ಕನಕಾ ಮೂರ್ತಿ
ಕನಕಾ ಮೂರ್ತಿ
ಕನಕಾ ಮೂರ್ತಿ ಕನ್ನಡ ನಾಡಿನ ಮಹಾನ್ ಶಿಲ್ಪಿಗಳಲ್ಲಿ ಒಬ್ಬರೆನಿಸಿದ್ದ ಅಪೂರ್ವರು.
ಕನಕಾ ಮೂರ್ತಿ 1942ರ ಡಿಸೆಂಬರ್ 2ರಂದು ಟಿ. ನರಸೀಪುರದಲ್ಲಿ ಜನಿಸಿದರು. ಅವರು ಪಡೆದದ್ದು ಬಿ.ಎಸ್‍ಸಿ ಪದವಿ. 1965ರಲ್ಲಿ ಮೈಸೂರಿನ ದೇವಾಲಯವೊಂದಕ್ಕೆ ಭೇಟಿ ನೀಡಿದಾಗ ಶಿಲ್ಪಕಲೆ ಅವರನ್ನು ಸೆಳೆಯಿತು. ಮಹಿಳೆಯರಿಗೆ ಶಿಲ್ಪಕಲೆ ಸಾಧ್ಯವಿಲ್ಲ
ಎಂಬ ಸಾಮಾನ್ಯವಾದ ನಂಬಿಕೆ ಇದ್ದ ಕಾಲದಲ್ಲಿ ತಂದೆಯವರಿಂದ ಕಷ್ಟಪಟ್ಟು ಅನುಮತಿ ಪಡೆದು ಮಹಾನ್ ಶಿಲ್ಪಿ ದೇವಲಕುಂದ ವಾದಿರಾಜ್ ಅವರಲ್ಲಿ ಕಲಿಕೆ ಆರಂಭಿಸಿದರು. ಮೊದಲ ದಿನಗಳಲ್ಲಿ ಉಳಿ ಸುತ್ತಿಗೆ ಹಿಡಿದು ಕೆಲಸ ಮಾಡುವಾಗ ಕೈಯಲ್ಲಿ ರಕ್ತ ಹರಿದು 'ಇನ್ನು ಇವರ ಕೈಲಾದಂತೆಯೇ!' ಎಂದು ಎಲ್ಲರೂ ಭಾವಿಸಿದ್ದಾಗ ಗುರುಗಳೇ ಅಚ್ಚರಿಪಡುವಂತಹ ಸಾಧನೆಯನ್ನು ತೋರಿದರು. 1993ರವರೆಗೆ ಗುರುಗಳು ಜೀವಂತ ಇರುವವರೆಗೆ ನಿರಂತರ ಅವರ ಬಳಿ ಕಲಿಕೆ ನಡೆಸಿದರು.
ಕನಕಾ ಮೂರ್ತಿ ಅವರು ಒಮ್ಮೆ ನುಡಿದದ್ದರು: “ಹೆಣ್ಮಕ್ಕಳು ಶಿಲ್ಪಕಲೆ ಅಭ್ಯಸಿಸುವುದು ಎನ್ನುವಾಗ ಸಮಾಜ ವಿಚಿತ್ರವಾಗಿ ನೋಡುತ್ತದೆ ನಿಜ. ಆದರೆ ನಾನು ಈ ಯಾವುದನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ನನಗೆ ಅಮ್ಮನ ಬೆಂಬಲವಿತ್ತು. ನಾನು ಸಮಾಜದ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ನನ್ನಗುರಿಯನ್ನು ಬೆನ್ನಟ್ಟಿದೆ. ಯಾಕೆಂದರೆ ನಾವು ಬದುಕುತ್ತಿರುವುದು ನಮಗೋಸ್ಕರ!"
ಒಮ್ಮೆ ಬಾದಾಮಿಯಲ್ಲಿ 15 ದಿನಗಳ ಶಿಲ್ಪಕಲಾ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರಾರ್ಥಿಗಳಿಗೆ ಸೂಕ್ತ ಕಲ್ಲನ್ನು ಆಯ್ಕೆಮಾಡಿಕೊಟ್ಟು ಮಾರ್ಕ್ ಗುರುತುಮಾಡಿಕೊಡುವುದು ಕನಕಾಮೂರ್ತಿ ಅವರ ಕೆಲಸವಾಗಿತ್ತು. ಅದಕ್ಕಾಗಿ ಕಲ್ಲುಗಳನ್ನು ಆಯ್ದು ತರಲಾಗಿತ್ತು. ಇವರ ಸೂಚನೆಯಂತೆ ಎಲ್ಲರಿಗೂ ಒಂದೊಂದು ಕಲ್ಲನ್ನು ಕೊಟ್ಟ ಶಿಬಿರಾರ್ಥಿಯೊಬ್ಬ "ಮೇಡಂ ನಿಮಗೆ ಯಾವುದು ಕೊಡಲಿ?" ಎಂದು ಪುಟ್ಟ ಕಲ್ಲೊಂದನ್ನು ದೃಷ್ಟಿಸಿದ. ಅವನ ಮಾತು, ನೋಟದ ಅಂತರಾರ್ಥ ಗ್ರಹಿಸಿದ ಕನಕಾಮೂರ್ತಿ ಅವರು ಅಲ್ಲಿದ್ದ ಅತಿ ದೊಡ್ಡ ಕಲ್ಲು ತೋರಿಸಿ "ಅದನ್ನು ನನಗೆ ಬಿಡು" ಎಂದರು. ಎಲ್ಲರೂ ಹುಬ್ಬೇರಿಸಿದರು. ಓರ್ವ ಹೆಣ್ಣುಮಗಳಿಗೆ ಇದು ಸಾಧ್ಯವೇ? ಎಂಬಂತಿತ್ತು ಅವರ ನೋಟ. ಮಾರನೆಯ ದಿನದಿಂದಲೇ ಅವರ ಕೆಲಸ ಆರಂಭವಾಯಿತು. ಕೆಲಸದ ರಭಸವನ್ನು ನೋಡಿ ಆಶ್ಚರ್ಯಚಕಿತರಾದ ಶಿಬಿರಾರ್ಥಿಗಳು ತಮ್ಮ ಕೆಲಸ ಬಿಟ್ಟು ಇವರ ಸುತ್ತ ಸೇರಿದರು. ಕೆಲವೇ ದಿನಗಳಲ್ಲಿ ಅಲ್ಲಿ ಅದ್ಭುತ ಶಿಲ್ಪವೊಂದು ಮೈದಳೆದಿತ್ತು.
ಕನಕಾ ಮೂರ್ತಿ ಅವರು ಗುರುಗಳಾದ ದೇವಲಕುಂದ ವಾದಿರಾಜರ ಜೊತೆ ಇಂಗ್ಲೆಂಡ್ ಮತ್ತು ರಷ್ಯಾ ಪ್ರವಾಸದಲ್ಲಿ ಭಾಗಿಯಾಗಿದ್ದರು. ಲಾಲ್‍ಬಾಗ್ ಪಶ್ಚಿಮ ದ್ವಾರದಲ್ಲಿ ಇರುವ ಮಹಾಕವಿ ಕುವೆಂಪು ಪ್ರತಿಮೆ, ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಇರುವ ರೈಟ್ ಸಹೋದರರ ಪ್ರತಿಮೆ, ಸತ್ಯಸಾಯಿ ಆಸ್ಪತ್ರೆ ವಿಷ್ಣು ಪ್ರತಿಮೆ; ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಬೇಂದ್ರೆ, ಮತ್ತೂರು ಕೃಷ್ಣಮೂರ್ತಿ ಪ್ರತಿಮೆಗಳು; ಬಾಣಸವಾಡಿಯಲ್ಲಿ ಹನ್ನೊಂದು ಅಡಿ ಆಂಜನೇಯ, ದೆಹಲಿ ಮ್ಯೂಸಿಯಮ್ನಲ್ಲಿ ವಾಗ್ದೇವಿ ಮುಂತಾದ ಇನ್ನೂರಕ್ಕೂ ಹೆಚ್ಚು ಪ್ರತಿಮೆಗಳು ಕನಕಾಮೂರ್ತಿ ಅವರ ಅಗಾಧ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿವೆ.
ಕನಕಾಮೂರ್ತಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿಲ್ಪ ಅಕಾಡಮಿ ಪ್ರಶಸ್ತಿ, ಸುವರ್ಣ ಕರ್ನಾಟಕ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ, ಕರ್ನಾಟಕ ಶಿಲ್ಪ ಅಕಾಡಮಿ ಫೆಲೋಶಿಪ್ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಮಹಾನ್ ಶಿಲ್ಪಿ ಕನಕಾ ಮೂರ್ತಿ 2021ರ ಮೇ 13ರಂದು ಈ ಲೋಕವನ್ನಗಲಿದರು.
ಕೃತಜ್ಞತೆ: ಸೂಕ್ತ ಮಾಹಿತಿ ಒದಗಿಸಿಕೊಟ್ಟ ಆತ್ಮೀಯರಾದ ಡಾ. ಎನ್. ಎಸ್. ಶ್ರೀಧರಮೂರ್ತಿ Sreedhara Murthy ಅವರಿಗೆ 🌷🙏🌷
On remembrance days of our great sculptor Smt. Kanaka Murthy

ಕಾಮೆಂಟ್‌ಗಳು