ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಾಲು ಮಹೇಂದ್ರ


 ಬಾಲು ಮಹೇಂದ್ರ 


‘ಕೋಕಿಲ’ ಕನ್ನಡ ಚಲನಚಿತ್ರವೂ ಸೇರಿದಂತೆ ಅನೇಕ  ಪ್ರಖ್ಯಾತ ಚಲನಚಿತ್ರಗಳ ನಿರ್ದೇಶನಕ್ಕೆ  ಮತ್ತು ಶ್ರೇಷ್ಠ ಛಾಯಾಗ್ರಹಣಕ್ಕೆ ಹೆಸರಾಗಿದ್ದವರು ಬಾಲು ಮಹೇಂದ್ರ.

1939ರ ಮೇ 20ರಂದು ಶ್ರೀಲಂಕಾದಲ್ಲಿ  ಜನಿಸಿದ ಬಾಲು ಮಹೇಂದ್ರ ಅವರು, ಚಲನಚಿತ್ರ ಛಾಯಾಗ್ರಾಹಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಚಲನಚಿತ್ರ ನಿರ್ದೇಶಕರಾಗಿ ಮುಂಚೂಣಿಗೆ ಬಂದ ಅವರು, ಪ್ರಶಸ್ತಿ ಪುರಸ್ಕೃತ ಚಿತ್ರಗಳಾದ ‘ಮೂನ್ಡ್ರಾಮ್ ಪಿರೈ’ (ಇದೇ ಚಿತ್ರ ಹಿಂದಿಯಲ್ಲಿ ‘ಸದ್ಮಾ’ ಹೆಸರಿನಲ್ಲಿ ಹೆಸರು ಗಳಿಸಿದೆ) ಹಾಗೂ ‘ವೀಡು’ ಚಿತ್ರಗಳನ್ನು ನಿರ್ದೇಶಿಸಿದ್ದರು.

ಬಾಲು ಮಹೆಂದ್ರ ಅವರು 1974ರಲ್ಲಿ ‘ನೆಲ್ಲು’ ಎಂಬ ಮಲಯಾಳಂ ಚಿತ್ರದ ಮೂಲಕ ಚಲನಚಿತ್ರ ನಿರ್ದೇಶಕರಾದರು.  ಇದೇ ಚಿತ್ರಕ್ಕೆ ಕೇರಳ ಸರ್ಕಾರದಿಂದ ‘ಉತ್ತಮ ಚಲನಚಿತ್ರ ಛಾಯಾಗ್ರಾಹಕ’ ಪ್ರಶಸ್ತಿಗೆ ಭಾಜನರಾಗಿದ್ದರು. ಪ್ರಥಮ ಬಾರಿಗೆ 1977ರಲ್ಲಿ ಕನ್ನಡದಲ್ಲಿ ‘ಕೋಕಿಲ’ ಚಿತ್ರ ನಿರ್ದೇಶನ ಮಾಡಿದರು. ಅದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿತು. ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲಿ 20ಕ್ಕೂ ಹೆಚ್ಚು ಚಿತ್ರಗಳನ್ನು  ನಿರ್ದೇಶಿಸಿದ್ದರು. ಮಣಿರತ್ನಂ ನಿರ್ದೇಶಿಸಿದ ಪಲ್ಲವಿ ಅನುಪಲ್ಲವಿ ಚಿತ್ರಕ್ಕೂ ಬಾಲು ಮಹೇಂದ್ರರ ಛಾಯಾಗ್ರಹಣವಿತ್ತು.  'ಶಂಕರಾಭರಣಂ' ಅವರ ಇನ್ನಿತರ ಪ್ರಸಿದ್ಧ ಛಾಯಾಗ್ರಹಣದ ಚಿತ್ರಗಳಲ್ಲೊಂದು.

‘ಕೋಕಿಲ’ ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದ ಮೋಹನ್ ಅವರು, ಮುಂದೆ ‘ಕೋಕಿಲ ಮೋಹನ್‌’ ಎಂದೇ ಪ್ರಸಿದ್ಧಿಯಾದರು.ಬಾಲು ನಿರ್ದೇಶನದ ‘ವೀಡು’ (1988) ಹಾಗೂ ‘ವನ್ನ ವನ್ನ ಪೂಕ್ಕಲ್‌’  (1992) ಚಿತ್ರಗಳು ರಾಷ್ಟ್ರಪ್ರಶಸ್ತಿಗೆ ಭಾಜನವಾಗಿವೆ. ‘ಸಂಧ್ಯಾ ರಾಗಂ’ (1990) ಚಿತ್ರ ಉತ್ತಮ ಕೌಟುಂಬಿಕ ಸಂದೇಶ ಪ್ರಶಸ್ತಿಗೆ ಪಾತ್ರವಾಗಿದೆ.

ಬಾಲು ಅವರು ಕೊನೆಯದಾಗಿ  ‘ಥಲೈ ಮುರೈಗಲ್‌’ ಎಂಬ ತಮಿಳು ಚಿತ್ರ ನಿರ್ದೇಶಿಸಿದ್ದರು. ಅಜ್ಜ–ಮೊಮ್ಮಗನ ಸಂಬಂಧದ ಕಥೆಯುಳ್ಳ ಈ ಚಿತ್ರದಲ್ಲಿ ಬಾಲು ಅವರು ಪ್ರಮುಖ ಪಾತ್ರವನ್ನೂ ವಹಿಸಿದ್ದರು. ಈ ಚಿತ್ರ ಕೂಡಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ನರ್ಗಿಸ್ ದತ್ ಪುರಸ್ಕಾರ ಗಳಿಸಿತು.‍ ಸಿನಿಮಾ ಛಾಯಾಗ್ರಹಣದಲ್ಲಿ ಅವರಿಗಿದ್ದ ಪ್ರತಿಭೆ ಮತ್ತು ಕೌಶಲದಿಂದಾಗಿ ಹೆಸರುವಾಸಿಯಾಗಿದ್ದ ಬಾಲು ಅವರು, ಅನೇಕ ಪ್ರತಿಭಾವಂತರಿಗೆ ಗುರುವಾಗಿದ್ದರು."

ದಕ್ಷಿಣ ಭಾರತೀಯ ಸಿನಿಮಾ ರಂಗದಲ್ಲಿ ಮೊದಲ ಬಾರಿಗೆ ನವೀನ ಶೈಲಿಯ ಕ್ಯಾಮೆರಾ ಬಳಸಿ, ನೈಸರ್ಗಿಕ ಬೆಳಕಿನಲ್ಲಿ ಚಿತ್ರ ನಿರ್ಮಿಸಿದ್ದ ಕೀರ್ತಿ ಅವರದಾಗಿತ್ತು.  ಬೆಂಗಳೂರು ಕಬ್ಬನ್ ಪಾರ್ಕಿನಲ್ಲಿರುವ ಒಂದು ಕಲ್ಲು ಬಂಡೆಯನ್ನು ಹಲವಾರು ಕೋನಗಳಿಂದ ಚಿತ್ರೀಕರಿಸುವುದು ಅವರಿಗೆ ಪ್ರಿಯವಾಗಿತ್ತು.

ಬಾಲು ಮಹೇಂದ್ರ ಅವರು ಈ ಲೋಕವನ್ನಗಲಿದ ದಿನ ಫೆಬ್ರವರಿ 13, 2014.

On the birth anniversary film director and cinematographer Balu Mahendra 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ