ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಿತ್ರಾನಂದನ ಪಂತ್


 ಸುಮಿತ್ರಾನಂದನ ಪಂತ್


ಸುಮಿತ್ರಾನಂದನ ಪಂತ್ ಜ್ಞಾನಪೀಠ ಪುರಸ್ಕೃತರಾದ ಪ್ರಸಿದ್ಧ ಹಿಂದಿ ಕವಿಗಳು.

ಸುಮಿತ್ರಾನಂದನ ಪಂತ್ ಅಲ್ಮೋರಾದ ಬಳಿ ಕೂರ್ಮಾಚಲ ಪ್ರದೇಶದ ಒಂದು ಹಳ್ಳಿ ಕೌಸಾನಿಯಲ್ಲಿ 1900 ರ ಮೇ 20ರಂದು ಜನಿಸಿದರು. ಹುಟ್ಟಿದ ಕೆಲತಾಸುಗಳಲ್ಲಿ ತಾಯಿ ನಿಧನರಾದರು. ಸೋದರತ್ತೆಯ ಮಡಿಲಲ್ಲಿ, ತಂದೆ ಗಂಗಾದತ್ತ ಮತ್ತು ಇತರ ಸಹೋದರರ ಆಶ್ರಯದಲ್ಲಿ ಬೆಳೆದರು. 

ಸುಮಿತ್ರಾನಂದನ ಪಂತ್ ತಾವು ಹುಟ್ಟಿ ಬೆಳೆದ ಪರಿಸರದಿಂದಾಗಿ ಮುಂದೆ ನಿಸರ್ಗಪ್ರಿಯ ಮಹಾಕವಿಯಾದರು.ಏಳು ವರ್ಷದ ವಯಸ್ಸಿನಲ್ಲಿಯೇ ಕಾವ್ಯ ರಚನೆಯನ್ನಾರಂಭಿಸಿ ಇವರು ತಮ್ಮ 17ನೆಯ ವಯಸ್ಸಿನಲ್ಲಿ ಪ್ರೌಢ ಕಾವ್ಯ ರಚನೆಗೆ ಅಣಿಯಾದರು. ವಾರಾಣಾಸಿ ಮತ್ತು ಅಲಹಾಬಾದದಲ್ಲಿ ಉಚ್ಚ ಶಿಕ್ಷಣ ಪಡೆಯುತ್ತಿರುವಾಗ ಇವರ ಕಾವ್ಯಗಳು ಪ್ರಕಾಶಿತವಾದವು. 

ಸುಮಿತ್ರಾನಂದನ ಪಂತ್ ಗಾಂಧೀಜಿಯ ಕರೆಗೆ ಓಗೊಟ್ಟು ಕಾಲೇಜು ತೊರೆದರು; ಮೇಲೆ ಈ ತರುಣ ಕವಿ ತಮ್ಮ ಸಂಪೂರ್ಣ ಸಮಯವನ್ನು ಸಾಹಿತ್ಯ ಸೇವೆಗೆ ಮೀಸಲಿಟ್ಟರು. ಕಾಲಾಕಾಂಕರದಲ್ಲಿ ವಾಸ ಮಾಡಿಕೊಂಡಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಕವಿಗೆ ಗ್ರಾಮೀಣ ಜೀವನದ ನೈಜಮುಖವನ್ನು ಕಾಣುವ ಸುಯೋಗ ಒದಗಿತು. ಅನಂತರ ಲೋಕಾಯತನವೆಂಬ ಸಂಸ್ಕೃತಿ ಪೀಠವನ್ನು ಸ್ಥಾಪಿಸುವ ಒಂದು ಪ್ರಯತ್ನವೂ ನಡೆಯಿತು. ನೃತ್ಯಪಟು ಉದಯಶಂಕರರ ಕಲ್ಪನಾ ಚಿತ್ರದ ನಿರ್ಮಾಣ ಪ್ರಸಂಗದಲ್ಲಿ ಕವಿಗೆ ಪಾಂಡಿಚೆರಿಯಲ್ಲಿ ಮಹರ್ಷಿ ಅರವಿಂದರ ಭಾಗ್ಯ ದೊರೆಯಿತು. ಇವರ ಮೇಲೆ ಮಾರ್ಕ್ಸ್, ಗಾಂಧಿ, ವಿವೇಕಾನಂದ, ರವೀಂದ್ರ, ಸರೋಜಿನಿ,  ವರ್ಡ್ಸ್ ವರ್ತ್, ಷೆಲ್ಲಿಯಂಥ ಮಹನೀಯರ ಪ್ರಭಾವವಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಸುಮಿತ್ರಾನಂದನ ಪಂತ್ ಅವರ  ಜೀವನ ಆಧುನಿಕ ಹಿಂದಿ ಕಾವ್ಯಧಾರೆಯಲ್ಲಿ ಹಾಸುಹೊಕ್ಕಾಗಿದೆ. ಅದರ ಎಲ್ಲ ಪ್ರಮುಖ ಕಾವ್ಯಪ್ರವೃತ್ತಿಗಳನ್ನು ಇವರ ಕಾವ್ಯದಲ್ಲಿ ಕಾಣಬಹುದು.

1. ರಮ್ಯವಾದಿ ಕಾವ್ಯ - ವೀಣಾ (1918) ದಿಂದ ಗುಂಜನ (1938) ವರೆಗೆ ಪ್ರಗತಿಶೀಲ ಕಾವ್ಯ 
2. ಯುಗಾಂತ (1936) ದಿಂದ ಗ್ರಾಮ್ಯಾ (1940) ವರೆಗೆ 
3. ದಾರ್ಶನಿಕ ಕಾವ್ಯ - ಸ್ವರ್ಣಕಿರಣ (1947) ಮತ್ತು ಅನಂತರದ ರಚನೆಗಳು. 

ಹೀಗೆ ಮೂರು ಪ್ರವೃತ್ತಿಗಳನ್ನು ಇವರ ಕಾವ್ಯದಲ್ಲಿ ಕಾಣಬಹುದು.

ಸುಮಿತ್ರಾನಂದನ ಪಂತ್ ಅವರ ಕಾವ್ಯಗಳು ಹಿಂದಿಯಲ್ಲಿ ಭಾವಗೀತೆಯ ಉತ್ತಮ ನಿದರ್ಶನಗಳಾಗಿವೆ. ಅವು ಸಂಪೂರ್ಣ ವ್ಯಕ್ತಿನಿಷ್ಠ. ಭಾವಾಭಿವ್ಯಕ್ತಿಗೆ ನಿಸರ್ಗವೇ ಮಾಧ್ಯಮ. 

ಸುಮಿತ್ರಾನಂದನ ಪಂತ್ ಅವರ ಮುಖ್ಯ ರಚನೆಗಳು ವೀಣಾ, ಉಚ್ಛ್ವಾಸ, ಗ್ರಂಥಿ, ಪಲ್ಲವ, ಗುಂಜನ, ಯುಗಾಂತ, ಯುಗವಾಣಿ, ಗ್ರಾಮ್ಯಾ, ಸ್ವರ್ಣಕಿರಣ, ಸ್ವರ್ಣಧೂಳಿ, ಯುಗಾಂತರ, ಯುಗಪಥ, ಉತ್ತರಾ, ರಜತಶಿಖರ (ರೂಪಕ), ಅತಿಮಾ, ವಾಣಿ, ಸೌವರ್ಣ (ರೂಪಕ), ಕಲಾ ಔರ್ ಬೂಢಾ ಚಾಂದ್ ಮುಂತಾದವು. 

ಸುಮಿತ್ರಾನಂದನ ಪಂತ್ ಅವರ ಮೊದಲ ಸಂಕಲನವಾದ 'ವೀಣಾ'ದಲ್ಲಿ 65 ಕವನಗಳಿವೆ. ಇದರಲ್ಲಿ ಕವಿಯ ಬಾಲ ಚಾಂಚಲ್ಯ ವ್ಯಕ್ತವಾಗುತ್ತದೆ. ಇತರ ಕವಿಗಳ ಪ್ರಭಾವ ಅಲ್ಲಲ್ಲಿ ಕಾಣುತ್ತಿದ್ದರೂ ಕವಿಯ ನೈಸರ್ಗಿಕ ಪ್ರತಿಭೆ ಅಭಿವ್ಯಕ್ತವಾಗಿದೆ. ಛಂದಸ್ಸಿನ ನವೀನತೆ, ಹೊಸಭಾವಭಂಗಿ, ಶಬ್ದಚಯನದಲ್ಲೂ ಬೆಳೆ ಮನಸ್ಸಿನ ಕುರುಹು ಅಭಿವ್ಯಕ್ತವಾಗಿದೆ.

'ಪಲ್ಲವ' ಸಂಕಲನ 32 ಕವನಗಳ ಸಂಗ್ರಹ. ಇದರಲ್ಲಿಯ ಭಾವ ಪ್ರೌಢಿಮೆ ಕವಿಯ ಪ್ರತಿಭೆಯ ಪರಾಕಾಷ್ಠೆಯ ಕುರುಹಾಗಿದೆ. ಇದು ಕಲ್ಪನಾಶೀಲ ಕಿಶೋರ ಕವಿಯ ಸರ್ವೋತ್ಕೃಷ್ಟ ರಚನೆ ಎಂದೆನಿಸಿದೆ. ಇಲ್ಲಿನ ಭಾಷಾಶೈಲಿ ತನ್ನ ನಾವಿನ್ಯ, ಸ್ವತಂತ್ರ ಸ್ವರೂಪದಿಂದಾಗಿ ಹಿಂದಿ ಭಾಷೆಗೆ ಒಂದು ಕೊಡುಗೆಯಾಗಿದೆ.

'ಗುಂಜನ' ಸಂಕಲನ ವೀಣಾ ಹಾಗೂ ಪಲ್ಲವಗಳ ಪರಂಪರೆಯಲ್ಲಿ ಕೊನೆಯದು. ಇದು ಕವಿಯ ಹೊಸ ಕಾವ್ಯಪ್ರವೃತ್ತಿಗೆ ಸಂಕೇತವೂ ಆಗಿದೆ. ನಿಸರ್ಗದ ಸ್ವಪ್ನಲೋಕದಲ್ಲಿ ಸ್ವಚ್ಛಂದವಾಗಿ ವಿಹರಿಸುತಿದ್ದ ಕವಿ ಮೊದಲ ಸಲ ಭೂಮಿಗೆ ಇಳಿದು ಮಣ್ಣಿನ ವಾಸನೆಯನ್ನು ಸವಿದಿದ್ದಾನೆ. ಮಾನವನ ವಿವಿಧ ಸಮಸ್ಯೆಗಳು, ಅವನ ಸುಖ-ದುಃಖಗಳನ್ನು ಕುರಿತು ಚಿಂತಿಸಿದ್ದಾನೆ.

'ಗ್ರಾಮ್ಯಾ' ಸೌಂದರ್ಯದೆಡೆಯಿಂದ ಲೋಕಹಿತದೆಡೆಗೆ ತಿರುಗಿದ ಕವಿಯ ಮನಸ್ಸು ದೀನದಲಿತರ ಕಲ್ಯಾಣಕ್ಕಾಗಿ ಮಾರ್ಕ್ಸ್ ‍ವಾದವನ್ನು ಮೆಚ್ಚುತ್ತದೆ. ಬಡವರ ಕಷ್ಟಕಾರ್ಪಣ್ಯ, ಭೀಕರ ದಾರಿದ್ರ್ಯ, ಶೋಷಣೆಗಳಿಂದ ಮುಕ್ತಿಗೆ ಸೌಮ್ಯವಾದವೇ ತಾರಕ ಎಂಬ ಭಾವನೆ ಇಲ್ಲಿ ಮೂಡಿದೆ. ಅದೆಲ್ಲವನ್ನೂ ಈ ಕೃತಿ ಪ್ರತಿಬಂಬಿಸಿದೆ.

'ಸ್ವರ್ಣಕಿರಣ' ಪ್ರಗತಿಶೀಲಕಾವ್ಯದಿಂದ ಒಲವು ಅಧ್ಯಾತ್ಮದೆಡೆಗೆ ತಿರುಗಿದ್ದನ್ನು ಈ ಕೃತಿಯಲ್ಲಿ ಕಾಣಿಸುತ್ತದೆ. ಅಂತಃಕರಣದ ಪರಿವರ್ತನೆಯೇ ಮಾನವ ಕಲ್ಯಾಣಕ್ಕೆ ನಿಜವಾದ ದಾರಿ ಎಂಬ ಭಾವನೆ ಹೊಂದಿದ ಕವಿ ಅರವಿಂದ ದರ್ಶನದಿಂದ ಪ್ರಭಾವಿತರಾದ ಕವಿ ತಮ್ಮ ಕಾವ್ಯದಲ್ಲಿ ನವಚೇತನಾವಾದ, ನವಚೇತನೆಯ ವಿಕಾಸ, ದಿವ್ಯ ಕರುಣೆಯ ಅವರೋಹಣ, ಮಾನವ ಅಂತಃಕರಣ ರೂಪಾಂತರ ಮತ್ತು ಅತಿಮಾನವನ ಬಗೆಗೆ ಹಾಡತೊಡಗುತ್ತಾರೆ. ಇದರಲ್ಲಿ 32 ಕವನಗಳಿವೆ. ಅರವಿಂದ ದರ್ಶನದ ವಿವಿಧ ಮುಖಗಳ ಪರಿಚಯ ಮತ್ತು ಅದರಿಂದ ಮಾನವ ಕಲ್ಯಾಣದ ದಾರಿಯ ಬಗೆಗೆ ವಿವರವಾಗಿ ವಿವೇಚಿಸಿದ್ದಾರೆ.

ಈ ತೆರನ ಇನ್ನಿತರ ಕಾವ್ಯಗಳೂ ಅರವಿಂದ ದರ್ಶನದ ವಿಸ್ತೃತ ಪರಿಚಯ ಮಾಡಿ ಕೊಡುತ್ತವೆ. ವಿಶ್ವಕಲ್ಯಾಣದ ವಿಶ್ವಶಾಂತಿಯ ಬಗೆಗೆ ಕವಿ ಹಾಡುತ್ತ ಸಾಗಿದ್ದಾರೆ. ರೂಪಕಗಳಲ್ಲೂ ಕವಿಯ ಧೋರಣೆ ಇದೇ ದಿಶೆಯಲ್ಲಿ ಸಾಗುತ್ತದೆ.

ಈ ಕಾವ್ಯಗಳ ಹೊರತಾಗಿ ಸುಮಿತ್ರಾನಂದನ ಪಂತ್ ಅವರು ಜ್ಯೋತ್ಸ್ನಾ ಎಂಬ ನಾಟಕವನ್ನೂ ಕೆಲವು ಕಥೆಗಳನ್ನೂ ಗದ್ಯಪಥವೆಂಬ ಸಮೀಕ್ಷಾ ಗ್ರಂಥವನ್ನೂ ಸಾಠವರ್ಷ ಏಕ ರೇಖಾಂಕನ ಎಂಬ ಆತ್ಮಕಥೆಯನ್ನೂ ಬರೆದಿದ್ದಾರೆ.

ಸುಮಿತ್ರಾನಂದನ ಪಂತ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ (1968) ಮತ್ತು ಪದ್ಮಭೂಷಣ ಪ್ರಶಸ್ತಿಗಳು ಸಂದಿದ್ದವು.

ಮಹಾನ್ ಕವಿ ಸುಮಿತ್ರಾನಂದನ ಪಂತ್ ಅವರು 1977ರ ಡಿಸೆಂಬರ್ 28ರಂದು ನಿಧನರಾದರು.

On the birth anniversary of great poet Sumithranandan Panth 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ