ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೇವಕಿ ಮೂರ್ತಿ


ದೇವಕಿ ಮೂರ್ತಿ


ಹಿರಿಯರಾದ ದೇವಕಿ ಮೂರ್ತಿ ಪ್ರಸಿದ್ಧ ಕಾದಂಬರಿಗಾರ್ತಿ ಮತ್ತು ಸಂಗೀತಜ್ಞೆ. 

ದೇವಕಿಯವರು ಮೈಸೂರಿನಲ್ಲಿ 1931ರ ಮೇ 22ರಂದು ಜನಿಸಿದರು. ತಂದೆ ಆನಂದರಾಯರು, ಮೈಸೂರು ರಾಜ್ಯದ ರೆವಿನ್ಯೂ ಇಲಾಖೆಯಲ್ಲಿ ಅಮಲ್ದಾರರಾಗಿದ್ದರು. ತಾಯಿ ಕಮಲಮ್ಮ. ತಂದೆಗೆ ಆಗಾಗ್ಗೆ ವರ್ಗವಾಗುತ್ತಿದ್ದುದರಿಂದ ದೇವಕಿ ಅವರ ಪ್ರಾರಂಭಿಕ ಹಾಗೂ ಪ್ರೌಢಶಾಲಾಭ್ಯಾಸ ಹಲವೆಡೆಗಳಲ್ಲಿ ನಡೆಯಿತು. ಕಾಲೇಜಿಗೆ ಸೇರಿದ್ದು ಚಿಕ್ಕಮಗಳೂರಿನ ಇಂಟರ್ ಮೀಡಿಯೆಟ್‌ ಕಾಲೇಜು. ಅಲ್ಲಿ ಗುರುಗಳಾಗಿ ಬಂದವರು ಪ್ರೊ. ವಿ.ಸೀ.ಯವರು. ಇವರ ಬೋಧನ ಕ್ರಮದ ವೈಶಿಷ್ಟ್ಯವೆಂದರೆ ಪಠ್ಯಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕ, ಪ್ರಚಲಿತ ವಿದ್ಯಮಾನಗಳ  ಬೋಧನೆ. ಹೆಸರಾಂತ ಲೇಖಕರ ಶ್ರೇಷ್ಠ ಕೃತಿಗಳನ್ನೂ ಓದಲು ಪ್ರೇರೇಪಿಸುತ್ತಿದ್ದರು. 

ದೇವಕಿ ಅವರು ಇಂಟರ್ ಮೀಡಿಯೆಟ್‌ ನಂತರ ಕರ್ನಾಟಕ ವಿ.ವಿ. ದಿಂದ ಬಿ.ಎ. ಪದವಿ, ಹಿಂದಿ ಪ್ರವೇಶಿಕ ಮತ್ತು ಸಂಗೀತದಲ್ಲಿ ವಯೊಲಿನ್‌ ಶಿಕ್ಷಣ ಪಡೆದರು. ಇವರಿಗೆ ಚಿಕ್ಕಂದಿನಿಂದಲೂ ಕತೆ ಕೇಳುವ ಹುಚ್ಚು. ಗೆಳತಿಯ ಮನೆಯಲ್ಲಿದ್ದ ಅಜ್ಜಿಯನ್ನು ಕಾಡಿಸಿ, ಪೀಡಿಸಿ ಕತೆಗಳನ್ನು ಕೇಳುತ್ತಿದ್ದರು. ಮನೆಪಕ್ಕದ ರಾಮಮಂದಿರದಲ್ಲಿ ನಡೆಯುತ್ತಿದ್ದ ಹರಿಕಥೆ ಕೇಳುವುದು ಇವರ ನಿತ್ಯದ ಪರಿಪಾಠವಾಗಿತ್ತು. ದಾಸರು ಗೆಜ್ಜೆಕಟ್ಟಿ, ಚಿಟಿಕೆ ಹಾಕಿ ಹರಿಕತೆ ಹೇಳುತ್ತಿದ್ದರೆ, ಕೇಳುತ್ತ ಕೇಳುತ್ತ ತನ್ಮಯರಾಗಿ ಬಿಡುತ್ತಿದ್ದರು. ಊರೂರು ಸುತ್ತುತ್ತಾ ಹೆಚ್ಚಿಗೆ ಓದಿರದಿದ್ದರೂ ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಂಡು, ಮಾತಿಗೊಂದು ಗಾದೆ ಹೇಳುವ, ಜನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ, ಬದುಕಿನಲ್ಲಿ ಕಂಡುಂಡ ಘಟನೆಗಳನ್ನು ರಸವತ್ತಾಗಿ ಬಣ್ಣಿಸುವ ತಾಯಿಯಿಂದಲೂ ಇವರಿಗೆ ಕಥಾ ಪ್ರಪಂಚಕ್ಕೆ ಪ್ರವೇಶ ದೊರಕಿತು. ಜೊತೆಗೆ ಕಾಲೇಜಿನ ಗ್ರಂಥ ಭಂಡಾರದಲ್ಲಿದ್ದ ಶ್ರೇಷ್ಠ ಸಾಹಿತ್ಯ ಗ್ರಂಥಗಳ ಪರಿಚಯವಾಯಿತು. ಹಿಂದಿ ಕಲಿತದ್ದರಿಂದ ಪ್ರೇಮ್ ಚಂದ್ ಅವರ ಕಥೆ, ಕಾದಂಬರಿಗಳನ್ನು ಓದಿದರು. 

ದೇವಕಿ ಅವರಿಗೆ ಬರೆಯಬೇಕೆಂಬ ಒತ್ತಾಸೆ ಮನಸ್ಸಿನಲ್ಲಿ ಪ್ರಬಲವಾದಾಗ ಗಿರಿಬಾಲೆ ಕಾವ್ಯನಾಮದ ಸರಸ್ವತೀಬಾಯಿ ರಾಜವಾಡೆಯವರು ಪ್ರಕಟಿಸುತ್ತಿದ್ದ ‘ಸುಪ್ರಭಾತ’ ಮತ್ತು ಓಲೇ ಟಿ ವಿ. ಗುಪ್ತ ಮತ್ತು ಡಿ.ಎಸ್‌. ರಾಮಕೃಷ್ಣರಾವ್‌ರವರು ಸಂಪಾದಿಸುತ್ತಿದ್ದ ‘ಕಥಾವಳಿ’ ಪತ್ರಿಕೆಗಳಿಗೆ ಕವನ, ಸಣ್ಣಕತೆಗಳನ್ನು ಬರೆಯತೊಡಗಿದರು. ತಾವು ಬರೆದದ್ದು ಪತ್ರಿಕೆಗಳಲ್ಲಿ ಪ್ರಕಟಗೊಂಡಾಗ ಇವರಿಗಾದ ಸಂತಸ ಅಷ್ಟಿಷ್ಟಲ್ಲ. 

ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಮಗನ ಸೊಸೆಯಾಗಿ, ವಾಸುದೇವಾಚಾರ್ಯರ ಮೊಮ್ಮಗ ಎಸ್‌. ಕೃಷ್ಣಮೂರ್ತಿಯವರ ಮಡದಿಯಾಗಿ, ಬಂದನಂತರ ದೇವಕಿ ಮೂರ್ತಿ ಅವರಲ್ಲಿ ಸಂಗೀತದಲ್ಲೂ ಆಸ್ಥೆ ಮೂಡಿತು.  ಆರ್. ಆರ್. ಕೇಶವಮೂರ್ತಿ, ಟಿ. ಎಸ್. ತಾತಾಚಾರ್ ಅಂತಹ ವಿದ್ವಾಂಸರಿಂದ ಸಂಗೀತ ಕಲಿತರು. ಪತಿ ಎಸ್. ಕೃಷ್ಣಮೂರ್ತಿ ಅವರು ಮಹಾನ್ ಸಂಗೀತ ಜ್ಞಾನಿಗಳಾಗಿ, ಆಕಾಶವಾಣಿಯಲ್ಲಿ ಅಧಿಕಾರಿಗಳಾಗಿ, ಸಂಗೀತ ವಿಮರ್ಶಕರಾಗಿ, ಬರಹಗಾರರಾಗಿ ಪ್ರಸಿದ್ಧರೆನಿಸಿದ್ದಾರೆ.

ಸಂಗೀತ ಕಲಿತದ್ದಷ್ಟೇ ಅಲ್ಲದೆ, "ಸಂಗೀತ ಕ್ಷೇತ್ರವೂ ಏಕೆ ಪುರುಷ ಪ್ರಧಾನ ಕ್ಷೇತ್ರವಾಗಿದೆ? ತಮಿಳುನಾಡಿನ ಸುಬ್ಬುಲಕ್ಷ್ಮೀ, ಪಟ್ಟಮ್ಮಾಳ್‌, ವಸಂತಕುಮಾರಿ ಮತ್ತು ಮೈಸೂರಿನವರಾದ ನೀಲಮ್ಮ ಕಡಾಂಬಿ, ಚೊಕ್ಕಮ್ಮ ಹೀಗೆ ಕೆಲವರನ್ನು ಬಿಟ್ಟರೆ ಮತ್ತಾರೂ ಏಕೆ ಮುಂದೆ ಬರುತ್ತಿಲ್ಲ?" ಎಂದು ಯೋಚಿಸಿ ವಾಸುದೇವಾಚಾರ್ಯರೊಡನೆ ಚರ್ಚಿಸಿದಾಗ, ಸಂಪ್ರದಾಯಸ್ಥ ಪುರುಷರಿಗೇ ಈ ಕ್ಷೇತ್ರವನ್ನು ಪ್ರವೇಶಿಸಲು ಕಷ್ಟವಾಗಿದ್ದ ಕಾಲದಲ್ಲಿ ಮಹಿಳೆಯರು ಮುಂದುವರೆಯುವುದಾದರೂ ಹೇಗೆ?" ಎಂದು ಅವರು ತಮ್ಮ ಅನುಭವವನ್ನು ವಿವರಿಸಿದರು. ಹೀಗೆ ಚರ್ಚಿಸಿದ ವಿಷಯವೇ ಇವರ ಮನಸ್ಸಿನ ತುಂಬಾ ತುಂಬಿಕೊಂಡು, ಸಂಗೀತ ಕಲಾವಿದೆಯೊಬ್ಬಳ ಜೀವನ ಹಾಗೂ ಕಲಾ ಸಾಧನೆಯ ಹಾದಿಯಲ್ಲಿ ಅಡ್ಡಿ-ಆತಂಕಗಳು ಹೇಗೆ ಎದುರಾಗುತ್ತದೆ ಎಂಬುದನ್ನೇ ವಸ್ತುವಾಗಿಸಿ ಬರೆದ ಮೊಟ್ಟ ಮೊದಲ ಕಾದಂಬರಿ ‘ಉಪಾಸನೆ’.  ಈ ಕಾದಂಬರಿಯು ಕನ್ನಡ ಪ್ರಭ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದಲ್ಲದೆ ಮೈಸೂರಿನ ಕಾವ್ಯಾಲಯ ಪ್ರಕಾಶನದವರು ಪುಸ್ತಕ ರೂಪದಲ್ಲೂ ಹೊರತಂದರು.  ಇದು, ಸುಪ್ರಸಿದ್ಧ ಕಾದಂಬರಿಗಳನ್ನೇ ತೆರೆಯ ಮೇಲೆ ತರಬೇಕೆಂಬ ಹಂಬಲದಿಂದ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ಪುಟ್ಟಣ ಕಣಗಾಲರ ದೃಷ್ಟಿಗೆ ಬಿದ್ದು ಅದೇ ಹೆಸರಿನಿಂದಲೇ ಚಲನಚಿತ್ರವಾಗಿ ಪ್ರಖ್ಯಾತಿ ಪಡೆಯಿತು. 

ದೇವಕಿ ಮೂರ್ತಿ ಅವರ ಹಲವಾರು ಸಣ್ಣ ಕತೆಗಳು, ಲೇಖನಗಳು, ವಾರಪತ್ರಿಕೆ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಮೆಚ್ಚುಗೆಗೆ ಪಾತ್ರವಾದವು. ನಂತರ ಬರೆದ ಕಾದಂಬರಿ ‘ಬಳ್ಳಿ ಚಿಗುರಿತು’ ಪ್ರಜಾಮತ ವಾರಪತ್ರಿಕೆಯಲ್ಲಿ, ‘ಶಿಶಿರ ವಸಂತ’ ಕಾದಂಬರಿಯು ತುಷಾರ ಮಾಸಪತ್ರಿಕೆಯಲ್ಲಿ, ‘ಎರಡುದಾರಿ’ ಕಾದಂಬರಿಯು ಪ್ರಜಾಮತ ವಾರಪತ್ರಿಕೆಯಲ್ಲಿ, ‘ಚಂಡಮಾರುತ’ ಕಾದಂಬರಿಯು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ, ‘ಒಡಕುದೋಣಿ’ ಮತ್ತು ‘ಆಹುತಿ’ ಕಾದಂಬರಿಗಳು ವನಿತಾ ಮಾಸಪತ್ರಿಕೆಯಲ್ಲಿ, ‘ಬಿರುಕು’ ಮತ್ತು ‘ಬಂಧಿ’ ಕಾದಂಬರಿಗಳು ಮಂಗಳ ವಾರಪತ್ರಿಕೆಯಲ್ಲಿ, ‘ನಿರೀಕ್ಷೆ’ ಕಾದಂಬರಿಯು ಸುಧಾ ವಾರಪತ್ರಿಕೆಯಲ್ಲಿ, ‘ಶೋಧ’ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲಿ ಹೀಗೆ ಇವರ ಕಾದಂಬರಿಗಳು ನಿರಂತರವಾಗಿ ಧಾರಾವಾಹಿಯಾಗಿ ಪ್ರಕಟವಾದವು. 

ದೇವಕಿ ಮೂರ್ತಿ ಅವರ 'ಒಡಕು ದೋಣಿ’ ಮತ್ತು ‘ಆಹುತಿ’ ಕಾದಂಬರಿಗಳು ವನಿತಾ ಮಾಸ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಾದಂಬರಿಗಳಾದರೆ,  'ನಿರೀಕ್ಷೆ' ಕಾದಂಬರಿ ಮತ್ತು 'ಕೆಂಪು ಗುಲಾಬಿ' ಕಥಾ ಸಂಕಲನಗಳು ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ ಪಡೆದವು. ಇವರ ಕಾದಂಬರಿಗಳಲ್ಲಿ ಬಹುವಾಗಿ ಚರ್ಚಿತವಾಗುವ ವಿಷಯಗಳೆಂದರೆ ಹೆಣ್ಣಿನ ಬದುಕು-ಬವಣೆಗಳು, ಅವಳ ಸಮಸ್ಯೆಗಳು, ಮಾನಸಿಕ ತುಮುಲಗಳು, ವರದಕ್ಷಿಣೆಯ ಪಿಡುಗು, ವಿಧವಾ ವಿವಾಹ, ಅಂತರ್ಜಾತೀಯ ವಿವಾಹ, ಉದ್ಯೋಗಸ್ಥ ಮಹಿಳೆಯ ಕಷ್ಟಕಾರ್ಪಣ್ಯಗಳು, ಸಾಂಸ್ಕೃತಿಕ ಜಗತ್ತಿನ ಕಲಾವಿದೆಯರ ಹೋರಾಟದ ಬದುಕು ಮುಂತಾದ ವಿಷಯಗಳು. ರಾಮಾಯಣದಲ್ಲಿ ಖಳನಾಯಕಿಯಾಗಿ ಚಿತ್ರಿತವಾಗಿರುವ ಕೈಕೇಯಿ ಪಾತ್ರಕ್ಕೆ ನ್ಯಾಯ ಒದಗಿಸಲು ಹೊಸ ಆಯಾಮ ಸೃಷ್ಟಿಸಿ, ಕೈಕೇಯಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಬೆಂದು ಪ್ರಾಯಶ್ಚಿತ್ತ ಮಾಡಿಕೊಳ್ಳುವ ಆಕೆಯ ಮಾನಸಿಕ ತೊಳಲಾಟವನ್ನು ಚಿತ್ರಿಸಿರುವ ಕಾದಂಬರಿ ‘ನಿರೀಕ್ಷೆ’ ಹಾಗೂ ಮಹಾಭಾರತದ ಸ್ತ್ರೀ ಪಾತ್ರಗಳಲ್ಲಿ ಅತಿ ಪ್ರಮುಖವಾಗಿರುವ ಕುಂತಿಯ ಮಾನಸಿಕ ತುಮುಲವನ್ನು ಚಿತ್ರಿಸಿರುವ ‘ಕುಂತಿ’ ಕಾದಂಬರಿ ಮತ್ತು ರಾಮಾಯಣದ ‘ವೈದೇಹಿ’ ಕಾದಂಬರಿಗಳು ಓದುಗರಿಂದ ಅಪಾರ ಮೆಚ್ಚುಗೆ ಪಡೆದವು. ದೇವಕಿ ಅವರು ಬರೆದ ಹಲವಾರು ಕತೆಗಳು ‘ಅವನ ನೆರಳು’ ಹಾಗೂ ‘ಕೆಂಪು ಗುಲಾಬಿ’ ಸಂಕಲನಗಳಲ್ಲಿ ಪ್ರಕಟಗೊಂಡಿವೆ.  ದೇವಕಿ ಮೂರ್ತಿ ಅವರು ಹಲವಾರು ಹಾಸ್ಯಲೇಖನಗಳನ್ನೂ ಬರೆದಿದ್ದು ಅವು ‘ನಮ್ಮೂರು….ನಮ್ಮಜನ’ ಸಂಗ್ರಹದಲ್ಲಿ  ಸೇರಿವೆ. ದೇವಕಿ ಅವರು ದೇಶ-ವಿದೇಶಗಳ ಜನಜೀವನ, ಆಚಾರ-ವಿಚಾರ, ಪ್ರಗತಿ-ವಿಗತಿ ಮುಂತಾದವುಗಳನ್ನು ಅರಿತು ತಮ್ಮ ಜ್ಞಾನ ಕೋಶವನ್ನು ವಿಸ್ತರಿಸಿಕೊಳ್ಳಲು ಯುರೋಪ್‌ ಮತ್ತು ಅಮೆರಿಕಾ ಪ್ರವಾಸಮಾಡಿದ ಅನುಭವಗಳನ್ನು ದಾಖಲಿಸಿರುವ ಕೃತಿ ‘ಯುರೋಪ್‌ ಅಮೆರಿಕದ ಇಣುಕು ನೋಟ’. ದೇವಕಿ ಅವರ 'ಕೊಡಗಿನ ಕಡಲಿಗೆ ಕಾವೇರಿಯ ಆತ್ಮಕ್ಕೆ'ಎಂಬುದು ಕಾವೇರಿ ನದಿಯ ಪಯಣವನ್ನು ವಿದ್ಯಾರ್ಥಿಗಳಿಗೆ ಆಪ್ತವಾಗಿ ತಿಳಿಸಿಕೊಡುವ ಕೃತಿ.  ಇವರು ಮಕ್ಕಳಿಗಾಗಿಯೂ ಅನೇಕ ಕೃತಿ ರಚಿಸಿದ್ದಾರೆ.

ಹೀಗೆ ದೇವಕಿ ಮೂರ್ತಿ ಅವರ ಬರವಣಿಗೆ  ಸಾಹಿತ್ಯದ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿಯೂ ಮೂಡಿಬಂದಿವೆ.

ಹಿರಿಯರಾದ ದೇವಕಿ ಮೂರ್ತಿ ಅವರಿಗೆ ಹಿರಿಯ ವಯಸ್ಸಿನ ಬದುಕು ಆರೋಗ್ಯಯುತವಾಗಿ, ಹಿತವಾಗಿರಲಿ ಎಂದು ನಮ್ಮ ನಮನಪೂರ್ವಕ ಹಾರೈಕೆ.  ನಮಸ್ಕಾರ.

On the birthday of great novelist Devaki Murthy 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ