ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ. ಡಿ. ನರಸಿಂಹಯ್ಯ


ಸಿ. ಡಿ. ನರಸಿಂಹಯ್ಯ 

ಸಿ. ಡಿ. ನರಸಿಂಹಯ್ಯ ಭಾರತೀಯ ಇಂಗ್ಲಿಷ್‍ನ ಪ್ರಸಿದ್ಧ ಲೇಖಕರು. ಇವರು ಇಂಗ್ಲಿಷ್ ಸಾಹಿತ್ಯ ಬೋಧನೆ ಹಾಗೂ ಖಚಿತ ವಿಮರ್ಶಾ ನಿಲವುಗಳಿಂದ ಭಾರತೀಯ ಸಾಹಿತ್ಯ ವಲಯದಲ್ಲಿ ಸಿಡಿಎನ್ ಎಂದೇ ಖ್ಯಾತರಾದವರು.

ಸಿ. ಡಿ. ನರಸಿಂಹಯ್ಯ  ಬೆಂಗಳೂರಿನ ಸಮೀಪದ ರಾಮನಗರದಲ್ಲಿ 1921ರ ಮೇ 21ರಂದು ಜನಿಸಿದರು. ಮೈಸೂರು ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ವ್ಯಾಸಂಗ ಮುಗಿಸಿ ಅನಂತರದಲ್ಲಿ ಪ್ರಿನ್ಸ್‍ಟನ್ ವಿಶ್ವವಿದ್ಯಾನಿಯಲದಲ್ಲಿ ರಾಕ್‍ಫೆಲ್ಲರ್ ಶಿಷ್ಯವೇತನ ಪಡೆದುಕೊಂಡರು. 

ಸಿ. ಡಿ. ನರಸಿಂಹಯ್ಯನವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿ 1950-79 ರವರೆಗೆ ಸೇವೆ ಸಲ್ಲಿಸಿದರು. 1957-62ರವರೆಗೂ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು. ನಿವೃತ್ತಿಯಾದ ಬಳಿಕ ಇಂಗ್ಲಿಷ್ ಸಾಹಿತ್ಯ ಹಾಗೂ ಸಂಸ್ಕೃತಿ, ಕಲೆಯ ಅಧ್ಯಯನ ಕೇಂದ್ರ ಸಂಸ್ಥೆಯಾದ ತಾವೇ ಸ್ಥಾಪಿಸಿದ ಧ್ವನ್ಯಾಲೋಕದ ನಿರ್ದೇಶಕರಾಗಿದ್ದರು.

ಇಂಗ್ಲಿಷ್ ಸಾಹಿತ್ಯದ ಅಧ್ಯಯನಕ್ಕೆ ಸಿಡಿಎನ್ ಅವರ ಕೊಡುಗೆ ಅಪಾರ. ಜೊತೆಗೇ ಇವರ ಪ್ರಭಾವಯುತ ಸಾಹಿತ್ಯ ಗರಡಿಯಲ್ಲಿ ಪಳಗಿದ ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯದಲ್ಲಿ ನವ್ಯ ಕ್ರಾಂತಿಯನ್ನು ತಂದವರೆನಿಸಿದ್ದಾರೆ. ಎ.ಕೆ.ರಾಮಾನುಜನ್, ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್ ಮೊದಲಾದವರು ಸಿಡಿಎನ್ ಅವರ ಪ್ರಭಾವಕ್ಕೆ ಒಳಗಾದವರು. 

ಸಿಡಿಎನ್ ಅವರಿಗೆ ವ್ಯಕ್ತಿತ್ವ ವಿಕಾಸ ಹೊಂದಲು ವಿಶೇಷ ಪೇರಣೆ ಗಳಿಸಿಕೊಟ್ಟದ್ದು ಅವರು ಕೇಂಬ್ರಿಡ್ಜ್‍ನಲ್ಲಿ ಹೆಸರಾಂತ ವಿಮರ್ಶಕ ಎಫ್.ಆರ್. ಲಿವಿಸ್‍ ಅವರೊಡನೆ ಕೈಗೊಂಡ ಶಿಷ್ಯವೃತ್ತಿ. "ಸಾಹಿತ್ಯವೆಂದರೆ ಜೀವನದ ಬಿಂಬಮಾತ್ರವಷ್ಟೇ ಅಲ್ಲ, ಅದು ಜೀವನವೇ.  ಸಾಹಿತ್ಯದ ಏಕೈಕ ಮಾನದಂಡವೆಂದರೆ ಜೀವನವೇ.  ಹಾಗಾಗಿ ಕಠೋರವೆನಿಸಿದರೂ ವಸ್ತುನಿಷ್ಠ ಹಾಗೂ ಸತ್ಯನಿಷ್ಠ ಮಾನದಂಡಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಬೇಕು. ಮಾನವನ ಶಾಶ್ವತ ಮೌಲ್ಯಗಳು ಸರ್ವಕಾಲಿಕವಾಗಿರುತ್ತವೆ. ಅವನ್ನು ಅರ್ಥೈಸಿಕೊಳ್ಳುವುದು, ಅಳವಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ" ಎಂಬುದು ಲಿವಿಸ್‍ ಅವರ ನಿಲುವುಗಳಾಗಿದ್ದವು. ಅವೆಲ್ಲವನ್ನೂ ಜೀರ್ಣಿಸಿಕೊಂಡು ಸಿಡಿಎನ್ ಅದೇ ರೀತಿ ಜೀವನ ನಡೆಸಿದವರು. "ಸಂದೇಹ ಉಳ್ಳವ ಮತ್ತು ಪೂರ್ವಾಗ್ರಹ ಪೀಡಿತ ಓದುಗನನ್ನೂ ಕೂಡ ಕೃತಿಯನ್ನು ಕೂಲಂಕಷವಾಗಿ ನೋಡುವಂತೆ ಮಾಡುವ ಕರ್ತವ್ಯ ವಿಮರ್ಶಕನದ್ದು" ಎಂಬುದು ಸಿಡಿಎನ್ ಅವರ ನಿಲುವು.

ಅಮೆರಿಕದ ಹಾಗೂ ಕಾಮನ್‍ವೆಲ್ತ್ ಸಾಹಿತ್ಯದಂತಹ, ಹೆಚ್ಚು ಮರೆಯಲ್ಲಿಯೇ ಉಳಿದುಬಿಟ್ಟಂತಹ ಸಾಹಿತ್ಯಗಳತ್ತ ಸಿಡಿಎನ್ ಗಮನಹರಿಸಿ ಭಾರತದ ವಿದ್ವಾಂಸರ ಗಮನ ಸೆಳೆಯುವಲ್ಲಿ ಸಫಲರಾದರೂ ಅವರ ಬಹುಪಾಲು ಕಾರ್ಯಕ್ಷೇತ್ರ ಭಾರತದ ಇಂಗ್ಲಿಷ್ ಸಾಹಿತ್ಯದ ಮೇಲೆಯೇ. ಈ ನಿಟ್ಟಿನಲ್ಲಿ ಇವರ ಮೇರು ಕೃತಿ `ದಿ ಸ್ವಾನ್ ಅಂಡ್ ದಿ ಈಗಲ್' (1969). ಗರುಡದಂತಹ ದೂರದೃಷ್ಟಿ ಹಾಗೂ ಹಂಸದಂತಹ ಕ್ಷೀರ ನ್ಯಾಯದಂತಿರಬೇಕು. ವಿಮರ್ಶೆಯೆಂಬುದು ಸಿಡಿಎನ್ ಅವರ ಕೃತಿಯ ಶೀರ್ಷಿಕೆಯಲ್ಲೇ ಎದ್ದು ಕಾಣುತ್ತದೆ. ಇದರಲ್ಲೂ ಹಾಗೂ ಇನ್ನಿತರ ಕೃತಿಯಲ್ಲೂ ಸಿಡಿಎನ್ ಅವರಿಗೆ ಪಂಡಿತ್ ನೆಹರೂರವರ ಬರವಣಿಗೆಯ ಮೇಲಿನ ಅಭಿಮಾನ ಅಪಾರ. ಇದೇ ಕೃತಿಯಲ್ಲಿ ಭಾರತೀಯ ಇಂಗ್ಲಿಷ್ ಕಾದಂಬರಿಲೋಕದ ದಿಗ್ಗಜರಾದ ರಾಜಾರಾವ್, ಮುಲ್ಕರಾಜ್ ಆನಂದ್ ಹಾಗೂ ಆರ್. ಕೆ. ನಾರಾಯಣ್‍ರವರ ವೈಯಕ್ತಿಕ ಸಾಧನೆಗಳತ್ತ ಲೇಖನಿ ಹರಿಸಿ, ಅವರ ಮೌಲ್ಯಮಾಪನ ಮಾಡುವುದರಲ್ಲಿ ಯಶಸ್ವಿಯಾದರು.

ರಾಜಾರಾವ್ ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವಲ್ಲಿ ಸಿಡಿಎನ್ ಅವರ ಕೃಷಿ ಅಪರೂಪವಾದದ್ದು. ರಾಜಾರಾವ್‍ರ ಮೊದಲ ಕಾದಂಬರಿ ಕಾಂತಪುರದಿಂದ ಹಿಡಿದು ದಿ ಸರ್‍ಪೆಂಟ್ ಅಂಡ್ ದಿ ರೋಪ್, ದಿ ಕ್ಯಾಟ್ ಅಂಡ್ ಶೇಕ್ಸ್‍ಪಿಯರ್ ಅಂತಹ ಅತ್ಯಂತ ಕ್ಲಿಷ್ಟವಾದ ತಾತ್ವಿಕ ದೃಷ್ಟಿಯುಳ್ಳ ಕಾದಂಬರಿಯನ್ನೂ ಸಿಡಿಎನ್ ಎಳೆಎಳೆಯಾಗಿ ಬಿಡಿಸಿ ಬೆಳಕು ಚೆಲ್ಲಿದ್ದಾರೆ. ಸುಲಭದಲ್ಲಿ ಓದುಗನ ಕೈಗೆ ಸಿಗದ ಈ ಕಾದಂಬರಿಗಳ ವೈಶಿಷ್ಟ್ಯವನ್ನು ಓದುಗನಿಗೆ ತೋರುತ್ತಲೇ ಮೂಲ ಕೃತಿಯನ್ನು ಮತ್ತೆ ಮತ್ತೆ ಓದಲು ಪ್ರಚೋದಿಸುತ್ತಾರೆ.
ರಾಷ್ಟ್ರ ಸಾಹಿತ್ಯದ ಕಲ್ಪನೆ ಸಿಡಿಎನ್ ರವರಿಗೆ ಪ್ರಿಯವಾದದ್ದು. ಈ ಪರಿಕಲ್ಪನೆ ಹೇಗೆ ಭಾರತದ ವಿವಿಧ ಭಾಷಾ ಸಾಹಿತ್ಯದಲ್ಲಿ ಬೇರ್ಪಡಿಸಲಾಗದಂತೆ ಅಂತರ್ಗತವಾಗಿ ಹೋಗಿದೆ ಎಂಬುದನ್ನು ಪ್ರಸ್ತಾಪಿಸುತ್ತ ಈ ವೈಶಿಷ್ಟ್ಯ ಇಂಗ್ಲಿಷ್ ಸಾಹಿತ್ಯದ ಮೂಲ ನೆಲೆ ಎಂದು ಇವರು ಗುರುತಿಸುತ್ತಾರೆ. ಈ ಭಾರತೀಯ ಸಂವೇದನೆಯೇ ಭಾರತೀಯ ಸಾಹಿತ್ಯದ ವಿಶಿಷ್ಟತೆ ಎಂದವರು ಗುರುತಿಸುತ್ತಾ ಅಖಂಡ ಭಾರತೀಯ ಸಂಪ್ರದಾಯವನ್ನು ಜೀವಂತವಾಗಿ ಉಳಿಸಿರುವುದು ಇದೇ ಎಂದು ನುಡಿಯುತ್ತಾರೆ. ಆದರೆ ಪ್ರಸ್ತುತ ಕಾಲದಲ್ಲಿ ಈ ಎದೆ ತೆಗೆದುಕೊಳ್ಳುವಿಕೆ ಒಣ ಪ್ರತಿಷ್ಠೆಯ ಪ್ರತಿಬಿಂಬವಷ್ಟೇ ಆಗಿ ಅನುಕರಣೆ ಅಷ್ಟೇ ಆಗಿದೆ ಎಂದು ವಿಷಾದಿಸುತ್ತಿದ್ದರು.

ಸಿಡಿಎನ್ ಧ್ವನ್ಯಾಲೋಕವನ್ನು 1979ರಲ್ಲಿ ಸ್ಥಾಪಿಸಿದರು. ನಮ್ಮ ಸಂಪ್ರದಾಯದೊಡನೆ ನೇರ ಸಂಪರ್ಕವನ್ನು ಇಟ್ಟುಕೊಂಡೇ ಪಾಶ್ಚಾತ್ಯ ವಿಮರ್ಶೆಯಲ್ಲಿನ ಒಳಿತಾದ ಅಂಶಗಳನ್ನು ಸಮ್ಮಿಶ್ರಗೊಳಿಸುವುದು ಹಾಗೂ ಸಾಹಿತ್ಯ ಕೃತಿಗೆ ಸಂಪೂರ್ಣವಾದ ಪ್ರತಿಕ್ರಿಯೆಯ ಚೇತನವನ್ನು ಪರಿಷ್ಕರಿಸುವದು ಅದರ ಉದ್ದೇಶಗಳಾಗಿದ್ದವು.  ಇತರ ವಿಮರ್ಶಕರು ಹೆಜ್ಜೆ ಇಡಲೂ ಹಿಂದೆಗೆಯುತ್ತಿದ್ದಂತಹ ಕಾಲದಲ್ಲಿ ತಮ್ಮ ದಿಟ್ಟ ಹೆಜ್ಜೆಯನ್ನಿಟ್ಟು ಅರಬಿಂದೋರಂತಹ ಚಿಂತಕರನ್ನೂ ಭಾರತೀಯ ಇಂಗ್ಲಿಷ್ ಸಾಹಿತ್ಯವನ್ನೂ ಮನೆಮಾತಾಗಿ ಮಾಡಿದ ಸಿಡಿಎನ್‍ರವರ ಸಾಧನೆ ಅವಿಸ್ಮರಣೀಯ.

ಸಿಡಿಎನ್ ವಿಶ್ವದ ಅನೇಕ ವಿಶ್ವವಿದ್ಯಾನಿಯಗಳಲ್ಲಿ ಪ್ರಾಧ್ಯಾಪಕರಾಗಿ ಉಪನ್ಯಾಸ ನೀಡಿದ್ದರು. ರಾಕ್‍ಫೆಲ್ಲರ್ ಪ್ರತಿಷ್ಟಾನ ಮತ್ತು ಫುಲಬ್ರೈಟ್ ನೆನಪಿನ ಉಪನ್ಯಾಸವನ್ನೂ ನೀಡಿದ ಹಿರಿಮೆ ಇವರದ್ದು. ಹತ್ತಕ್ಕೂ ಮಿಗಿಲಾಗಿ ಗ್ರಂಥ ರಚಿಸಿ, ಹನ್ನೆರಡಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದರು. 1977ರವರೆಗೂ ಇವರು ಅಂತಾರಾಷ್ಟ್ರೀಯ ಕಾಮನ್‍ವೆಲ್ತ್ ಸಾಹಿತ್ಯ ಹಾಗೂ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದರು. 

ಸಿಡಿಎನ್ ಅವರಿಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಗೌರವಿಸಿತು (1987). ಪ್ರಕಾಶಕರ ಸಂಸ್ಥೆ 1989ರಲ್ಲಿ ಗೌರವ ಸಲ್ಲಿಸಿತು. ಇವರು ಅಖಿಲ ಭಾರತ ಇಂಗ್ಲಿಷ್ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿದ್ದರು (1989). ಇವರಿಗೆ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು (1990). ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿತು

ಸಿ. ಡಿ. ನರಸಿಂಹಯ್ಯ ಅವರು 2005ರ ಏಪ್ರಿಲ್ 12ರಂದು ಈ ಲೋಕವನ್ನಗಲಿದರು.

ಮಾಹಿತಿ ಆಧಾರ: ಮೈಸೂರು ವಿಶ್ವಕೋಶದಲ್ಲಿನ ಮಾಹಿತಿ

On the birth anniversary of great scholar Prof. C. D. Narasimhaiah 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ