ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ. ವಿಠ್ಠಲಾಚಾರ್ಯ


 ಬಿ. ವಿಠ್ಠಲಾಚಾರ್ಯ 


ಬಿ.ವಿಠ್ಠಲಾಚಾರ್ಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಕನ್ನಡಿಗರಾದ ಅವರು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಪ್ರಸಿದ್ಧರಾದವರು. ಇಂದು ಅವರ ಸಂಸ್ಮರಣೆ ದಿನ.

ವಿಠ್ಠಲ ಆಚಾರ್ಯರು 1920ರ ಜನವರಿ 20ರಂದು ಅಂದಿನ ಉಡುಪಿ ತಾಲೂಕಿನ ಉದ್ಯಾವರದಲ್ಲಿ ಜನಿಸಿದರು. ಅವರಿಗೆ ಬಾಲ್ಯದಿಂದಲೂ ನಾಟಕ, ಬಯಲಾಟ ಮತ್ತು ಯಕ್ಷಗಾನಗಳಲ್ಲಿ ಅಪಾರ ಆಸಕ್ತಿ. ಅವರ ತಂದೆ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಒಬ್ಬ ಹೆಸರಾಂತ ಆಯುರ್ವೇದ ವೈದ್ಯರಾಗಿದ್ದರು.

ವಿಠ್ಠಲಾಚಾರ್ಯರು ಓದಿದ್ದು ಮೂರನೆ ತರಗತಿವರೆಗೆ ಮಾತ್ರಾ. ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಮನೆಬಿಟ್ಟು ಹೊರಟರು. ಅರಸೀಕೆರೆ ತಲುಪಿದ ಅವರು ನಾನಾ ಕೆಲಸಗಳನ್ನು ಮಾಡಿ ಕೊನೆಗೆ ತನ್ನ ಸೋದರ ಸಂಬಂಧಿಯಿಂದ ಉಡುಪಿ ಹೋಟೆಲೊಂದನ್ನು ಖರೀದಿಸಿ ಯಶಸ್ವಿಯಾಗಿ ನಡೆಸಿದರು. ಕೆಲವು ಸ್ನೇಹಿತರ ಜೊತೆ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ಬಂಧಿಯಾದರು. ಬಿಡುಗಡೆಯಾದ ನಂತರ, ತನ್ನ ಕಿರಿಯ ಸೋದರನಿಗೆ ತಮ್ಮ ಹೋಟೆಲ್ ಉದ್ಯಮವನ್ನು ಹಸ್ತಾಂತರಿಸಿದರು.

ವಿಠ್ಠಲಾಚಾರ್ಯರು ಮುಂದೆ ತಮ್ಮ ಸ್ನೇಹಿತ ಡಿ. ಶಂಕರ್ ಸಿಂಗ್ ಮತ್ತು ಇತರರ ಜೊತೆಗೂಡಿ ಹಾಸನ ಜಿಲ್ಲೆಯಲ್ಲಿ ಒಂದು ಟೂರಿಂಗ್ ಟಾಕೀಸ್ ಅನ್ನು ಸ್ಥಾಪಿಸಿದರು. ಮುಂದೆ ಒಂದು ಇದ್ದ ಟೂರಿಂಗ್ ಟಾಕೀಸು ನಾಲ್ಕಾಗಿ ಬೆಳೆಯಿತು. ತಾವು ಪ್ರದರ್ಶಿಸುತ್ತಿದ್ದ ಪ್ರತಿಯೊಂದು ಚಲನಚಿತ್ರವನ್ನೂ ನೋಡುತ್ತಿದ್ದ ಅವರಲ್ಲಿ ವಿಶಿಷ್ಟ ರೀತಿಯ ಚಿಂತನೆಗಳು ಹೊಳೆದವು.

ವಿಠ್ಠಲಾಚಾರ್ಯರು 1944ರಲ್ಲಿ ಮೈಸೂರಿಗೆ ತೆರಳಿ ಗೆಳೆಯ ಶಂಕರ್ ಸಿಂಗ್ ಮತ್ತು ಇತರರ ಜೊತೆಗೂಡಿ ಮಹಾತ್ಮ ಪಿಕ್ಚರ್ಸ್ ಹೆಸರಿನಲ್ಲಿ ಒಂದು ಚಿತ್ರನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. 1944ರಿಂದ 1953ರ ಅವಧಿಯಲ್ಲಿ 18 ಕನ್ನಡ ಚಿತ್ರಗಳನ್ನು ನಿರ್ಮಿಸಿದರು. ಈ ಚಿತ್ರಗಳಲ್ಲಿ ಕೆಲವನ್ನು ವಿಠ್ಠಲಾಚಾರ್ಯರೂ, ಕೆಲವನ್ನು ಶಂಕರಸಿಂಗ್ ಅವರೂ ಇನ್ನು ಕೆಲವನ್ನು ಉಳಿದವರೂ ನಿರ್ದೇಶಿಸಿದರು. ಅವುಗಳಲ್ಲಿ ನಾಗಕನ್ಯಾ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ ಮುಂತಾದವು ಬಹಳ ಯಶಸ್ವಿಯಾದವು. ಕಾಲಾನುಕ್ರಮದಲ್ಲಿ ಮಹಾತ್ಮ ಚಿತ್ರಸಂಸ್ಥೆಯಲ್ಲಿ ವಿಠ್ಠಲಾಚಾರ್ಯ ಮತ್ತು ಶಂಕರ್ ಸಿಂಗ್ ಇಬ್ಬರೇ ಉಳಿದರು. 1953 ರಲ್ಲಿ ಈ ಜೋಡಿಯೂ ಬೇರೆ ಆಯಿತು.

ವಿಠ್ಠಲಾಚಾರ್ಯರು 1953ರಲ್ಲಿ ವಿಠ್ಠಲ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಕಂಪನಿಯನ್ನು ಮಾಡಿಕೊಂಡು 'ರಾಜ್ಯಲಕ್ಷ್ಮಿ' ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. 1954ರಲ್ಲಿ, ಅವರು 'ಕನ್ಯಾದಾನ' ಎಂಬ ಆ ಕಾಲಕ್ಕೆ ಕ್ರಾಂತಿಕಾರಕವಾದ ಒಂದು ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದರು. ಅದನ್ನೇ ತೆಲುಗು ಭಾಷೆಯಲ್ಲಿ ರೀಮೇಕ್ ಮಾಡಬಯಸಿ ಮದ್ರಾಸಿಗೆ ಹೋದ ಅವರು ಅಲ್ಲಿಯೇ ನೆಲೆಸಿದರು. ಮುಂದೆ ಅವರು ಪ್ರಸಿದ್ದ ವೀರಕೇಸರಿ ಸೇರಿದಂತೆ ಎರಡು ಕನ್ನಡ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದರೂ ಹೆಚ್ಚು ತೆಲುಗು ಚಿತ್ರಗಳನ್ನು ನಿರ್ಮಿಸಿದರು.

ವಿಠ್ಠಲಾಚಾರ್ಯರು ಎನ್. ಟಿ. ರಾಮರಾವ್ ಅವರ ನಾಯಕತ್ವದಲ್ಲೇ 19 ಚಲನಚಿತ್ರಗಳನ್ನು ನಿರ್ದೇಶಿಸಿದರು. ಅವರ ಬಹಳ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಯಶಸ್ಸು ಕಂಡವು. ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ "ಜನಪದ ಬ್ರಹ್ಮ" ಎಂದು ಕರೆದರು. ಮಾಯಾಜಾಲದ ಕಥಾನಕಗಳನ್ನು ನಿರ್ಮಿಸಿ ಒಂದಷ್ಟು ವಿಸ್ಮಯ ಮತ್ತು ಒಂದಷ್ಟು ಬೆಚ್ಚುಬೀಳಿಸುವಿಕೆಗಳ ಮೂಲಕ ಪ್ರೇಕ್ಷಕನ ಆಸಕ್ತಿಯನ್ನು ಯಶಸ್ವಿಯಾಗಿ ಹಿಡಿದಿಡುತ್ತಿದ್ದ ವಿಠ್ಠಲಾಚಾರ್ಯರು ತಮ್ಮ ತಂತ್ರಜ್ಞಾನ ಜಾಣ್ಮೆಗಳಿಗೆ ಬಹಳ ಹೆಸರಾಗಿದ್ದರು. ಸಮಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಅವರು ಸಿನಿಮಾ ಶೂಟಿಂಗ್ ಸೆಟ್ಗೆ ಒಂದು ಗಂಟೆ ಮೊದಲೇ ಬಂದು ಕುಳಿತುಕೊಳ್ಳುತ್ತಿದ್ದರಂತೆ!

ಬಿ. ವಿಠ್ಠಲಾಚಾರ್ಯ ಅವರು 1999ರ ಮೇ 28 ರಂದು ನಿಧನರಾದರು.

On Remembrance Day of great director and producer B. Vittalacharya

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ