ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇ. ಎ. ಎಸ್. ಪ್ರಸನ್ನ



 ಇ. ಎ. ಎಸ್. ಪ್ರಸನ್ನ

ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿದ್ದಾರೆ.

ಇ. ಎ. ಎಸ್. ಪ್ರಸನ್ನ  1940ರ ಮೇ 22ರಂದು ಬೆಂಗಳೂರಿನಲ್ಲಿ  ಜನಿಸಿದರು.  ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದರು.    ಅಂದಿನ ಪ್ರಸಿದ್ಧ ವೀಕ್ಷಕ ವಿವರಣೆಗಾರರಾದ ಟೋನಿ ಕೋಸಿಯರ್, ಸುರೇಶ್ವರಯ್ಯ, ಆನಂದ್ ಸೆತಲ್ವಾಡ್, ಸುಶಿಲ್ ಜೋಷಿ ಮತ್ತು ಶ್ರೇಷ್ಠ ವಿಶಿಷ್ಟ ವಿಶ್ಲೇಷಣೆಕಾರರಾದ ವಿಜಯ್ ಮರ್ಚೆಂಟ್, ಲಾಲಾ ಅಮರನಾಥ ಅಂತಹವರ ಧ್ವನಿಯಲ್ಲಿ ಪ್ರಸನ್ನರ ಶ್ರೇಷ್ಠ ಬೌಲಿಂಗ್ ಗುಣಗಾನ ಕೇಳಿ ಕ್ರಿಕೆಟ್ ಆಸಕ್ತಿಯಲ್ಲಿ ಮಿಂದು ಪುನೀತರಾದ ಕಾಲಕ್ಕೆ ಸೇರಿದವರು ನಾವು.

ಅಯ್ಯೋ ಆ ಕ್ರಿಕೆಟ್ ಮಂಡಲಿಯ ಗೋಪೀನಾಥ ಬರೀ ವೆಂಕಟರಾಘವನ್ನನಿಗೆ ಬೆಂಬಲ ಕೊಡ್ತಾನಲ್ಲ, ಈ ವಾಡೇಕರ್ ಪ್ರಸನ್ನನಿಗೆ ಬೌಲಿಂಗ್ ಕೊಡೋದೇ ಇಲ್ಲ, ಈ ಭಿಷನ್ ಸಿಂಗ್ ಬೇಡಿ ತಾನು ನಾಯಕ ಆದ್ಮೇಲೆ ಬೇರೆ ಯಾರಿಗೂ ಬೌಲಿಂಗ್ ಮಾಡೋಕೇ ಬಿಡೋಲ್ಲ ಅಂತ ಪ್ರಸನ್ನ ಅವರ ಪರ ವಾದಿಗಳಾಗಿದ್ದವರು ನಾವು.  ಚಂದ್ರ ಮತ್ತು ಪ್ರಸನ್ನರನ್ನು ಸುಂದರವಾಗಿ ಉಪಯೋಗಿಸುತ್ತಾರೆ ಅಂತಲೇ ನಾವು ಪಟೌಡಿ ಪ್ರಿಯರಾಗಿದ್ದೆವು.

ಈ ಪ್ರೀತಿ ಸುಮ್ಮ ಸುಮ್ಮನೆ ಬಂದಿದ್ದಲ್ಲ.  ಹದಿನೇಳು ವರ್ಷ ರಣಜೀ ಪ್ರಶಸ್ತಿ ಸ್ವಾಮ್ಯ ಪಡೆದಿದ್ದ ಮುಂಬೈನಿಂದ ಪ್ರಥಮ ಬಾರಿ ಕರ್ನಾಟಕಕ್ಕೆ ರಣಜೀ ಪ್ರಶಸ್ತಿ ತಂದವರು ಪ್ರಸನ್ನ.  ಅದೂ ಗಾವಸ್ಕರ್ ನಾಯಕತ್ವದಲ್ಲಿ ಶ್ರೇಷ್ಠ ತಂಡವಿದ್ದ ಮುಂಬೈ ಅನ್ನು ಸೆಮಿ ಫೈನಲ್ ಪಂದ್ಯದಲ್ಲಿ ಸೋಲಿಸಿ ಈ ಸಾಧನೆ ಮಾಡಿದ್ದರು.  ಅವರ ನಾಯಕತ್ವದಲ್ಲಿ ಕರ್ನಾಟಕವು ಎರಡು ಬಾರಿ  ರಣಜೀ ಟ್ರೋಫಿ ಪ್ರಶಸ್ತಿ ಪಡೆಯಿತು.  ಈ ತಮಿಳುನಾಡಿನ ಗೋಪೀನಾಥ ಮತ್ತು ಮುಂಬೈನ ಕೆಲವು ಪಟ್ಟಭದ್ರರ  ಕೆಲವು ಕೈವಾಡಗಳಲ್ಲದಿದ್ದರೆ ಅವರು ಭಾರತ ತಂಡದ ನಾಯಕ ಕೂಡ ಆಗುವುದಕ್ಕೆ ತುಂಬಾ ಸಮೀಪದಲ್ಲಿದ್ದರು.

ಪ್ರಸನ್ನರು 1961 ವರ್ಷದಲ್ಲಿ ವೆಸ್ಟ್ ಇಂಡೀಜ್ ವಿರುದ್ಧ ಕ್ರಿಕೆಟ್ ಟೆಸ್ಟ್ ಪಂದ್ಯವೊಂದನ್ನು ಆಡಿ ನಂತರದಲ್ಲಿ  "ನಾನು ಇಂಜಿನಿಯರಿಂಗ್ ಮುಗಿಸುವವರೆಗೆ ಕ್ರಿಕೆಟ್ ಆಡೋಲ್ಲ" ಎಂದು ನಿರ್ಧರಿಸಿ  ಇಂಜಿನಿಯರಿಂಗ್ ಮುಗಿಸಿ ಪುನಃ 1967ರ ವರ್ಷದಲ್ಲಿ ಕ್ರಿಕೆಟ್ಟಿಗೆ ಪ್ರವೇಶಿಸಿದರು.  ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ವೆಸ್ಟ್ ಇಂಡೀಜ್ ಮುಂತಾದ ಅಂದಿನ ಸಶಕ್ತ ತಂಡಗಳ ವಿರುದ್ಧ ಪ್ರಸನ್ನರು ನೀಡಿದ ಅದ್ಭುತ ಬೌಲಿಂಗ್ ಪ್ರದರ್ಶನಗಳು ಆ ಕಾಲದಲ್ಲಿ ದುರ್ಬಲ ತಂಡಗಳ ಸಾಲಿನಲ್ಲಿದ್ದ ಭಾರತ ತಂಡಕ್ಕೆ ಗಣ್ಯತೆ ತರುವಲ್ಲಿ ಪ್ರಧಾನ ಪಾತ್ರ ವಹಿಸಿತು.  ನ್ಯೂಜಿಲೆಂಡ್ ಅಂತಹ ವಿದೇಶೀ ಆಟಗಾರರಿಗೆ  ಕಷ್ಟಕರವಾದ ಮೈದಾನಗಳಲ್ಲಿ  ಅವರು ಮೂರು ಬಾರಿ ಇನ್ನಿಂಗ್ಸ್ ಒಂದರಲ್ಲಿ ಎಂಟು ವಿಕೆಟ್ ಪಡೆದ ಸಾಧನೆ ಪಡೆದಿರುವುದು ಕ್ರಿಕೆಟ್ ಚರಿತ್ರೆಗಳಲ್ಲಿ ಪ್ರಮುಖ ದಾಖಲಾತಿ ಪಡೆದಿದೆ.  ತಾವು ಆಡಿದ ಮೊದಲ ಇಪ್ಪತ್ತೇ ಟೆಸ್ಟ್ ಪಂದ್ಯಗಳಲ್ಲಿ ನೂರು ವಿಕೆಟ್ ಗಳಿಸಿದ ಪ್ರಸನ್ನರ ಭಾರತೀಯ ದಾಖಲೆ ಇದುವರೆಗೂ ಭೇದಿತವಾಗಿಲ್ಲದಿರುವುದು ಕೂಡಾ ಪ್ರಸನ್ನರ ಗರಿಮೆಯನ್ನು ಸಾರುತ್ತದೆ.

ಅಂದಿನ ಕಾಲದ ಪ್ರತಿಷ್ಟಿತ ಬ್ಯಾಟುದಾರರಾದ ಇಯಾನ್ ಚಾಪೆಲ್,  ಬಿಲ್ ಓ ರ್‍ಯಾಲಿ (ನಾವು ಆತನನ್ನು ಲಾರಿ ಅಂತ ಕರೆಯುತ್ತಿದ್ದೆವು), ಕ್ಲೈವ್ ಲಾಯ್ಡ್, ಅಲ್ವಿನ್ ಕಾಳೀಚರಣ್ ಅಂತಹವರಿಂದ  ತಾವು ಆಡಿದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿಕೊಂಡವರು ಇ.ಎ.ಎಸ್. ಪ್ರಸನ್ನ.    ಅವರು ಗಾಳಿಯಲ್ಲಿ  ಸ್ಪಿನ್ ಮಾಡುತ್ತಿದ್ದ  ವೈಖರಿ,   ಮೂಡಿಸುತ್ತಿದ್ದ ಅಮೋಘ ಫ್ಲೈಟ್, ಬ್ಯಾಟುದಾರನ ಜಾಣ್ಮೆಯನ್ನು ಮೀರಿಸುತ್ತಿದ್ದ  ಶಾರ್ಟ್ ಪಿಚ್ ಡೆಲಿವರಿಗಳು ಹಾಗೂ ಇವೆಲ್ಲವುಗಳ ಜೊತೆಗೆ  ಬೌಲಿಂಗಿನಲ್ಲಿ ಅತ್ಯದ್ಭುತ ಜಾಣ್ಮೆ, ನಿಯಂತ್ರಣ ಮತ್ತು  ಕುಶಲತೆಗಳಿಗಾಗಿ  ಪ್ರಸನ್ನ ಪ್ರಖ್ಯಾತಿ ಪಡೆದಿದ್ದರು.

1985ರ ಅವಧಿಯಲ್ಲಿ ಭಾರತ ತಂಡ ಸುನೀಲ್ ಗವಾಸ್ಕರ್ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಬೆನ್ಸನ್ ಅಂಡ್ ಹೆಡ್ಜಸ್ ವಿಶ್ವ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಆ ತಂಡದ ಮ್ಯಾನೇಜರ್ ಆಗಿದ್ದವರು ಇ.ಎ.ಎಸ್. ಪ್ರಸನ್ನ.  ಆ ಸಂದರ್ಭದಲ್ಲಿ ತಂಡದ ನಾಯಕ ಗಾವಸ್ಕರ್ "ನಮ್ಮ ಮ್ಯಾನೇಜರ್ ಪ್ರಸನ್ನ ಅವರು ನೆಟ್ ನಲ್ಲಿ ಬೌಲಿಂಗ್ ಮಾಡುವ ವೈಖರಿಯನ್ನು ನೋಡಿದಾಗಲೆಲ್ಲಾ ಅವರನ್ನು ನನ್ನ ಆಡುವ ತಂಡದಲ್ಲಿ ಸೇರಿಸಿಕೊಂಡು ಬಿಡಬಾರದೇಕೆ ಎಂದು ಉತ್ಸುಕನಾಗಿ ಬಿಡುತ್ತಿದ್ದೆ" ಎಂದು ನುಡಿದಿದ್ದರು.   ನಿವೃತ್ತಿಯ  ನಂತರದಲ್ಲಿ ಕೂಡಾ ಪ್ರಸನ್ನರ ಬೌಲಿಂಗ್ ಜಾಣ್ಮೆ ಹೇಗಿತ್ತು ಎಂಬುದಕ್ಕೆ ಇದೊಂದು ಗೌರವಪೂರ್ಣ ನಿದರ್ಶನದಂತಿವೆ.

ಪ್ರಸನ್ನರು ಆಡಿದ್ದು ಕೇವಲ 49 ಟೆಸ್ಟ್ ಪಂದ್ಯಗಳು ಮಾತ್ರ.  ಅವರು ಗಳಿಸಿದ್ದು 189 ವಿಕೆಟ್.  ಬ್ಯಾಟಿಂಗ್ ನಲ್ಲಿ ಕೂಡಾ ಅವರು ಉಪಯುಕ್ತರಾಗಿದ್ದರು.  ಟೆಸ್ಟ್ ಪಂದ್ಯವೊಂದರಲ್ಲಿ ಭಾರತ ಸೋಲುವ ಸ್ಥಿತಿಯಲ್ಲಿದ್ದಾಗ ಕೊನೆಯದಿನ ಪೂರ್ತಿ ಸರ್ದೇಸಾಯ್ ಅವರೊಂದಿಗೆ ಆಡಿ,   ಪಂದ್ಯಕ್ಕೆ ಡ್ರಾ ಒದಗುವಂತೆ ಅವರು ಆಡಿದ್ದು ದಾಖಲೆಯಾಗಿದೆ.     ಅವರು ಆಡಿದ 235 ಪ್ರಥಮ ದರ್ಜೆ ಪಂದ್ಯಗಳಲ್ಲಿ 2476ರನ್ನುಗಳನ್ನೂ, 957 ವಿಕೆಟ್ಟುಗಳನ್ನೂ  ಸಂಪಾದಿಸಿದ್ದರು.

ಒಮ್ಮೆ ಕರ್ನಾಟಕ ತಂಡದಲ್ಲಿ ಆರು ಜನ ಟೆಸ್ಟ್ ಆಟಗಾರನ್ನು ಪ್ರತಿನಿಧಿಸುವಂತೆ ಮಾಡಿದ ಕೀರ್ತಿ ಪ್ರಸನ್ನರಿಗೆ ಸಲ್ಲುತ್ತದೆ.  ಪ್ರಸನ್ನ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್, ಎಸ್.ಎಂ. ಎಚ್. ಕಿರ್ಮಾನಿ, ಬ್ರಿಜೇಶ್ ಪಟೇಲ್, ಸುಧಾಕರರಾವ್ ಒಟ್ಟಿಗೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು.  ಈ ಪಟ್ಟಿಯ ಹೊರತಾಗಿ ಕೂಡಾ ಅಂದಿನ ತಂಡದಲ್ಲಿದ್ದ ವಿಜಯಕುಮಾರ್, ವಿಜಯಕೃಷ್ಣ, ಜಯಪ್ರಕಾಶ್,  ಲಕ್ಷ್ಮಣ್ ಅಂತಹ ಅಂದಿನ ಬಹುತೇಕ ಆಟಗಾರರು ಕೇವಲ ರಣಜೀ ವಲಯದಲ್ಲಿ ಮಾತ್ರ ಆಡಿದ್ದರೂ ಮಹಾನ್ ಪ್ರತಿಭಾವಂತರಾದ ಆಟಗಾರರಾಗಿ  ರೂಪುಗೊಂಡಿದ್ದರು.   ಇವರೆಲ್ಲರ ರೂವಾರಿ ಕರ್ಣಾಟಕ ತಂಡದ ನಾಯಕರಾದ  ಪ್ರಸನ್ನ ಆಗಿದ್ದರು.

ಭಾರತದ ಆಟಗಾರರಿಗೆ ಮಾತ್ರವಲ್ಲದೆ ವಿದೇಶಿ ಆಟಗಾರರನ್ನು ತಯಾರು ಮಾಡಲು ಸಹಾ ಸಾಕಷ್ಟು ಬೇಡಿಕೆ ಪಡೆದಿದ್ದ ಪ್ರಸನ್ನರು ಅಂದಿನ ರೆಮ್ಕೋ, ಬಿ. ಎಚ್. ಇ. ಎಲ್, ಕುದುರೆ ಮುಖ, ಎನ್.ಜಿ. ಇ. ಎಫ್ ಮುಂತಾದ ಸಂಸ್ಥೆಗಳಲ್ಲಿನ ಪ್ರಮುಖ ತಾಂತ್ರಿಕ ಅಧಿಕಾರಿಗಳಾಗಿ ಸಹಾ ಹೆಸರಾಗಿದ್ದರು.

ಪ್ರಸನ್ನ ಅವರು ಅಧಿಕಾರಿಗಳಾಗಿದ್ದ ಎನ್‍ಜಿಇಎಫ್ ಪ್ರಧಾನ ಕಚೇರಿ ಕಸ್ತೂರಬಾ ರಸ್ತೆಯಲ್ಲಿದ್ದ ನಮ್ಮ ಎಚ್ಎಮ್‍ಟಿ ಸಂಸ್ಥೆಯ ಮಾರಾಟ ಕಚೇರಿ ಕಟ್ಟಡದಲ್ಲಿ ಇತ್ತು. ಅವರನ್ನು ನಮ್ಮ ಎಚ್ಎಮ್‍ಟಿ ಕನ್ನಡ ಸಂಪದದ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮಕ್ಕೆ ಕರೆದು ತಂದು ಅವರೊಡನೆ ನಾನು ಹಲವು ಬಾರಿ ಭೇಟಿ ಮಾಡಿ ಸಂತೋಷಿಸಿದ ನೆನಪು ಇಂದೂ ಹಸುರಾಗಿದೆ.

ಕರ್ನಾಟಕದ ಹೆಸರನ್ನು ಕ್ರಿಕೆಟ್ಟಿನ್ನಲ್ಲಿ ಪ್ರಾಜ್ವಲ್ಯಮಾನವಾಗಿಸುವುದರ ಜೊತೆಗೆ, ವಿಶ್ವ ಶ್ರೇಷ್ಠ ಸ್ಪಿನ್ ಬೌಲರುಗಳ ಪಟ್ಟಿಯಲ್ಲಿ ನಿರಂತರ ವಿರಾಜಮಾನರಾದ ಇ.ಎ.ಎಸ್. ಪ್ರಸನ್ನರು ಭಾರತೀಯ ಶ್ರೇಷ್ಟ ಕ್ರೀಡಾಪಟುಗಳಾಗಿ  ಸ್ಮರಣೀಯರಾಗಿದ್ದಾರೆ. 

On the birth day of the greatest spin bowler of all times E. A. S. Prasanna 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ