ರಾಮ್ ನರೇಶ್ ಮಂಚಿ
ರಾಮ್ ನರೇಶ್ ಮಂಚಿ
ಫೇಸ್ ಬುಕ್ ಕನ್ನಡಿಗರ ಆತ್ಮೀಯವಲಯಗಳಲ್ಲಿ ರಾಮ್ ನರೇಶ್ ಮಂಚಿ ಅವರನ್ನು ಬಲ್ಲದಿರುವವರು ಅಪರೂಪ. ಅವರೊಬ್ಬ ಮಹತ್ವದ ಸಾಂಸ್ಕೃತಿಕ ಮತ್ತು ಪ್ರಕೃತಿ ಛಾಯಾಗ್ರಾಹಕ.
ಯಕ್ಷಗಾನದ ಕುರಿತು ಅಪಾರ ಆಸಕ್ತಿ ಉಳ್ಳ ರಾಮ್ ನರೇಶ್ ಮಂಚಿ ಅವರ ಯಕ್ಷಗಾನದ ವಿಡಿಯೋಗಳನ್ನು ನೀವೇನಾದರೂ ನೋಡಹೋದರೆ.... !!! ಹುಷಾರು, ಈಗಲೇ ಹೇಳಿಬಿಡ್ತೀನಿ. ನೀವು ಬೇರೆ ಏನೂ ಕೆಲಸ ಮಾಡಲು ಆಗುವುದಿಲ್ಲ 😊😊😊 ಅವರು ಸೊಗಸಾಗಿ ವಿಡಿಯೋ ಮಾಡಿ ಭಿತ್ತರಿಸಿರುವ ಯಕ್ಷಗಾನದ ವಿಡಿಯೋಗಳ ಸಂಖ್ಯೆ 1500ಕ್ಕೂ ಹೆಚ್ಚು. ಇದೊಂದು ಅದ್ಭುತ ಕಲಾ ಸೇವೆ.
ತಾವು ಮೆಚ್ಚಿದ ಪ್ರತಿ ಕಲಾವಿದರನ್ನಷ್ಟೇ ಅಲ್ಲದೆ ತಮ್ಮ ಪರಿಸರದಲ್ಲಿರುವ ಹಿರಿಯರಿಂದ ಮಕ್ಕಳವರೆಗೆ ಎಲ್ಲರನ್ನೂ ಸುಂದರವಾಗಿ ಛಾಯಾಚಿತ್ರ ತೆಗೆದು ಅವರ ಹುಟ್ಟುಹಬ್ಬಗಳಂದು ಶುಭಹಾರೈಸುವ ಅವರ ಹೃದಯ ವೈಶಾಲ್ಯತೆ ಕೂಡಾ ಅಷ್ಟೇ ಹಿರಿದಾದದದ್ದು.
ರಾಮ್ ನರೇಶರ ಸುಂದರ ಛಾಯಾಗ್ರಹಣದ ಚಿತ್ರಗಳಲ್ಲಿ - ಸೂರ್ಯೋದಯದಿಂದ ಪ್ರಾರಂಭಗೊಂಡು, ವಿವಿಧ ಪುಷ್ಪ, ಸಸ್ಯ, ಗಿರಿಶೃಂಗ, ಕೀಟ, ಕಲೆ, ಸಕಲ ಪ್ರಕೃತಿ ವೈಭೋಗಗಳು, ಸುಂದರ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡು ಸೂರ್ಯಾಸ್ತ ಬೆಳದಿಂಗಳುಗಳ ಜಾಲದವರೆಗೆ - ನಿತ್ಯ ನಮ್ಮ ಕಣ್ಮನ ಹೃದಯಗಳನ್ನು ಸೆಳೆಯುತ್ತಿರುತ್ತವೆ. ನಮಗೆ ಏನೂ ತೊಚದಿದ್ದಾಗ ಅವರ ಫೋಟೋ ಆಲ್ಬಂಗೆ ಹೊರಟುಬಿಟ್ಟರೆ ಸಾಕು. ಅದೇ ಒಂದು ಸುಂದರ ಪಿಕ್ನಿಕ್ ಪ್ರವಾಸಗಳ ರಸದೌತಣ ಉಣಿಸುವಂತಿರುತ್ತದೆ. ರಾಮ್ ನರೇಶ್ ಮಂಚಿಯವರ ಯಕ್ಷಗಾನ, ಸಂಗೀತಾಭಿರುಚಿಯ ಲಿಂಕ್ ಗಳು ಅವರ ಸದಭಿರುಚಿಯ ವೈವಿಧ್ಯಗಳನ್ನು ನಿರಂತರ ನಮಗೆ ಒದಗಿಸುತ್ತಿರುತ್ತವೆ.
ರಾಮ್ ನರೇಶ್ ಮಂಚಿ ಮತ್ತು ಅವರ ಪತ್ನಿ ಅನಿತಾ ನರೇಶ್ ಮಂಚಿ ಅವರ ಲವಲವಿಕೆಯ ಛಾಯಾಚಿತ್ರ ಮತ್ತು ಲಲಿತ ಪ್ರಬಂಧಗಳ ಜುಗಲ್ಬಂದಿ ಸದಾ ಸೊಗಸಿನದು. ಇವರಿಬ್ಬರೂ ನಮಗೆ ಆಗಾಗ ಮಾಡಿ ತೋರಿಸಿ ತಾವೇ ಗುಳುಂ ಮಾಡುವ ತಿನಿಸುಗಳು ಕೂಡಾ ನಮಗೆ ಅಷ್ಟೇ ಪ್ರಿಯ.
ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆ. ಇಂದು ನಮ್ಮ ರಾಯರಾದ ರಾಮ್ ನರೇಶ್ ಮಂಚಿ ಅವರ ಹುಟ್ಟು ಹಬ್ಬ. ಜನ್ಮ ದಿನದ ಹಾರ್ದಿಕ ಶುಭ ಹಾರೈಕೆಗಳು ಸಾರ್. ನಿಮ್ಮ ಕಲಾಲೋಕದ ರಸದೌತಣ ನಮ್ಮೊಂದಿಗೆ ನಿರಂತರವಾಗಿರಲಿ.
Happy birthday Ram Naresh Manchi Sir
ಕಾಮೆಂಟ್‌ಗಳು