ಬಿ. ಎಸ್. ಚಂದ್ರಶೇಖರ್
ಬಿ. ಎಸ್. ಚಂದ್ರಶೇಖರ್
ಕೆಲವರನ್ನು ನೆನೆದರೆ ಮನ ತುಂಬಿ ಬರುತ್ತೆ. ಅಂತಹ ಶ್ರೇಷ್ಠರಲ್ಲಿ ನಮ್ಮ ಬಿ. ಎಸ್. ಚಂದ್ರಶೇಖರ್ ಒಬ್ಬರು.
ಚಂದ್ರು ಹುಟ್ಟಿದ ದಿನ ಮೇ 17, 1945. ಭಗವತ್ ಸುಬ್ರಮಣ್ಯ ಚಂದ್ರಶೇಖರ್ ಅವರು ನಮ್ಮ ಭಾರತೀಯ ಕ್ರಿಕೆಟ್ಟಿಗೆ ಅಂದಿನ ದಿನಗಳಲ್ಲಿ ಘನತೆ ತಂದವರು.
ಭಾರತದ ಸ್ಪಿನ್ ಚತುಷ್ಟಯರಾದ ಚಂದ್ರು, ಪ್ರಸನ್ನ, ಬೇಡಿ ಮತ್ತು ವೆಂಕಟ್ ಇವರು ಕ್ರಿಕೆಟ್ ಎಂಬ ವಿಶ್ವ ಮರೆಯಲಾಗದ ಮಹತ್ವದ ನಿಧಿಗಳು. ಭಾರತಕ್ಕೆ ಇಂಗ್ಲೆಂಡಿನಲ್ಲಿ ಸರಣಿ ವಿಜಯ, ಆಸ್ಟ್ರೇಲಿಯಾದ ವಿರುದ್ಧ ಸರಣಿ ವಿಜಯ ಇವಕ್ಕೆಲ್ಲಾ ನಾಂದಿ ಹಾಡಲಿಕ್ಕೆ ಕಾರಣೀಭೂತರಾದವರು ನಮ್ಮ ಚಂದ್ರು. ಅವರು ಪ್ರಸನ್ನ, ವಿಶಿ, ಕಿರ್ಮಾನಿ ಇದ್ದ ಕರ್ನಾಟಕ ತಂಡ ಅಂದಿನ ಶ್ರೀಮಂತ ಮತ್ತು ಅಧಿಕಾರಿಶಾಹಿ ಮುಂಬೈ ತಂಡಕ್ಕೆ ಕೇವಲ ಪ್ರತಿಭೆಯ ಮೂಲಕವಾಗಿ ನೀಡಿದ ಸ್ಪರ್ಧೆ ಮರೆಯಲಾಗದ್ದು. ಅದು ಎಷ್ಟೊಂದು ಪ್ರೇರಕವಾಗಿತ್ತೆಂದರೆ, ಒಮ್ಮೆ ಕರ್ನಾಟಕದಿಂದ ಏಳು ಜನ ಟೆಸ್ಟ್ ಆಟಗಾರರು ಭಾಗವಹಿಸುವಂತಹ ಶಕ್ತಿ ನಿರ್ಮಿಸಿತ್ತು. ಕರ್ನಾಟಕಕ್ಕೆ ಪ್ರತಿಷ್ಠಿತ ರಣಜಿ ಟ್ರೋಫಿ ಪ್ರಶಸ್ತಿಯನ್ನು ಕೂಡಾ ಮೊತ್ತಮೊದಲಬಾರಿಗೆ ತಂದಿತ್ತು.
ನಮ್ಮ ಸಚಿನ್ ಬರುವುದಕ್ಕೆ ಮುಂಚೆ ವಿಶ್ವದಲ್ಲಿ ಯಾರು ಅತ್ಯುತ್ಕೃಷ್ಟ ಬ್ಯಾಟುದಾರ ಎಂದರೆ ತಕ್ಷಣ ಹೊಳೆಯುವ ಹೆಸರು ವೆಸ್ಟ್ ಇಂಡೀಜ್ ತಂಡದ ವಿವಿಯನ್ ರಿಚರ್ಡ್ಸ್. ವಿವಿಯನ್ ರಿಚರ್ಡ್ಸ್ ಹೇಳುತ್ತಾರೆ "ನನಗೆ ಅತ್ಯಂತ ಸವಾಲು ಒಡ್ಡಿದ ಬೌಲರ್ ಅಂದರೆ ಬಿ.ಎಸ್. ಚಂದ್ರಶೇಖರ್" ಎಂದು.
ಸಣ್ಣ ವಯಸ್ಸಿನಲ್ಲೇ ಪೋಲಿಯೋಗೆ ತುತ್ತಾಗಿ ತಮ್ಮ ಬಲಗೈ ಶಕ್ತಿ ಕಳೆದುಕೊಂಡ ಚಂದ್ರು ಎಡಗೈನಲ್ಲಿ ಚಂಡೆಸೆಯುವ ಮೂಲಕ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡು, ಮುಂದೆ ಅಗಾಧ ಬಲಗೈ ಬೌಲಿಂಗ್ ಶಕ್ತಿಯಾಗಿ ಬೆಳೆದದ್ದು ಕ್ರಿಕೆಟ್ ಚರಿತ್ರೆಯ ವಿಸ್ಮಯಗಳಲ್ಲೊಂದು. ಕೇವಲ 58 ಟೆಸ್ಟ್ ಪಂದ್ಯ ಆಡಿ 242 ವಿಕೆಟ್ ಉರುಳಿಸಿದ ಚಂದ್ರು ಅವರ ಸಾಧನೆ ಅಮೋಘವಾದದ್ದು. ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ 38ರನ್ನು ನೀಡಿ 6 ವಿಕೆಟ್ ಉರುಳಿಸಿ ಭಾರತಕ್ಕೆ ಸರಣಿ ಜಯ ಒದಗಿಸಿದ ಅವರ ಸಾಧನೆಯನ್ನು, ಶತಮಾನದ ಒಂದು ಇನ್ನಿಂಗ್ಸಿನಲ್ಲಿನ ಅತ್ಯುತ್ಕೃಷ್ಟ ಬೌಲಿಂಗ್ ಎಂದು ಪರಿಗಣಿಸಿದ ವಿಸ್ಡೆನ್, ಅವರಿಗೆ 2002ರ ವರ್ಷದಲ್ಲಿ ಪ್ರಶಸ್ತಿ ಗೌರವವನ್ನು ಅರ್ಪಿಸಿತು.
ಕ್ರಿಕೆಟ್ ಬೌಲಿಂಗಿನಲ್ಲಿ ಚಂದ್ರು ಅವರ ಗೂಗ್ಲಿ ಅತ್ಯಂತ ಊಹಿಸಲಸಾಧ್ಯವಾದ ಕಷ್ಟಕಾರವಾದ ಬಾಲ್ ಎಂದು ಮನ್ನಣೆ ಪಡೆದಿದೆ. ಅವರ ಬ್ಯಾಟಿಂಗ್ ಸಾಧನೆ ನಗೆ ಹುಟ್ಟಿಸುವಂತದ್ದಾಗಿದ್ದು, 23 ಬಾರಿ ಸೊನ್ನೆ ರನ್ನು ಗಳಿಸಿ ಅತ್ಯಧಿಕ ಶೇಕಡಾವಾರು ಸೊನ್ನೆ ಪ್ರದರ್ಶನ ನೀಡಿದ ವಿಶ್ವದಾಖಲೆ ಅವರದ್ದಾಗಿದೆ. ಆಸ್ಟ್ರೇಲಿಯಾದಲ್ಲಿ ಸತತವಾಗಿ ನಾಲ್ಕು ಸೊನ್ನೆ ಗಳಿಸಿದ್ದಕ್ಕಾಗಿ ಅವರಿಗೆ ದೊಡ್ಡ ರಂಧ್ರವಿರುವ ಒಂದು ಬ್ಯಾಟ್ ಅನ್ನು ಪ್ರಶಸ್ತಿಯಾಗಿ ನೀಡಲಾಗಿತ್ತು. ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ 4 ರನ್ನುಗಳು ಮಾತ್ರ. ಅವರು ಒಟ್ಟಾರೆ ಗಳಿಸಿದ 167ರನ್ನುಗಳು ಅವರು ಉರುಳಿಸಿದ 242 ವಿಕೆಟ್ಟುಗಳಿಗಿಂತ ತುಂಬಾ ಹಿಂದುಳಿದದ್ದು ಕೂಡಾ ಅಚ್ಚರಿಯೇ. ಹಾಗೆಂದ ಮಾತ್ರಕ್ಕೆ ಅವರ ಬ್ಯಾಟಿಂಗ್ ಸಾಧನೆ ಕಡೆಗಣಿಸುವಂತದ್ದೇನೂ ಆಗಿರಲಿಲ್ಲ. 1976ರ ಸರಣಿಯಲ್ಲಿ ವಿಶ್ವನಾಥ್ ಅವರೊಂದಿಗೆ ಅವರು ದೃತಿಗೆಡದೆ ಸಾಕಷ್ಟು ಹೊತ್ತು ನಡೆಸಿದ ಬ್ಯಾಟಿಂಗ್, ವೆಸ್ಟ್ ಇಂಡೀಜ್ ವಿರುದ್ಧದ ಟೆಸ್ಟ್ ವಿಜಯಕ್ಕೆ ಮಹತ್ವದ ಕೊಡುಗೆಯಾಗಿತ್ತು.
ಕ್ರಿಕೆಟ್ ನಿವೃತ್ತಿ ನಂತರದಲ್ಲಿ ಚಂದ್ರು ತೀವ್ರವಾದ ಅಪಘಾತವೊಂದರಲ್ಲಿ ಪ್ರಾಣಾಪಾಯದಿಂದ ಪಾರಾದರು. ಚಂದ್ರು ಅವರ ಬದುಕು ಸುಂದರವಾಗಿರಲಿ, ಚಂದ್ರು ನೀವು ಎಂದೆಂದೂ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದೀರಿ.
On the birthday of great bowler B.S. Chandrashekar, B S Chandrashekhar
Simply Marvelous LEGEND 🙂👍
ಪ್ರತ್ಯುತ್ತರಅಳಿಸಿ