ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಂ.ಗು. ಬಿರಾದಾರ


 ಶಂ.ಗು. ಬಿರಾದಾರ


ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೊ ಸುಂದರ

ಇದು ನಾವು ಪುಟ್ಟವರಾಗಿದ್ದ ದಿನಂಪ್ರತಿ ಹಾಡುತ್ತಿದ್ದ ಗೀತೆ.  ಈ ಗೀತೆಯನ್ನು ಮೂಡಿಸಿದವರು ಕನ್ನಡದ ಮಹಾನ್ ವಿದ್ವಾಂಸರಾದ ಶಂ. ಗು. ಬಿರಾದಾರರು. 

ನವಿರಾದ ಭಾಷೆ, ಸಹಜಮಾತಿನ ಲಯ, ಕಾವ್ಯವಾಗಿ ಮನಸೂರೆಗೊಳ್ಳುವ ಪ್ರಾಸಗಳಿಂದ ಮಕ್ಕಳ ಮನಮುಟ್ಟುವಂತೆ ಮಕ್ಕಳ ಪದ್ಯಗಳನ್ನು ರಚಿಸಿರುವ ಸತ್ವಶಾಲಿ ಕವಿ ಬಿರಾದಾರ ಅವರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಬಬಲೇಶ್ವರದಲ್ಲಿ 1926ರ  ಮೇ 17 ರಂದು ಜನಿಸಿದರು. ತಂದೆ ಗುರುಗೌಡ ಮತ್ತು ತಾಯಿ ರುದ್ರಾಂಬಿಕಾ.

ಬಿರಾದಾರರ ಪ್ರಾರಂಭಿಕ ಶಿಕ್ಷಣ ಬಬಲೇಶ್ವರದಲ್ಲಿ ನೆರವೇರಿತು. ಅವರು ಓದಿನಲ್ಲಿ ಸದಾ ಮುಂದು. ಪತ್ರಿಕೆ, ಪುಸ್ತಕಗಳೆಂದರೆ ಕಂಡದ್ದನ್ನು ಓದುವ ಹವ್ಯಾಸ. ಪ್ರಾಥಮಿಕ ಹಂತದಲ್ಲಿ ಇವರಿಗೆ ಓದುವ, ಬರೆಯುವ ಪ್ರೇರಣೆ ನೀಡಿದವರೆಂದರೆ ಉಪಾಧ್ಯಾಯರಾಗಿದ್ದ ಪ್ರ.ವಿ. ಕರ್ಜಗಿಯವರು. ಅವರು ಹಳಗನ್ನಡ, ಹೊಸಗನ್ನಡವಲ್ಲದೆ ಪಠ್ಯೇತರ ಚಟುವಟಿಕೆಗಳಿಗೂ ಉತ್ತೇಜನ ನೀಡುತ್ತಿದ್ದರು. ಸಾಹಿತ್ಯಾಭಿರುಚಿಯನ್ನು  ವಿದ್ಯಾರ್ಥಿಗಳಲ್ಲಿ ಬೆಳೆಸಲು ಆಗಾಗ್ಗೆ ಬರವಣಿಗೆಗೆ ಹಚ್ಚುತ್ತಿದ್ದರು. ಆಗ ಎರಡನೆಯ ಮಹಾಯುದ್ಧದ ಸಮಯ. ‘ಮಹಾಯುದ್ಧದಿಂದ ಸಾಧಕವೋ, ಬಾಧಕವೋ?’ ಎಂಬ ವಿಷಯ ಕೊಟ್ಟು ಪ್ರಬಂಧ ರಚಿಸಲು ಹೇಳಿದಾಗ ಬಿರಾದಾರ ಅವರು ಬರೆದ ಪ್ರಬಂಧ ಓದಿ ‘ನನಗೂ ಈ ರೀತಿ ಬರೆಯಲು ಸಾಧ್ಯವಿಲ್ಲ’ ಎಂದು ನುಡಿದರಂತೆ. ಹೀಗೆ ಬಾಲ್ಯದಿಂದಲೇ ಬಿರಾದಾರ ಅವರಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯತೊಡಗಿತ್ತು.

ಪ್ರಾಥಮಿಕ ಶಾಲೆಯ ನಂತರ ಬಿರಾದಾರರು ಮಾಧ್ಯಮಿಕ ಶಾಲೆಗಾಗಿ ಬಿಜಾಪುರಕ್ಕೆ ತೆರಳಬೇಕಿತ್ತು. ಅನುಕೂಲವಿಲ್ಲದೆ ಹಳ್ಳಿಯಲ್ಲೇ ಉಳಿದಾಗ, ವಾಚನಾಲಯವನ್ನು ತೆರೆದರು.  ಅಲ್ಲಿ ದೊರೆಯುತ್ತಿದ್ದ ಕುವೆಂಪು, ತ್ರಿವೇಣಿ, ಕಟ್ಟೀಮನಿ, ಪುರಾಣಿಕ ಮೊದಲಾದವರ ಸಾಹಿತ್ಯವನ್ನೆಲ್ಲಾ ಓದಿ ಮುಗಿಸಿದರು. ಓದುತ್ತಾ ಹೋದಂತೆಲ್ಲಾ ಅವರಲ್ಲಿ ಸಾಹಿತ್ಯಾಸಕ್ತಿ ಬೆಳೆಯತ್ತಲೇಹೋಯಿತು.

‘ಗೆಳೆಯರ ಗುಂಪು’ ಕಟ್ಟಿಕೊಂಡು ಗುರುಪಾದೇಶ್ವರ ಮಠದ ಪುರಾಣ ಪ್ರವಚನ ಮುಕ್ತಾಯದ ದಿನ ‘ಯಾರ ತಪ್ಪು?’ ನಾಟಕ ಬರೆದು ಸ್ನೇಹಿತರನ್ನೆಲ್ಲಾ ಸೇರಿಸಿಕೊಂಡು ಪ್ರದರ್ಶಿಸಿ ಸ್ವಾಮಿಗಳ ಕೈಯಿಂದಲೇ ಶಹಬಾಶ್‌ಗಿರಿ ಪಡೆದರು.

ಮಹಾತ್ಮರ ದಿನಾಚರಣೆ, ನಾಟಕ ಪ್ರದರ್ಶನಗಳ ಜೊತೆಗೆ ಕೈಬರಹದ ಪತ್ರಿಕೆ ‘ಕಿಡಿ’ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸತೊಡಗಿದರು. ಸ್ವಾತಂತ್ರ್ಯ ಹೋರಾಟದ ಆ ದಿನಗಳಲ್ಲಿ ಅವರು  ಹೆದರದೆ ಪ್ರದರ್ಶಿಸಿದ ಮತ್ತೊಂದು ನಾಟಕ ‘ಪೋಲೀಸ್‌ಪಾಶ’. ಗೆಳೆಯರ ಬಳಗದಿಂದ ಸೇವಾದಳ ಸಂಘ ಸ್ಥಾಪಿಸಿ ಬಾಬು ರಾಜೇಂದ್ರ ಪ್ರಸಾದರು ಬಾಗಲಕೋಟೆಗೆ ಬಂದಿದ್ದಾಗ ಸ್ವಯಂ ಸೇವಕರಾಗಿ ದುಡಿದರು.

ಮುಲ್ಕಿ ಪರೀಕ್ಷೆಯ ನಂತರ ಬಿರಾದಾರರು  ಬಿಜಾಪುರದ ಟ್ರೈನಿಂಗ್‌ ಕಾಲೇಜಿಗೆ ಸೇರಿದರು. ರೋಹಿಡೇಕರ ಶಾಮರಾಯರು ಇವರ ಗುರುಗಳು. ಸಾಹಿತ್ಯಾಭಿರುಚಿಗೆ ಇವರು ನೀಡಿದ ಸಹಕಾರದಿಂದ ಬಿರಾದಾರ ಅವರ ಮೊಟ್ಟಮೊದಲ ‘ಶಿಕ್ಷಕ ಶಿಕ್ಷಿತ’ ಎಂಬ ಕತೆ ಸವಣೂರ ಗುಂಡೂರಾಯರು ಬಿಜಾಪುರದಿಂದ ಹೊರಡಿಸುತ್ತಿದ್ದ ‘ಕರ್ನಾಟಕ ವೈಭವ’ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ನಂತರ ‘ಸ್ವಾತಂತ್ರ್ಯ ದೇವಿ’ ಎಂಬ ಕವಿತೆಯು ಜಲೇಟಿ ವಿ. ಗುಪ್ತ ಮತ್ತು ಡಿ.ಎಸ್‌. ರಾಮಕೃಷ್ಣರಾವ್‌ ಅವರು ಬೆಂಗಳೂರಿನಿಂದ ಹೊರಡಿಸುತ್ತಿದ್ದ ‘ಕಥಾವಳಿ’ ಪತ್ರಿಕೆಯಲ್ಲಿ ಪ್ರಕಟವಾಯಿತು.

ಪ್ರಥಮ ವರ್ಗದಲ್ಲಿ ಉತ್ತೀರ್ಣರಾದ ನಂತರ ಬಿರಾದಾರರಿಗೆ ವಿಜಾಪುರ ತಾಲ್ಲೂಕಿನ ಸಾರವಾಡದ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಉಪಾಧ್ಯಾಯರ ಹುದ್ದೆ ದೊರೆಯಿತು. ನಂತರ ಜುಮನಾಳ, ಟಕ್ಕಳಕಿ, ತಿಕೋಟ ಮುಂತಾದೆಡೆ ಉಪಾಧ್ಯಾಯರಾಗಿ ದುಡಿದು 1981ರಲ್ಲಿ ನಿವೃತ್ತರಾದರು.

ಶಂ. ಗು. ಬಿರಾದಾರರು ಹಲವಾರು ಕವಿತೆಗಳನ್ನು ಬರೆದಂತೆ ಕಥೆಗಳನ್ನೂ ಬರೆಯತೊಡಗಿದ್ದು ‘ತಮ್ಮನ ಸಂತೆ’ ಕತೆಯು ಕಥಾವಳಿ ಪತ್ರಿಕೆಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆಯಿತು.  ಆ ನಂತರವೂ ಹಲವಾರು ಕತೆಗಳು ಪ್ರಕಟಗೊಂಡವು. ಬಿಜಾಪುರ ಜಿಲ್ಲೆಯವರೇ ಆದ ಮಕ್ಕಳ ಕವಿ ‘ಸಿಸು’ ಸಂಗಮೇಶರ ಸ್ನೇಹಲಾಭವೂ ದೊರೆತು ‘ಸಿಸು’ ರವರು ನಡೆಸುತ್ತಿದ್ದ ಭಾರತಿ ಭಂಡಾರ ಪ್ರಕಾಶನ ವತಿಯಿಂದ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ‘ನೌಕರಿಯ ಹುಚ್ಚು’ ನಾಟಕಕ್ಕೆ ಬಹುಮಾನ ಪಡೆದರು. ಇದೇ ಸಂದರ್ಭದಲ್ಲಿ ಇವರು ಬರೆದ ಕತೆ, ಕವಿತೆಗಳು ಕಥಾವಳಿ, ಕತೆಗಾರ, ಮಲೆನಾಡು, ಉಷಾ ಮುಂತಾದ ಪತ್ರಿಕೆಗಳಲ್ಲಿ ಬೆಳಕು ಕಂಡವು.

ಬಿರಾದಾರರು  ತಾವು ರಚಿಸಿದ ‘ತಲೆ ಬರುಡೆ’ ಕವನವನ್ನು 1950ರಲ್ಲಿ ಸೊಲ್ಲಾಪುರದಲ್ಲಿ ಜರುಗಿದ ಎಂ. ಆರ್.  ಶ್ರೀನಿವಾಸಮೂರ್ತಿ ಅವರು  ಸಮ್ಮೆಳನಾಧ್ಯಕ್ಷರಾಗಿದ್ದ  ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಾಚಿಸಿದಾಗ ಅಲ್ಲಿ  ಉಪಸ್ಥಿತರಿದ್ದ  ದ.ರಾ. ಬೇಂದ್ರೆಯವರು ಭಲೇ ಹುಡುಗಾ, ‘ನಿನ್ನ ತಲೆಬುರುಡೆಯಲ್ಲಿ ಎಂಥ ಜ್ಞಾನ ತುಂಬಿದೆ’ ಎಂದು ಪ್ರಶಂಸಿಸಿದರಂತೆ.

ಭುಜೇಂದ್ರ ಮಹಿಷವಾಡಿ, ಬಿ.ಎ. ಸನದಿಯವರು ಸ್ನೇಹ ಪ್ರಕಾಶನದಡಿಯಲ್ಲಿ ಪುಸ್ತಕಗಳನ್ನು  ಪ್ರಕಟಿಸುತ್ತಿದ್ದು, ಕವಿತಾ ಸ್ಪರ್ಧೆ ಏರ್ಪಡಿಸಿದಾಗ ಬಿರಾದಾರರ ‘ಬುದ್ಧಿಯ ಹೇಳ್ವಾರು’ ಪದ್ಯಕ್ಕೆ ದ್ವಿತೀಯ ಬಹುಮಾನ ಸಂದಿತು. ಇದಲ್ಲದೆ ಆನಂದಕಂದರು ಸಂಪಾದಿಸುತ್ತಿದ್ದ ಜಯಂತಿ ಪತ್ರಿಕೆಯಲ್ಲೂ ಕತೆ, ಕವಿತೆಗಳು ಪ್ರಕಟಗೊಂಡು ಬಹುಮಾನ ಗಳಿಸಿದವು.

ಇವರು ಬರೆದ ‘ನಮ್ಮ ಕನಸು’
ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೊ ಸುಂದರ

ಎಂಬ ಕವನವು ಕರ್ನಾಟಕ ಸಾಹಿತ್ಯ ಅಕಾಡಮಿ ಮಕ್ಕಳ ಕವಿತೆಗಳ ಪುಸ್ತಕ ಆರನೆಯ ತರಗತಿಯ ಪಠ್ಯಪುಸ್ತಕ, ಮಹಾರಾಷ್ಟ್ರದ ಕನ್ನಡದ ನಾಲ್ಕನೆಯ ತರಗತಿಯ ಪಠ್ಯಪುಸ್ತಕ – ಹೀಗೆ ಹಲವಾರು ಕಡೆ ಸೇರ್ಪಡೆಯಾಗಿದ್ದವು.   ರಾಜ್ಯೋತ್ಸವ ಸಂದರ್ಭದಲ್ಲಿ ವಿಧಾನಸೌಧದ ಮುಂದೆ ಕುವೆಂಪುರವರ ‘ಜಯಭಾರತ ಜನನಿಯೆ ತನುಜಾತೆ’, ಡಿ.ಎಸ್‌. ಕರ್ಕಿಯವರ ‘ಹಚ್ಚೇವು ಕನ್ನಡ ದೀಪ’ ಕವಿತೆಗಳ ಜೊತೆಗೆ ಇವರ ‘ನಮ್ಮಕನಸು’ ಕವಿತೆಯನ್ನೂ ಮಕ್ಕಳು ಸಮೂಹ ಗಾಯನದಲ್ಲಿ ಹಾಡಿದ್ದರು.

ನಾಡಿನ ನೆಲ, ಜಲ, ವಿದ್ಯುತ್‌, ಹೆದ್ದಾರಿ, ರೈಲುಮಾರ್ಗ, ಕೈಗಾರಿಕೆ ಮೊದಲಾದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರವು ತಾರತಮ್ಯವೆಸಗಿದ್ದಕ್ಕಾಗಿ ಶಂ. ಗು. ಬಿರಾದಾರರು ‘ಕರ್ನಾಟಕ ವಿಕಾಸವೇದಿಕೆಯ’ ಮೂಲಕ ಪ್ರತಿಭಟಿಸಿದ್ದರು. ಗೋಕಾಕ ಚಳವಳಿಯಲ್ಲೂ ಭಾಗಿಯಾಗಿದ್ದರು. ವಿಜಾಪುರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ‘ಸಿಸು ಸಂಗಮೇಶರು' ಸ್ಥಾಪಿಸಿದ್ದ ಕರ್ನಾಟಕ ಮಕ್ಕಳ ಸಾಹಿತ್ಯ ಅಕಾಡಮಿಯು ಕೆಲವರ್ಷ ಒಳ್ಳೆಯ ಕೆಲಸಮಾಡಿ ಸ್ಥಗಿತಗೊಂಡಾಗ ಪುನಃ ಕೆಲ ಕ್ರಿಯಾಶೀಲ ಬರಹಗಾರರು ಪ್ರಾರಂಭಿಸಿದ ‘ಬಿಜಾಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ’ದ ಅಧ್ಯಕ್ಷರಾಗಿ (ಗೌರವಾಧ್ಯಕ್ಷರು- ‘ಸಿಸು’ ಸಂಗಮೇಶ) ದುಡಿದರು. ಹೀಗೆ ಹಲವಾರು ಸಂಘ ಸಂಸ್ಥೆಗಳು, ಸಾಹಿತ್ಯ ಸಂಘಟನೆಗಳಲ್ಲೂ ಪಾಲ್ಗೊಂಡು ಬಿಜಾಪುರ ಜಿಲ್ಲೆಯು ಮಕ್ಕಳ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಜಿಲ್ಲೆ ಎನಿಸುವಂತೆ ಮಾಡಿದರು.

ಬಿರಾದಾರರು  ರಚಿಸಿದ ‘ಬೆಳಕಿನೆಡೆಗೆ’ ಎಂಬ ಕಾದಂಬರಿಯು ಎರಡು ಶ್ರೀಮಂತ ಮನೆತನದ ನಡುವೆ ನಡೆಯುವ ವೈರತ್ವ, ಪ್ರೀತಿ-ಪ್ರೇಮ, ಮಕ್ಕಳ ಬಲಿ, ಶಾಲೆಯ ವಾತಾವರಣ, ಮುಖ್ಯೋಪಾಧ್ಯಾಯರ ಅವ್ಯವಹಾರ, ಕುಚೋದ್ಯಗಳನ್ನೂ ಬಣ್ಣಿಸುವ ಕಾದಂಬರಿಯಾಗಿದ್ದು, ಪ್ರಕಟಗೊಂಡನಂತರ ಇದು ನನ್ನದೇ ಪಾತ್ರ…. ಎಂದು ಓದಿದವರೆಲ್ಲರೂ ಹೋಲಿಸಿಕೊಂಡು, ಕೆಲವು ದುಷ್ಟ ವ್ಯಕ್ತಿಗಳ ಚರಿತ್ರೆ ಬಯಲಾದಾಗ ಅವಹೇಳನ ಮಾಡಿದ್ದಾರೆಂದು ಕಿಡಿಕಾರಿದರು. ಹೀಗೆ ಪ್ರಸ್ತುತ ವಿಷಯವನ್ನೇ ಆಯ್ದು ಬರೆದ ಕಾದಂಬರಿ ಬಿರುಗಾಳಿಯನ್ನೇ ಎಬ್ಬಿಸಿತು. ‘ಬಿರಾದಾರರ ಚೊಚ್ಚಲು ಕಾದಂಬರಿಯೇ ಅವರನ್ನೂ ಬಿರುದುದಾರರನ್ನಾಗಿ ಮಾಡಿದೆ” ಎಂದು ಪತ್ರಿಕೆಯೊಂದು ಪ್ರಶಂಸಿಸಿತು.

ಶಂ. ಗು. ಬಿರಾದಾರರು  ಬರೆದ ‘ರುದ್ರವೀಣೆ’ ಕಥಾಸಂಕಲನಕ್ಕೆ ಮೈಸೂರು ಸರಕಾರದ ಸಂಸ್ಕೃತಿ ಇಲಾಖೆಯ ಬಹುಮಾನ, ‘ಗಿಡ್ಡ ಹೆಂಡತಿ ಲೇಸು’ ಲಲಿತ ಪ್ರಬಂಧಗಳ ಸಂಕಲನಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದ ಬಹುಮಾನ, ‘ನೌಕರಿ ಹುಚ್ಚು’ ನಾಟಕಕ್ಕೆ ಭಾರತಿ ಸಾಹಿತ್ಯ ಭಂಡಾರದ ಪುರಸ್ಕಾರ, ನನ್ನ ಹಾಡು, ಕಾರಂಜಿ, ಮಂಗ್ಯಾ ಮಂಗ್ಯಾ ಕಿಸ್‌ಕಿಸ್‌ ಮತ್ತು ರೂಪಗುಣ ಈ ನಾಲ್ಕು ಮಕ್ಕಳ ಪದ್ಯಗಳ ಸಂಕಲನಕ್ಕೆ ರಾಜ್ಯ ಸರಕಾರದ ಬಹುಮಾನ, ‘ಶ್ರೀ ಸಿಂಧಗಿ ಪಟ್ಟದ್ದೇವರು’ ಜೀವನ ಚರಿತ್ರೆಗೆ ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತವು.

ಈ ಕೃತಿಗಳಲ್ಲದೆ ಬಸವಶತಕ (ಖಂಡಕಾವ್ಯ), ಭಾವಸಂಗಮ (ಕವನ ಸಂಕಲನ), ಬಬಲೇಶ್ವರ ಬೆಳಕು (ಚರಿತ್ರೆ), ದೇವನೊಡನೆ ಪ್ರಥಮ ರಾತ್ರಿ (ಕಥಾ ಸಂಕಲನ), ಭಯೋತ್ಪಾದಕರು (ಲಲಿತ ಪ್ರಬಂಧಗಳು), ಹಣತೆಗಳು (ಚುಟುಕುಹನಿಗವನ) ಪ್ರಕಟಗೊಂಡಿವೆ. ಇದಲ್ಲದೆ  ವಸೀತೆನೆ ಸುಲಗಾಯಿ ವಿಜಾಪುರ ಜಿಲ್ಲಾ ಕವಿಗಳ ಆಯ್ದ ಕವನಸಂಕಲನ, ವಿಜಯವಾಣಿ (ಸಾಹಿತ್ಯ ಸಮೀಕ್ಷೆ), ಮಕ್ಕಳ ಸಾಹಿತ್ಯ 1988 ಮತ್ತು ಮಕ್ಕಳ ಕತೆಗಳು (ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ), ಅರ್ಪಣ (ಮಕ್ಕಳ ಕವನ ಸಂಕಲನ) ಜಯತೀರ್ಥ ರಾಜಪುರೋಹಿತರ (ಅಭಿನಂದನ ಗ್ರಂಥ) ಮುಂತಾದ ಹಲವಾರು ಗ್ರಂಥಗಳನ್ನು ಸಂಪಾದಿಸಿದ್ದಾರೆ.

ಹೀಗೆ ಶಿಕ್ಷಕರಾಗಿದ್ದು ಮಕ್ಕಳ ಸಾಹಿತ್ಯಾಭಿವೃದ್ಧಿಗಾಗಿ ದುಡಿದ ಬಿರಾದಾರರಿಗೆ ರಾಜ್ಯ ಹಾಗೂ ರಾಷ್ಟ್ರದ ‘ಉತ್ತಮ ಶಿಕ್ಷಕ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳೂ ಸನ್ಮಾನಿಸಿದವು. 2000ದ ವರ್ಷದಲ್ಲಿ ಸ್ನೇಹಿತರು ಅರ್ಪಿಸಿದ ಅಭಿನಂದನ ಗ್ರಂಥ 'ಹೂವಿನ ಹಂದರ’.

ಶಂ. ಗು.  ಬಿರಾದಾರರ ಪುತ್ರಿ ಭಾರತಿ ಪಾಟೀಲ ಕವಯತ್ರಿಯಾಗಿ ಪ್ರಖ್ಯಾತರಾಗಿದ್ದಾರೆ.  

ಡಾ. ಚಂದ್ರಶೇಖರ ಪಾಟೀಲರು ಹೇಳುತ್ತಾರೆ  “ಶಂ. ಗು. ಬಿರಾದಾರರು ಕನ್ನಡದ ಹಿರಿಯ ಮಕ್ಕಳ ಸಾಹಿತಿ ಎಂದೇ ಖ್ಯಾತರು. ವಯಸ್ಸಿನಲ್ಲಿ ಹಿರಿಯರೇ; ಆದರೂ ಮುಗ್ಧತೆ ಮಾತ್ರ ಮಗುವಿನದೇ.  ಶಂಗು ಬಿರಾದಾರರ ಕವನದಲ್ಲಿ ಎಳೆಯರು ಗೆಳೆಯರಾಗಿ ನಾಳೆಯ ಹಿರಿಯರಾಗಲು ಸಿದ್ಧಗೊಳ್ಳುತ್ತಿರುವ ಕನಸಿನ ಹಂದರವಿದೆ. ಯಾವುದೇ ಭೂತದ ವೈಭವೀಕರಣವಿಲ್ಲ. ದೇಶ ಸೇವೆ-ಒಂದೆ ಮಾನವ ಕುಲ. ವಿಶ್ವ ಧರ್ಮದ ಬೀಸಿದೆ. ಪ್ರೀತಿಯ ಶ್ರೀಗಂಧ ತಾನು ಉರಿದು ಸೂಸುವ ಗಂಧವಿದೆ.”

ಈ ಮಹಾನ್ ವಿದ್ವಾಂಸ ಶಂಗು ಬಿರಾದಾರರು 2012ರ  ಜುಲೈ 26 ರಂದು ಈ ಲೋಕವನ್ನಗಲಿದರು. 

On the birth anniversary of great poet S. G. Biradar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ