ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯು.ಬಿ. ರಾಜಲಕ್ಷ್ಮೀ



ಯು.ಬಿ. ರಾಜಲಕ್ಷ್ಮೀ

ಕನ್ನಡ ಪತ್ರಿಕಾಲೋಕದ ಚಂದದ 'ತರಂಗ' ವಾರಪತ್ರಿಕೆಯ ಸಂಪಾದಕರಾದ ಡಾ. ಯು. ಬಿ. ರಾಜಲಕ್ಷ್ಮೀ ಪತ್ರಿಕೋದ್ಯಮ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ನೆಲೆಗಳಲ್ಲಿ ಹೆಸರಾದವರಾಗಿದ್ದಾರೆ.

ರಾಜಲಕ್ಷ್ಮೀ ಅವರು 1961ರ ಮೇ 27ರಂದು ಕಾರ್ಕಳದಲ್ಲಿ ಜನಿಸಿದರು. ತಂದೆ ಯು. ಬಿ. ರಾಮರಾವ್.  ತಾಯಿ ಬಿ. ವನಜಾಕ್ಷಿ.  ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ರಾಜಲಕ್ಷ್ಮೀ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ ಪದವಿ ಪಡೆದು ಪತ್ರಿಕೋದ್ಯಮ ಮತ್ತು ಕಮರ್ಷಿಯಲ್ ಪ್ರಾಕ್ಟೀಸಸ್ ವಿಶೇಷತೆಗಳಲ್ಲಿ ಡಿಪ್ಲೊಮಾ ಗಳಿಸಿದರು. ಇವರ 'ಕನ್ನಡ ವಾರಪತ್ರಿಕೆಗಳಲ್ಲಿ ನುಡಿಚಿತ್ರ - ಒಂದು ಗುಣಾತ್ಮಕ ಅಧ್ಯಯನ'ಕ್ಕೆ ಹಂಪಿ ವಿಶ್ವವಿದ್ಯಾಲಯವು ಡಿ.ಲಿಟ್ ಗೌರವ ನೀಡಿದೆ.  ರಾಜಲಕ್ಷ್ಮೀ ಅವರು ಸಂಗೀತ ಮತ್ತು ಭರತನಾಟ್ಯಗಳಲ್ಲೂ ಪರಿಣತಿ ಸಾಧಿಸಿದ್ದಾರೆ.

ಕಳೆದ 38 ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ರಾಜಲಕ್ಷ್ಮೀ ಅವರು  ಹೊಸ ದಿಗಂತ, ಮುಂಗಾರು, ಟೈಮ್ಸ್ ಆಫ್ ಡೆಕ್ಕನ್ ಮುಂತಾದ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ; 1987ರಲ್ಲಿ 'ತರಂಗ' ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ, ಈಗ ಅದರ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ರಾಜಲಕ್ಷ್ಮೀ ಅವರ ಪ್ರಕಟಿತ  ಕೃತಿಗಳಲ್ಲಿ 'ವಾರಪತ್ರಿಕೆಗಳಲ್ಲಿ ನುಡಿಚಿತ್ರ',  'ನೂಪುರ' - ಮಾನವೀಯ ನುಡಿಚಿತ್ರಗಳ ಸಂಕಲನ, ಶಂಖನಾದ (ಕ್ಷೇತ್ರದರ್ಶನ), ನಿನಾದ, ಹಿರಿಯ ಸಾಹಿತಿ ಕೊರಡ್ಕಲ್ ಶ್ರೀನಿವಾಸರಾವ್, 'ಉಡುಪಿ ಅಡುಗೆ' (ಕನ್ನಡ, ಇಂಗ್ಲಿಷ್ ಮತ್ತು ಬ್ರೈಲ್ ಲಿಪಿಗಳಲ್ಲಿ) ಮುಂತಾದವು ಸೇರಿವೆ. ಅವರು ಸಾಕ್ಷ್ಯಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. 

ರಾಜಲಕ್ಷ್ಮೀ  ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮಲೇಷಿಯಾ ಸರಕಾರದ ಆಹ್ವಾನದ ಮೇಲೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು.

ರಾಜಲಕ್ಷ್ಮೀ ಅವರ ಪತ್ರಿಕಾ ಕ್ಷೇತ್ರದ ಗಮನಾರ್ಹ ಸೇವೆಗಾಗಿ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಂತ್ರಾಲಯದ 'ಸುಜಯಶ್ರೀ' ಪ್ರಶಸ್ತಿ, ಪಾಟೀಲ ಪುಟ್ಟಪ್ಪ ಪ್ರಶಸ್ತಿ, ಬೆಸ್ಟ್ ಔಟ್ ಸ್ಯಾಂಡಿಂಗ್ ಪರ್ಸನಾಲಿಟಿ (ಜೇಸೀ ಪುರಸ್ಕಾರ), 'ನೂಪುರ' ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಕಮಲಾ ರಾಮಸ್ವಾಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಪ್ರತಿಷ್ಟಿತ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಕನ್ನಡ ಪತ್ರಿಕಾಲೋಕ ಮತ್ತು ಸಾಂಸ್ಕೃತಿಕ ಲೋಕದ ಸಾಧಕರಾದ ಡಾ. ಯು. ಬಿ. ರಾಜಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birth day of senior journalist Dr. U. B. Rajalakshmi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ