ರೂಪಾ ಸತೀಶ್
ರೂಪಾ ಸತೀಶ್
ನಮ್ಮ ರೂಪಾ ಅವರ ಸಾಧನೆಯ ರೂಪಗಳು ಅನೇಕ. ಬೆಳಗಾಗೆದ್ದು ಅವರು ಕಾಫಿ ಸೇವನೆಯನ್ನು ಆಪ್ತವಾಗೆಂಬಂತೆ ಸೂಚಿಸುತ್ತಾ ತೋರುವ ಸುಪ್ರಭಾತದಿಂದ ಮೊದಲುಗೊಂಡಂತೆ, ಅವರು ತಮ್ಮ ಜೀವನವನ್ನು ಸ್ವೀಕರಿಸಿರುವ ಸಕಲ ರೂಪಗಳೂ ವಿಶಿಷ್ಟವೇ. ಹೀಗಾಗಿ ರೂಪಾ ಸತೀಶ್ ನಮ್ಮ ನಡುವಿನ ಉಲ್ಲಾಸಪೂರ್ಣ ವಿಶ್ವರೂಪಿ. ಇಂದು ರೂಪಾ ಸತೀಶ್ ಅವರ ಹುಟ್ಟುಹಬ್ಬ.
ಉಲ್ಲಾಸವೆಂಬುದು ಬದುಕಿನ ಕಷ್ಟರಾಹಿತ್ಯಗಳಲ್ಲಿ ಇರುವುದಲ್ಲ. ಅದು ಕಷ್ಟಗಳ ನಡುವೆ ಬೆಳಕಿನತ್ತ ಕಾಣುವ ಆಂತರ್ಯದ ಪ್ರಜ್ಞೆಯಲ್ಲಿದೆ.
ಶಾಲೆಯಲ್ಲಿ ಚೆನ್ನಾಗಿ ಓದಿ ಆಟಪಾಠಗಳಲ್ಲೆಲ್ಲ ಮುಂದಿದ್ದ ರೂಪಾ ಕರ್ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ನ, ತಮ್ಮ ವಿಭಾಗದ ಕ್ಯಾಪ್ಟನ್ ಆಗಿ ಆಯ್ಕೆಗೊಂಡು, ಹನ್ನೆರಡನೇ ವಯಸ್ಸಿನಲ್ಲೇ ಕರ್ನಾಟಕ ತಂಡದಿಂದ ದಿಲ್ಲಿಯಲ್ಲಿ ನಡೆಯುತಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನಕ್ಕೆ ಆಯ್ಕೆಯಾದರು. ಈ ಉತ್ಸಾಹಿ ಎಸ್ಸೆಸ್ಸೆಲ್ಸಿ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ, ಪಿಯುಸಿ ಮೊದಲನೇ ವರ್ಷ ಮುಗಿಸದೆ ಅರ್ಧಕ್ಕೆ ಬಿಟ್ಟು ಕೆಲಸಕ್ಕೆ ಸೇರುವ ಅನಿವಾರ್ಯತೆ ಎದುರಾಗಿತ್ತು. ಅಪ್ಪ, ಅಮ್ಮ, ಇಬ್ಬರು ತಂಗಿಯರಿದ್ದ ಕುಟುಂಬ. ಕಷ್ಟಗಳಿದ್ದರೂ, ದುಡಿಯುವ ಅನಿವಾರ್ಯತೆಗಳಿದ್ದರೂ
ಮನೆಯಲ್ಲಿ ಸದಾ ಸಂತಸ, ಮಾತು, ಹರಟೆ, ಪ್ರೀತಿ, ನಗು ಇದ್ಯಾವುದಕ್ಕೂ ಎಂದೂ ಕೊರತೆ ಇರಲಿಲ್ಲ ಎನ್ನುತ್ತಾರೆ ರೂಪಾ. ಇಂತಹ ದಿನಗಳಲ್ಲೂ "ರೂಪಾ ಅವರ ಅಪ್ಪ ಹೇಳಿದ್ದು ಲೋಕಕ್ಕೆ ಏನಾದರೂ ಮಾಡಬೇಕು" ಎಂದು. ಇದು ರೂಪಾ ಅವರ ಬದುಕಿನ ಮಂತ್ರವೇ ಆಯಿತು.
ಕಷ್ಟಗಳೆಂಬುದು ರೂಪಾ ಅವರ ಜೊತೆ ಜೊತೆಗೆ ಸಾಗಿತ್ತು. ಬದುಕನ್ನು ಮುಂದುವರೆಸಲಿಕ್ಕೆ ಕೆಲಸಕ್ಕೆ ಹೋಗುತ್ತಲೇ ಮಗಳನ್ನು ಬೆಳೆಸಿ, ಓದಿಸುತ್ತಾ ತಾನೂ ಓದಿ ಉನ್ನತ ಶ್ರೇಣಿಯಲ್ಲಿ ಪದವಿ ಪಡೆದು ಬದುಕಿನ ಭವಿಷ್ಯದತ್ತ ಧೀರೆಯಾಗಿ ನಡೆದರು. ಹೀಗಿರುವಾಗ ಸಹಾ ಹತ್ತಿರದ ಅನಾಥಾಶ್ರಮದೊಡನೆ ಸಂಪರ್ಕ ಬೆಳೆಸಿ ಅನಾಥ ಮಕ್ಕಳೊಡನೆ ಪ್ರತೀವಾರ ಮಗಳೊಂದಿಗೆ ತಪ್ಪದೆ ಒಂದಷ್ಟು ತಾಸು ಇರುವುದನ್ನು ಅಭ್ಯಾಸ ಮಾಡಿಕೊಂಡರು.
ಹೊಸ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿ ಅಲ್ಲಿ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ವಿಭಾಗವನ್ನು ರಚಿಸಲು ಮುಂದಾದರು. ಹೀಗಾಗಿ ಅವರಿಗೆ ಅನೇಕ ಸ್ವಯಂ ಸೇವಾಸಂಸ್ಥೆಗಳು ಪರಿಚಯವಾದವು. ಮಕ್ಕಳಿಗೆ ಧೈರ್ಯ ಹೇಳಿ ಆತ್ಮಸ್ಥೈರ್ಯ ತುಂಬುವ ಕೆಲಸಗಳತ್ತ ಗಮನ ಹರಿಸಿ, ಆಪ್ತಸಲಹೆ ಕೊಡುವ ಮೂಲಕ ಅವರೊಂದಿಗೆ ಬೆರೆತರು. ಪ್ರಸಕ್ತದಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ಕಸ್ಟಮರ್ ಸಪೋರ್ಟ್ ಅಧಿಕಾರಿಗಳಾಗಿದ್ದಾರೆ.
ಮುಂದೆ ರೂಪಾ ಸತೀಶ್ ತಮ್ಮ ತಂದೆಯವರ ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಮಾಡಿದರು. ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಸ್ಕಾಲರ್ಶಿಪ್ ನೀಡುವ ಮೂಲಕ ಅದಕ್ಕೆ ಚಾಲನೆ ನೀಡಿದರು.
ಕನ್ನಡ ಕಾದಂಬರಿಗಳನ್ನು ಓದುವ ಹವ್ಯಾಸವಿದ್ದ ರೂಪಾ ಸತೀಶ್ ಹಲವಾರು ಪತ್ರಿಕೆಗಳಿಗೆ ಬರಹ ಮಾಡಿದ್ದಿದೆ. ತಮ್ಮ ಕೆಲವು ಭಾವನೆಗಳನ್ನು ಕಲ್ಪನೆಗಳನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸತೊಡಗುವುದರ ಜೊತೆಗೆ ‘3K – ಕನ್ನಡ ಕವಿತೆ ಕಥನ’ ಎಂಬ ಫೇಸ್ಬುಕ್ ಸಾಹಿತ್ಯ ಬಳಗ ಸೃಷ್ಟಿಯ ರೂವಾರಿಯಾದರು. ಈ ಮೂಲಕ ಸಾಹಿತಿ, ಕಲಾವಿದರು ಮತ್ತು ಚಿಂತಕರನ್ನು ಕರೆದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಒಂದು ಯಶಸ್ವೀ ದಶಕವನ್ನೂ ಮೀರಿ ನಡೆಯುತ್ತಿರುವ ಸಂತೃಪ್ತ ನಡೆ ಈ ಬಳಗದ ಜೊತೆಗಿದೆ. 'ಭಾವಸಿಂಚನ', 'ಶತಮಾನಂ ಭವತಿ', 'ಹೊಂಗೆಮರದಡಿ ನಮ್ಮ ನಿಮ್ಮ ಕತೆಗಳು' ಎಂಬ ಮೂರು ಕವನ/ಕಥನ ಸಂಕಲನಗಳು ಈ ಬಳಗದ ಮೂಲಕ ಹೊರಹೊಮ್ಮಿವೆ. ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಸಾಧಕರನ್ನು ಗೌರವಿಸುವ ಕಾರ್ಯವನ್ನೂ ಈ ಬಳಗ ಮಾಡುತ್ತ ಸಾಗಿದೆ.
ರೂಪಾ ಸತೀಶ್ ಒಂದು ಉತ್ತಮ ಶಾಲೆ ಮೂಡಿಸಬೇಕೆಂಬ ಕನಸಿನೊಡನೆ 'ಬ್ಲಾಸಮ್ಸ್ ಇಂಟರ್ನ್ಯಾಷನಲ್ ಪ್ಲೇ ಸ್ಕೂಲ್' ಆರಂಭಿಸಿದರು. ಆ ಮೂಲಕ ಕೆಲಸದ ಅಗತ್ಯವಿರುವ ಹೆಣ್ಣು ಮಕ್ಕಳಿಗೆ ಅಲ್ಲಿ ಶಿಕ್ಷಕಿಯರಾಗಿ ಅವಕಾಶ ಒದಗಿಸಬೇಕೆಂಬುದು ಅವರಿಗಿದ್ದ ಆಕಾಂಕ್ಷೆ. ಆ ಶಾಲೆ ಪೋಷಕರ ಮೆಚ್ಚುಗೆಗೆ ಸಹಾ ಪಾತ್ರವಾಗಿ, ಮಕ್ಕಳ ಅಚ್ಚುಮೆಚ್ಚಿನ ತಾಣವಾಗಿ 'ಬ್ಲಾಸಮ್ಸ್' ಅಗಿ ಅರಳಿ ದಶಕ ಪೂರೈಸಿದೆ. Go Green ಎಂಬುದು ಅವರ ಬದುಕಿನ ನಡೆ. ಹಸುರಿನತ್ತ ಸದಾ ಹಚ್ಚ ಹಸುರಿನಂತ ಚಿತ್ತದೊಡನೆ ಸಾಗುವ ಪ್ರವೃತ್ತಿ ಅವರದು.
ರೂಪಾ ಸತೀಶ್ ಸದ್ಯ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಮಾರ್ಕೆಟಿಂಗ್ ಕಸ್ಟಮರ್ ಸಪೋರ್ಟ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವುದರ ಜೊತೆಗೆ ಮೇಲ್ಕಂಡಂತ ಅನೇಕ ಚಟುವಟಿಕೆಗಳಲ್ಲಿದ್ದಾರೆ. ಅವರು ಕಾರ್ಯಕ್ರಮ ಸಂಯೋಜಿಸುತ್ತಾರೆ, ನಿರೂಪಿಸುತ್ತಾರೆ, ಸಂಘಟಿಸುತ್ತಾರೆ, ಬರೆಯುತ್ತಾರೆ, ಅಕ್ಕರೆಯಿಂದ ಎಲ್ಲಕ್ಕೂ, ಎಲ್ಲರಿಗೂ ಸಮಯ ಕೊಡುತ್ತಾರೆ. ತಾವು ನಡೆಸುವ ಚಟುವಟಿಕೆಗಳಲ್ಲದೆ ಸಮಾನ ಮನಸ್ಕ ಸದುದ್ದೇಶದ ಎಲ್ಲ ಚಟುವಟಿಕೆಗಳಲ್ಲಿ ನಸು ನಗುತ್ತಾ, ಕುಣಿ ಕುಣಿಯುತ್ತಾ, ಮಗುವಿನಂತೆ ಒಂದಾಗಿ ಬೆರೆತು ನಲಿಯುತ್ತಾರೆ. ಮಗುವಿನಂತೆ ನಲಿಯುವಷ್ಟೇ, ಘನ ಗಾಂಭೀರ್ಯ ಮೈದಳೆದ ಅವರ ಆಳ ಪರಿಜ್ಞಾನದ ಮಾತುಗಳನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ. ಹೀಗೆ ಇವರೊಬ್ಬರು ಹಲವು ವಿಶಿಷ್ಟತೆಗಳು ಒಂದಾಗಿರುವ 'combo' ಎನಿಸುತ್ತೆ.
ಈ ಉತ್ಸಾಹಿ ರೂಪಿ 'ರೂಪಾ ಸತೀಶ್'ಗೆ ಸಾಧ್ಯವಾಗದಿರುವುದೇನಾದರೂ ಉಂಟೆ. ಇಂತಹ ಹೆಣ್ಣುಮಗಳು ನಮ್ಮೆಲ್ಲರ ಹೆಮ್ಮೆ. ರೂಪಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಮಗಳ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಿಮ್ಮ ಸುಂದರ ವಿಶ್ವ ವಿಸ್ತಾರಗೊಳ್ಳುತ್ತಲೇ ಇರಲಿ. ನಮಸ್ಕಾರ.
Happy birthday to our ever inspiring ಬಹುರೂಪಿ Roopa Satish 🌷🌷🌷
ಕಾಮೆಂಟ್‌ಗಳು