ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿಯರ್ಸ್ ಬ್ರಾಸ್ನನ್


 ಪಿಯರ್ಸ್ ಬ್ರಾಸ್ನನ್


ಪಿಯರ್ಸ್ ಬ್ರೆಂಡನ್ ಬ್ರಾಸ್ನನ್ ಪ್ರಸಿದ್ಧ ನಟ.  ಜೇಮ್ಸ್ ಬಾಂಡ್ ಪಾತ್ರಗಳೂ ಸೇರಿ ಹಲವು ರೀತಿಯ ಚಿತ್ರಗಳಲ್ಲಿ ತನ್ನ ಸುರದ್ರೂಪ ಮತ್ತು ತೇಜಸ್ಸಿನಿಂದ ಆಕರ್ಷಿಸುವ ಕಲಾವಿದನೀತ.

ಪಿಯರ್ಸ್ ಬ್ರಾಸ್ನನ್ 1953ರ ಮೇ 16ರಂದು ಐರ್ಲೆಂಡಿನ ಲೌತ್ ಕೌಂಟಿಯ ಡ್ರೊಗೆದಾ ಎಂಬಲ್ಲಿ  ಜನಿಸಿದರು.  ಕ್ಯಾಥೋಲಿಕ್ ಕುಟುಂಬದಲ್ಲಿ ಬೆಳೆದ ಬ್ರಾಸ್ನನ್ ಶಿಕ್ಷಣ ಕ್ರಿಶ್ಚಿಯನ್ ಬ್ರದರ್ಸ್ ನಡೆಸುತ್ತಿದ್ದ ಸ್ಥಳೀಯ ಶಾಲೆಯಲ್ಲಿ ನಡೆಯಿತು. ಅಲ್ಲಿನದು ಬೂಟಾಟಿಕೆ ವ್ಯವಸ್ಥೆ ಎಂಬುದು ಅವರಲ್ಲಿರುವ ಖೇದಕರ ಭಾವ. ತಂದೆಯು ಕುಟುಂಬವನ್ನು ತ್ಯಜಿಸಿ ಹೊರಟುಹೋದನಂತರ ಬ್ರಾಸ್ನನ್ ತಾಯಿ ದಾದಿಯಾಗಿ ಕೆಲಸ ಮಾಡಲೋಸುಗ ಲಂಡನ್ಗೆ ಬಂದರು. ತಾಯಿ ದಾದಿಯಾಗಿ ಎಲ್ಲೋ ದುಡಿಯುತ್ತಿದ್ದದುರಿಂದ ಬ್ರಾಸ್ನನ್ ತನ್ನ ಅಜ್ಜ-ಅಜ್ಜಿಯರಾದ ಫಿಲಿಪ್ ಮತ್ತು ಕ್ಯಾಥ್ಲೀನ್ ಸ್ಮಿತ್ ಪಾಲನೆ-ಪೋಷಣೆಯಲ್ಲಿ ಬೆಳೆದರು. ಅವರ ಮರಣಾನಂತರ ಒಬ್ಬ ಚಿಕ್ಕಮ್ಮನೊಡನೆಯೂ, ನಂತರ ಒಬ್ಬ ಚಿಕ್ಕಪ್ಪನೊಡನೆಯೂ ಬದುಕು ಸಾಗಿಸಿದರು. 

ಬ್ರಾಸ್ನನ್ ಪಶ್ಚಿಮ ಲಂಡನ್ನಿನ ಪುಟ್ನೀ ಎಲಿಯಾಟ್ ಸ್ಕೂಲ್ನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಿದರು. ಶಾಲೆಯನ್ನು 16ರ ವಯಸ್ಸಿನಲ್ಲಿ ಬಿಟ್ಟ ನಂತರ ಬ್ರಾಸ್ನನ್ ಚಿತ್ರಕಲಾವಿದನಾಗುವ ಹಂಬಲದಿಂದ ವಾಣಿಜ್ಯಪರ ಚಿತ್ರಗಳನ್ನು ಬಿಡಿಸುವ ತರಬೇತಿ ಪಡೆಯಲು ಸೆಂಟ್ರಲ್ ಸೇಂಟ್ ಮಾರ್ಟಿನ್ಸ್ ಕಾಲೇಜ್ ಆಫ್ ಆರ್ಟ್ ಎಂಡ್ ಡಿಸೈನ್ ಗೆ ಸೇರಿದರು.  1969ರಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡುವ ಶಿಬಿರಕ್ಕೆಂದು ಓವಲ್ ಹೌಸ್ಗೆ ಬ್ರಾಸ್ನನ್ ಬಂದರು. ಜಾದೂಗಾರನ ಬಳಿ ಬೆಂಕಿಯೊಡನೆ ಆಟವಾಡುವುದ ಕಲಿತು ಮೂರು ವರ್ಷಗಳ ಸರ್ಕಸ್ ವೃತ್ತಿಯಲ್ಲಿದ್ದರು.  ನಂತರದ ಮೂರು ವರ್ಷಗಳಲ್ಲಿ ಬ್ರಾಸ್ನನ್ ಡ್ರಾಮಾ ಸೆಂಟರ್ ಲಂಡನ್ನಲ್ಲಿ ಅಭಿನಯದ ತರಬೇತಿ ಪಡೆದರು. ಅವರಿಗೆ ಅಭಿನಯ ಕಲೆ ಬಹಳ ತೃಪ್ತಿ ತಂದಿತು.

1975ರಲ್ಲಿ ಡ್ರಾಮಾ ಸೆಂಟರ್ನಿಂದ ತರಬೇತಿ ಪಡೆದು ಹೊರಬಂದ ಬ್ರಾಸ್ನನ್ ಸಹಾಯಕ ವೇದಿಕಾ ವ್ಯವಸ್ಥಾಪಕರಾಗಿ ಯಾರ್ಕ್ ಥಿಯೇಟರ್ ರಾಯಲ್ ಸೇರಿ, ತಮ್ಮ ಅಭಿನಯ ಜೀವನಕ್ಕೆ 'ವೇಯ್ಟ್ ಅನ್‍ಟಿಲ್ ಡಾರ್ಕ್' ಮೂಲಕ ಪಾದಾರ್ಪಣೆ ಮಾಡಿದರು. ಕೆಲವೇ ತಿಂಗಳೊಳಗೆ ಟೆನೆಸ್ಸಿ ವಿಲಿಯಮ್ಸ್ ಅವರು  'ದ ರೆಡ್ ಡೆವಿಲ್ ಬ್ಯಾಟರಿ ಸೈನ್' ಎಂಬ ನಾಟಕದಲ್ಲಿ ಮೆಕಾಬ್ ಪಾತ್ರವಹಿಸಲು ಇವರನ್ನು ಆರಿಸಿದರು. ಬ್ರಾಸ್ನನ್ ಅಭಿನಯವು ಲಂಡನ್ನಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿತು. 

ಬ್ರಾಸ್ನನ್ 'ದ ಲಾಂಗ್ ಗುಡ್ ಫ್ರೈಡೇ',  'ದ ಮಿರರ್ ಕ್ರ್ಯಾಕ್ಡ್' ಮುಂತಾದ ಚಲನಚಿತ್ರಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡದ್ದಲ್ಲದೆ 'ದ ಪ್ರೊಫೆಷನಲ್ಸ್' , 'ಮರ್ಫೀಸ್ ಸ್ಟ್ರೋಕ್' ಮತ್ತು 'ಪ್ಲೇ ಫಾರ್ ಟುಡೇ' ಮುಂತಾದ ಕಿರುತೆರೆಯ ಚಿತ್ರಗಳಲ್ಲಿ ನಟಿಸಿದರು. 'ಮ್ಯಾನಿಯನ್ಸ್ ಆಫ್ ಅಮೆರಿಕ' ಎಂಬ ಯುನೈಟೆಡ್ ಸ್ಟೇಟ್ಸ್ ನ ಜನಪ್ರಿಯ ಕಿರುತೆರೆಯ ಕಿರುಧಾರವಾಹಿಯಲ್ಲಿನ ಪ್ರಮುಖ ಪಾತ್ರದ ಮೂಲಕ ಅವರು ಕಿರುತೆರೆಯ ತಾರೆಯಾದರು. 1982ರಲ್ಲಿ ‘ನಾನ್ಸಿ ಆಸ್ಟರ್’ ಚಿತ್ರದ ಅಭಿನಯಕ್ಕೆ  ಬ್ರಾಸ್ನನ್  ಹೆಸರು ಮೊದಲ ಬಾರಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಾಂಕಿತಗೊಂಡಿತು.

1982ರಲ್ಲಿ ಬ್ರಾಸ್ನನ್ ದಕ್ಷಿಣ ಕ್ಯಾಲಿಫೋರ್ನಿಯಾಗೆ ತೆರಳಿ ಎನ್‍ಬಿಸಿಯ ರೋಚಕ ಪತ್ತೇದಾರಿ ಸರಣಿಯಾದ 'ರೆಮಿಂಗ್ಟನ್ ಸ್ಟೀಲ್' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುವ ಮೂಲಕ ಖ್ಯಾತಿ ಪಡದರು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಅದೇ ವರ್ಷ ಬ್ರಾಸ್ನನ್ "ಯುವ ಜೇಮ್ಸ್ ಬಾಂಡ್ ನ ಪಾತ್ರಕ್ಕೆ ಸರಿಹೊಂದಬಲ್ಲರು" ಎಂದು ಅಭಿಪ್ರಾಯ ಪಟ್ಟಿತು. ರೆಮಿಂಗ್ಟನ್ ಸ್ಟೀಲ್ 1987ರಲ್ಲಿ ಮುಗಿದ ನಂತರ ಬ್ರಾಸ್ನನ್ 'ದ ಫೋರ್ತ್ ಪ್ರೋಟೋಕಾಲ್,  'ದ ಡಿಸೀವರ್ಸ್'  ಹಾಗೂ 'ದ ಲಾನ್ ಮೋವರ್ ಮ್ಯಾನ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. 1993ರಲ್ಲಿ ಹಾಸ್ಯಮಯ ಚಿತ್ರ 'ಮಿಸೆಸ್ ಡೌಟ್ ಫೈರ್'ನಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದರು. 'ಡೆತ್ ಟ್ರೈನ್' ಮತ್ತು ಹಾಂಗ್‍ಕಾಂಗ್ ಕೇಂದ್ರಿತವಾದ ಬೇಹುಗಾರಿಕಾ ಸ್ವಾರಸ್ಯಕರ ಚಿತ್ರ 'ನೈಟ್ ವಾಚ್' ಅಂತಹ ಕಿರುತೆರೆಗಾಗಿ ಮಾಡಿದ ಚಲನಚಿತ್ರಗಳಲ್ಲೂ ಅಭಿನಯಿಸಿದರು.

ಬ್ರಾಸ್ನನ್ ಗುಪ್ತಚರನಾದ ಜೇಮ್ಸ್ ಬಾಂಡ್ ಪಾತ್ರದಲ್ಲಿ 'ಗೋಲ್ಡನ್ ಐ', 'ಟುಮಾರೋ ನೆವರ್ ಡೈಸ್', 'ದ ವರ್ಲ್ಡ್ ಈಸ್ ನಾಟ್ ಎನಫ್' ಮತ್ತು 'ಡೈ ಅನದರ್ ಡೇ' ಚಿತ್ರಗಳಲ್ಲಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದರು. ತಮ್ಮ ಧ್ವನಿ ಮತ್ತು ಬಾಂಡ್ ಪ್ರತಿರೂಪವನ್ನೂ ವಿಡಿಯೋ ಆಟಗಳಿಗೂ ನೀಡಿದರು. 

1993ರಲ್ಲಿ ಬ್ರಾಸ್ನನ್ 'ಮಿಸೆಸ್ ಡೌಟ್ ಫೈರ್' ಚಿತ್ರದಲ್ಲಿನ 'ಸ್ಟುವರ್ಟ್ ಡನ್ಮೆಯರ್' ಪಾತ್ರದಲ್ಲಿ ಅಭಿನಯಿಸಿದರು. 1997ರಲ್ಲಿ 'ಡಾಂಟೇಸ್ ಪೀಕ್' ಎಂಬ ಚಲನಚಿತ್ರದಲ್ಲಿ, ಲಿಂಡಾ ಹ್ಯಾಮಿಲ್ಟನ್ ಜೊತೆ ಅಗ್ನಿಪರ್ವತ ತಜ್ಞ ಹ್ಯಾರಿ ಡಾಲ್ಟನ್ ಪಾತ್ರದಲ್ಲಿ ಅಭಿನಯಿಸಿದರು. 1996ರಲ್ಲಿ ಬ್ಯೂ ಸೇಂಟ್ ಕ್ಲೇರ್ ಜೊತೆಗೂಡಿ ಲಾಸ್ ಏಂಜಲೀಸ್ನಲ್ಲಿ 'ಐರಿಷ್ ಡ್ರೀಮ್ ಟೈಮ್' ಎಂಬ ನಿರ್ಮಾಪಕ ಸಂಸ್ಥೆಯನ್ನು ಹುಟ್ಟುಹಾಕಿದರು. 

ಜೇಮ್ಸ್ ಬಾಂಡ್ ಪಾತ್ರದಲ್ಲಿ ಅಭಿನಯಿಸುವುದನ್ನು ಬಿಟ್ಟ ನಂತರ ಬ್ರಾಸ್ನನ್ 'ದ ಮೆಟಡೋರ್' ಮತ್ತು 'ಸೆರಾಫಿನ್ ಫಾಲ್ಸ್' ಮುಂತಾದ ಚಿತ್ರಗಳಲ್ಲಿ ನಟಿಸಿದರು. 'ದ ಮೆಟಡಾರ್' ಚಿತ್ರದ ಅಭಿನಯಕ್ಕೂ ಅವರ ಹೆಸರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮಾಂಕಿತಗೊಂಡಿತ್ತು.

ಪಿಯರ್ಸ್ ಬ್ರಾಸ್ನನ್ 2004ರಲ್ಲಿ ಅಮೆರಿಕದ ಪೌರರಾದರು. ನಂತರದ ದಿನಗಳಲ್ಲಿ ಬ್ರಾನ್ಸನ್ ತಮ್ಮ ಉದಾರತೆಗೆ ಮತ್ತು ಪರಿಸರ ಕಾಳಜಿಗೆ ಹೆಸರುವಾಸಿಯಾಗಿದ್ದಾರೆ. ಗಾಯನ ಪ್ರಧಾನವಾದ ಚಲನಚಿತ್ರ 'ಮಮ್ಮಾ ಮಿಯಾ'ದಲ್ಲಿ ಸ್ಯಾಮ್ ಕಾರ್ಮೈಕಲ್ ಪಾತ್ರದಲ್ಲಿ ಬ್ರಾಸ್ನನ್ ಅಭಿನಯಿಸಿದ್ದರು.

'ಸಾಟರ್ಡೇ ನೈಟ್ ಲೈವ್', 'ಬ್ಯಾಗ್ ಆಫ್ ಬೋನ್ಸ್', 'ದ ಸನ್', '2019 ಬ್ರೇಕ್ ತ್ರೂ ಪ್ರೈಜ್ ಸೆರೆಮೊನಿ' ಮುಂತಾದವು ಪಿಯರ್ಸ್ ಬ್ರಾಸ್ನನ್ ಇತ್ತೀಚಿನ ವರ್ಷಗಳವರೆಗೆ ಕಿರುತೆರೆಯಲ್ಲಿ ಕಂಡ ಪ್ರದರ್ಶನ ರೂಪಗಳು. 

On the birth day of Smart James Bond Pierce Brosnan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ