ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಖದೇವ್ ಥಾಪರ್


 ಸುಖದೇವ್ ಥಾಪರ್


ಭಾರತದ ಮಹಾನ್ ಕ್ರಾಂತಿಕಾರಕ ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ಮತ್ತು ರಾಜಗುರು ಅವರ ಒಡನಾಡಿ ಸುಖದೇವ್ ಅವರು 1907ರ ಮೇ 15 ರಂದು ಜನಿಸಿದರು. ಅವರ ಪೂರ್ಣ ಹೆಸರು ಸುಖದೇವ್ ಥಾಪರ್.  ತಂದೆ ರಾಮ ಲಾಲ್.  

ಚಿಕ್ಕಂದಿನಿಂದ ಬ್ರಿಟಿಷರು ಭಾರತೀಯರ ಮೇಲೆ ಹೇರುತ್ತಿದ್ದ ದಬ್ಬಾಳಿಕೆ ದೌರ್ಜನ್ಯವನ್ನು ಕಂಡ ಸುಖದೇವ್ ಮಾನಸಿಕವಾಗಿ ಕ್ರಾಂತಿಕಾರಕ ಮನೋಭಾವವನ್ನು ಬೆಳೆಸಿಕೊಂಡರು.  ಯೌವನದ ಪರ್ವ ಕಾಲದಲ್ಲಿ ಉಳಿದ ಯುವಕರು ತಮ್ಮ ವೈಯಕ್ತಿಕ ಕನಸುಗಳ ಬಗೆಗೆ ಮೋಹ ಪರವಶರಾಗಿದ್ದರೆ ಈ ಯುವಕ ತಮ್ಮ ದೇಶದ ದಾಸ್ಯವನ್ನು ಕಿತ್ತೊಗೆಯುವ ಕನಸು ಕಂಡರು.

ಬ್ರಿಟಿಷರ ದುರಾಡಳಿತದ ಬಗ್ಗೆ ಹೋರಾಡಲು ಸುಖದೇವ್ ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸೇರಿಕೊಂಡರು.  ಅಲ್ಲಿ ಸದಸ್ಯರಾಗಿ ಹೆಸರು ನೊಂದಾಯಿಸಿ ಸುಮ್ಮನಿರಲಿಲ್ಲ.  ಇಡೀ ಪಂಜಾಬಿನಲ್ಲಿ ಮತ್ತು ಉತ್ತರ ಭಾರತದ ಹಲವಾರು ಪ್ರದೇಶಗಳಲ್ಲಿ ಬಿರುಗಾಳಿಯಂತೆ ಸಂಚರಿಸಿ ದೇಶಕ್ಕಾಗಿ ಹೋರಾಡಬಲ್ಲ ಯುವಜನರ ತಂಡವನ್ನು ಕಟ್ಟಿದರು.   ಲಾಹೋರಿನ ನ್ಯಾಶನಲ್ ಕಾಲೇಜಿಗೆ ಹೋಗಿ ಯುವಜನರಿಗೆ ದೇಶಕ್ಕಾಗಿ ಹೋರಾಡಲು ಕರೆಕೊಟ್ಟರು.  ಭಾರತದ ಭವ್ಯ ಪರಂಪರೆಗಳ ಬಗ್ಗೆ ಯುವಜನರ ಮನಸ್ಸಿಗೆ ನಾಟುವಂತೆ  ತಿಳುವಳಿಕೆ ನೀಡಿದರು.  ಇತರ ಕ್ರಾಂತಿಕಾರಿಗಳ ಜೊತೆಗೂಡಿ  ಲಾಹೋರಿನಲ್ಲಿ ‘ನವಜವಾನ್ ಭಾರತ್ ಸಭಾ’ ಎಂಬ ತಂಡವನ್ನು ಕಟ್ಟಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಟ ನಡೆಸಲು ಯುವ ಪಡೆಯನ್ನು ಕಟ್ಟಿದರು.    

ಸುಖದೇವ್ ಇತರರಿಗೆ ಬೋಧಿಸುವುದು ಮಾತ್ರವಲ್ಲದೆ ನೇರವಾಗಿ ಸ್ವಯಂ ಕ್ರಾಂತಿಕಾರಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು.  ಅವುಗಳಲ್ಲಿ ಪ್ರಮುಖವೆಂದರೆ 1928ರಲ್ಲಿ ನಡೆದ ಲಾಹೋರ್ ಒಳಸಂಚು ಮತ್ತು  1929ರಲ್ಲಿ  ನಡೆಸಿದ ‘ಸೆರೆಮನೆಯ ಉಪವಾಸ ಸತ್ಯಾಗ್ರಹ’.   ‘ಲಾಹೋರ್ ಒಳಸಂಚು’ ಅಥವಾ ‘ಲಾಹೋರ್ ಕಾನ್ಸ್ಪಿರೆಸಿ ಕೇಸ್’ ಎಂದು ಪ್ರಸಿದ್ಧಿ ಪಡೆದ ಪ್ರಕರಣವಂತೂ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲ್ಲಾಡಿಸಿದಂತಹ ಘಟನೆಯಾಗಿದೆ.  ಸುಖದೇವ್ ಅವರು ಭಗತ್ ಸಿಂಗ್ ಮತ್ತು ಶಿವರಾಮ್ ರಾಜಗುರು ಅವರ ಜೊತೆಗೂಡಿ ಲಾಲಾ ಲಜಪತರಾಯರನ್ನು ಲಾಟಿ ಏಟಿನಿಂದ ಕೊಂದ ಬ್ರಿಟಿಷ್ ಪೋಲೀಸ್ ಕಾರ್ಯಾಚರಣೆಯ ಪ್ರತೀಕವಾಗಿ ಬ್ರಿಟಿಷ್ ಪೋಲೀಸ್ ಅಧಿಕಾರಿಯಾದ ಜೆ ಪಿ ಸಾಂಡರ್ಸ್ ಎಂಬಾತನನ್ನು ಹತ್ಯೆಗೈದರು.  1929ರಲ್ಲಿ ನವದೆಹಲಿಯ ಸೆಂಟ್ರಲ್ ಅಸೆಂಬ್ಲಿ ಹಾಲಿನಲ್ಲಿ ಬಾಂಬ್ ಎಸೆದ ಘಟನೆಯಲ್ಲಿ ಈ ಮೂರ್ವರಿಗೂ ಬ್ರಿಟಿಷ್ ಆಡಳಿತ ಮರಣ ದಂಡನೆ ವಿಧಿಸಿತು.

ಹೀಗೆ ಮಾರ್ಚ್ 23, 1931ರಂದು ಈ ಮೂರ್ವರು ಮಹಾನ್ ಯುವಕರಾದ ಭಗತ್ ಸಿಂಗ್, ಸುಖದೇವ್ ಥಾಪರ್, ಶಿವರಾಮ್ ರಾಜಗುರು ನಗುನಗುತ್ತಾ ನೇಣುಗಂಬದ ಹಗ್ಗದ ಕುಣಿಕೆಗೆ ತಮ್ಮ ಕೊರಳೊಡ್ಡಿದರು.     ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಂಡಾಗ ಈ ಯುವ ಮಹಾತ್ಮ ಸುಖದೇವರ ವಯಸ್ಸು ಕೇವಲ 24.  ಈ ಮಹಾತ್ಮನ ಚೇತನಕ್ಕೆ ಪಾದಾಭಿವಂದನೆಗಳು.

On the birth anniversary of great revolutionary freedom fighter Sukhdev Thapar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ