ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಫ್ರಾನ್ಸಿಸ್ಕಸ್ ಕಾರ್ನೇಲಿಸ್


 ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್‍ಡರ್ಸ್


ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್‍ಡರ್ಸ್ ಅವರು 19ನೆಯ ಶತಮಾನದ ಪ್ರಮುಖ ಡಚ್ ವೈದ್ಯರು. ಅವರು ಶರೀರಕ್ರಿಯಾ ವಿಜ್ಞಾನಿ ಮತ್ತು ಮಹಾನ್ ನೇತ್ರಶಾಸ್ತ್ರಜ್ಞರು. ಡಾನ್‍ಡರ್ಸ್ ಮೊತ್ತಮೊದಲು ವೈಜ್ಞಾನಿಕವಾಗಿ ದೃಷ್ಟಿಪರೀಕ್ಷೆಯನ್ನು ಪ್ರಾರಂಭಿಸಿದವರು. 

ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್‍ಡರ್ಸ್ ಅವರು 1818ರ ಮೇ 27ರಂದು ಟಿಲ್‍ಬರ್ಗಿನಲ್ಲಿ ಜನಿಸಿದರು. ಯುಟ್ರೆಕ್ಟಿನಲ್ಲಿ ವಿದ್ಯಾಭ್ಯಾಸ ಮುಗಿದ ಮೇಲೆ ಅಲ್ಲೇ ಸೈನ್ಯದಲ್ಲಿ ಶಸ್ತ್ರವೈದ್ಯನಾಗಿ ವೃತ್ತಿ ಪ್ರಾರಂಭಿಸಿದರು. 1847ರಲ್ಲಿ ಅಂಗಶಾಸ್ತ್ರ ಪ್ರಾಧ್ಯಾಪಕರಾದ  ಇವರು ನೇತ್ರಕ್ರಿಯೆಗಳಲ್ಲಿ ಕಂಡುಬರುವ ಅನೇಕ ಸೂಕ್ಷ್ಮ ಸವಾಲಯಗಳ  ವಿಷಯವಾಗಿ ಅಧ್ಯಯನಗಳನ್ನು ಕೈಗೊಂಡರು. 

ಕಣ್ಣುಗಳ ಮುಂದೆ ನೊಣಗಳು ಹಾರಾಡುವಂತೆ ಭ್ರಮೆ (ಮಸ್ಕೆ ವಾಲಿಟಾನ್‍ಟಿಸ್-1847), ದೃಷ್ಟಿ ಅಕ್ಷಗಳ ಅಭಿಸರಣೆ (ಕನ್‍ವರ್ಜೆನ್ಸ್) ಮತ್ತು ವಿವಿಧ ದೂರದೃಷ್ಟಿಯ ಹವಣಿಕೆ (ಅಕಾಮಡೇಷನ್) ಇವುಗಳಿಗಿರುವ ಸಂಬಂಧ (1848), ಚಾಳೀಸು (1858), ದೃಷ್ಟಿಮಾಂದ್ಯ (ಎಮೆಟ್ರೋಪಿಯ ಮತ್ತು ಆಸ್ಟಿಗ್ಮಾಟಿಸಮ್ 1860-62) ಮುಂತಾದುವು ಡಾನ್‍ಡರ್ಸ್ ಅವರ ಕೆಲವು ವ್ಯಾಸಂಗ ಕ್ಷೇತ್ರಗಳು. ಇವರು ಕಣ್ಣು ರೋಗಗಳಿಗಾಗಿಯೇ ಒಂದು ಆಸ್ಪತ್ರೆಯನ್ನು 1851ರಲ್ಲಿ ಸ್ಥಾಪಿಸಿದರು.

ದೃಷ್ಟಿಮಾಂದ್ಯವನ್ನು ಪರೀಕ್ಷಿಸುವ ವಿಧಾನ (ರಿಫ್ರ್ಯಾಕ್ಷನ್), ಅಕ್ಷಿಪಟಲವನ್ನು (ರೆಟಿನ) ಪರೀಕ್ಷಿಸುವ ಸಲಕರಣೆ ನೇತ್ರದರ್ಶಕ (ಆಫ್ತಾಲ್‍ಮಾಸ್ಕೋಪ್), ದೃಷ್ಟಿಮಾಂದ್ಯವನ್ನು ಪರಿಹರಿಸುವ ಸ್ತಂಭಮಸೂರ (ಸಿಲಿಂಡ್ರಿಕಲ್ ಲೆನ್ಸ್) ಮತ್ತು ಅಶ್ರಕೀಯ ಮಸೂರ (ಪ್ರಿಸ್ಮ್ಯಾಟಿಕ್ ಲೆನ್ಸ್) - ಇವು ಡಾನ್‍ಡರ್ಸ್ ಅವರ ಆವಿಷ್ಕರಣಗಳು.   

ಡಾನ್‍ಡರ್ಸ್ ಅವರು 1864ರಲ್ಲಿ ವಕ್ರೀಕರಣ ಮತ್ತು ದೃಷ್ಟಿಹೊಂದಾಣಿಕೆಯ ವಿಕಾರಗಳು (ದಿ ಅನಾಮಲೀಸ್ ಆಫ್ ರಿಫ್ರ್ಯಾಕ್ಷನ್ ಅಂಡ್ ಅಕಾಮಡೇಷನ್) ಎಂಬ ಪುಸ್ತಕವನ್ನು ಇಂಗ್ಲೆಂಡಿನಲ್ಲಿ ಪ್ರಕಟಿಸಿದರು. 

ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್‍ಡರ್ಸ್ ಅವರು 1889ರ ಮೇ 24ರಂದು ನಿಧನರಾದರು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ