ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಾಂತಾದೇವಿ ಕಣವಿ


 ಶಾಂತಾದೇವಿ ಕಣವಿ 


ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ  ಮತ್ತು ಚನ್ನವೀರ ಕಣವಿ.

ಶಾಂತಾದೇವಿಯರು 1933ರ ಜನವರಿ 12ರಂದು ವಿಜಾಪುದಲ್ಲಿ ಜನಿಸಿದರು. ತಂದೆ  ಸಿದ್ಧಬಸಪ್ಪ ಗಿಡ್ನವರ. ಮತ್ತು ತಾಯಿ ಭಾಗೀರಥಿದೇವಿ. ಕಂದಾಯ ಇಲಾಖೆಯಲ್ಲಿ ಮಾಮಲೆದಾರರಾಗಿದ್ದ ತಂದೆಯವರು ಮುಂಬೈ ಕರ್ನಾಟಕದ ಅಸಿಸ್ಟೆಂಟ್ ಕಮೀಷನರಾಗಿ ನಿವೃತ್ತರಾರು. ಅವರಿಗೆ ಅಪಾರವಾದ ಸಾಹಿತ್ಯದ ಒಲವು. ಮನೆಯಲ್ಲಿ ಇಂಗ್ಲಿಷ್, ಕನ್ನಡ ಪುಸ್ತಕಗಳ ದೊಡ್ಡ ಭಂಡಾರವನ್ನೇ ಹೊಂದಿದ್ದರು.  ಅವರಲ್ಲಿ ಸಾಹಿತ್ಯ ಮತ್ತು ಅಧ್ಯಾತ್ಮ ಕೃತಿಗಳಿಗೆ ಮೊದಲ ಪ್ರಾಶಸ್ತ್ಯ. ಮಧುರ ಚೆನ್ನರ ಸಹವಾಸದಿಂದ ಅರವಿಂದರ ಅನುಯಾಯಿಗಳು. ಮಾಸ್ತಿ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ಗೋಕಾಕ್, ರಂ.ಶ್ರೀ. ಮುಗಳಿ, ಶಿ.ಶಿ. ಬಸವನಾಳ, ಹರ್ಡೇಕರ್ ಮಂಜಪ್ಪ, ಫ.ಗು. ಹಳಕಟ್ಟಿ, ಸಿಂಪಿ ಲಿಂಗಣ್ಣ, ಸ.ಸ. ಮಾಳವಾಡ ಮುಂತಾದ ಸಾಹಿತಿಗಳ ಸಂಗ ಅವರಿಗಿತ್ತು. ಮಧುರಚೆನ್ನ, ಬೇಂದ್ರೆ, ರಂ.ಶ್ರೀ. ಮುಗಳಿ ಮೊದಲಾದವರಂತೂ  ಮನೆಗೆ ಆಗಾಗ ಬರುತ್ತಿದ್ದರು. 

ಶಾಂತಾದೇವಿ ಅವರಿಗೆ ಮನೆಯಲ್ಲಿದ್ದ ಸಾಂಸ್ಕೃತಿಕ ವಾತಾವರಣದಿಂದ ಸಹಜವಾಗೆಂಬಂತೆ ಸಾಹಿತ್ಯದ ಹುಚ್ಚು ಜೊತೆಗೂಡಿತ್ತು.  ತಂದೆಯಿಂದಲೇ ‘ಜೇನ್ ಆಸ್ಟಿನ್’ಳ ಕಾದಂಬರಿ ಓದಿ ಬರವಣಿಗೆಯ ಪರಿಚಯ ಆಗಿತ್ತು. ಪ್ರಾಥಮಿಕ ವಿದ್ಯಾಭ್ಯಾಸ ವಿಜಾಪುರದಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸ ರೋಣ, ರಾಣಿ ಬೆನ್ನೂರು, ಬೈಲಹೊಂಗಲಗಳಲ್ಲಿ ಅಯ್ತು. 

ಶಾಲೆಗೆ ಹೋಗುತ್ತಿದ್ದ ದಿನಗಳವು (1948-49). ಕಿತ್ತೂರ ಸಂಸ್ಥಾನದ ಸಮಗ್ರ ಇತಿಹಾಸ ಗೊತ್ತಿದ್ದವರು ದೊಡ್ಡಭಾವೆಪ್ಪ ಮೂಗಿ. ಅವರು ಆಗಾಗ  ಶಾಂತಾದೇವಿ ಅವರ ಮನೆಗೆ ಬರುತ್ತಿದ್ದರು. ಅವರು ಹೇಳಿದ ಘಟನೆಯನ್ನು ಆಧರಿಸಿ  'ರಂಜನಿ ಮಹಲು' ಎಂಬ ಕಥೆ ಬರೆದಿದ್ದರು. ಆದರೆ ಸಂಕೋಚದಿಂದ ಪ್ರಕಟಣೆಗೆ ಕಳಿಸಲಿಲ್ಲ.

ಶಾಂತಾದೇವಿಯವರು ವಿಜಾಪುರದಲ್ಲಿದ್ದಾಗ ಚೆನ್ನವೀರ ಕಣವಿಯವರು ಅವರ ಅಕ್ಕನ ಪುತ್ರರಾಗಿದ್ದ ಶಂಕರ ಪಾಟೀಲರ ಮನೆಗೆ ಬರುತ್ತಿದ್ದರು. ಅವರು ಬಿ.ಎ ಓದುವಾಗಿನಿಂದ ಅಲ್ಲಿಗೆ ಬರುತ್ತಿದ್ದರು. ಹಾಗೆಯೇ ಶಾಂತಾದೇವಿಯವರ ಮನೆಯಲ್ಲಿದ್ದ 
ಗ್ರಂಥಾಲಯಕ್ಕೂ ಭೇಟಿ ಕೊಟ್ಟಿದ್ದರು. ಆಗಲೇ ಕಣವಿ ಅವರ 'ಕಾವ್ಯಾಕ್ಷಿ' ಹಾಗೂ 'ಭಾವಜೀವಿ' ಎರಡು ಕವನ ಸಂಕಲನಗಳು ಪ್ರಕಟವಾಗಿದ್ದವು. ಸಿದ್ದಪ್ಪನವರಿಗೆ  ಸಾಹಿತ್ಯದ ಒಲವಿದ್ದವರಿಗೆ ಶಾಂತಾದೇವಿ ಅವರನ್ನು ಮದುವೆ ಮಾಡಿಕೊಡುವ ಇಚ್ಛೆಯಿತ್ತು. "ನಮ್ಮ ಮಗಳ ಬಗ್ಗೆ ಏನನ್ನಿಸುತ್ತದೆ? ಲಗ್ನ ಮಾಡಿಕೊಳ್ತಿರೇನು ಎಂದು ಕಣವಿ ಅವರನ್ನು" ಶಾಂತಾದೇವಿ ಅವರ ತಾಯಿ ಕೇಳಿದ್ದರು. "ತಂದೆ-ತಾಯಿಯನ್ನು ಕೇಳಿ ಹೇಳ್ತೀನಿ" ಎಂದು ಬಂತು ಉತ್ತರ. ‍ ಕಣವಿ ಅವರ ಎಂ.ಎ. ಆದ ಮೇಲೆ ಅಂದರೆ 1952ರಲ್ಲಿ ಧಾರವಾಡದಲ್ಲಿ ಶಾಂತಾದೇವಿ ಚನ್ನವೀರ ಕಣವಿ ಅವರ ಮದುವೆಯಾಯಿತು. 

ನಿಶ್ಚಿತಾರ್ಥಕ್ಕೂ ಮದುವೆಗೂ ಎರಡು ವರ್ಷ ಅಂತರವಿತ್ತು. ಆಗ ಕಣವಿಯವರ ಪ್ರೇಮ ಪತ್ರದಲ್ಲಿ ಕಾವ್ಯಭಾಷೆಯಿತ್ತು. ಮದುವೆಯ ನಂತರ ಶಾಂತಾದೇವಿಯವರ ಬರವಣಿಗೆಗೆ ಅದು ಪ್ರೇರಣೆ ಆಯ್ತು. 

ಜಿ.ಬಿ. ಜೋಶಿಯವರ ಮನೋಹರ ಗ್ರಂಥಮಾಲೆಯ 'ನಡೆದು ಬಂದ ದಾರಿ' ಸಂಪುಟಕ್ಕಾಗಿ ಕೀರ್ತಿನಾಥ ಕುರ್ತಕೋಟಿಯವರು ಶಾಂತಾದೇವಿ ಅವರನ್ನು ಕಥೆ ಕೇಳಿದರು. 'ಮಂಜು ಕರಗಿತು' ಎಂದು ಕಥೆ ಕಳಿಸಿದರು. ದೊಡ್ಡ ದೊಡ್ಡ ಲೇಖಕರ ಜೊತೆಗೆ ತಮ್ಮ  ಫೋಟೊ ಸಮೇತ ಕಥೆ ಪ್ರಕಟಗೊಂಡಾಗ ಶಾಂತಾದೇವಿ ಅವರಿಗೆ ಆದ  ಆನಂದ ಅಷ್ಟಿಷ್ಟಲ್ಲ.  ಇದು ಅವರ ಪ್ರಥಮ ಹೆಜ್ಜೆ.  ಅದೇ ಕಥೆಯನ್ನು ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಡಾ.ಎನ್. ನಾಗಪ್ಪ ಅವರು ಹಿಂದಿಯಲ್ಲಿ  'ಹಿಮ್ ಚಲ್ ಗಯಾ' ಎಂದು ಅನುವಾದಿಸಿದ್ದು ಕೊಲ್ಕತ್ತದ  'ಅಣಿಮಾ' ಪತ್ರಿಕೆಯ ಪ್ರೇಮಾಂಕ ಎಂಬ ವಿಶೇಷ ಸಂಚಿಕೆಯಲ್ಲಿ ಫೋಟೊ ಸಹಿತ ಪ್ರಕಟಗೊಂಡಿತ್ತು.  ಹೀಗೆ ಪ್ರಥಮ ಹೆಜ್ಜೆಯಲ್ಲೇ ಅವರ ವಿಶಾಲವ್ಯಾಪ್ತಿ ಹರಡಿತ್ತು.

ಸಾಮಾನ್ಯ ಮಹಿಳೆಯರ ಬದುಕನ್ನು ಕಥೆಗಳಲ್ಲಿ ಅನಾವರಣಗೊಳಿಸುತ್ತ, ಉತ್ತರ ಕರ್ನಾಟಕದ ಆಡುಭಾಷೆಯನ್ನು ಹಿಡಿದಿಟ್ಟವರು ಶಾಂತಾದೇವಿ ಕಣವಿ. ಚಿಕ್ಕವರಿದ್ದಾಗ ತಂದೆ ತಾಯಿಯರಂತೆ  ಭಾವಗೀತೆಗಳನ್ನು ಹಾಡುತ್ತಿದ್ದರು. ಧಾರವಾಡಕ್ಕೆ ಬಂದ ಮೇಲೆ ಆಕಾಶವಾಣಿಯಲ್ಲಿಯೂ ಹಾಡಿದರು. "ಭಾವಗೀತೆಯನ್ನು ಹಾಡಿದರೂ ಭಾವಜೀವಿಯಲ್ಲ ನಾನು. ಹೀಗಾಗಿ ಕಥೆ ಬರೆಯುವುದನ್ನು ರೂಢಿಸಿಕೊಂಡೆ” ಎಂಬುದು ಅವರ ಸ್ವಯಂ ಉವಾಚ.  

ಶಾಂತಾದೇವಿ ಅವರ ಮೊದಲ ಕಥಾ ಸಂಕಲನ 'ಸಂಜೆಮಲ್ಲಿಗೆ’ 1967ರಲ್ಲಿ ಪ್ರಕಟವಾಯಿತು. ಆಮೇಲೆ 'ಬಯಲು ಆಲಯ’, 'ಮರುವಿಚಾರ’, ‘ಜಾತ್ರೆ ಮುಗಿದಿತ್ತು’, 'ಕಳಚಿ ಬಿದ್ದ ಪೈಜಣ’, ‘ನೀಲಿಮಾ ತೀರ’, ‘ಗಾಂಧಿ ಮಗಳು’ ಹಾಗೂ 'ಈಚಿನ ಕಥೆಗಳು’ ಸಂಕಲನ ಪ್ರಕಟಗೊಂಡವು. ಸಮಗ್ರ ಕಥೆಗಳು 'ಕಥಾಮಂಜರಿ' (2002) ಹಾಗೂ 'ಇನ್ನೊಂದು ಸಂಪುಟ’ (2005) ಎರಡು ಸಂಪುಟಗಳಲ್ಲಿ ಪ್ರಕಟಗೊಂಡವು. ಧಾರವಾಡ ಆಕಾಶವಾಣಿಯಲ್ಲಿ ಅವರ  ಕಥೆ, ರೂಪಕ, ಕಿರುನಾಟಕ, ಹಾಸ್ಯ, ಕಥೆಗಳು ಪ್ರಸಾರಗೊಂಡವು. ಜೊತೆಗೆ ಹರಟೆಗಳ ಸಂಕಲನ 'ಅಜಗಜಾಂತರ' ಪ್ರಕಟಗೊಂಡಿತು. ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕವಾಗಿ ಪ್ರಕಟಿತಗೊಂಡಿದತು. 

ಶಾಂತಾದೇವಿ ಕಣವಿ ಅವರ 'ಬಯಲು-ಆಲಯ' ಕಥಾಸಂಕಲನಕ್ಕೆ 1974ರ ಸಾಹಿತ್ಯ ಅಕಾಡಮಿ ಬಹುಮಾನ. 1987ರಲ್ಲಿ ಅಕಾಡಮಿ ಪ್ರಶಸ್ತಿ ಪುರಸ್ಕಾರ,  ದಾನಚಿಂತಾಮಣಿ ಅತ್ತಿಮಬ್ಬೆ ಪುರಸ್ಕಾರವೂ ಒಳಗೊಂಡ ಹಾಗೆ ಅನೇಕ ಗೌರವಗಳು ಸಂದಿದ್ದವು.  ಅವರ ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲೆಯಾಳಂಗಳಿಗೆ ಭಾಷಾಂತರಗೊಂಡಿವೆ'. 

'ಮಯೂರ' ಪತ್ರಿಕೆಯಲ್ಲಿ  'ಕವಿ ಕಂಡ ಪತ್ನಿಯರು' ಮಾಲಿಕೆಯಲ್ಲಿ ಶಾಂತಾದೇವಿ ಕಣವಿ ಅವರು ವಿವರವಾಗಿ ಬರೆದುದು ಪ್ರಕಟವಾಗಿದೆ. ಆದರೆ ಆತ್ಮಚರಿತ್ರೆ ಬರೆಯಲಿಲ್ಲ.

ಕನ್ನಡದಲ್ಲಿ ಈಗ ಬರೆಯುತ್ತಿರುವ  ನೇಮಿಚಂದ್ರ, ಸುಮಂಗಲಾ, ಡಾ.ವಿನಯಾ, ಸುನಂದಾ ಕಡಮೆ ಮೊದಲಾದವರೆಲ್ಲ ಛಲೋ ಬರೀತಾರ ಎಂಬುದು ಶಾಂತಾದೇವಿ ಅವರ ಮೆಚ್ಚುಗೆಯ ಮಾತಾಗಿತ್ತು. ಹಿಂದೆ ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕಿಸುತ್ತಿದ್ದರು. ಈಗ ಪುರುಷರ ಸಮಾನವಾಗಿ ಲೇಖಕಿಯರು ಬರೆಯುತ್ತಿದ್ದಾರೆ. ಹೀಗಾಗಿ ಮಹಿಳಾ ಸಾಹಿತ್ಯ ಎನ್ನಬೇಕಿಲ್ಲ. ಜೊತೆಗೆ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿಲ್ಲ ಎಂಬುದು ಶಾಂತಾದೇವಿ ಅವರ ಖಚಿತ ನಿಲುವಾಗಿತ್ತು.

ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಾದೇವಿ ಕಣವಿ 🤝 ಚನ್ನವೀರ ಕಣವಿ ದಂಪತಿ ಬಹು ದೊಡ್ಡ ಭಾಗ್ಯ.  

2020ರ ಮೇ 22ರಂದು ಶಾಂತಾದೇವಿ ಕಣವಿ ಅವರು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ಭಕ್ತಿಯ ನಮನ.🙏

On Remembrance Day of Shantjadevi Kanavi 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ