ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮರೆಯಲಾದೀತೆ



 ಮರೆಯಲಾದೀತೆ...


ಮರೆಯಲಾದೀತೆ...


ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಮರೆಯಲಾದೀತೆ’ ಎರಡು ಬಾರಿ ಓದಿರುವೆ.  ಆಗಾಗ ಮಧ್ಯೆ ಮಧ್ಯೆ ಓದಿರುವುದೂ ಉಂಟು. ಅದೇನೋ ಓದುತ್ತಾನೆ ಇರಬೇಕು ಎಂಬ ಪ್ರೀತಿ ಹುಟ್ಟಿಸಿ ಬಿಟ್ಟಿರುವಂತದ್ದು.  


‘ಕಾಲ ಕೆಟ್ಟು ಹೋಗಿದೆ’ ಎಂಬ ಮಾತು ಎಲ್ಲ ಕಾಲದಲ್ಲೂ ಇರೋ ಮಾತು.  ಕಳೆದ ಶತಮಾನದಲ್ಲಿ ಎಂತೆಂತಹ ಮಹಾನುಭಾವರು ನಮ್ಮ ಜೀವಿತ ಕಾಲಕ್ಕೆ ಸ್ವಲ್ಪ ಮುಂಚೆ ಮತ್ತು ನಮ್ಮ ಜೀವಿತ ಕಾಲದಲ್ಲೂ ಇದ್ರೂ.  ಆದರೆ ಕಾಲ ಕೆಟ್ಟು ಕೂತಿದೆ, ನಮ್ಮೊಳಗೆ ಮಾತ್ರವೇ ಒಳ್ಳೆಯದಿರೋದು ಎಂಬ ಹುಂಬ ಕಲ್ಪನೆಯೇ ನಮಗೆ ನಮ್ಮ ಸುತ್ತಮುತ್ತಲಿನ ಸೌಂದರ್ಯವನ್ನು ಆಸ್ವಾದಿಸೋಕೆ ಬಿಡೋಲ್ಲ.  


ನಮ್ಮ ಸುತ್ತಲಿನ ಪ್ರಪಂಚದಲ್ಲಿ ಕೆಡುಕನ್ನೇ ಗುರುತಿಸಿ ಒಳ್ಳೆಯದಕ್ಕೆ ಕಣ್ಣು ಮುಚ್ಚಿಕೊಂಡಿರೋದು ನಮ್ಮ ಜಾಯಮಾನ. ಎಲ್ಲೋ ಕೋಟಿಗೊಬ್ಬರು ಮಾತ್ರವೇ ತಾವೇ ಸೃಷ್ಟಿಸಿಕೊಂಡ ಶ್ರೇಷ್ಠ ಕಣ್ಣುಗಳಿಂದ ಒಳ್ಳೆಯದನ್ನು ಕಂಡು ‘ನೋಡ್ರಪ್ಪ ಇಂತದ್ದೂ ಇದೆ ಅಂತ ಅಲ್ಲಲ್ಲಿ ಬರೆದಿಟ್ಟು ಹೋಗಿದ್ದಾರೆ.”  ಅಂತಹ ಶ್ರೇಷ್ಠ ಬರೆಹ ‘ಮರೆಯಲಾದೀತೆ’. (ಬೆಳಗೆರೆ ಕೃಷ್ಣಶಾಸ್ತ್ರಿಗಳ ಮರೆಯಲಾಗದ ನೆನಪುಗಳ ಮಾತುಗಳನ್ನು ಧ್ವನಿಸುರಳಿಗಳಲ್ಲಿ ತುಂಬಿ ಪುಸ್ತಕದಲ್ಲಿ ನಿರೂಪಿಸಿದ ನ. ರವಿಕುಮಾರ್ ಅವರ ಕಾರ್ಯ ಕೂಡಾ ಮರೆಯಲಾಗದ್ದು. )


ವಿದ್ವತ್ ಶಿರೋಮಣಿಗಳಾದ  ಶಿವರಾಮ ಕಾರಂತ, ಹಾ. ಮಾ. ನಾಯಕ, ಎಸ್. ಎಲ್. ಭೈರಪ್ಪ, ಎಸ್. ಕೆ. ಕರೀಂಖಾನ್, ಪಿ. ಆರ್. ತಿಪ್ಪೇಸ್ವಾಮಿ, ಕೆ. ವೆಂಕಟರಾಮಪ್ಪ, ಎ.ಕೆ. ರಾಮಾನುಜನ್, ನಿಟ್ಟೂರು ಶ್ರೀನಿವಾಸರಾವ್, ಗಡಿಯಾರಂ ರಾಮಕೃಷ್ಣ ಶರ್ಮ, ಕಾಳಿಂಗ ಕೃಷ್ಣ ಮುಂತಾದ ಮಹನೀಯರೊಡನೆ ಬೆಳಗೆರೆ ಕೃಷ್ಣಶಾಸ್ತ್ರಿಗಳು ಕಳೆದ ಕ್ಷಣಗಳನ್ನು ಓದಿದರೆ ಅವರ ಮೇಲೆ ಅಸೂಯೆ ಹುಟ್ಟುತ್ತೆ.  ಅಂತಹ  ಸಹಚರ್ಯೆ ಕೃಷ್ಣಶಾಸ್ತ್ರಿಗಳಂತಹ  ವ್ಯಕ್ತಿತ್ವಕ್ಕೆ ಮಾತ್ರವೇ ದಕ್ಕುವಂತದ್ದು.  


ಬೆಳಗೆರೆ ಕೃಷ್ಣಶಾಸ್ತ್ರಿಗಳು ತೆರೆದಿಡುವ  ಮಹಾತ್ಮಾ ಗಾಂಧೀಜಿ, ರಮಣ ಮಹರ್ಷಿ, ಜೆ. ಕೃಷ್ಣಮೂರ್ತಿ, ರಾನಡೆ, ರಾಮದಾಸರು, ವಿದ್ಯಾನಂದ ತ್ರಿಪಾಠಿ, ಜನಾರ್ದನ ಮಿಶ್ರ, ಇಚ್ಛಾಮರಣಿ ಗುಂಜಪ್ಪ, ರಾಮೇಗೌಡ, ಕಣ್ಣಮ್ಮ, ಕರಡಿಗವಿ ಅಜ್ಜಯ್ಯ, ಸೇವಾಶ್ರಮದ ಲಿಂಗಣ್ಣ ಮುಂತಾದ  ವ್ಯಕ್ತಿಗಳ ಕುರಿತಾದವರ ಜ್ಞಾನ ಅರ್ಥೈಕೆಗಳು ಇನ್ನೊಂದು ತೆರನಾದದ್ದು.   ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಧ್ಯಾತ್ಮವೆಂಬ ಪದವನ್ನು ಬಳಸದೆಯೇ, ತಮ್ಮನ್ನು ಯಾವುದೇ ಗುಂಪಿಗೆ ಸೀಮಿತಗೊಳಿಸಿಕೊಳ್ಳದೆಯೇ, ವಿಶಾಲ ಮನಸ್ಸಿನಿಂದ  ಎಲ್ಲ ತತ್ವಗಳಾಚೆ ನಿಂತು ತಮ್ಮ ಬದುಕಿನ ಪ್ರತಿ ನಡೆಯಲ್ಲೂ ಅಧ್ಯಾತ್ಮದಂತಹ ಶ್ರೇಷ್ಠ ಬಾಳನ್ನೇ  ಬಾಳಿದ ವ್ಯಕ್ತಿತ್ವದ ವಿಶಿಷ್ಟ ಮಜಲು ಇಲ್ಲಿ ನಮ್ಮ ಅನುಭವಕ್ಕೆ ಕಾಣಸಿಗುತ್ತದೆ.   

 

ಬೆಳಗೆರೆ ಕೃಷ್ಣಶಾಸ್ತ್ರಿಗಳು ದೊಡ್ಡವರಲ್ಲಿ ಕಾಣುವ ‘ಸರಳತೆ’ ಒಂದು ವೈಶಿಷ್ಟ್ಯದ್ದಾದರೆ, ಅವರು ಸರಳ ಜನಸಾಮಾನ್ಯರಲ್ಲಿ ಕಾಣುವ ‘ದೊಡ್ಡತನ’ ಇನ್ನೂ ಮೇರುಮಟ್ಟದ್ದು.  ಸಿರಿಯಜ್ಜಿ ಅಂತಹ ಅನನ್ಯ ಜಾನಪದ ಗಾಯಕಿ ಮತ್ತು  ಗ್ರಾಮೀಣ ಬದುಕಿನಲ್ಲಿನ ಸಾಂಸ್ಕೃತಿಕ ಮತ್ತು ಕಲಾತ್ಮಕ ಬದುಕನ್ನು ಮೈಗೂಡಿಸಿಕೊಂಡ ಹಲವರನ್ನು ಶಾಸ್ತ್ರಿಗಳು ಭಾರತೀಯ ಶ್ರೇಷ್ಠ ವಿದ್ವಾಂಸರಿಗೆ ಮಾತ್ರವಲ್ಲದೆ ವಿದೇಶಿ ವಿದ್ವಾಂಸರಿಗೆ ಸಹಾ ಪರಿಚಯ ಮಾಡಿಕೊಡುವ ರೀತಿಯನ್ನು ಈ ಕೃತಿಯಲ್ಲಿ ಕಾಣುತ್ತೇವೆ.  ಕಳ್ಳನಾದ ಕಳ್ನಿಂಗ ಎಂಬುವನಲ್ಲೂ ಮೈತುಂಬ ಒಡವೆ ಧರಿಸಿದ ಹೆಣ್ಣು ಮಗುವನ್ನು ಮನೆಗೆ ಬಿಟ್ಟು, ಜಾಗರೂಕವಾಗಿರುವಂತೆ ಸೂಚಿಸುವ ಸಾಚಾತನವಿದೆ.  ಮರಳ ಮೇಲೆ ಅಕ್ಷರ ಕಲಿತ ಸಿದ್ಧಯ್ಯ ಶಾಲೆಯ ಸಾಮಾನ್ಯ ಉಪಾಧ್ಯಾಯರೇ ಆಗಿದ್ದರೂ ಅವರು ತೆರೆದು ತೋರುವ ವಿದ್ವತ್ತು, ಪ್ರಾಮಾಣಿಕತೆ, ವಿದ್ಯಾರ್ಥಿಗಳನ್ನು ಮಾತ್ರವಲ್ಲದೆ, ಶಿಕ್ಷಕರನ್ನೂ ಬೆಳೆಸಿದ ರೀತಿ ಮನಮುಟ್ಟುತ್ತದೆ.  ರಾಜ್‍ಕುಮಾರ್ ಅವರಿಗೂ ಮೊಟ್ಟ ಮೊದಲ ಬಾರಿಗೆ ಬಣ್ಣ ಹಚ್ಚಿ, ಗುರುಸ್ಥಾನ ಪಡೆದಿದ್ದ ಚಿನ್ನಪ್ಪನಂತ ಕಲಾವಿದ ಇಲ್ಲಿ ಬೆಳಗಿದ್ದಾರೆ.  ಬಡತನದಲ್ಲಿದ್ದರೂ ಮಕ್ಕಳಿಗೆ ಅರ್ಥವಾಗಲಿಲ್ಲ ಎಂದು ಆ ಹುಡುಗನ ಮನೆಗೆ ಹೋಗಿ ಬೋಧಿಸಿದ ಹುಸೇನ್ ಸಾಬಿ, ಆತ ಮರಣವನ್ನಪ್ಪಿದ್ದಾಗ ಆತನಿಗೆ ಯಾರು ಯಾರು ಸಹಾಯ ಮಾಡಿದ್ದರೋ ಅವರನ್ನೆಲ್ಲಾ ಆತನ ಡೈರಿಯಲ್ಲಿ ಗುರುತಿಸಿ ಅವರನ್ನು ಹುಡುಕಿ ತನ್ನ ಕಷ್ಟದ ಸಂಪಾದನೆಯಲ್ಲಿ ಸಾಲ ತೀರಿಸಿದ ಆತನ ಪತ್ನಿ ಹುಸೇನಮ್ಮ ಅಂತಹ ವ್ಯಕ್ತಿಗಳ ಬಗ್ಗೆ ಏನು ತಾನೇ ಹೇಳುವುದು.   1940ರ ದಶಕದಲ್ಲೇ ಕೈ ಬರಹದಲ್ಲಿ ಏಕಾಕಿಯಾಗಿ ನಿಘಂಟು ಸಿದ್ಧಪಡಿಸಿದ ಅಲಿ ಸಾಬ್, ಪ್ರಾಣ ಒತ್ತೆಯಿಟ್ಟು ಹೋರಾಡಿ ಬ್ರಿಟಿಷರಿಂದ ಶಿಕ್ಷೆ ಅನುಭವಿಸಿದ್ದರೂ ತನ್ನ ಕಷ್ಟ ಕಾಲದಲ್ಲಿಯೂ ಸರಕಾರದ ಮಾಸಾಶಾಸನಕ್ಕೆ ಕೈಯೊಡ್ಡಲು ನಿರಾಕರಿಸಿದ ಪಾರವ್ವ, ಆದರ್ಶ ಶಿಕ್ಷಕ ಸಣ್ಣ ತಿಮ್ಮಯ್ಯ, ಶಾಲೆಯ ಕಟ್ಟಡಕ್ಕಾಗಿ ತಮ್ಮ ಮೌಲ್ಯಯುತ ಭೂಮಿಯನ್ನು ಕೊಟ್ಟ ಹನುಮಣ್ಣ ಸಹೋದರರು,  ತಮ್ಮ ಬಳಿಯೇ ಮೊದಲು ಶಾಲೆ ಕಟ್ಟಡಕ್ಕೆ ದುಡ್ಡು ಕೇಳಲಿಲ್ಲ ಎಂದು ಕೋಪಿಸಿಕೊಂಡು ಹಣಕೊಟ್ಟ ತಿಮ್ಮಪ್ಪಯ್ಯ – ಸಣ್ಣಪ್ಪಯ್ಯ, ಊರಿಗಾಗಿ ದುಡಿದ ಉಪದ್ರವದಿಂದ ಊರೇ ಖಾಲಿಯಾದರೂ ಊರಿಗೇ ಕಾವಲಾಗಿ ನಿಂತ  ಮಹಮದ್ ಹಯಾತ್ ಸಾಬ್, ಒರಟನಾದರೂ ಶಾಲೆಯ ಕೈಂಕರ್ಯಕ್ಕೆ ಹಗಲಿರುಳೂ ದುಡಿದು ಸಂತಸಪಟ್ಟ ಹೆಗ್ಗೆರೆಯ ಗಗ್ಗರಂಗಪ್ಪ, ತನಗೆ ಹಾದಿಯಲ್ಲಿ ಸಿಕ್ಕ ಬಹುಮೊತ್ತದ ಹಣವನ್ನು ಯಾವುದೇ ಮೋಹವಿಲ್ಲದೆ ತಂದುಕೊಟ್ಟ ಎಮ್ಮೆ ತಮ್ಮಗ, ಹೃದಯವಂತೆ ವೈದ್ಯೆ ಗಿರಿಜಮ್ಮ, ಪ್ರಾಣ ಉಳಿಸಿದರೂ ತಾನು ನೀಡಿದ ಚಹಾಗೆ ಮಾತ್ರಾ ಕಾಸು ಪಡೆದ ಗಂಗಾರಾಮ್ ಹೀಗೆ ಅನೇಕ ವಿಶಿಷ್ಟ ವ್ಯಕ್ತಿಗಳು ಒಬ್ಬರಾದ ನಂತರ ಒಬ್ಬರಂತೆ  ಈ ಕೃತಿಯಲ್ಲಿ ನಮಗೆ ಸಂತಸದ ದಿಗ್ಭ್ರಮೆ ಮೂಡಿಸುತ್ತಾರೆ.


ಇವೆಲ್ಲವುಗಳ ಒಳಗೆ, ಬೆಳಗೆರೆ ಕೃಷ್ಣಶಾಸ್ತ್ರಿಗಳ ದೊಡ್ಡಮನಸ್ಸಿನ, ದಾರ ಪೋಣಿಸುವ ಕೆಲಸ ಎಷ್ಟು ಸುಂದರವಾಗಿ ಮೂಡಿದೆ ಅನಿಸಿ ಮನ ಸಂತೋಷಿಸುತ್ತದೆ.  ಅವರು ಹೋದಲ್ಲೆಲ್ಲಾ ಶಾಲೆ ಕಟ್ಟಿದರು.  ಜನಗಳನ್ನು ಒಂದುಗೂಡಿಸಿ ಒಳ್ಳೆಯದಕ್ಕೆ ಅಡಿಪಾಯ ಹಾಕಿದರು.  ಎಲ್ಲ ತೆರನಾದ ವ್ಯಕ್ತಿಗಳಲ್ಲೂ ದೊಡ್ಡತನವನ್ನೇ ಕಂಡರು.  ಎಲ್ಲ ದೊಡ್ಡ  ವ್ಯಕ್ತಿಗಳೂ ಅವರಿದ್ದ ಗುಡಿಸಿಲನ್ನು ಅರಸಿ ಬಂದು ಧನ್ಯತೆ ಪಡೆದರು ಎಂಬುದು ನಮಗೂ ಅಂತದ್ದು ಬೇಕು ಎಂಬ  ಆಸೆ ಹುಟ್ಟಿಸುತ್ತದೆ.  ಇಂತಹ ಒಬ್ಬ ಶ್ರೇಷ್ಠರನ್ನು  ಬದುಕಿದ್ದಾಗಲೇ ಕಂಡಿದ್ದರೆ ಚೆನ್ನಿತ್ತು ಎಂದು ಈಗ ಅನಿಸುತ್ತಿದೆ.  ಎಲ್ಲಕ್ಕೂ ಯೋಗ್ಯತೆ ಇರಬೇಕು.  ಅಂತಹ ಯೋಗ್ಯತೆ ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಇದ್ದಂತೆ ನಮಗೂ ಇದ್ದಿದ್ದರೆ ಚೆನ್ನಿತ್ತು.  ಕಡೇಪಕ್ಷ ಅದನ್ನು ‘ಮರೆಯಲಾದೀತೆ...’ ಅಂದುಕೊಂಡರೂ ನನ್ನಂತಹವನ ಮಿತಿಯ  ಮಟ್ಟಿನಲ್ಲಿ  ಜೀವನ ಪಾವನವೇ ಸರಿ!😇


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ