ಬಾನುಲಿ ಕಲಿಗಳು
ನುಡಿ ತೇರನೆಳೆದವರು ಬಾನುಲಿ ಕಲಿಗಳು
ಆಕಾಶವಾಣಿಯಲ್ಲಿ 'ನುಡಿ ತೇರನೆಳೆದವರು ಬಾನುಲಿ ಕಲಿಗಳು' ಎಂಬ ಒಂದು ವಿಶಿಷ್ಟ ಕಾರ್ಯಕ್ರಮ ಕಳೆದ ಆರು ತಿಂಗಳುಗಳಿಂದ ಪ್ರಸಾರವಾಗುತ್ತಿದೆ. 52 ಕಂತುಗಳಲ್ಲಿ ಯೋಜಿತವಾಗಿರುವ ಈ ಕಾರ್ಯಕ್ರಮ ಇದೀಗ ತನ್ನ ಅರ್ಧ ಹಾದಿಯನ್ನು ಯಶಸ್ವಿಯಾಗಿ ಉಪಕ್ರಮಿಸಿ 26 ಕಂತುಗಳನ್ನು ಪೂರೈಸಿದೆ. ಇಂತಹ ಕಾರ್ಯಕ್ರಮ ಅನೇಕ ರೀತಿಯ ಶ್ರದ್ಧೆ ಮತ್ತು ಪರಂಪರೆಯ ಕುರಿತಾದ ಗೌರವಗಳನ್ನು ಅಪೇಕ್ಷಿಸುವಂತದಾಗಿದ್ದು, ಇತರ ಯಾವುದೇ ಭಾಷೆಗಳಲ್ಲಿ ಇದುವರೆಗೆ ಇಂತದ್ದು ಆಗಿದೆ ಎಂದು ಕೇಳಿಬಂದಿಲ್ಲದೆ, ಕನ್ನಡದಲ್ಲಾಗುತ್ತಿರುವ ವಿಶಿಷ್ಟ ಪ್ರಯತ್ನ ಎಂಬುದು ಸಂತೋಷ ತರುವ ವಿಷಯವಾಗಿದೆ. ಈ ಕಾರ್ಯಕ್ರಮ ಪ್ರತಿ ಶುಕ್ರವಾರ ಬೆಳಿಗ್ಗೆ 7.15ಕ್ಕೆ ರಾಜ್ಯಾದ್ಯಂತ ಪ್ರಸಾರದಲ್ಲಿ ಹಾಗೂ ಪ್ರತಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಎಫ್ ಎಮ್ ರೇಡಿಯೋ ರೈನ್ಬೊ ಕನ್ನಡ ಕಾಮನಬಿಲ್ಲು ಮೂಲಕ ಪ್ರಸಾರವಾಗುತ್ತಿದೆ. ಯ್ಯೂಟ್ಯೂಬ್ನಲ್ಲಿ ಇದರ ಇದುವರೆಗೆ ಪ್ರಸಾರವಾಗಿರುವ ಕಂತುಗಳನ್ನು ಕೇಳಬಹುದು.
ನಮ್ಮ ಕಾಲದ ಅವಿಸ್ಮರಣೀಯ ಭಾಗ ಆಕಾಶವಾಣಿ. ಆಕಾಶವಾಣಿ ನಮಗೆ ಇದ್ದ ಪ್ರಮುಖ ಸುದ್ಧಿ ಮಾಧ್ಯಮ, ಪ್ರಮುಖ ಮನರಂಜನೆ, ಪ್ರಮುಖ ಸಾಂಸ್ಕೃತಿಕ ಲೋಕದ ಕೊಂಡಿ. 'ನುಡಿ ತೇರನೆಳೆದವರು ಬಾನುಲಿ ಕಲಿಗಳು' ಎಂಬುದು ಭಾರತದಲ್ಲಿ ರೇಡಿಯೋ ಯಾನದ ಸುಮಾರು ಒಂದು ಶತಮಾನ ಕಾಲಘಟ್ಟದ ನುಡಿ ಚಿತ್ರಾವಳಿಗೆ, ಆಕಾಶವಾಣಿ ಪ್ರಸಾರ ಹಾದಿಯ ಧ್ವನಿ ವಿಹಾರಕ್ಕೆ ಮತ್ತು ನೆನಪಿನ ಸಂಚಾರಕ್ಕೆ ನಮ್ಮನ್ನು ವಿಶಿಷ್ಟ ರೀತಿಯಲ್ಲಿ ಕೊಂಡೊಯ್ಯುವಂತದ್ದಾಗಿದೆ.
ಮಹಾತ್ಮ ಗಾಂಧೀ ಅವರು ಆಕಾಶವಾಣಿಗಾಗಿ ನುಡಿದ ಮಾತುಗಳು ಮತ್ತು ಅವರಿಷ್ಟದ ಪ್ರಾರ್ಥನೆ 'ವೈಷ್ಣವ ಜನತೊ' ಇಂದ, 1947ರ ಪ್ರಥಮ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪಂಡಿತ್ ಜವಹರಲಾಲ್ ನೆಹರೂ ಅವರ ಮಧ್ಯರಾತ್ರಿಯ ಭಾಷಣ; ರಾಷ್ಟ್ರಕವಿ ಕುವೆಂಪು, ವರಕವಿ ದ. ರಾ. ಬೇಂದ್ರೆ, ವರನಟ ರಾಜ್‍ಕುಮಾರ್ ಅವರೊಡನೆ ಸಂದರ್ಶನ ಮುಂತಾದವುಗಳೊಂದಿಗೆ ತೆರೆದುಕೊಂಡ ಪ್ರಥಮ ಸಂಚಿಕೆಯಿಂದಲೇ ಈ ಕಾರ್ಯಕ್ರಮ ಮನಸೆಳೆಯುತ್ತಾ ಬಂದಿದೆ.
ಈ ಕಾರ್ಯಕ್ರಮದ ಕಂತುಗಳಲ್ಲಿ ಆಕಾಶವಾಣಿಯಲ್ಲಿ ಮೂಡಿಬಂದ ವೈಶಿಷ್ಟ್ಯಗಳಾದ ಬಿನಾಕಾ ಗೀತ್ ಮಾಲಾ, ವಿವಿಧ್ ಭಾರತಿ ಸೊಬಗುಗಳು,
ವೀಕ್ಷಕ ವಿವರಣೆ, ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ, ಮಾತು, ಚಿಂತನ, ಭಾಷಣ,
ಸಾಹಿತ್ಯ, ವೈವಿಧ್ಯಮಯ, ಸುದ್ಧಿ, ಸಿನಿಮಾ, ನಾಟಕ ಎಲ್ಲವುಗಳ ರಸಯಾತ್ರೆ ಹಿತಮಿತವಾಗಿ ಮೂಡಿ, ಆಕಾಶವಾಣಿಯ ಯಾನದ ಎಲ್ಲ ಮಜಲುಗಳನ್ನು ಆ ಯಾನದ ತೇರನ್ನೆಳೆದ ವಿಶಿಷ್ಟ ವ್ಯಕ್ತಿಗಳ ಸ್ಮರಣೆಯ ಸುತ್ತಾ ಹೆಣೆದಿರುವುದು ಆಕರ್ಷಣೀಯವಾಗಿರವುದರ ಜೊತೆಗೆ ಶ್ರೋತೃಗಳನ್ನು ಕೂಡಾ ಅವರವರ ಕಾಲಘಟ್ಟದ ಆಕಾಶವಾಣಿಯ ಕಾರ್ಯಕ್ರಮಗಳ ಜೊತೆಗೆ ತಮ್ಮನ್ನು ಕಂಡುಕೊಳ್ಳುವ ಹಾಗೆ ಮಾಡುವಂತಿವೆ.
ಆಕಾಶವಾಣಿಯ ನುಡಿತೇರನೆಳೆದ ಇದುವರೆಗೆ ಪ್ರಸಾರವಾಗಿರುವ ಬಾನುಲಿಕಲಿಗಳಲ್ಲಿ ರೇಡಿಯೋ ಪ್ರಸಾರಕ್ಕೆ 1935ರ ಸೆಪ್ಟೆಂಬರ್ 10ರಂದು ತಮ್ಮ ಸ್ವಂತ ಖರ್ಚಿನಲ್ಲಿ ಸಾಂಸ್ಕೃತಿಕ ಆಸಕ್ತಿ ಶ್ರದ್ಧೆಗಳಿಂದ ಪ್ರಾರಂಭಕೊಟ್ಟ ಎಂ. ಎಸ್. ಗೋಪಾಲಸ್ವಾಮಿ ಅವರಿಂದ ಮೊದಲುಗೊಂಡು, ಪದ್ಮಚರಣ್, ವಸಂತ ಕವಲಿ, ಎಚ್. ಕೆ. ರಂಗನಾಥ್, ವೀಣೆ ದೊರೆಸ್ವಾಮಿ ಅಯ್ಯಂಗಾರ್, ಯಮುನಾ ಮೂರ್ತಿ, ಜ್ಯೋತ್ಸ್ನಾ ಕಾಮತ್, ಎಂ. ಆರ್. ಲಕ್ಷ್ಮೀಬಾಯಿ, ಎಚ್. ಆರ್. ಲೀಲಾವತಿ, ಎನ್ಕೆ ಕುಲಕರ್ಣಿ, ಎಂ. ಎಸ್ ಶ್ರೀಹರಿ, ಆರ್. ಕೆ. ಶ್ರೀಕಂಠನ್, ಎಚ್. ವಿ. ರಾಮಚಂದ್ರ ರಾವ್, ಎಚ್. ಎಸ್. ಪಾರ್ವತಿ, ಎಸ್. ಕೃಷ್ಣಮೂರ್ತಿ, ಎನ್. ಎಸ್. ವಾಮನ್, ಕೆ. ಎಸ್. ನಿರ್ಮಲಾದೇವಿ, ಎ. ಎಸ್ ಮೂರ್ತಿ, ಎನ್. ಎಸ್. ಕೃಷ್ಣಮೂರ್ತಿ, ಎಂ. ಎಸ್. ಕೆ. ಪ್ರಭು, ಜಿ. ಎಂ. ಶಿರಹಟ್ಟಿ, ಎಚ್. ಕೆ. ನಾರಾಯಣ, ಎಲ್‍ಜಿ ಸಹೋದರಿಯರು ಮೊದಲಾದವರ ಕುರಿತ ವಿಶಿಷ್ಟ ಸ್ಮರಣೆಗಳಿವೆ.
ಮೇಲ್ಕಂಡವರ ಸೇವಾ ಸ್ಮರಣೆಗಳು ಕೇವಲ ವ್ಯಕ್ತಿ ಚಿತ್ರಣಗಳ ಓದುವಿಕೆಯಾಗದೆ, ಆಗಿನ ಯುಗದ ಆಕಾಶವಾಣಿಯ ಹೆಜ್ಜೆಗಳು, ಸವಾಲುಗಳು, ಸೃಜನಶೀಲ ಚಿಂತನೆಗಳು, ಕಾರ್ಯಕ್ರಮ ವೈವಿಧ್ಯಗಳಾದ ವಾರ್ತೆ, ಭಾಷಣ, ಚಿಂತನೆ, ನಾಟಕ, ಸಂಗೀತ ವೈವಿಧ್ಯ ಇವೆಲ್ಲವುಗಳ ತುಣುಕುಗಳ ಸಂಮಿಶ್ರಣದ ಸುಮಧುರ ರಸದೌತಣದ ಪರಿಚಯವನ್ನು ಸೊಗಸಾಗಿ ಉಣಬಡಿಸುತ್ತಿದೆ. ಇಂದಿನ ಯುಗದ ಎಫ್ ಎಮ್ ರೇಡಿಯೋ ವಲಯಗಳು, ವಿವಿಧ ಕಿರುತೆರೆಯ ಪ್ರಸಾರವಾಹಿನಿಗಳಲ್ಲಿ ಕಾಡುವ
ಕನ್ನಡದ ಪ್ರಸಾರದಲ್ಲಿ ಭಾಷಾ ಶುದ್ಧತೆಯ ಅಭಾವ, ಕರ್ಕಷ ಕಂಗ್ಲಿಷ್ ಬಳಕೆ ಮುಂತಾದವುಗಳ ಕಿರಿಕಿರಿ ಕಾಡುವಾಗ, ಅಂದಿನ ನಮ್ಮ ಯುಗದ ಕನ್ನಡದ ಪರಿಮಳ ಎಷ್ಟು ಸೊಗಸಾಗಿತ್ತು ಎಂಬುದನ್ನು ನೆನಪಿಸುವ ಪಯಣಕ್ಕೆ 'ಈ ನುಡಿತೇರನೆಳೆದವರು ಬಾನುಲಿ ಕಲಿಗಳು' ಕಾರ್ಯಕ್ರಮ ನಮ್ಮನ್ನು ಕೊಂಡೊಯ್ದಿದೆ ಎಂಬುದು ಸಂತಸದ ವಿಷಯ.
ಕನ್ನಡದ ಶುದ್ಧ ಬಳಕೆ ಎಂದರೆ ನಮಗೆ ನೆನಪಾಗುವುದು ಆಕಾಶವಾಣಿ. ಇಲ್ಲಿನ ವಾರ್ತೆಗಳು, ಕವಿಗೋಷ್ಟಿಗಳು, ಹಬ್ಬದ ವಿಶೇಷ ಪ್ರಸಾರಗಳು, ಶ್ರೇಷ್ಟರೊಂದಿಗಿನ ಸಂದರ್ಶನಗಳು, ವಿಜ್ಞಾನ, ಸಾಹಿತ್ಯ, ಉದ್ಯಮ, ಕೃಷಿ, ಶಿಕ್ಷಣ, ಸಂಗೀತ, ನಾಟಕ, ಕ್ರೀಡೆ, ಚಲನಚಿತ್ರ ಮನರಂಜನೆ, ಹೀಗೆ ಏನೆನ್ನೇ ತೆಗೆದುಕೊಂಡರೂ ಆಕಾಶವಾಣಿ ಎಂಬುದು ನಮ್ಮ ಕಾಲದ ಆತ್ಮೀಯ ಒಡನಾಡಿಯಾಗಿತ್ತು ಎಂಬುದು ಮರೆಯಲಾರದ ಸವಿನೆನಪು. ಈ ನೆನಪುಗಳನ್ನು ನಮ್ಮೊಡನೆ ಇರುವಂತೆ ಮಾಡಿದ 'ನುಡಿತೇರನೆಳೆದ ಬಾನುಲಿಕಲಿಗಳನ್ನು' ಸ್ಮರಿಸುವ ಅವಕಾಶ ಹೃದಯಕ್ಕೆ ಆಪ್ತ ಸ್ಪರ್ಶ ನೀಡುವಂತದ್ದು.
ಇಂತಹ ಒಂದು ಕಾರ್ಯಕ್ರಮದ ಚಿಂತನೆಯನ್ನು ಮಾಡಿದ್ದಕ್ಕೆ ಬೆಂಗಳೂರು ಆಕಾಶವಾಣಿ ನಿಲಯ ನಿಜಕ್ಕೂ ಅಭಿನಂದನಾರ್ಹ. ಬೆಂಗಳೂರು ಆಕಾಶವಾಣಿ ನಿಲಯದ ಪ್ರಸಕ್ತ ನಿರ್ದೇಶಕರಾದ ಡಾ. ನಿರ್ಮಲ ಸಿ ಎಲಿಗಾರ್ ಅವರ ನೇತೃತ್ವ ಈ ಕಾರ್ಯಕ್ರಮದ ಬೆನ್ನಿಗಿದೆ ಎಂಬುದು ಈ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲೇ ಅವರ ಮಾತುಗಳಲ್ಲಿರುವ ಸಂತಸದಿಂದ ಮನದಟ್ಟಾಗುವಂತಿದೆ.
ಕಾರ್ಯಕ್ರಮದ ಪರಿಕಲ್ಪನೆ, ನಿರೂಪಣಾ ಸಾಹಿತ್ಯ ಮತ್ತು ನಿರ್ಮಾಣವನ್ನು ಮಾಡಿರುವ ಬಿ. ಕೆ. ಸುಮತಿ ಅವರ ಪರಿಶ್ರಮ ಅಸಾಮಾನ್ಯವಾದದ್ದು. ಈ ಕಾರ್ಯಕ್ರಮದ ನಿರ್ವಹಣೆಗೆ ಡಾ. ಎ. ಎಸ್. ಶಂಕರನಾರಾಯಣ ಅವರ ನಿರ್ವಹಣೆ ಇದೆ.
ಇದುವರೆಗಿನ ಸಂಚಿಕೆಗಳ ಕೊಂಡಿ ಇಲ್ಲಿದೆ: ನುಡಿ ತೇರನೆಳೆದವರು ಬಾನುಲಿ ಕಲಿಗಳು
A great program on past glories of Akashavani
All episode s very meaning full she done nicely credit goes to sumathi only
ಪ್ರತ್ಯುತ್ತರಅಳಿಸಿStolen programme from air bengalure YouTube channel copyright issue,you should have shared the link,!this is radio property
ಪ್ರತ್ಯುತ್ತರಅಳಿಸಿWhat is stolen here? What I had given is the link of Youtube links published by AIR. I have nothing to do with the program or AIR property. I have a right to appreciate the pgoram by AIR as an admirer of AIR programs. No property is in this article that belong to AIR. If you have any issue talk to AIR
ಅಳಿಸಿWhen someone clicks the link nothing can be listened in this blog. The people will go and listen in AIR link in youtube only my dear Sir.
ಅಳಿಸಿ