ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಾಸುದೇವಾಚಾರ್ಯ


ಮೈಸೂರು  ವಾಸುದೇವಾಚಾರ್ಯ


1980ರ ದಶಕದಲ್ಲಿ ಸಂಗೀತಾಭಿರುಚಿಯ ಪ್ರದರ್ಶನದಿಂದ ಅಪಾರ ಪ್ರಸಿದ್ಧ ಪಡೆದ ‘ಶಂಕರಾಭರಣಂ’ ಚಿತ್ರದಲ್ಲಿ ಶಂಕರಶಾಸ್ತ್ರಿ ಪಾತ್ರ ಮೈಸೂರು ವಾಸುದೇವಾಚಾರ್ಯರ ಕೃತಿ ‘ಬ್ರೋಚೇವಾರೆವರುರ’ ಎಂಬ ಗೀತೆಯ ಕುರಿತು ಹೇಳುವ ಮಾತು ನೆನಪಿಗೆ ಬರುತ್ತಿದೆ: "ಆರ್ದ್ರತೆಯಿಂದ ಕೂಡಿರುವ ಈ ಗೀತೆ ಅಧ್ಯಾತ್ಮದ ನಾದಗಂಗೆಯಂತೆ ತಾನೇ ತಾನಾಗಿ, ಒಬ್ಬ ಪರಮಪುರುಷನ ಹೃದಯಾಳದಲ್ಲಿ ಮೂಡಿ ಬಂದಿರುವ ಅಪೂರ್ವ ಸೃಷ್ಠಿ!". ಈ ಮಾತುಗಳು, ಈ ಸಂಗೀತ ಲೋಕದ ಪರಮಾಚಾರ್ಯರನ್ನು ಎಂತಹ ಪರಮೋಚ್ಚ ಪೀಠದಲ್ಲಿರಿಸಿ ಪೂಜಿಸುತ್ತಿದೆ ಎಂಬುದಕ್ಕೆ ಒಂದು ನಿದರ್ಶನವಾಗಿದೆ.

ಕರ್ನಾಟಕ ಸಂಗೀತದ ಮಹಾನ್ ತೇಜಸ್ವಿ ವಿದ್ವಾಂಸ, ವಾಗ್ಗೇಯಕಾರ, ಗಾಯಕರಾದ ಮೈಸೂರು ವಾಸುದೇವಾಚಾರ್ಯರು 1865ರ ಮೇ 28ರಂದು ಜನಿಸಿದರು.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ಶ್ರೇಷ್ಠ ವಾಗ್ಗೇಯಕಾರರ ಪಂಕ್ತಿಯಲ್ಲಿ ಶಾಶ್ವತವಾದ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. ಹತ್ತಾರು ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದಾರೆ. ನೂರಾರು ಸಭೆಗಳಿಗೆ ಗಾನಾನಂದ ಸಮಾರಾಧನೆಯನ್ನು ಮಾಡಿದ್ದಾರೆ.

ವಾಸುದೇವಾಚಾರ್ಯರದು ಭಾವ ಸಂಗೀತ. ಅವರಿಗೆ ಸಂಗೀತ ವಿದ್ಯೆ, ಕುಲವೃತ್ತಿಯಾಗಿ ಬಂದದ್ದಲ್ಲ. ಅದು ಅವರ ಸ್ವಂತ ಇಷ್ಟದಿಂದ ಸಂಪಾದಿಸಿಕೊಂಡ ಭಾಗ್ಯ. ಸ್ವಭಾವತಃ ಭಾವಜೀವಿಯಾದ ಆಚಾರ್ಯರಿಗೆ, ಮಹಾಕಾವ್ಯ ವ್ಯಾಸಂಗದಿಂದ ಭಾವಸಂಸ್ಕಾರವಾಗಿತ್ತು. ಆ ಭಾವರಸ ಅವರ ಸಂಗೀತದಲ್ಲಿ ನಾದ ಪ್ರವಾಹವಾಯಿತು. ವರ್ಣ ಹಾಡಿದರೂ ಅದರಲ್ಲಿ ಭಾವ ವೈಖರಿ ಎದ್ದು ಕಾಣುವಂತಹ ಸಂಗೀತ ಅವರದು.

ವಾಸುದೇವಾಚಾರ್ಯರ ಗಾಯನವನ್ನು ಹಲವಾರು ಸಲ ಕೇಳಿ ಆನಂದಿಸಿದ ಡಿ.ವಿ.ಜಿಯವರು ಅವರ ಗಾಯನದ ಹಿರಿಮೆಯನ್ನು ಕುರಿತು ಆಡಿರುವ ಈ ಕೆಲವು ಮಾತುಗಳು ಮನನೀಯವಾಗಿವೆ: “ವಾಸುದೇವಾಚಾರ್ಯರ ಗಾಯನ, ಜೀವವನ್ನು ತೊಳೆದು ಆತ್ಮಕ್ಕೆ ದಿವ್ಯ ದರ್ಶನವನ್ನು ಉಂಟುಮಾಡುವಂತಹ ಉನ್ನತಮಟ್ಟದ ಸಂಗೀತ. ಆ ಸಂಗೀತ ಕ್ಷಣಿಕ ಪ್ರಪಂಚವನ್ನು ಮರೆಯಿಸಿ ದಿವ್ಯ ಧ್ಯಾನದಲ್ಲಿ ಮನಸ್ಸನ್ನು ಲೀನ ಮಾಡಬಲ್ಲದು. ಅಂಥ ಸಂಗೀತ ಕೇಳುವಾಗ ಮತ್ತು ನೆನೆಯುವಾಗ ಮನಸ್ಸು ಅನುಭವಿಸುವ ಬಿಡುಗಡೆಯೂ ಏಕಾಂತೋನ್ನತಿಯೂ ಮೋಕ್ಷವೆಂಬುದಲ್ಲದಿದ್ದರೆ ಆ ಶಬ್ಧದ ಅರ್ಥಕ್ಕೆ ಭೂಲೋಕದಲ್ಲಿ ಬೇರೆ ಉದಾಹರಣೆ ಯಾವುದುಂಟೋ ಅದನ್ನು ಕಂಡವರಿಲ್ಲ”

ವಾಸುದೇವಾಚಾರ್ಯರ ಶ್ಲೋಕ ಗಾಯನದ ಬಗೆಗೂ ಡಿ.ವಿ.ಜಿಯವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ: “ವಾಸುದೇವಾಚಾರ್ಯರ ಶ್ಲೋಕ ಗಾಯನದ ಸೊಗಸು ಅತಿಶಯವಾದದ್ದು. ಅದು ಗಾಯಕರಲ್ಲಿ ಅಷ್ಟು ಹೆಚ್ಚಾಗಿ ದೊರೆಯುವುದು ಅಸಾಧ್ಯವೆನಿಸುತ್ತದೆ. ಆ ಸೊಗಸಿನ ಹುಟ್ಟು ಅವರ ಸಂಸ್ಕೃತ ಸಾಹಿತ್ಯ ಪರಿಶ್ರಮದಿಂದ ಬಂದದ್ದು. ಅವರ ಸಂಸ್ಕೃತ ಪದೋಚ್ಚಾರಣೆ ಅಕ್ಷರ ಜ್ಞಾನದಿಂದ ಬಲಪಟ್ಟದ್ದು. ಅವರು ಪ್ರತಿಯೊಂದು ಸಂಸ್ಕೃತ ಪದದ ಭಾವವನ್ನೂ, ಅಕ್ಷರ ಭಾವವನ್ನೂ ಸಹ ಸ್ವತಃ ಅನುಭವಿಸಿ ನುಡಿಯುತ್ತಿದ್ದರು. ಅಕ್ಷರ ಅಕ್ಷರದಲ್ಲಿಯೂ ಗಮಕ; ಅಕ್ಷರ ಅಕ್ಷರಕ್ಕೂ ನಡುವೆ ಗಮಕ. ಒಮ್ಮೆ ರಾಮೋತ್ಸವದಲ್ಲಿ ಆಚಾರ್ಯರು ಹಾಡಿದ “ಶಂಕರ ಗುರುವರಮಹಿಮಾ...” ಎಂಬ ರಾಗಮಾಲಿಕೆ ಬೆಂಗಳೂರು ರಸಿಕ ಪ್ರಪಂಚವನ್ನೇ ಸೂರೆಗೊಂಡಿತು. ಆಗ ಎಲ್ಲಿ ಹೋದರೂ ಆ ಹಾಡಿಕೆಯ ಪ್ರಶಂಸೆಯೇ.”

ಮೈಸೂರು ವಾಸುದೇವಾಚಾರ್ಯರು ಸಾಹಿತ್ಯ ಸಂಗೀತಗಳೆರಡರಲ್ಲೂ ಗಟ್ಟಿಗರೆಂಬುದು ಅವರ ಸಮಕಾಲೀನ ವಿದ್ವನ್ಮಣಿಗಳಿಗೆಲ್ಲಾ ವಿದಿತವಾಗಿತ್ತು. ಗುಣಗ್ರಾಹಿಗಳಾದ ಬಿಡಾರಂ ಕೃಷ್ಣಪ್ಪನವರು ಪರಸ್ಥಳಗಳಿಗೆ ಹೋಗಿ ಕಛೇರಿಮಾಡಿ, ಶ್ರೋತೃಗಳಿಂದ ಮೆಚ್ಚುಗೆ ಪಡೆದಾಗ ಅವರು “ನನ್ನ ಸಂಗೀತವನ್ನು ಕೇಳಿಯೇ ಇಷ್ಟು ಅಚ್ಚರಿ ಪಡುತ್ತಿದ್ದೀರಿ; ತಲೆದೂಗುತ್ತಿದ್ದೀರಿ. ನೀವು ಕೇಳಲೇಬೇಕಾದ ನಿಜವಾದ ಸಂಗೀತ ಬೇರೊಂದಿದೆ. ನಮ್ಮ ಆಸ್ಥಾನದಲ್ಲಿ ಸಂಗೀತ ಸಾಹಿತ್ಯಗಳೆರಡರಲ್ಲೂ ನಿಸ್ಸೀಮರಾದ ಹಿರಿಯರೊಬ್ಬರಿದ್ದಾರೆ. ಅವರನ್ನೊಮ್ಮೆ ನೀವು ಬರಮಾಡಿಕೊಂಡು ಅವರ ಗಾನ ಪ್ರತಿಭೆಯ ಅನುಭವ ಪಡೆಯಿರಿ” ಎಂದು ವಾಸುದೇವಾಚಾರ್ಯರ ಬಗ್ಗೆ ಹೇಳುತ್ತಿದ್ದರು.

ಒಮ್ಮೆ ವೀಣೆ ಶೇಷಣ್ಣನವರ ಮನೆಯಲ್ಲಿ ವಾಸುದೇವಾಚಾರ್ಯರ ಸಂಗೀತ. ಅಂದು ಆಚಾರ್ಯರು ಆಗ ತಾನೇ ಮಾಡಿ ಮುಗಿಸಿದ್ದ ಖರಹರಪ್ರಿಯರಾಗದ “ಗಾನ ಸುಧಾರಸ” ಎಂಬ ತಮ್ಮ ಕೀರ್ತನೆಯನ್ನು ಹಿರಿಯರಲ್ಲಿ ಸಮರ್ಪಿಸುವ ಉದ್ದೇಶದಿಂದ ಹಾಡಿದರು. ಆ ಕೀರ್ತನೆಯಲ್ಲಿ ‘ತ್ಯಾಗರಾಜ’ ಮತ್ತು ‘ವಾಸುದೇವ’ ಎಂಬ ಅಂಕಿತಗಳಿದ್ದುದರಿಂದ ಶೇಷಣ್ಣ ಮತ್ತು ಕೃಷ್ಣಪ್ಪನವರಲ್ಲಿ ಅದು ತ್ಯಾಗರಾಜರದ್ದೋ ಅಥವಾ ಆಚಾರ್ಯರದ್ದೋ ಎಂಬ ವಿಷಯದಲ್ಲಿ ಸ್ವಲ್ಪ ಜಿಜ್ಞಾಸೆ ಉಂಟಾಗಿ, ಪರಿಹಾರವಾಗದೆ ಆಚಾರ್ಯರನ್ನೇ ಕೇಳಿದಾಗ “ತಮ್ಮ ಅನುಗ್ರಹದಿಂದ ಇದೇ ತಾನೇ ನನ್ನಿಂದ ದೇವರು ಮಾಡಿಸಿದ್ದು, ಲೋಪದೋಷಗಳೇನಿದ್ದರೂ ತಿದ್ದಿಕೊಳ್ಳಲು ಸಿದ್ಧನಿದ್ದೇನೆ” ಎಂದು ವಿನಮ್ರರಾಗಿ ನುಡಿದರು.

ಅದನ್ನು ಕೇಳಿದ ಶೇಷಣ್ಣನವರು ಆನಂದತುಂದಿಲರಾಗಿ “ಈ ಸಂಗೀತ ಕೇಳಿದ ಮೇಲೆ ನನಗೆ ಊಟ ಉಪಚಾರಗಳು ಯಾವುವೂ ಬೇಕಿಲ್ಲ. ನನ್ನ ಕೃಷ್ಣದೇವರ ಬಳಿ ನಾನು ಮಲಗುತ್ತೇನೆ” ಎಂದರು. ಆಚಾರ್ಯರಿಗೆ ಹಾರಹಾಕಲು ಇಬ್ಬರಲ್ಲೂ ಪೋಟಾಪೋಟಿ ನಡೆಯಿತು.

ವಾಸುದೇವಾಚಾರ್ಯರ ಕಾರ್ಯಕ್ಷೇತ್ರ ಮುಪ್ಪುರಿಗೊಂಡು – ವಾಗ್ಗೇಯಕಾರರಾಗಿ, ಗಾಯಕರಾಗಿ, ಸಾಹಿತಿಯಾಗಿ – ಮೂರು ದಿಕ್ಕಿನಲ್ಲಿ ಮುಂದುವರೆದಿತ್ತು. ಈ ಮೂರೂ ಕ್ಷೇತ್ರಗಳಲ್ಲೂ ಅವರ ಸಾಧನೆ ಗಮನಾರ್ಹವಾಗಿದ್ದರೂ, ಅವರ ಹೆಸರು ಬಹಳವಾಗಿ ವಿದ್ವತ್ ಜನರ ಬಾಯಿಯಲ್ಲಿ ಕೇಳಿ ಬರುವುದು “ವಾಗ್ಗೇಯಕಾರ ವಾಸುದೇವಾಚಾರ್ಯ” ಎಂದೇ.

ಆಚಾರ್ಯರು ತಮ್ಮ 91ನೆಯ ಇಳಿ ವಯಸ್ಸಿನಲ್ಲಿ ಬರೆದ ‘ನಾ ಕಂಡ ಕಲಾವಿದರು’ ಎಂಬ ಅಪೂರ್ವ ಗ್ರಂಥದಲ್ಲಿ ಹೇಳಿಕೊಂಡಿರುವ (ಲೇಖಕನ ಮಾತು) ಕಳಕಳಿಯ ಈ ಮಾತುಗಳು ಅವರ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿವೆ.

“ನನಗೆ 90 ವರ್ಷಗಳು ತುಂಬಿ 91ನೆಯ ವರ್ಷ ಪ್ರಾರಂಭ. ಸುಮಾರು ನನ್ನ ಐದನೆಯ ವಯಸ್ಸಿನಲ್ಲಿ ನಾನು ‘ಸಪಸ’ ಕೂಗಿದ್ದು. ಅಲ್ಲಿಂದ ಇಲ್ಲಿಯ ತನಕ ಅಂದರೆ 85 ವರ್ಷಗಳ ಅವಧಿಯಲ್ಲಿ ಅನೇಕಾನೇಕ ಸುಪ್ರಸಿದ್ಧ ವಿದ್ವಾಂಸರುಗಳ ಸಂದರ್ಶನ ಪ್ರಾಪ್ತವಾಯಿತು ನನಗೆ. ಅವರಲ್ಲಿ ಕೆಲವರು ಗುರುಸ್ವರೂಪದವರು, ಮತ್ತೆ ಕೆಲವರು ಪರಮಮಿತ್ರರಾದವರು. ನನ್ನ ಜೀವನದ ಗುರಿ ಹಾಗೂ ಸಾಧನೆಗಳ ಮೇಲೆ ಈ ಮಹಾ ವ್ಯಕ್ತಿಗಳೆಲ್ಲಾ ಒಂದಲ್ಲ ಒಂದು ವಿಧದಲ್ಲಿ ಪ್ರಭಾವ ಬೀರಿದ್ದಾರೆ. ಹುಟ್ಟಿದ ದಿನವಾದ ಇಂದು ಅವರೆಲ್ಲರನ್ನೂ ಪೂಜ್ಯ ಭಾವನೆಯಿಂದಲೂ ಕೃತಜ್ಞತೆಯಿಂದಲೂ ಸ್ಮರಿಸಿಕೊಳ್ಳುವ ಉದ್ದೇಶದಿಂದ ಈ ಪುಟ್ಟ ಪುಸ್ತಕವನ್ನು ರೂಪಗೊಳಿಸಿದ್ದೇನೆ. ಇದೇ ಕನ್ನಡ ಬಂಧುಗಳಿಗೆ ನಾನು ನೀಡುತ್ತಿರುವ ಪ್ರಥಮ ಕಾಣಿಕೆ. ಆದ್ದರಿಂದ ಭಾಷೆ, ಶೈಲಿ, ವಿವರಣೆ ಮೊದಲಾದವುಗಳಲ್ಲಿ ನ್ಯೂನತೆಗಳು ಕಂಡು ಬರುವುದು ಸಹಜ. ವಾಚಕರು ಉದಾರ ಮನಸ್ಸಿನಿಂದ ವಿಷಯ ಗ್ರಹಣ ಮಾತ್ರ ಮಾಡಬೇಕಾಗಿ ಕೋರುತ್ತೇನೆ.”

ಆಚಾರ್ಯರು ತಮ್ಮ ಈ ಕೃತಿಯಲ್ಲಿ ಸಮಕಾಲೀನರಾದ ಹನ್ನೊಂದು ಮಂದಿ ಘನವೆತ್ತ ವಿದ್ವಾಂಸರ ಜೀವನ, ಸಿದ್ಧಿ ಸಾಧನೆಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಚಾರ್ಯರು ಈ ಕೃತಿಯನ್ನು ಬರೆಯದೆ ಹೋಗಿದ್ದಿದ್ದರೆ ಎಷ್ಟೋ ಮಂದಿ ಅವರ ತಲೆಮಾರಿನ ಸಂಗೀತ ವಿದ್ವಾಂಸರ ಬಗೆಗೆ ಅನೇಕ ಅಪರೂಪದ ಸಂಗತಿಗಳು ದೊರೆಯದೇ ಹೋಗುತ್ತಿತ್ತು.

‘ನಾ ಕಂಡ ಕಲಾವಿದರು’ ಕೃತಿಯನ್ನು ಹೊರತಂದ ಐದು ವರ್ಷಗಳ ನಂತರ ಆಚಾರ್ಯರು ‘ನೆನಪುಗಳು’ ಎಂಬ ಮತ್ತೊಂದು ಕೃತಿಯನ್ನು ಸಿದ್ಧಪಡಿಸಿ ಅದನ್ನು ತಮ್ಮ ತೊಂಬತ್ತೇಳನೆ ಜನ್ಮ ದಿನೋತ್ಸವದ ನೆನಪಾಗಿ, ಕನ್ನಡಿಗರಿಗೆ ಅರ್ಪಿಸಬೇಕೆಂಬ ಹಿರಿಯಾಸೆಯಿಂದ ಇದ್ದರು. ಅವರ ಮೊಮ್ಮಕ್ಕಳ ಸಹಕಾರದಿಂದ ಆಚಾರ್ಯರ ಆಸೆಯೇನೋ ನೆರವೇರಿತು. ಆದರೆ ನೆನಪುಗಳು ಕೃತಿ ಪ್ರಕಟವಾದದ್ದನ್ನು ನೋಡುವ ಭಾಗ್ಯ ಆಚಾರ್ಯರಿಗೆ ಬರಲಿಲ್ಲ. ಅವರು ತಮ್ಮ 97ನೆಯ ಜನ್ಮದಿನದ ಹಿಂದಿನ ದಿನ (ಮೇ 17, 1961) ತಮ್ಮ ದೈನಂದಿನ ಕಾರ್ಯಕ್ರಮಗಳನ್ನೆಲ್ಲಾ ನೆರವೇರಿಸಿ, ‘ಇಂಥ ಪ್ರಭುವ ಕಾಣೆನೋ’ ಎಂಬ ದೇವರನಾಮವನ್ನು ಕೇಳುತ್ತಲೇ ಶಾಂತವಾಗಿ ಮರಣವನ್ನಪ್ಪಿದರು.

ಆಚಾರ್ಯರು ನಿಧನರಾಗುವುದಕ್ಕೆ ಕೆಲವು ಘಂಟೆಗಳ ಮುಂಚೆ ಪಕ್ಕದಲ್ಲಿದ್ದ ಬೂದಲೂರು ಕೃಷ್ಣಮೂರ್ತಿ ಶಾಸ್ತ್ರಿಗಳನ್ನು ಸಮೀಪಕ್ಕೆ ಕರೆದು “ಶಾಸ್ತ್ರಿಗಳೇ! ನಾನು ಬಂದ ಕೆಲಸವಾಯಿತು. ನಾನಿನ್ನು ಹೋಗಿ ಬರುತ್ತೇನೆ. ನನ್ನ ಕೊನೆಯ ಒಂದು ಮಾತನ್ನು ನೀವು ನಡೆಸಿಕೊಡಬೇಕು. ಎಲ್ಲ ಸಂಗೀತ ವಿದ್ವಾಂಸರಿಗೂ – ಅವರು ಚಿಕ್ಕವರಾಗಿರಲಿ ದೊಡ್ಡವರಾಗಿರಲಿ ನನ್ನ ನಮಸ್ಕಾರಗಳನ್ನು ತಿಳಿಸಬೇಕು. ಎಂದರೋ ಮಹಾನುಭಾವುಲು! ಎಲ್ಲರ ಆಶೀರ್ವಾದದ ಬಲದಿಂದ ಮುಂದಿನ ಜನ್ಮದಲ್ಲಾದರೂ ನನಗೆ ನಿಜವಾದ ಸಂಗೀತ ಬರುವಂತಾಗಬೇಕು” ಎಂದರು.

ಆಚಾರ್ಯರ ಈ ಮಾತುಗಳನ್ನು ಕೇಳಿದರೆ ಯಾರಿಗೇ ಆಗಲಿ ಹೃದಯ ಮಿಡಿದು, ಕಣ್ಣು ತೇವವಾಗುತ್ತದೆ. ಆಚಾರ್ಯರು ತಾವು ಬದುಕಿ ಬಾಳಿದ ತೊಂಬತ್ತೇಳು ವರ್ಷಗಳ ಬಾಳಿನಲ್ಲಿ ಸಾರ್ಥಕ ಜೀವನವನ್ನು ನಡೆಸಿದರು. ಅವರ ಎರಡನೆಯ ಕೃತಿ ‘ನೆನಪುಗಳು’ ಎಂಬ ಕೃತಿಯಲ್ಲಿ ಆಚಾರ್ಯರಿಗೆ ಅರಮನೆಯ ಪ್ರವೇಶವಾದ ದಿನದಿಂದ ಹಿಡಿದು ಮುಂದೆ ಅವರು ಕೀರ್ತಿ ಶಿಖರವನ್ನು ಮುಟ್ಟಿದವರೆಗಿನ ಅನೇಕ ಚಿತ್ರಗಳಿವೆ. ಅಚಾರ್ಯರು ತಾವು ಕೆಲವು ಕೃತಿ ರಚನೆ ಮಾಡಲು ಕಾರಣವಾದ ಸನ್ನಿವೇಶಗಳನ್ನು ಇಲ್ಲಿ ಹೃದಯ ತುಂಬಿ ಬಣ್ಣಿಸಿದ್ದಾರೆ. ಗುರುಕುಲವಾಸದಲ್ಲಿ ಅವರಿಗೆ ಆದ ವಿನೂತನ ಅನುಭವಗಳ ಸೊಗಸನ್ನು ಸವಿಯಲು ಆಚಾರ್ಯರು ಬರೆದಿರುವ ‘ನಾ ಕಂಡ ಕಲಾವಿದರು’ ಕೃತಿಯಲ್ಲಿ ಬರುವ ‘ಪಟ್ನಂ ಸುಬ್ರಮಣ್ಯ ಅಯ್ಯರ್’ ಎಂಬ ನುಡಿ ಚಿತ್ರವನ್ನು ಓದಿಯೇ ನೋಡಬೇಕು.

ಶ್ರೀರಾಮ ಸಂಕೀರ್ತನದಿಂದ ಮೊದಲುಗೊಂಡು ನಡೆದು ಬಂದ ಆಚಾರ್ಯರ ಸಂಗೀತ ರಚನೆಯ ಕಾರ್ಯ ಇವರ ಇಳಿ ವಯಸ್ಸಿನಲ್ಲಿ ಶ್ರೀಮದ್ ರಾಮಾಯಣದ ನೃತ್ಯ ನಾಟಕ ಸಂಗೀತ ಸಂಯೋಜನೆಗೆ ಮೀಸಲಾಗಿತ್ತು – ಎನ್ನುವಂತಿದೆ. ‘ನನ್ನ ಜೀವನದ ಒಂಬತ್ತು ದಶಕಗಳನ್ನು ಹುಟ್ಟಿ ಬೆಳೆದ ಮೈಸೂರಿನಲ್ಲಿ ಕಳೆದು, ಆ ಬಳಿಕ ಮದ್ರಾಸಿಗೆ ತೆರಳಿ, ಈ ಮಹತ್ಕಾರ್ಯಗಳನ್ನು ಕೈಗೊಳ್ಳುತ್ತೇನೆಂಬುದನ್ನು ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ’ ಎಂದು ಆಚಾರ್ಯರೇ ಹೇಳಿದ್ದಾರೆ. ಮದ್ರಾಸಿಗೆ ಆಚಾರ್ಯರನ್ನು ಅವರ ಇಳಿವಯಸ್ಸಿನಲ್ಲಿ ಬರಮಾಡಿಕೊಂಡು, ಅವರ ಸಂಗೀತ ಸಾರಾಮೃತದ ದಿವ್ಯ ಪಕ್ವ ಫಲವನ್ನು ಸಾರ್ಥಕ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬಯಸಿದ ಮಹನೀಯರಾದ ಟೈಗರ್ ವರದಾಚಾರ್ಯರನ್ನೂ, ತಮ್ಮನ್ನು ಹೆತ್ತ ತಂದೆಗಿಂತ ಹೆಚ್ಚು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಕಲಾಕ್ಷೇತ್ರದ ಶ್ರೀಮತಿ ರುಕ್ಮಿಣಿ ದೇವಿಯವರನ್ನೂ ಆಚಾರ್ಯರು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ. ಕಲಾಕ್ಷೇತ್ರದ ಉಪಯೋಗಕ್ಕೆಂದು ಕೆಲವು ನೃತ್ಯ ನಾಟಕಗಳನ್ನು ನುರಿತ ವಿದ್ವಾಂಸರಿಂದ ಮಾಡಿಸಬೇಕೆಂದು ಯೋಚಿಸಿದ್ದ ರುಕ್ಮಿಣಿ ದೇವಿಯವರು ಆಚಾರ್ಯರಿಗೆ ಇದ್ದ ರಾಮಾಯಣ ಪ್ರಸಂಗಗಳಲ್ಲಿಯ ಆಳವಾದ ಪಾಂಡಿತ್ಯ ಪ್ರತಿಭೆಗಳನ್ನು ಗಮನಿಸಿ ಶ್ರೀಮದ್ ರಾಮಾಯಣ ನೃತ್ಯ ನಾಟಕಕ್ಕೆ ಸಂಗೀತವನ್ನು ಅಳವಡಿಸುವಂತೆ ಆಚಾರ್ಯರನ್ನು ಪ್ರಾರ್ಥನಪೂರ್ವಕವಾಗಿ ಆಹ್ವಾನಿಸಿದರು.

ಸುಮಾರು ಏಳು ವರ್ಷಗಳ ಕಾಲವನ್ನು ಈ ಮಹತ್ಕಾರ್ಯಕ್ಕಾಗಿ ವಿನಿಯೋಗಿಸಿ ಅದರಲ್ಲಿ ತಮ್ಮ ‘ಕಲ್ಪನಾ ಶಕ್ತಿ, ಪಾಂಡಿತ್ಯ, ಪ್ರತಿಭೆ ಮುಂತಾದುವುಗಳನ್ನೆಲ್ಲಾ ಬಳಸಿ, ಕೀರ್ತನೆಗಳಿಗೆ ಬಳಸದಿರುವ ಚಿತ್ತ ಭ್ರಮರಿ, ಶೂಲಿನಿ, ಧಾತು ವರ್ಧಿನಿ – ಮುಂತಾದ ಹತ್ತಾರು ಅಪರೂಪದ ರಾಗಗಳನ್ನು ಬಳಸಿ – ರಾಮಾಯಣ ನೃತ್ಯ ನಾಟಕದ ಪ್ರತಿಯೊಂದು ಭಾಗವೂ ಹೃದಯ ಸ್ಪರ್ಶಿಯಾಗಿ, ರಸಭಾವಪೂರ್ಣವಾಗಿರುವಂತೆ ಮಾಡಿದರು. ಒಂದೊಂದೂ ಸುಮಾರು ಮೂರು ಘಂಟೆಯ ಅವಧಿಯ ಆರು ಭಾಗಗಳಿದ್ದು ಅದರಲ್ಲಿ ಮೂರು ಭಾಗಗಳು ಆಚಾರ್ಯರು ಬದುಕಿರುವಾಗಲೇ ಪೂರ್ಣಗೊಂಡು ಪ್ರದರ್ಶಿತವಾದವು. ಅಚಾರ್ಯರು ಒಂದೊಂದು ಭಾಗದಲ್ಲೂ ಸುಮಾರು 70-80 ರಾಗಗಳನ್ನು ಬಳಸಿ, ರಂಜಿಸಿ, ಕಡೆಯ ಎರಡು ಭಾಗಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಅವರು ಜೀವನ್ಮುಕ್ತರಾದರು. ರಾಮಾಯಣ ನೃತ್ಯ ನಾಟಕ ಆಚಾರ್ಯರ ಅಪೂರ್ವ ಸಂಗೀತ ಜ್ಞಾನದ ಪೂರ್ಣ ಫಲ.

ಮಾಹಿತಿ ಆಧಾರ: ಡಾ. ಕೆ. ಶ್ರೀಕಂಠಯ್ಯನವರ ‘ಸಂಗೀತ ಕಲೋಪಾಸಕರು’, ಮೈಸೂರು ವಾಸುದೇವಾಚಾರ್ಯರ ‘ನೆನಪುಗಳು’, ‘ಕೆಲವು ಮಹನೀಯರು’

On the birth anniversary of great musician and vaaggeyakaara (divine lyricist) Mysore Vasudevacharya 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ