ಸತ್ಯಂ
ಸತ್ಯಂ
ಸತ್ಯಂ ಕನ್ನಡ ಮತ್ತು ತೆಲುಗು ಚಿತ್ರಗಳ ಮಹಾನ್ ಸಂಗೀತ ನಿರ್ದೇಶಕರು.
ಸತ್ಯಂ ಅವರು 1935ರ ಮೇ 17 ರಂದು ಜನಿಸಿದರು. ಡೋಲಕ್ ವಾದ್ಯವನ್ನು ಪ್ರಧಾನವಾಗಿಟ್ಟುಕೊಂಡು ಸಿನಿಮಾ ಸಂಗೀತದಲ್ಲಿ ಅತ್ಯಭೂತಪೂರ್ವ ಯಶ ಸಾಧಿಸಿದ ಏಕೈಕ ಸಿನಿಮಾ ಸಂಗೀತ ನಿರ್ದೇಶಕ ಸತ್ಯಂ.
ಸತ್ಯಂ ಎಂದರೆ ತಕ್ಷಣವೇ ಹಲವಾರು ಸೊಗಸಾದ ಗೀತೆಗಳು ಮನದಲ್ಲಿ ನಾ ಮುಂದು ತಾ ಮುಂದು ಎಂದು ಧಾವಿಸತೊಡಗುತ್ತವೆ. ಅವರು ಕನ್ನಡದಲ್ಲಿ ಪ್ರಥಮ ಬಾರಿಗೆ ಸಂಗೀತ ನೀಡಿದ್ದು ಶ್ರೀ ರಾಮಾಂಜನೆಯ ಯುದ್ಧ ಚಿತ್ರಕ್ಕೆ. ಆ ಚಿತ್ರದ ‘ಹನುಮನ ಪ್ರಾಣ ಪ್ರಭೋ ರಘುರಾಮ’, ‘ಜಗದೀಶನಾಡುವ ಜಗವೇ ನಾಟಕರಂಗ’, ‘ಜಯ ರಘುರಾಮ ಜಯ ಘನಶ್ಯಾಮ’ ಇವೆಲ್ಲಾ ಇಂದೂ ತಮ್ಮ ಜನಪ್ರಿಯತೆಯನ್ನು ಕಾಯ್ದುಕೊಂಡಿವೆ, ಅದು ಪ್ರಾರಂಭ. ಮುಂದೆ ಅವರು ಸಂಯೋಜಿಸಿದ ಗಾಂಧೀನಗರ ಚಿತ್ರದ ‘ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ’, 'ಕಾಣದ ಊರಲೀ ನೀ ಕುಳಿತಿರುವೆ’; ‘ಸರ್ವಮಂಗಳ’ ಚಿತ್ರದ ‘ನನ್ನವಳು ನನ್ನೆದೆಯಾ ಹೊನ್ನಾಡನಾಳುವಳು’; ‘ಒಂದೇ ಬಳ್ಳಿಯ ಹೂವು’ ಚಿತ್ರದಲ್ಲಿ ಮಹಮ್ಮದ್ ರಫಿ ಹಾಡಿದ ‘ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೇ’; ‘ಸಹೋದರರ ಸವಾಲ್‘ ಚಿತ್ರದ ‘ಓ ನಲ್ಲನೆ ಸವಿ ಮಾತೊಂದಾ ನುಡಿವೆಯಾ’; ‘ತಿರುಗುಬಾಣ’ ಚಿತ್ರದ ‘ಇದೇ ನಾಡು ಇದೇ ಭಾಷೆ ಎಂದೆಂದೂ ನಮ್ಮದಾಗಿರಲಿ’ ಹೀಗೆ ಪುಟಗಟ್ಟಲೆ ಬರೆಯುತ್ತಲೇ ಹೋಗಬಹುದು.
ಸತ್ಯಂ ಮೂಲತಃ ತೆಲುಗಿನವರು. ಅವರ ಪೂರ್ಣ ಹೆಸರು 'ಚೌಳ್ಳ ಪಿಳ್ಳೆ ಸತ್ಯ ನಾರಾಯಣ ಶಾಸ್ತ್ರಿ'. ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯ ಗಾದೆವಲಪ ಎಂಬ ಗ್ರಾಮ ಅವರ ಊರು. ತಾಯಿ ಕಾಂತಮ್ಮ ಉತ್ತಮ ಹಾಡುಗಾರ್ತಿ. ತಂದೆ ಹನುಮಂತ ಶಾಸ್ತ್ರಿಗಳು ಭಾಗವತ ಮೇಳಗಳಿಗೆ ಪ್ರಸಿದ್ಧರಾದವರು. ಅವರ ಹಾಡೆಂದರೆ ಜನ ಕಿಕ್ಕಿರಿದು ಸೇರುತ್ತಿದ್ದರು. ತಂದೆ ಹತ್ತೂರುಗಳ ಜಹಗೀರುದಾರರು. ವೈಭವದ ಬಾಲ್ಯವನ್ನು ಕಂಡ ಸತ್ಯಂ ಅವರಿಗೆ ಸಂಗೀತದ ಹುಚ್ಚ್ಚು ಎಳೆವಯಸ್ಸಿನಲ್ಲೇ ಮೂಡಿತ್ತು. ತಂದೆಗಾದರೂ ಮಗ ಉನ್ನತ ಸರ್ಕಾರಿ ಅಧಿಕಾರಿಯಾಗಬೇಕೆಂಬ ಕನಸು. ಆದರೆ ಬಾಲಕ ಸತ್ಯಂ ತಲೆಗೆ ವಿದ್ಯೆ ಹತ್ತಲಿಲ್ಲ, ತಂದೆ ಬಿಡಲಿಲ್ಲ. ಪ್ರೌಢಶಾಲೆಯ ಎರಡನೇ ವರ್ಷದಲ್ಲಿ ಡುಂಕಿ ಹೊಡೆದಾಗ ತಂದೆಯಿಂದ ಉಗ್ರ ಶಿಕ್ಷೆ ಪಡೆದ ಬಾಲಕ ಸತ್ಯಂ ಸಕಲ ಐಶ್ವರ್ಯದ ಬದುಕಿಗೂ ತಿಲಾಂಜಲಿ ನೀಡಿ ಕಾಕಿನಾಡದ 'ಹ್ಯಾಪಿ ಹೋಂ' ಸೇರಿದರು.
ಅಲ್ಲಿ ಬಡ ವಿದ್ಯಾರ್ಥಿಗಳಿಗೆ ಊಟ ಬಟ್ಟೆ ನೀಡಿ ಸಂಗೀತ ಕಲಿಸಲಾಗುತಿತ್ತು. ಅನಾಥ ಎಂದು ಹೇಳಿಕೊಂಡು ಸತ್ಯಂ ಅಲ್ಲಿ ಪ್ರವೇಶ ಪಡೆದಿದ್ದರು. ಇದೇ ಸಂಸ್ಥೆಯಲ್ಲಿ ಎಸ್.ವಿ.ರಂಗರಾವ್, ಅಂಜಲೀ ದೇವಿ, ರೇಲಂಗಿ ಮೊದಲಾದವರಿದ್ದರು. ಅವರೆಲ್ಲರ ಒಡನಾಟ ಸತ್ಯಂ ಅವರ ಕಲಾಭಿರುಚಿ ವಿಕಸನಗೊಳ್ಳಲು ಪ್ರೇರಕವಾಯಿತು. ಅಲ್ಲಿ ಸತ್ಯಂ ಅವರಿಗೆ ಪರಿಚಿತರಾದ ಮತ್ತೊಬ್ಬ ಮಹನೀಯರೆಂದರೆ ಆದಿನಾರಾಯಣರಾವ್. ಅವರು ಆ ವೇಳೆಗಾಗಲೇ 'ಅಂಜಲಿ' ಚಿತ್ರದ 'ಕುಹೂ ಕುಹೂ ಬೋಲೆ ಕೊಯಿಲಯ' ಎಂಬ ಅಮರಗೀತೆಯಿಂದ ಪ್ರಸಿದ್ದರಾಗಿದ್ದರು. ಮುಂದೆ ಅವರು "ಮಯಾಲಮಾರಿ" ಎಂಬ ಸ್ವಂತ ಚಿತ್ರ ತಯಾರಿಸಲು ಯೋಜಿಸಿದಾಗ ಸತ್ಯಂ ಅವರನ್ನು ಕರೆಸಿಕೊಂಡರು. ಆ ಚಿತ್ರದಲ್ಲಿ ಸತ್ಯಂ ಅವರದು, ಸಹಾಯಕ ನಿರ್ದೇಶಕನಿಂದ ಹಿಡಿದು ವಾದ್ಯಗೋಷ್ಠಿ ನಿರ್ವಹಣೆಯವರೆಗೆ ಹತ್ತಾರು ಅವತಾರಗಳು. ಹೀಗಿದ್ದಾಗ ಒಮ್ಮೆ ಡೋಲಕ್ ವಾದಕ ಬಾರದೇ ಹೋದಾಗ ಸತ್ಯಂ ತಾವೇ ನುಡಿಸಿದರು. ಅದಕ್ಕೆ ಪ್ರಸಿದ್ದರೂ ಆಗಿಬಿಟ್ಟರು. ಈ ಪ್ರಸಿದ್ಧಿಯಿಂದಾಗಿ ಅವರು ಹಲವು ಹಿಂದಿ ಚಿತ್ರಗಳಿಗೆ ಡೋಲಕ್ ನುಡಿಸಿದರು. ಆದಿನಾರಾಯಣರಾವ್ ಅವರ ‘ಸ್ವರ್ಣ ಸುಂದರಿ’ಯಲ್ಲಂತೂ ಸತ್ಯಂ ಅವರ ಡೋಲಕ್ ವಾದನ ಅದ್ಭುತವೆನಿಸಿತ್ತು.
ಆ ಕಾಲದಲ್ಲಿ ಮದರಾಸಿನ 'ಫಿಲಂ ಸೆಂಟರ್' ಕಲಾಪ್ರೇಮಿಗಳ ನೆಚ್ಚಿನ ತಾಣವಾಗಿತ್ತು. ಎಲ್ಲಾ ಬಾಷೆಯ ಚಿತ್ರನಿರ್ಮಾಪಕರುಗಳು ಅಲ್ಲಿ ಸೇರುತ್ತಿದ್ದರು. ಅಲ್ಲಿಗೆ ಬಂದಿದ್ದ ಹೋಟೆಲ್ ಉದ್ಯಮಿ ಎಂ.ಎಸ್.ನಾಯಕ್ ಅವರಿಗೆ ಸತ್ಯಂ ಅವರ ಖ್ಯಾತಿ ತಿಳಿಯಿತು. ಅವರಾಗ ಕನ್ನಡ ಚಿತ್ರಗಳ ನಿರ್ಮಾಣದಲ್ಲಿ ತೊಡಗಿದ್ದರು. ಅದಕ್ಕೆ ಸತ್ಯಂ ಅವರನ್ನೇ ಏಕೆ ಸಂಗೀತ ನಿರ್ದೇಶಕರನ್ನಾಗಿ ಬಳಸಬಾರದು ಎಂದು ಯೋಚಿಸಿದರು. ಡೋಲಕ್ ವಾದನಕ್ಕೇ ಸೀಮಿತರಾಗಿದ್ದ ಸತ್ಯಂ ಅವರಿಗೂ ಬದಲಾವಣೆ ಬೇಕಿತ್ತು. ಹೀಗೆ 1963ರಲ್ಲಿ ತೆರೆಕಂಡ "ಶ್ರೀ ರಾಮಾಂಜನೇಯ ಯುದ್ದ" ಚಿತ್ರದ ಮೂಲಕ ಸತ್ಯಂ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಮೇಲೆ ಹೇಳಿದ ಹಾಗೆ ಈ ಚಿತ್ರದ 'ಹನುಮನ ಪ್ರಾಣ", ‘ಜಗದೀಶನಾಡುವ ಜಗವೇ ನಾಟಕ ರಂಗ", ‘ಜಯ ಜಯ ರಾಮ ಜಯ ಘನ ಶ್ಯಾಮ’ ಮೊದಲಾದ ಗೀತೆಗಳು ಪ್ರಖ್ಯಾತಗೊಂಡವು. ಮುಂದೆ ಸತ್ಯಂ ಕನ್ನಡದಲ್ಲಿ ಜನಪ್ರಿಯ ಸಂಗೀತ ನಿರ್ದೇಶಕರಾಗಿ ನೆಲೆ ನಿಂತರು.
ಕನ್ನಡಕ್ಕೆ ಬಂದ ಐದು ವರ್ಷಗಳ ನಂತರ 1968ರಲ್ಲಿ ಸತ್ಯಂ ‘ಪಾಲ ಮನಸಲು’ ಎಂಬ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ತೆಲುಗು ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅತಿ ಶೀಘ್ರದಲ್ಲೇ ಅವರು ಬಹು ಬೇಡಿಕೆಯ ಸಂಗೀತ ನಿರ್ದೇಶಕರಾದರು. ಅವರ 36ವರ್ಷಗಳ ಸಂಗೀತ ನಿರ್ದೇಶನದಲ್ಲಿ 312 ತೆಲುಗು, 131 ಕನ್ನಡ, 10 ತಮಿಳು, ತಲಾ ಒಂದೊಂದು ಮಲಯಾಳಿ ಮತ್ತು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿದ್ದ ಸತ್ಯಂ ಬಡ ನಿರ್ಮಾಪಕರ ಪಾಲಿಗೆ ಕಾಮಧೇನುವಿನಂತಿದ್ದರು. ಹಣ ಎಷ್ಟೇ ಕಡಿಮೆ ಕೊಟ್ಟರೂ ಅವರ ಸಂಗೀತದಲ್ಲಿನ ಮಾಧುರ್ಯ ಬದಲಾಗುತ್ತಿರಲಿಲ್ಲ. ಹೀಗಿದ್ದರೂ ಬಿಡುವಿಲ್ಲದಂತೆ ಎಲ್ಲವನ್ನೂ ಒಪ್ಪಿಕೊಂಡ ಕೆಲಸ, ಕೆಲವೊಮ್ಮೆ ಯಾಂತ್ರಿಕವಾಗುವುದೂ ಉಂಟು. ಸತ್ಯಂ ಅವರ ಸಾಕಷ್ಟು ಚಿತ್ರಗಳ ಸಂಯೋಜನೆಗಳು ಇಂತಿವೆ ಎಂಬುದು ಕೂಡಾ ಅಷ್ಟೇ ಸತ್ಯ.
ಗಾಂಧೀನಗರ, ಸರ್ವಮಂಗಳ, ರೌಡಿ ರಂಗಣ್ಣ, ಹೂವು ಮುಳ್ಳು, ಚೂರಿ ಚಿಕ್ಕಣ್ಣ, ಕ್ರಾಂತಿ ವೀರ, ನಾಗಕನ್ಯೆ, ಅಪರಾಧಿ, ನಾಗರಹೊಳೆ, ಸಹೋದರರ ಸವಾಲ್, ಸೀತಾ ರಾಮು, ಸವತಿಯ ನೆರಳು, ಆರದ ಗಾಯ, ತಾಯಿಯ ಮಡಿಲಲ್ಲಿ, ಕೆರೆಳಿದ ಸಿಂಹ, ಸಾಹಸ ಸಿಂಹ, ತಿರುಗು ಬಾಣ, ಗಂಡಭೇರುಂಡ ಮೊದಲಾದ ಅನೇಕ ಚಿತ್ರಗಳಿಗೆ ಅವರು ಕೊಟ್ಟ ಸಂಗೀತ ಇಂದಿಗೂ ಪ್ರಸಿದ್ಧವಾಗಿದೆ. ಈ ಚಿತ್ರಗಳ ಗೀತೆಗಳು ಪ್ರಸಿದ್ದವಾಗಿವೆ.
ಹೀಗೆ ಸಿನಿಮಾ ಸಂಗೀತಕ್ಕೆ ಪ್ರಸಿದ್ಧರಾಗಿ ನಿರಂತರ ಕಾರ್ಯನಿರ್ವಹಣೆ ಮಾಡುತ್ತಿದ್ದ ಸತ್ಯಂ, 1989ರ ಜನವರಿ 12ರಂದು ತಮ್ಮ 54ನೆಯ ವಯಸ್ಸಿನಲ್ಲಿರುವಾಗಲೇ ತೀವ್ರ ಹೃದಯಾಘಾತದಿಂದ ನಿಧನರಾದರು. ಶಿವರಂಜಿನಿ, ಕಲ್ಯಾಣಿ, ಮಧ್ಯಮಾವತಿ ರಾಗಗಳನ್ನು ಹೊಸ ನೆಲೆಗೆ ಒಯ್ದಿದ್ದ ಸತ್ಯಂ "ಸೆಕೆಂಡ್ ಫಾಲೋ' ಎಂಬ ಸಂಗೀತ ಸಂಯೋಜನೆಯ ಹೊಸ ಸಾಧ್ಯತೆಯನ್ನು ಸಹಾ ಯಶಸ್ವಿಯಾಗಿ ಪ್ರಯೋಗಿಸಿದ್ದರು.
ಈ ಮಹಾನ್ ಸಂಗೀತ ಸಾಧಕನ ನೆನಪಿಗೆ ನಮ್ಮ ನಮನ.
On the birth anniversary of great music director Sathyam
ಕಾಮೆಂಟ್‌ಗಳು