ಕಮಲಾಕರ ಕಡವೆ
ಕಮಲಾಕರ ಕಡವೆ
ಕಮಲಾಕರ ಕಡವೆ ಕವಿಯಾಗಿ ಹೆಸರಾಗಿದ್ದಾರೆ. ವಿವಿಧ ಭಾಷೆಗಳ 600ಕ್ಕೂಹೆಚ್ಚು ಕವನಗಳನ್ನು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಾಗೆಯೇ ಕನ್ನಡದ ನೂರಾರು ಕವಿತೆಗಳನ್ನು ಇಂಗ್ಲಿಷಿಗೆ ತಂದಿದ್ದಾರೆ.
ಮೇ 28, ಕಮಲಾಕರ ಕಡವೆ ಅವರ ಜನ್ಮದಿನ. ಅವರು ಮೂಲತಃ ಉತ್ತರ ಕನ್ನಡದ ಶಿರಸಿಯ ಕಡವೆ ಗ್ರಾಮದವರು. ಪದವಿ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿ, ಮುಂದೆ ಪುಣೆಯಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಂಡರು.
ಕಮಲಾಕರ ಕಡವೆ ಅವರು ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ.
ಕಮಲಾಕರ ಕಡವೆ ಅವರು ತಮ್ಮದೇ ಬರವಣಿಗೆ ಆರಂಭಿಸಿ ನಂತರದಲ್ಲಿ ಅನುವಾದಕ್ಕೆ ತೊಡಗಿದರು. ಇವರು ಕಾಫ್ಕಾ ಅವರ 'ಬಿಫೋರ್ ದ ಲಾ' ಎಂಬ ಸಣ್ಣಪ್ಯಾರಬಲ್ ಅನ್ನು ಮೊತ್ತಮೊದಲು ಅಕಾಡೆಮಿಕ್ ಉದ್ದೇಶಕ್ಕಾಗಿ
ಅನುವಾದಿಸಿದರು. ಅಂತೆಯೇ ಕನ್ನಡದಿಂದ ಇಂಗ್ಲಿಷಿಗೂ ಅನುವಾದಿಸಿದರು. ಕ್ರಮೇಣ
ತಾವು ಓದುತ್ತಿದ್ದ ಕವನಗಳನ್ನೆಲ್ಲ ಆಪ್ತಗೊಳಿಸಿಕೊಳ್ಳುವ ಪ್ರಕ್ರಿಯೆಯಂತೆ ಅನುವಾದಕ್ಕೆ ತೊಡಗಿಕೊಂಡರು. ಮೊದಲು ಕನ್ನಡದಿಂದ ಇಂಗ್ಲಿಷ್‌ಗೆ ಎಸ್.
ಮಂಜುನಾಥ್ ಅವರ 50-60 ಕವನಗಳನ್ನು ಅನುವಾದ ಮಾಡಿದರು. ಬಳಿಕ ರಶೀದ್, ಕಾಯ್ಕಿಣಿ, ಎನ್.ಕೆ. ಹನುಮಂತಯ್ಯ ಅವರ ಕವನಗಳನ್ನೂ ಮಾಡಿದರು. ಕ್ರಮೇಣ ಅವು ಪ್ರಕಟಣೆಗೂ ಬಂದವು. ಇವಲ್ಲದೆ ಇನ್ನೂ ಹಲವಾರು ಕವಿಗಳ ನೂರಾರು ಬಿಡಿ ಕವಿತೆಗಳನ್ನೂ ಅನುವಾದ ಮಾಡಿದ್ದಾರೆ. ಇವರ ಕವಿತೆಗಳು ಎಲ್ಲ ಪ್ರಖ್ಯಾತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಕಮಲಾಕರ ಕಡವೆ ಅವರ "ಜಗದ ಜತೆ ಮಾತುಕತೆ" ಸಂಕಲನದ ಮುನ್ನುಡಿಯಲ್ಲಿ ಕವಿ ಡಾ. ಎಚ್. ಎಸ್. ಶಿವಪ್ರಕಾಶ್ ಹೀಗೆ ಹೇಳುತ್ತಾರೆ: "ಕಮಲಾಕರರದು ನವೋದಯದ ಈಚೆಗಿನ ಓದು ಮತ್ತು ಪ್ರಭಾವಗಳಿಂದ ತಯಾರಾದ ಒಂದು ಸ್ಪಷ್ಟ ಮತ್ತು ವಿಶಿಷ್ಟ ಸಂವೇದನೆ. ಆ ಸಂವೇದನೆಯಲ್ಲಿ ನವೋದಯದ ಭೌಮದ, ಅತೀತದ ಆವೇಶ, ಆಟಾಟೋಪಗಳಿಲ್ಲ. ನವ್ಯದ ನವಿರಾದ ವ್ಯಂಗ್ಯವಿಲ್ಲ. ತದನಂತರದ ಬಂಡಾಯದ ಕೂಗಾಟ, ರೇಗಾಟಗಳಿಲ್ಲ. ಮರ್ತ್ಯದ ಪರಿಧಿಯೊಳಗೆ, ಕ್ಷಣಭಂಗುರತೆಯ ಅವಧಿಯೊಳಗೆ ಹಾದು ಹೋಗುತ್ತಿರುವ ಜೀವಜಾತಗಳ ಲೋಕದ ಧ್ಯಾನದಿಂದೊದಗಿದ ಅನಿರೀಕ್ಷಿತ ಹೊಳಹುಗಳ, ಅಪರಿಚಿತ ಕೌತುಕಗಳ ಸೂಕ್ಷ್ಮ ನೋಟಗಳು ಈ ಕವಿತೆಗಳ ಮುಖ್ಯಪ್ರಾಣ. ಇದರ ಜೊತೆಗೆ ಜೀವಜಗತ್ತು, ಸಂಬಂಧಗಳ ಜೋಡಿ ಸದಾ ಸಂವಾದ ನಿರತವಾಗಿ ಹೊಸ ಅರ್ಥಗಳನ್ನು ಕಟ್ಟಿಕೊಳ್ಳುತ್ತಿದ್ದರೂ ತನ್ನ ವ್ಯಕ್ತಿತ್ವದ ಖಾಸಗಿತನವನ್ನೂ ಸ್ಲೋಗನ್ನುಗಳಿಗೆ ಮಣಿಯದ ಅಧಿಕೃತತೆಯನ್ನು ಕಾಪಾಡಿಕೊಳ್ಳುವ ಕಾರಣ ಕಮಲಾಕರರ ಕಾವ್ಯ ಹಿಂಸೆ ಮತ್ತು ಮೃತ್ಯು ಪರವಾಗಿ ಎಕ್ಕುಟ್ಟಿ ಹೋಗುತ್ತಿರುವ ನಮ್ಮ ಹೊತ್ತುಗೊತ್ತುಗಳಲ್ಲಿ ಬಾಳಿನಾಸೆಗೆ ಹಾಲನೆರೆಯುವ ಸಾರ್ಥಕ ಕೆಲಸ ಮಾಡುತ್ತಿದೆ".
ಕಮಲಾಕರ ಕಡವೆ ಅವರು 'ಚೂರುಪಾರು ರೇಶಿಮೆ', 'ಮುಗಿಯದ ಮಧ್ಯಾಹ್ನ' ಮತ್ತು 'ಜಗದ ಜತೆ ಮಾತುಕತೆ' ಎಂಬ ತಮ್ಮ ಕವಿತೆಗಳ ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ಪುತಿನ ಪ್ರಶಸ್ತಿ ಮತ್ತು ಬಿ.ಎಚ್.ಶ್ರೀಧರ ಪ್ರಶಸ್ತಿ ಸಂದಿವೆ.
ಕಮಲಾಕರ ಕಡವೆ ಅವರು ಭಾರತೀಯ ವಿವಿಧ ಭಾಷೆಗಳಿಂದ ಅನುವಾದಿಸಿದ 90 ಕವಿತೆಗಳ 'ಅಕ್ಕಪಕ್ಕದ ಪಾತರಗಿತ್ತಿ' ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಂಗದಿಂದ ಪ್ರಕಟಗೊಂಡಿದೆ. ಮರಾಠಿಯ ಹೇಮಂತ ದಿವಟೆ ಅವರ ಕವಿತೆಗಳ ಅನುವಾದವಾದ 'ನಕಲಿ ದಿಗಿಲು' ಕೃತಿಯಲ್ಲಿ ಅವರ ಎಚ್. ಎಸ್. ಶಿವಪ್ರಕಾಶ್ ಅವರೊಡನೆ ಕೆಲಸ ಮಾಡಿದ್ದಾರೆ. ಕುವೆಂಪು ಭಾಷಾ ಭಾರತಿಗಾಗಿ ನಾಮ್ ದೇವ ಢಸಾಳ್ ಅವರ 60 ಮರಾಠಿ ಕವಿತೆಗಳ ಅನುವಾದ ಮಾಡಿದ್ದಾರೆ. ಭಾರತದ ವಿವಿಧ ಭಾಷೆಗಳ ನಡುವೆ ಕೊಡು-ಕೊಳ್ಳುವಿಕೆ ಹೆಚ್ಚಬೇಕು ಎಂಬುದು ಕಮಲಾಕರ ಅವರ ಆಶಯ.
ಕಮಲಾಕರ ಕಡವೆ ಅವರಿಗೆ ಇಷ್ಟವಾದ ಭಾರತದ ಹೊರಗಿನ ಕವಿಗಳಲ್ಲಿ ಟಿ.ಎಸ್. ಎಲಿಯಟ್, ಬ್ಲೇಕ್, ನೆರುಡ, ಯೇಟ್ಸ್, ಅಮೆರಿಕದ ಕವಿಗಳಲ್ಲಿ ಜೇನ್ ಹರ್ಷ್ ಫೀಲ್ಡ್, ಲ್ಯಾಂಗ್ಟನ್ ಹ್ಯೂಸ್, ಆಕ್ಟೋವಿಯಾ ಪಾಝ್ ಮುಂತಾದವರ ದೊಡ್ಡ ಪಟ್ಟಿಯೇ ಇದೆ. ಕಮಲಾಕರ ಕಡವೆ ಅವರು ಕನ್ನಡಕ್ಕೆ ತಂದಿರುವ ಕವಿತೆಗಳೇ 600ಕ್ಕೂ ಹೆಚ್ಚು ಇವೆ. ಕನ್ನಡದಿಂದ ಇಂಗ್ಲಿಷಿಗೆ ಇನ್ನೂ ಸುಮಾರು 300 ಕವಿತೆಗಳನ್ನು ತರಬೇಕು ಎನ್ನುತ್ತಾರೆ. ಇವೆಲ್ಲ ಕ್ರಮೇಣ ಪುಸ್ತಕ ರೂಪದಲ್ಲಿಯೂ ಬರಲಿವೆ.
ಕಮಲಾಕರ ಕಡವೆ ಅವರು ಅನುವಾದಿಸಿರುವ ಒಂದು ಕವಿತೆಯ ಓದು ಇಲ್ಲಿದೆ:
ನನ್ನ ಅವ್ವನ ಹಳ್ಳಿ
(ಮೂಲ: ಸಾನೆಟ್ ಮಾಂಡಲ್)
ನನ್ನ ಅವ್ವನ ಹಳ್ಳಿಗೆ ಭೇಟಿ ಕೊಟ್ಟಿರಾದರೆ ನೀವು,
ಕಾಣುವಿರಿ ಅಲ್ಲಿ ಕಾಣಲು ಹೆಚ್ಚೇನೂ ಇಲ್ಲವೆಂದು.
ಇದ್ದಾವೆ ಅಲ್ಲಿ ನನ್ನ ಮುತ್ತಜ್ಜನ ವಿಚಾರಗಳಿಗಿಂತ
ಹಳೆಯ ಆಲದ ಮರವೊಂದು,
ಪುರಾತನ ನಗರಗಳಿಗಿಂತ ಹಳೆಯ ಕೆಲವು ಮನೆಗಳು,
ನನ್ನವ್ವನಿಗಿಂತಲೂ ಹಿಂದಿನ ಒಂದು ದೇವಾಲಯ,
ಹಾಗೂ ಅಲ್ಲಿಯ ರೈತರ ಕನಸುಗಳಿಗಿಂತ ವಿಶಾಲ
ಎಲ್ಲೆಯಿಲ್ಲದ ಭತ್ತದ ಹೊಲಗಳು.
ನನಗೂ ಕಾಣಲು ಹೆಚ್ಚೇನೂ ಇಲ್ಲ ಅಲ್ಲಿ.
ನನ್ನ ತಾಯಿಮನೆಗಿಂತ ಹೆಚ್ಚು ವಯಸ್ಸು
ನನಗಾಗಿದೆ ಎಂಬಂತ ಭಾವ ನನ್ನಲ್ಲಿ.
ಹೀಗಿದ್ದರೂ, ನೋಡುವ ಮನಸ್ಸು ನಿಮ್ಮದಾಗಿದ್ದರೆ
ಮಳೆಗಾಲದ ಒಂದು ದಿನ
ಯಾವುದಾದರೂ ಛಾವಣಿಯ ಹತ್ತಿ
ಎಲೆಗಳ ಬಳಿ ಮಳೆ ಪಿಸುನುಡಿವುದನ್ನು ಕೇಳಿಸಿಕೊಳ್ಳಿ
ಮತ್ತು ಗಮನಿಸಿ ಹೇಗೆ ಹಳ್ಳಿಯೊಂದು ಎರಡು ಕಾಡುಗಳ ನಡುವೆ ತೊನೆಯುವುದೆಂದು.
ಹೆಚ್ಚೇನೂ ಇಲ್ಲ ಅಲ್ಲಿ –
ಆದರೂ ಈ ಸಾಮಾನ್ಯತೆಯೇ ಇಲ್ಲಿನ ಬಾಳಿಗೆ ಬೆಳಕಾಗಿರುವಂತಿದೆ –
ಗಾಳಿಯಲ್ಲಿ ತೇಲುವ ಪುಕ್ಕದಂತೆ.
ಕವಿ ಕಮಲಾಕರ ಕಡವೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Kamalakar Bhat 🌷🌷🌷
ಕಾಮೆಂಟ್‌ಗಳು