ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಂಕಜ್ ಉಧಾಸ್


 ಪಂಕಜ್ ಉಧಾಸ್ 


ಪಂಕಜ್ ಉಧಾಸ್,  ಮೋಡಿ ಮಾಡಿದ್ದ ಮಧುರ ಗಝಲ್ ಗಾಯಕರು. ಅವರು ಹಾಡಿರುವ 'ಚಂದಕ್ಕಿಂತ ಚಂದ ನೀನೆ ಸುಂದರ' ಕನ್ನಡ ಚಿತ್ರಗೀತೆಯಂತೆಯೇ, ಅವರು ಮಂದಸ್ಮಿತರಾಗಿ ಮೂಡಿಸುತ್ತಿದ್ದ ಸುಶ್ರಾವ್ಯ ಗಾನಮಾಧುರ್ಯವೂ ಚಂದವಿತ್ತು. ಸಾಜನ್ ಚಿತ್ರದ 'ಜೀಯೇ ತೋ ಜೀಯೇ ಕೈಸೆ' ಗೀತೆಯ ಮಾಧುರ್ಯವೂ ಆ ಗೀತೆಯ ಚಿತ್ರಣದಲ್ಲಿರುವ ಮಾಧುರಿ ದೀಕ್ಷಿತಳ ಸುಂದರ ಮೊಗದಷ್ಟೇ ಮಧುರ ನೆನಪು.

ಪಂಕಜ್ ಉಧಾಸ್ ಗುಜರಾಥಿನ ಜೇಟ್ಪುರದಲ್ಲಿ 1951ರ ಮೇ 17ರಂದು ಜನಿಸಿದರು.  ತಂದೆ ಕೇಶುಭಾಯ್ ಉಧಾಸ್.  ತಾಯಿ ಜೀತುಬೆನ್. ತಂದೆ ಕೃಷಿಕರು.  ಹಿರಿಯ ಅಣ್ಣ ಮನ್ಹರ್ ಉಧಾಸ್ ಹಿಂದೀ ಚಲನಚಿತ್ರ ಗಾಯನದಲ್ಲಿ ಒಂದಿಷ್ಟು ಹಾಡಿದರು.  ಎರಡನೇ ಅಣ್ಣ ನಿರ್ಮಲ್ ಉಧಾಸ್ ಗಝಲ್ ಗಾಯಕರು.  ಅಣ್ಣಂದಿರ ಜೊತೆ ಒಮ್ಮೊಮ್ಮೆ ಪಂಕಜ್ ಕಾರ್ಯಕ್ರಮಗಳಲ್ಲಿ ಹಾಡಿದ್ದರು. ಪಂಕಜ್ ಉಧಾಸ್ ಭಾವನಗರದಲ್ಲಿ ಶಾಲಾ ವಿದ್ಯಾಭ್ಯಾಸ ನಡೆಸಿದರು.  ರಾಜ್‍ಕೋಟ್ನಲ್ಲಿನ ಸಂಗೀತ ನಾಟ್ಯ ಅಕಾಡೆಮಿಯಲ್ಲಿ ತಬಲಾವಾದನದ ಸೂಕ್ಷ್ಮಗಳನ್ನು ಅರಿತರು. ಮುಂದೆ ಇವರ ಕುಟುಂಬ ಮುಂಬೈಗೆ ಬಂದಾಗ ವಿಲ್ಸನ್ ಕಾಲೇಜು ಮತ್ತು  ಸೈಂಟ್ ಗ್ಸೇವಿಯರ್ಸ್ ಕಾಲೇಜುಗಳಲ್ಲಿ ಓದಿ ವಿಜ್ಞಾನ ಪದವೀಧರರಾದರು. ಜೊತೆಗೆ ಮಾಸ್ಟರ್ ನವರಂಗ್ ಅವರಲ್ಲಿ ಶಾಸ್ತ್ರೀಯ ಸಂಗೀತಗಾಯನ ಕಲಿತರು.

ಪಂಕಜ್ ಉಧಾಸ್ ಮೊದಲು ಹಾಡಿದ್ದು ಉಷಾ ಖನ್ನಾ ಸಂಗೀತ ಸಂಯೋಜನೆಯ 'ಕಾಮ್ನಾ' ಚಿತ್ರದಲ್ಲಿ.  ಚಿತ್ರ ಯಶಸ್ವಿಯಾಗದಿದ್ದರೂ ಪಂಕಜ್ ಅವರ ಗಾಯನ ಗಮನ ಸೆಳೆಯಿತು. ಈ ಮಧ್ಯೆ ಗಝಲ್ ಗಾಯನದ ಕುರಿತು ಆಸಕ್ತಿ ಮೂಡಿ ಅದಕ್ಕಾಗಿ ಶ್ರದ್ಧೆಯಿಂದ ಉರ್ದು ಅಭ್ಯಾಸ ಮಾಡಿದರು.  ಹತ್ತು ತಿಂಗಳ ಕಾಲ ಅಮೆರಿಕ ಮತ್ತು ಕೆನಡಾಗಳಲ್ಲಿ ಗಝಲ್ ಕಚೇರಿಗಳನ್ನು ಕೊಟ್ಟು ಹೊಸ ಉತ್ಸಾಹ ಉಲ್ಲಾಸಗಳಿಂದ ಭಾರತಕ್ಕೆ ಹಿಂದಿರುಗಿದರು.

ಪಂಕಜ್ ಉಧಾಸ್ ಅವರ ಮೊದಲ ಆಲ್ಬಂ 'ಆಹತ್' 1980ರಲ್ಲಿ ಬಿಡುಗಡೆಯಾಯ್ತು.  1981ರಲ್ಲಿ 'ಮುಕರಾರ್', 1982ರಲ್ಲಿ 'ತರ್ರನ್ನಮ್', 1983ರಲ್ಲಿ 'ಮೆಹಫಿಲ್' ಆಲ್ಬಮ್ಗಳು ಮೂಡಿಬಂದವು. ಹೀಗೆ ನಿರಂತರ ಯಶಸ್ಸಿನಿಂದ 2011ರವರೆಗೆ ನೂರಾರು ಗೀತೆಗಳು ತುಂಬಿದ ಅವರ 50ಕ್ಕೂ ಹೆಚ್ಚು ಆಲ್ಬಂಗಳು ಬಂದವು.

ಪಂಕಜ್ ಉಧಾಸ್ 1986ರಲ್ಲಿ 'ನಾಮ್' ಚಿತ್ರದ 'ಚಿಟ್ಟೀ ಆಯೀ ಹೈ' ಗೀತೆ ಹಾಡಿದರು.  1990ರಲ್ಲಿ ಲತಾ ಮಂಗೇಶ್ಕರ್ ಅವರೊಂದಿಗೆ 'ಘಾಯಾಲ್' ಚಿತ್ರಕ್ಕಾಗಿ ಜನಪ್ರಿಯ 'ಮಹಿಯಾ ತೇರಿ ಕಸಮ್' ಗೀತೆ ಹಾಡಿದರು. 1994ರಲ್ಲಿ ಮೊಹ್ರಾ ಚಿತ್ರಕ್ಕೆ ಸಾಧನಾ ಸರ್ಗಂ ಜೊತೆಗೂಡಿ  'ನ ಕಜ್ರೇಕಿ ಧಾರ್' ಹಾಡಿದರು. ಮುಂದೆ ಸಾಜನ್, ಯೇಹ್ ದಿಲ್ಲಗಿ, ಫಿರ್ ತೇರಿ ಕಹಾನಿ ಯಾದ್ ಆಯೀ ಸೇರಿದಂತೆ ಅನೇಕ  ಚಿತ್ರಗಳಿಗೆ ಹಾಡಿದರು.

1987ರಲ್ಲಿ ಮ್ಯೂಸಿಕ್ ಇಂಡಿಯಾ ಬಿಡುಗಡೆ ಮಾಡಿದ ಪಂಕಜ್ ಉಧಾಸ್ ಅವರ 'ಶಾಗುಫ್ತಾ' ಆಲ್ಬಮ್ ಭಾರತದಲ್ಲಿ ಬಿಡುಗಡೆಯಾದ ಮೊದಲ ಕಾಂಪ್ಯಾಕ್ಟ್ ಡಿಸ್ಕ್ ಎನಿಸಿತು. ಪಂಕಜ್ ಉದಾಸ್ ಸೋನಿ ಎಂಟರ್‍ಟೈನ್ಮೆಂಟ್ ವಾಹಿನಿಯಲ್ಲಿ 'ಆದಾಬ್ ಆರ್ಜ್ ಹೈ' ಎಂಬ ಪ್ರತಿಭಾ ಶೋಧದ ಕಾರ್ಯಕ್ರಮ ನಡೆಸಿದರು.

ಪ್ರಸಿದ್ಧ ಆಲ್ಬರ್ಟ್ ಹಾಲ್ ಸೇರಿದಂತೆ ಎಲ್ಲ ಪ್ರತಿಷ್ಟಿತ ವೇದಿಕೆಗಳಲ್ಲಿ ಮತ್ತು ದೇಶ ವಿದೇಶಗಳಲ್ಲಿ ಪಂಕಜ್ ಉಧಾಸ್ ಅವರ ಗಾಯನ ಸಂಗೀತರಸಿಕರನ್ನು ತಣಿಸಿತ್ತು.

ಪಂಕಜ್ ಉಧಾಸ್ ಅವರಿಗೆ 2006ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಇಂಥ ಮುದ್ದು ಮುಖದ ಸುಶ್ರಾವ್ಯ ಗಾಯಕನಿಗೂ ಮುಪ್ಪು ಸಾವುಗಳೇ ಎಂದು ಮನ ಖೇದಗೊಳ್ಳುತ್ತಿದೆ. ಪಂಕಜ್ ಉಧಾಸ್ 2024ರ ಫೆಬ್ರುವರಿ 26ರಂದು ನಿಧನರಾದರು ಎಂದರೆ ನಂಬಲಾಗುತ್ತಿಲ್ಲ. ಅವರು ನಮ್ಮೊಳಗೆ ಅವರ ಸುಂದರ ನಗುಮುಖವಾಗಿ ಮತ್ತು ಸುಶ್ರಾವ್ಯ ಸಂಗೀತವಾಗಿ ನಿರಂತರವಾಗಿ ಇರುತ್ತಾರೆ. 

On the birthday of melodious ghazal singer Pankaj Udhas 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ