ಪೆರ್ಲ ಕೃಷ್ಣಭಟ್ಟರು
ಪೆರ್ಲ ಕೃಷ್ಣಭಟ್ಟರು
ಪೆರ್ಲ ಕೃಷ್ಣಭಟ್ಟರು ಶಿಕ್ಷಕರಾಗಿ, ಅರ್ಥಧಾರಿಗಳಾಗಿ, ಸಾಹಿತಿಯಾಗಿ, ವಾಗ್ಮಿಯಾಗಿ, ದೇಶದ ಸ್ವಾತಂತ್ರ್ಯ ಮತ್ತು ಗಡಿನಾಡು ಏಕೀಕರಣದ ಹೋರಾಟಗಾರರಾಗಿ ಹೀಗೆ ಬಹುಮುಖ ವ್ಯಕ್ತಿತ್ವದವರು.
ಪೆರ್ಲ ಕೃಷ್ಣಭಟ್ಟರು 1923ರ ಮೇ 16ರಂದು ಜನಿಸಿದರು. ಊರು ಕಾಸರಗೂಡು ಜಿಲ್ಲೆಯ ಪೆರ್ಲ. ತಂದೆ ಶ್ರೀಪತಿ ಶಾಸ್ತ್ರಿಗಳು. ತಾಯಿ ನೇತ್ರಾವತಿ. ಕೃಷ್ಣಭಟ್ಟರು ಪೆರ್ಲ ಹಾಗೂ ನೀರ್ಚಾಲು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಗಳಿಸಿಕೊಂಡರು. ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿನ ಚಾಮರಾಜೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈಯುತ್ತಿರುವಾಗ ಭಿಕ್ಷಾನ್ನ ಮತ್ತು ವಾರಾನ್ನಗಳಲ್ಲಿ ಉದರ ಪೋಷಣೆಯಾಗುತಿತ್ತು. ಖಾಸಗಿಯಾಗಿ ಹಿಂದಿ ಕಲಿತರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿ ಪ್ರವೀಣ ಪದವಿ ಪಡೆದರು. ಇಂಗ್ಲೀಷ್ ಕಲಿತು ಮದ್ರಾಸು ವಿಶ್ವವಿದ್ಯಾಲಯದಿಂದ ಇಂಟರ್ ಮೀಡಿಯಟ್ ಸರ್ಟಿಫಿಕೇಟ್ ಪಡೆದರು. ಸಂಸ್ಕೃತ ಮತ್ತು ನ್ಯಾಯ ಶಾಸ್ತ್ರದಲ್ಲಿ ವಿದ್ವಾನ್ ಪದವೀಧರರಾದರು.
ಪೆರ್ಲ ಕೃಷ್ಣಭಟ್ಟರು ಬಾಲ್ಯದಿಂದಲೂ ಹಲವಾರು ಕನ್ನಡ, ಸಂಸ್ಕೃತ ಸಮ್ಮೇಳನಗಳಲ್ಲಿ ಭಾಗವಹಿಸುತ್ತ ಬಂದರು. ನಾಟಕ ಮತ್ತು ಯಕ್ಷಗಾನಗಳ ಕಲಾವಿದರಾದರು. ಸತ್ಯದ ಪ್ರತಿಪಾದಕರಾಗಿ, ನಿಷ್ಠುರವಾದಿಯಾದ ಕೃಷ್ಣ ಭಟ್ಟರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸುವ ಮೂಲಕ ದೇಶ ಸೇವೆ ಸಲ್ಲಿಸಿದರು. ಮುಂದೆ ಗಡಿನಾಡು ಏಕೀಕರಣದ ಹೋರಾಟಗಾರರೂ ಆದರು.
ಪೆರ್ಲ ಕೃಷ್ಣಭಟ್ಟರು 1946ರಲ್ಲಿ ಮಂಗಳೂರು ಕೆನರಾ ಹೈಸ್ಕೂಲಿನಲ್ಲಿ ಹಿಂದಿ ಶಿಕ್ಷಕರಾಗಿ ನೇಮಕಗೊಂಡರು. ಮರು ವರ್ಷವೇ ಹುಟ್ಟೂರಿನ ಪೆರ್ಲ ಸತ್ಯನಾರಾಯಣ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಅವಕಾಶವೊದಗಿ ಬಂತು. 1978ರಲ್ಲಿ ಉದ್ಯೋಗದಿಂದ ನಿವೃತ್ತರಾದರು. ಬಳಿಕ ಮುದ್ರಣಾಲಯವನ್ನು ಸ್ಥಾಪಿಸಿದರು.
ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪೆರ್ಲರದ್ದು ಧೀರ ಗಂಭೀರ ಸ್ವರ. ನಿರರ್ಗಳ ಮೌಖೀಕ ಸಾಹಿತ್ಯದ ಮೂಲಕ ರಸವತ್ತತೆಯನ್ನು ಕಟ್ಟಿಕೊಡುತ್ತಿದ್ದ ಕೃಷ್ಣಭಟ್ಟರು ಹಲವಾರು ಆಟ ಕೂಟಗಳಲ್ಲಿ ಭಾಗವಹಿಸಿ ಸುಪ್ರಸಿದ್ಧರಾದರು. ರಸಪೂರ್ಣವಾದ ಅರ್ಥಗಾರಿಕೆಯಿಂದ ಉಡುಪಿಯ ಕೃಷ್ಣ ಮಠದ ಹಾಗೂ ಎಡನೀರಿನ ಗೋಪಾಲಕೃಷ್ಣ ಮಠದ ಶ್ರೀಗಳ ಆತ್ಮೀಯತೆಯನ್ನು ಗಳಿಸಿಕೊಂಡಿದ್ದರು. ಈ ಎರಡು ಮಠಗಳಲ್ಲಿ ನಡೆಯುವ ಯಕ್ಷಗಾನ ಕೂಟದಲ್ಲಿ ವೃದ್ಧಾಪ್ಯದ ಆಂಚಿನವರೆಗೂ ಭಾಗವಹಿಸುತ್ತಿದ್ದ ಇವರು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ, ಮೈಸೂರು, ಬೆಂಗಳೂರು, ಮುಂಬಯಿ, ಹೈದರಾಬಾದ್ , ಮದ್ರಾಸು, ಮಧುರೈ, ತಿರುಚಿನಪಳ್ಳಿಗಳಲ್ಲಿ ನಡೆದ ಯಕ್ಷಗಾನ ಕೂಟಗಳಲ್ಲಿಯೂ ಭಾಗವಹಿಸಿ ಖ್ಯಾತಿ ಪಡೆದರು.
ಪೆರ್ಲ ಕೃಷ್ಣಭಟ್ಟರು ಭಾಗವತ ವಾಚನ, ರಾಮಾಯಣ ಪ್ರವಚನಗಳಲ್ಲದೆ ಆಕಾಶವಾಣಿ , ದೂರದರ್ಶನದಲ್ಲಿ ನಿರಂತರ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ದೇರಾಜೆ, ಸಾಮಗ, ಕುಬಣೂರು, ಶೇಣಿ, ಕಿಲ್ಲೆ, ಕೀರಿಕ್ಕಾಡು, ಜೋಷಿ, ಬಲಿಪ , ಕುಂಬಳೆ ಮೊದಲಾದ ಹಿರಿಯ ಯಕ್ಷಗಾನ ಸಮಕಾಲಿನರೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡು ಕಳೆದ ಶತಮಾನದ ಹಿರಿಯ ಅರ್ಥಗಾರಿಕೆಯ ಕೊನೆಯ ಕೊಂಡಿಯಲ್ಲಿ ಓರ್ವರಾಗಿದ್ದರು.
ಕನ್ನಡ ಹಾಗೂ ಸಂಸ್ಕೃತದಲ್ಲಿ ಹಲವಾರು ಕೃತಿಗಳನ್ನು ರಚಿಸಿಸುವ ಮೂಲಕ ಪೆರ್ಲ ಕೃಷ್ಣಭಟ್ಟರು ಸಾಹಿತ್ಯಲೋಕಕ್ಕೆ ಕೊಡುಗೆ ನೀಡಿದ್ದಾರೆ. ಕಿರಾತಾರ್ಜುನೀಯ (ಅನುವಾದ), ಪಾದುಕಾ ಪ್ರದಾನ (ನಾಟಕ), ತಾಳಮದ್ದಳೆ (ಪ್ರಹಸನ), ಭಗವಾನ್ ಪರಶುರಾಮ (ಅನುವಾದ), ಜಾತ್ರೆ ಮತ್ತು ಇತರ ಕಥೆಗಳು (ಅನುವಾದ), ಭಗವಾನ್ ಬುದ್ಧ (ಜೀವನ ಚರಿತ್ರೆ), ಮಹಾಭಾರತ ಉಪಖ್ಯಾನಗಳು (ಕಥಾ ಸಂಕಲನ), ಕಲಾ ತಪಸ್ವಿ (ಸಂಪಾದಿತ ಸಂಸ್ಮರಣಾ ಗ್ರಂಥ), ಮಧೂರು ಶ್ರೀ ಸಿದ್ಧಿವಿನಾಯಕ ಸುಪ್ರಭಾತಂ (ಸಂಸ್ಕೃತ), ಶರವು ಮಹಾಗಣಪತಿ ಸುಪ್ರಭಾತ (ಕನ್ನಡ), ಮಂಜುನಾಥೇಶ್ವರ ಸುಪ್ರಭಾತಂ (ಸಂಸ್ಕೃತ), ಋಗ್ವೇದೀಯ ನಿತ್ಯಕರ್ಮ ವಿಧಿ (ಮೂಲ ಸಂಸ್ಕೃತ - ಕನ್ನಡ ಅನುವಾದ ಸಹಿತ), ಸತ್ಯನಾರಾಯಣ ಪೂಜಾ ವಿಧಿ (ಸಂಪಾದಿತ ಕನ್ನಡ ಅರ್ಥ ವಿವರ ಸಹಿತ), ಸಾರ್ಥ ಶೋಡಷ ಸಂಸ್ಕಾರ ರತ್ನಮಾಲಾ (ಮೂಲ ಸಂಸ್ಕೃತ ಹಾಗೂ ಕನ್ನಡ ಅರ್ಥ ಸಹಿತ) ಇವು ಪೆರ್ಲ ಕೃಷ್ಣಭಟ್ಟರ ಕೆಲವು ಕೃತಿಗಳು. ಬದುಕಿ ಫಲವೇನು ಎಂಬುದು ಇವರ ಪ್ರಕಟಿತ ಆತ್ಮಕಥೆಯಾಗಿದೆ. 1994ರಲ್ಲಿ ಇವರ ಅಭಿಮಾನಿಗಳು 'ಸುದರ್ಶನ' ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿದರು.
ಕೃಷ್ಣ ಭಟ್ಟರು 1974ರಲ್ಲಿ ಕೇರಳ ರಾಜ್ಯದ ಶ್ರೇಷ್ಟ ಅಧ್ಯಾಪಕ ಪ್ರಶಸ್ತಿಯನ್ನು ಪಡೆದರು. ಬಳಿಕ ಕರ್ನಾಟಕ ರಾಜ್ಯ ಸಂಸ್ಕೃತ ವಿದ್ವಾಂಸ ಪ್ರಶಸ್ತಿ, ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಗಡಿನಾಡು ಏಕೀಕರಣ ಪ್ರಶಸ್ತಿ, ಪಾರ್ತಿಸುಬ್ಬ, ಪೊಳಲಿ, ದೇರಾಜೆ, ಕಿಲ್ಲೆ ಸ್ಮಾರಕ ಪ್ರಶಸ್ತಿಗಳಿಗೆ ಭಾಜನರಾದರು. 1989ರಲ್ಲಿ ಮುಂಬಯಿ ಯಕ್ಷಗಾನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1992ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಪ್ರಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಪೆರ್ಲ ಕೃಷ್ಣಭಟ್ಟರು 2013 ವರ್ಷದ ಸೆಪ್ಟೆಂಬರ್ 2ರಂದು ಈ ಲೋಕವನ್ನಗಲಿದರು.
On the birth anniversary of great scholar Perla Krishnabhatta
ಕಾಮೆಂಟ್‌ಗಳು