ವೈ. ವಿ. ರಾವ್
ವೈ.ವಿ.ರಾವ್
ವೈ.ವಿ.ರಾವ್ ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನಾ”ದ ನಿರ್ದೇಶಕರು. ಅವರು ಮೂಕಿ ಚಿತ್ರದ ಕಾಲದಿಂದಲೂ ಸಕ್ರಿಯರಾಗಿದ್ದು ಭಾರತೀಯ ಚಿತ್ರರಂಗದ ಬೆಳವಣಿಗೆಯಲ್ಲಿ ತೊಡಗಿದ್ದವರು.
ಯರಗುಡಿಪಾಟಿ ವರದ ರಾವ್ ಎನ್ನುವ ಪೂರ್ಣ ನಾಮಧೇಯದ ವೈ.ವಿ.ರಾವ್ ಆಂದ್ರ ಪ್ರದೇಶದ ನೆಲ್ಲೂರಿನ ಸಮೀಪದ ಯರಗುಪಾಡದವರು. ತಂದೆ ಗೋಪಾಲ ರಾಯರು ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಾಯಿ ಬೋದೇವಿ. ಈ ದಂಪತಿಗಳ ಎರಡನೇ ಮಗನಾಗಿ ವೈ.ವಿ.ರಾವ್ 1903ರ ಮೇ 30ರಂದು ಜನಿಸಿದರು. ಚಿಕ್ಕಂದಿನಿಂದಲೇ ವೈ.ವಿ.ರಾವ್ ಅಭಿನಯಿಸಿಲು ಆರಂಭಿಸಿದ್ದರು. ಶಾಲಾ ಕಾಲೇಜುಗಳಲ್ಲಿ ಅವರ ಅಭಿನಯ ಜನಪ್ರಿಯವಾಗಿತ್ತು. ತಂದೆ ಗೋಪಾಲ ರಾಯರಿಗೆ ಮಗ ವೈದ್ಯನಾಗಬೇಕು ಎನ್ನುವುದು ಇಚ್ಛೆಯಾಗಿತ್ತು. ಹೀಗಾಗಿ ವೈ. ವಿ. ರಾವ್ ಅಂದಿನ ಕಾಲದ ವೈದ್ಯ ಶಿಕ್ಷಣ ಎಲ್.ಎಂ.ಪಿಯನ್ನು ಓದುತ್ತಿದ್ದರು. ತಂದೆ ಮತ್ತು ಹೆಂಡತಿಯ ಸಾವು ಅವರ ಬದುಕಿನ ದಿಕ್ಕನ್ನು ಬದಲಿಸಿದವು.
ಮುಂಬೈನ ಲಕ್ಷ್ಮೀ ಪಿಕ್ಚರ್ಸ್ನ ನಿರ್ದೆಶಕ ಚೌಧರಿಯವರು ರಾವ್ ಅವರ ಅಭಿನಯವನ್ನು ನೋಡಿ ಪ್ರಭಾವಿತರಾಗಿ ಚಿತ್ರರಂಗಕ್ಕೆ ಬರಲು ಆಹ್ವಾನ ನೀಡಿದರು. ತಮ್ಮ ಆಸಕ್ತಿಯ ಕ್ಷೇತ್ರ ಎಂಬ ಅಭಿಲಾಷೆ ಒಂದು ಕಡೆಯಾದರೆ ಎರಡು ಸಾವುಗಳಿಂದ ಮನ ನೊಂದಿದ್ದ ಕಾರಣ ಆ ವಾತಾವರಣದಿಂದ ದೂರವಾಗಲು ಸಾಧ್ಯವಾಗುತ್ತದೆ ಎನ್ನುವ ಇನ್ನೊಂದು ಕಾರಣದಿಂದ ಮುಂಬೈಗೆ ಹೋಗುವುದನ್ನು ರಾವ್ ಆಯ್ಕೆ ಮಾಡಿಕೊಂಡರು. ಅದು ಮೂಕಿ ಚಿತ್ರಗಳ ಕಾಲ. ಚೌಧರಿಯವರು ತಯಾರಿಸಿದ ನೀರಾ ಮತ್ತು ಆಶಾ ಎಂಬ ಮೂಕಿ ಚಿತ್ರಗಳಿಗೆ ವೈ.ವಿ.ರಾವ್ ನಾಯಕರಾಗಿ ಅಭಿನಯಿಸಿದ್ದಲ್ಲದೆ ಸಹನಿರ್ದೆಶಕನ ಕೆಲಸವನ್ನೂ ಕೂಡ ಮಾಡಿದರು. ಛಾಯಾಗ್ರಹಣ, ವರ್ಣಾಲಾಂಕಾರಗಲ್ಲದೆ ಲ್ಯಾಬೋರೇಟರಿಯಲ್ಲಿ ಕೂಡ ವೈ.ವಿ.ರಾವ್ ಅನುಭವವನ್ನು ಪಡೆದರು. ಮುಂದೆ ಭಾರತೀಯ ಚಿತ್ರರಂಗದ ಮೊದಲ ವಾಕ್ಚಿತ್ರ “ಅಲಂಆರಾ” ನಿರ್ಮಾಪಕರಾದ ಆರ್ದೀಶ್‌ಕರ್ ಇರಾನಿಯವರ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ‘ಬುಲ್ ಬುಲ್ ಪರಸ್ತಾನ್’ ವಾಯೇಜ್ ಆಫ್ ಸಬ್ಸಿನಾ’ ಸೇರಿದಂತೆ ಏಳು ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡಿ ಚಿತ್ರರಂಗದ ಸಮಗ್ರ ಅನುಭವವನ್ನು ಪಡೆದುಕೊಂಡರು. ಇದೇ ವೇಳೆಗೆ ವೈ.ವಿ.ರಾವ್ ಅವರ ತಾಯಿ ಅನಾರೋಗ್ಯದ ಸಮಸ್ಯೆಯಿಂದ ಬಳಲಿದರು. ತಾಯಿಯನ್ನು ನೋಡಲು ಊರಿಗೆ ಬಂದ ಅವರನ್ನು ಕುಟುಂಬದವರು ದೂರದ ಮುಂಬೈ ಬದಲು ಹತ್ತಿರದ ಸ್ಥಳದಲ್ಲಿ ಕೆಲಸವನ್ನು ಅರಸುವಂತೆ ಸೂಚಿಸಿದರು. ಆಗ ಮುಂಬೈನಂತೆ ಮದರಾಸು ಕೂಡ ಚಿತ್ರ ಚಟುವಟಿಕೆಗಳ ತಾಣವಾಗಿ ಬೆಳೆಯುತ್ತಿತ್ತು. ಚಿತ್ರರಂಗ ಬಿಡಲು ಇಚ್ಚಿಸದ ರಾವ್ ಅವರು ಮದರಾಸಿನಲ್ಲಿ ತಮ್ಮ ಭವಿಷ್ಯವನ್ನು ಕಂಡು ಕೊಳ್ಳಲು ಬಯಸಿದರು.
ವೈ. ವಿ. ರಾವ್ ಅವರು ರಘಪತಿ ಪ್ರಕಾಶ್ ಅವರ ಸಂಸ್ಥೆಯಲ್ಲಿ 1930ರಲ್ಲಿ ಬಿಡುಗಡೆಯಾದ “ಗರುಡ ಗರ್ವಭಂಗ” ಚಿತ್ರದಲ್ಲಿ ವಿಷ್ಣುವಿನ ಪಾತ್ರದಲ್ಲಿ ಅವರು ಜನಪ್ರಿಯರಾದರು. ಅಲ್ಲಿಂದ ಮುಂದೆ ನಲವತ್ತಕ್ಕೂ ಹೆಚ್ಚು ಮೂಕಿ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿದರು. ಜ್ಞಾನಸುಂದರಿ, ಲಂಕಾದಹನ, ಸಾರಂಗಧರ, ಧರ್ಮಪತ್ನಿ, ಪ್ರಮೀಳಾರ್ಜುನ ಅವರಿಗೆ ಹೆಸರು ತಂದು ಕೊಟ್ಟು ಚಿತ್ರಗಳು. ಶ್ರೀಕೃಷ್ಣನ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಹ ಕಲಾವಿದ ಎಂಬ ಖ್ಯಾತಿ ದೇಶದೆಲ್ಲೆಡೆ ಹರಡಿತು. ಗುಬ್ಬಿ ವೀರಣ್ಣನವರು ತಮ್ಮ ಸ್ನೇಹಿತರೊಂದಿಗೆ ರೂಪಿಸಿದ್ದ “ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್” ಸಂಸ್ಥೆಯ ಮೂಲಕ “ಹರಿಮಾಯೆ” ಎಂಬ ಮೂಕಿ ಚಿತ್ರವನ್ನು ತಯಾರಿಸಲು ಉದ್ದೇಶಿಸಿ ವೈ.ವಿ.ರಾವ್ ಅವರನ್ನು ನಿರ್ದೇಶಕರಾಗುವಂತೆ ಕೋರಿಕೊಂಡರು. ಈ ಚಿತ್ರ ಬೆಂಗಳೂರಿನ ಸೆಲೆಕ್ಟ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೂರು ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ಈ ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ನಾಯಕರಾಗಿ ಪರಿಚಿತರಾದರೆ ಬಿ.ಜಯಮ್ಮ, ಜಿ.ಸುಂದರಮ್ಮ, ಗುಬ್ಬಿ ವೀರಣ್ಣನವರೂ ಅಭಿನಯಸಿದ್ದರು.
ಕನ್ನಡದ ಮೊದಲ ವಾಕ್ಚಿತ್ರ “ಸತಿಸುಲೋಚನ” ನಾಗೇಂದ್ರ ರಾಯರು ಮತ್ತು ಷಾ ಚಮನ್ ಲಾಲ್ ಡುಂಗಾಜಿಯವರಯವರ ಸಂಯುಕ್ತ ಪ್ರಯತ್ನದಿಂದ ರೂಪುಗೊಂಡಿತು. ವೈ.ವಿ.ರಾವ್ ಈ ಕನ್ನಡದ ಮೊದಲ ವಾಕ್ಚಿತ್ರದ ನಿರ್ದೇಶಕರಾದರು. ರಾಮಾಯಣದ ಯದ್ಧಕಾಂಡದಲ್ಲಿ ಉಲ್ಲೇಖಿತವಾಗಿರುವ ಇಂದ್ರಜಿತುವಿನ ಪತ್ನಿ ಸುಲೋಚನೆಯ ಸಣ್ಣ ಎಳೆಯನ್ನು ಹಿಡಿದು ಕೊಂಡು ಬೆಳ್ಳಾವೆ ನರಹರಿ ರಾಯರು ಕಥೆಯನ್ನು ರೂಪಿಸಿದರು. ಭಾರತದ ಉಳಿದ ವಾಕ್ಚಿತ್ರಗಳಿಗೆ ಹೋಲಿಸಿದರೆ “ಸತಿ ಸುಲೋಚನ”ಯಲ್ಲಿ ಹಲವಾರು ಚಮತ್ಕಾರದ ಸನ್ನಿವೇಶಗಳಿದ್ದವು. ಹೊರಾಂಗಣ ಸನ್ನಿವೇಶಗಳು ಅದರಲ್ಲಿಯೂ ಯುದ್ದದ ಸನ್ನಿವೇಶಗಳಿದ್ದವು. ಟ್ರಿಕ್ ಶಾಟ್‌ಗಳಿದ್ದವು. ಇದನ್ನೆಲ್ಲಾ ತಾಂತ್ರಿಕ ಪರಿಣತಿಯಿಂದ ರಾವ್ ಅವರು ಚಿತ್ರೀಕರಿಸಿದರು. ಇದರಲ್ಲಿ ಲಕ್ಷ್ಮಣನ ಪಾತ್ರವನ್ನೂ ಅವರು ನಿರ್ವಹಿಸಿದ್ದರು. ಅವರ ಮಡದಿ ಚಿನ್ನ ರಾಜಮ್ಮ “ಸತಿ ಸುಲೋಚನ” ಚಿತ್ರದಲ್ಲಿ ಊರ್ಮಿಳೆಯ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಹದಿನಾರು ಗೀತೆಗಳಿದ್ದವು. ಕೊಲ್ಹಾಪುರದ “ಛತ್ರಪತಿ ಸಿನಿಟೋನ್”ನಲ್ಲಿ ಚಿತ್ರೀಕರಣಗೊಂಡ “ಸತಿ ಸುಲೋಚನ” 1934ರ ಮಾರ್ಚಿ 3ರಂದು ಬೆಂಗಳೂರಿನ “ಪ್ಯಾರಾಮೌಂಟ್” ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಆರಂಭವಾಯಿತು.
ಸತಿಸುಲೋಚನದ ನಂತರ ರಾವ್ ಅವರು ನಿರ್ದೇಶಿಸಿದ ಚಿತ್ರ ತಮಿಳಿನ “ಚಿಂತಾಮಣಿ”. ಇದರ ನಾಯಕಿಯಾಗಿದ್ದವರು ಕನ್ನಡದ ಪ್ರಸಿದ್ದ ರಂಗ ಕಲಾವಿದೆ ಅಶ್ವತ್ಥಮ್ಮ. ಈ ಚಿತ್ರದ ನಾಯಕರಾದ ತ್ಯಾಗರಾಜ ಭಾಗವತರ್ ಕೂಡ ಸ್ಟಾರ್ ಆಗಿ ಬಿಟ್ಟರು.
ವೈ.ವಿ.ರಾವ್ ಅವರು ನಾಯಕನ ಸ್ನೇಹಿತ ಮನೋಹರ ಎನ್ನುವ ಪಾತ್ರದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಈ ಚಿತ್ರ ದುಡ್ಡಿನ ಸುರಿಮಳೆಯನ್ನೇ ನಿರ್ಮಾಪಕರಿಗೆ ತಂದಿತು. ರಾವ್ ಅವರು ಈ ಚಿತ್ರದಿಂದ ಬಂದ ಲಾಭದಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮತ್ತು ಮದರಾಸಿನಲ್ಲಿ ಮನೆಯನ್ನು ಕಟ್ಟಿದರು. ಮುಂದೆ “ಜಗದೀಶ್ ಫಿಲಂಸ್” ಎಂಬ ಸ್ವಂತ ನಿಮಾಣ ಸಂಸ್ಥೆಯನ್ನು ಸ್ಥಾಪಿಸಿದ ವೈ.ವಿ.ರಾವ್ 1938ನೇ ಇಸವಿಯಲ್ಲಿ ಮಳ್ಳಿ ಪೆಳ್ಳಿ, ವಿಶ್ವಮೋಹಿನಿ, ತಾಸಿಲ್ದಾರ್ ಮುಂತಾದ ಯಶಸ್ವೀ ಚಿತ್ರಗಳನ್ನು ನಿರ್ದೇಶಿಸಿದರು.
1941ರಲ್ಲಿ ವೈ.ವಿ.ರಾವ್ 'ಸಾವಿತ್ರಿ' ಎನ್ನುವ ಚಿತ್ರವನ್ನು ನಿರ್ದೇಶಿಸಿದರು. ಪುರಾಣ ಪ್ರಸಿದ್ದವಾದ ಸತ್ಯವಾನ್-ಸಾವಿತ್ರಿಯ ಕಥೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಪ್ರಸಿದ್ದ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ನಾರದನ ಪಾತ್ರದಲ್ಲಿ ಅಭಿನಯಿಸಿ ಎಂಟು ಸೊಗಸಾದ ಗೀತೆಗಳನ್ನು ಹಾಡಿದ್ದರು. ರಾವ್ ಅವರು ಮುಂದೆ ನಿರ್ದೇಶಿಸಿದ ಚಿತ್ರ 'ಲವಂಗಿ' ಮೊಗಲ್ ದೊರೆ ಷಹಜಹಾನನ ಕಾಲದಲ್ಲಿ ಇದ್ದ ಜಗನ್ನಾಥ ಕವಿಯ ಜೀವನ ಚಿತ್ರಣವನ್ನು ಹೊಂದಿದ್ದ ಯಶಸ್ವೀ ಚಿತ್ರ.
ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ನಿರ್ದೇಶಿಸಿದ್ದ ರಾವ್ ಇನ್ನೊಂದು ಕನ್ನಡ ಚಿತ್ರವನ್ನು ನಿರ್ದೇಶಿಸಿದ್ದು 22 ವರ್ಷಗಳ ನಂತರ. 1956ರಲ್ಲಿ ತೆರೆ ಕಂಡ ‘ಭಾಗ್ಯಚಕ್ರ’ವನ್ನು ಅವರು ನಿರ್ದೇಶಿಸುವ ಹೊತ್ತಿಗೆ 61 ಕನ್ನಡ ಚಿತ್ರಗಳು ಬಂದಿದ್ದವು. ಈ ಚಿತ್ರದ ಮೂಲಕ ಗೀತಪ್ರಿಯ ಚಿತ್ರಸಾಹಿತಿಯಾಗಿ ಪರಿಚಿತರಾದರು. ಖ್ಯಾತ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಸಂಗೀತ ನೀಡಿದರು. ವೈ.ವಿ.ರಾವ್ ಅವರು ನಿರ್ದೇಶಿಸಿದ ಮೂರನೇ ಕನ್ನಡ ಚಿತ್ರ 'ನಾಗಾರ್ಜುನ' ಮೂರು ಭಾಷೆಗಳಲ್ಲಿ ನಿರ್ಮಾಣಗೊಂಡಿತು. ಈ ಎಲ್ಲಾ ಅವತರಣಿಕೆಗೂ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು. ರಾಜ್ ಕುಮಾರ್ ಅರ್ಜುನ ಮತ್ತು ನಾಗಾರ್ಜುನ ಹೀಗೆ ದ್ವಿಪಾತ್ರವನ್ನು ವಹಿಸಿದ್ದರು. ವಿಷ್ಣುವರ್ಧನ್ ಅವರ ತಂದೆ ಎಚ್.ಎಲ್.ನಾರಾಯಣ ರಾಯರು ಸಂಭಾಷಣೆಯನ್ನು ರಚಿಸಿದ್ದರು. 'ನಾಗಾರ್ಜುನ' ಯಶಸ್ಸಿನ ನಂತರ ವೈ.ವಿ.ರಾವ್ ಅವರು “ಜಗದೀಶ್ವರಿ ಫಿಲಂಸ್” ಎಂಬ ಲಾಂಛನವನ್ನು ಸ್ಥಾಪಿಸಿ “ಹೆಣ್ಣಿನ ಬಾಳು ಕಣ್ಣೀರು” ಎನ್ನುವ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು. ಚಿತ್ರ ಸಂಪೂರ್ಣವಾದರೂ ಬಿಡುಗಡೆಯಾಗಲಿಲ್ಲ.
1971ರಲ್ಲಿ ವೈ.ವಿ.ರಾವ್ ಅವರು 'ಜಿವಿತ್ ಆಮಚಿ ಆಶಾಂ' ಎನ್ನುವ ಕೊಂಕಣಿ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರ ಬಂದ ಎರಡು ವರ್ಷದ ನಂತರ ಎಂದರೆ 1973ರ ಫೆಬ್ರವರಿ 13ರಂದು ಬೆಂಗಳೂರಿನ ತಮ್ಮ ಮಲ್ಲೇಶ್ವರಂನ ಮನೆಯಲ್ಲಿ ವೈ.ವಿ.ರಾವ್ ಕೊನೆಯುಸಿರೆಳೆದರು.
ವೈ.ವಿ.ರಾವ್ ಅವರಿಗೆ ಅಂತರ್ಜಲ ಕಂಡು ಹಿಡಿಯುವ ಕೌಶಲ್ಯ ಕೂಡ ಇತ್ತು. ತಾಲ್ಲೋಕು ಪಂಚಾಯತಿ ಹಾಗೂ ಜಿಲ್ಲಾ ಆಡಳಿತಗಳೂ ಕೂಡ ಅವರ ನೆರವನ್ನು ಪಡೆದಿದ್ದವು. ವೈ. ವಿ. ರಾವ್ ಅವರ ಪುತ್ರಿ ವಿಜಯಲಕ್ಷ್ಮಿ ಕೊನೆಯ ದಿನಗಳಲ್ಲಿ ತಂದೆಯವರ ಜೊತೆ ಇದ್ದರು. ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ ಅವರು ವೈ. ವಿ. ರಾವ್ ಅವರಿಗೆ ರುಕ್ಮಿಣಿ ಎಂಬ ಪತ್ನಿಯಲ್ಲಿ ಜನಿಸಿದರು. ವೈ.ವಿ.ರಾವ್ ಅವರ ಅಣ್ಣ ಹನುಮಂತ ರಾವ್ ಅವರ ಮಗ ರಾಮಚಂದ್ರ ರಾವ್ 2003ರಲ್ಲಿ ವೈ.ವಿ.ರಾವ್ ಅವರ ಜನ್ಮಶತಮಾನೋತ್ಸವನ್ನು ಆಚರಿಸಿದರು.
ಸಮಗ್ರ ಮಾಹಿತಿ ಕೃಪೆ: ಎನ್. ಎಸ್. ಶ್ರೀಧರ ಮೂರ್ತಿ ಸಾರ್ Sreedhara Murthy Sir
On the birth anniversary of Y. V. Rao, Director of first Kannada talkie movie Sathi Sulochana
ಕಾಮೆಂಟ್‌ಗಳು