಾಣೇಶ್ವರ’, ‘ನಾಗಬಂಧ’, ‘ಮುಗಿಯದ ಕನಸು’, ‘ಕ್ರಾಂತಿ ಕಲ್ಯಾಣ’, ‘ಹೂವು ಕಾವು’ ಕಾದಂಬರಿಗಳನ್ನು ರಚಿಸಿದರು.
1965ರಲ್ಲಿ ಅವರ ‘ಕ್ರಾಂತಿ ಕಲ್ಯಾಣ’ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಅದೇ ವರ್ಷ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ದೊರಕಿತು. ಅರಮನೆ, ಗುರುಮನೆ ಮತ್ತು ಜನಮನೆಗಳಿಂದ ನೂರಾರು ಪದವಿ ಪ್ರಶಸ್ತಿಗಳನ್ನುಪಡೆದರು.
ಪುಟ್ಟಸ್ವಾಮಯ್ಯನವರು ಸಂಸ್ಕೃತ ಅಧ್ಯಯನವನ್ನೂ ನಡೆಸಿದ್ದರಿಂದ ಕೆಲವು ಸ್ತೋತ್ರ ಪದ್ಯಗಳನ್ನೂ ಕನ್ನಡದಲ್ಲಿ ರಚಿಸಿದ್ದಾರೆ.
ಹೆಸರು ಪುಟ್ಟಸ್ವಾಮಿಯಾದರೂ ಪುಟ್ಟಸ್ವಾಮಯ್ಯನವರು ಪಡೆದುದು ದೊಡ್ಡ ಕೀರ್ತಿ. ಪತ್ರಿಕೋದ್ಯಮಿ, ಚಲನಚಿತ್ರ ಸಾಹಿತಿ, ನಿರ್ದೇಶಕ, ಕಾದಂಬರಿಕಾರ, ಕಥೆಗಾರ, ನಾಟಕಕಾರ ಹಾಗೂ ಸಮಾಜ ಸೇವಕ ಹೀಗೆ ಎಲ್ಲಾ ಒಬ್ಬರೇ ಆಗಿರುವುದು ಅಪರೂಪ. ಬಿ. ಪುಟ್ಟಸ್ವಾಮಯ್ಯನವರು 1984ರ ಜನವರಿ 25ರಂದು ಲೋಕದ ನಾಟಕರಂಗಕ್ಕೆ ವಿದಾಯ ಹೇಳಿದರು.
On the birth anniversary of great playwright of ‘Kurukshetra’ fame, novelist and journalist B. Puttaswamaiah
ಕಾಮೆಂಟ್‌ಗಳು