ಚಂದ್ರಶೇಖರೇಂದ್ರ ಸರಸ್ವತಿ
ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು
ಆಧುನಿಕ ಶಂಕರರೆಂದೇ ಕರೆಸಿಕೊಂಡ ಶತಾಯುಷಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ನಡೆದಾಡುವ ದೇವರೆಂದು ಪ್ರಥಿತರಾದವರು. ಶಂಕರ ಭಗವತ್ಪಾದರ ಬ್ರಹ್ಮವಾದವನ್ನು ಸರ್ವತ್ರ ಕಂಡವರು, ದಯೆ-ಕರುಣೆಗಳ ಪ್ರತಿರೂಪವಾಗಿದ್ದವರು, ಸರ್ವರಲ್ಲಿಯೂ ಅಭೇದವನ್ನೇ ಸದಾ ಕಾಣುತ್ತಿದ್ದವರು. ಕಲೆ, ವಾಸ್ತುಶಿಲ್ಪ, ಸಂಸ್ಕೃತಿ, ದೇವಾಲಯಗಳ ಇತಿಹಾಸ, ನಿತ್ಯನೈಮಿತ್ತಿಕ ಪೂಜಾವಿಧಾನಗಳು, ವಿಜ್ಞಾನ, ಇತಿಹಾಸ, ಅಂತಾರಾಷ್ಟ್ರೀಯ ಘಟನೆ ಈ ಎಲ್ಲವುಗಳ ಬಗೆಗಿನ ಅವರ ಜ್ಞಾನ ಅಗಾಧವಾದುದು.
ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ತಮಿಳುನಾಡಿನ ದಕ್ಷಿಣ ಅರ್ಕಾಟ್ ಜಿಲ್ಲೆಯ ವಿಳ್ಳುಪುರಂ ಎಂಬ ಹಳ್ಳಿಯಲ್ಲಿ, ಪರಮ ಸಾತ್ವಿಕರೂ, ಅನನ್ಯ ದೈವಭಕ್ತರೂ ಆದ ಸುಬ್ರಹ್ಮಣ್ಯ ಶಾಸ್ತ್ರೀ ಮತ್ತು ಮಹಾಲಕ್ಷ್ಮಿ ದಂಪತಿಯ 2ನೇ ಮಗನಾಗಿ 1894ರ ಮೇ 20ರಂದು ಜನಿಸಿದರು. ಅವರ ಜನ್ಮನಾಮ ಸ್ವಾಮಿನಾಥನ್. ಸುಬ್ರಹ್ಮಣ್ಯ ಶಾಸ್ತ್ರಿಗಳು ಮೂಲತಃ ಹೊಯ್ಸಳ ಕರ್ನಾಟಕ ಸ್ಮಾರ್ತ ಬ್ರಾಹ್ಮಣರು. ಇವರ ಪೂರ್ವಿಕರು ಕರ್ನಾಟಕದಿಂದ ತಮಿಳುನಾಡಿಗೆ ವಲಸೆಹೋದವರು. ಶಾಸ್ತ್ರಿಗಳು ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದವರು.
ಸ್ವಾಮಿನಾಥನ್ ಗೆ ಬಾಲ್ಯದಲ್ಲಿ ತಂದೆಯಿಂದಲೇ ಸಂಸ್ಕೃತಪಾಠವಾಗಿ, 1905ರಲ್ಲಿ ‘ತಿಂಡಿವನಂ’ ಎಂಬಲ್ಲಿ ಉಪನಯನ ನೆರವೇರಿತು. ತರುವಾಯದಲ್ಲಿ, ವೇದಾಭ್ಯಾಸ, ವ್ಯಾಕರಣ ಮತ್ತು ನ್ಯಾಯಶಾಸ್ತ್ರದ ಪ್ರವೇಶವಾಯಿತು. ಬಾಲ್ಯಸಹಜ ಆಟ-ಪಾಠಗಳೊಡನೆ ದೈವಪೂಜೆಯಲ್ಲಿ ಪರಮಾಸಕ್ತಿಯಿದ್ದ ಸ್ವಾಮಿನಾಥನ್ ಸಂಸ್ಕೃತ, ತಮಿಳು ಭಾಷೆಗಳಲ್ಲಿ ನೈಕಟ್ಯ ಪ್ರವೇಶ ಪಡೆದನು.
ಕಂಚಿ ಕಾಮಕೋಟಿ ಪೀಠದ 66ನೇ ಪೀಠಾಧ್ಯಕ್ಷರು ಪೆರುಮುಕ್ಕಲ್ ಎಂಬಲ್ಲಿ ಚಾತುರ್ಮಾಸ್ಯ ವ್ರತದಲ್ಲಿದ್ದಾಗ, ಅನುಗ್ರಹ ಪಡೆಯಲೆಂದು ಸುಬ್ರಹ್ಮಣ್ಯ ಶಾಸ್ತ್ರಿಗಳು ಸ್ವಾಮಿನಾಥನ್‍ನನ್ನು ಅವರಲ್ಲಿಗೆ ಕರೆದುಕೊಂಡು ಹೋಗಿದ್ದರು. ನಂತರ ಕಾಮಕೋಟಿ ಪೀಠದ ಸಂಪರ್ಕ ಗಾಢವಾಯಿತು.
ಕಾಮಕೋಟಿ ಪೀಠದ 67ನೇ ಆಚಾರ್ಯರು ಮಹಾದೇವೇಂದ್ರ ಸರಸ್ವತಿ ಸ್ವಾಮಿಗಳು. ಸ್ವಾಮಿನಾಥನ್‍ಗೆ ದೂರದ ಸಂಬಂಧಿಗಳಾಗಿದ್ದ ಇವರು, ಆಕಸ್ಮಿಕ ಅನಾರೋಗ್ಯದಿಂದಾಗಿ ಬ್ರಹ್ಮೀಭೂತರಾದರು. ಆಗ ಪೀಠದ 68ನೇ ಆಚಾರ್ಯರಾಗಿ 1907ರ ಫೆಬ್ರವರಿ 13ರಂದು ಬಾಲಕ ಸ್ವಾಮಿನಾಥನ್ ಪೀಠಾಧ್ಯಕ್ಷರಾಗಬೇಕಾಯಿತು. ‘ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿ’ ಎಂಬ ಹೆಸರಲ್ಲಿ ಸಂನ್ಯಾಸ ಸ್ವೀಕಾರವಾಯಿತು.
1909ರಲ್ಲಿ ಕುಂಭಕೋಣಂ ಮಠದ ಆಚಾರ್ಯರಲ್ಲಿ ವೇದ, ಪುರಾಣ, ಸ್ಮೃತಿ ಗ್ರಂಥಗಳ ಅಭ್ಯಾಸ ನಿರಂತರವಾಗಿ ನಡೆಯಿತು. ನಂತರ ಅಖಂಡಕಾವೇರಿ ನದಿದಂಡೆಯಲ್ಲಿದ್ದ ‘ಮಹೇಂದ್ರಮಂಗಳಂ’ ಎಂಬ ಪವಿತ್ರಸ್ಥಳದಲ್ಲಿ 1911ರಿಂದ 14ರವರೆಗೆ ಉಪನಿಷತ್ತು, ಭಾಷ್ಯ ಗ್ರಂಥಗಳ ವಿಸ್ತಾರ ಅಧ್ಯಯನವಾಯಿತು. ಅಲ್ಲಿರುವಾಗಲೇ ಛಾಯಾಗ್ರಹಣ, ಗಣಿತಶಾಸ್ತ್ರ ಮತ್ತು ಖಭೌತ ವಿಜ್ಞಾನ ಕುರಿತಾದ ವಿಶೇಷ ಆಸಕ್ತಿಯೂ ಬೆಳೆಯಿತು. 1914ರಲ್ಲಿ ಆಚಾರ್ಯರು ಕುಂಭಕೋಣಂಗೆ ಮರಳಿದರು.
ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು 13ನೇ ವಯಸ್ಸಿನಲ್ಲಿ ಸಂನ್ಯಾಸದೀಕ್ಷೆ ಪಡೆದ ಮೇಲೆ 1918ರಲ್ಲಿ ಭಾರತಸಂಚಾರ ಕೈಗೊಂಡರು. ಬಾಹ್ಯಾಂಡಬರದಿಂದ ದೂರವಿದ್ದು ಸದಾ ಹತ್ತಿಬಟ್ಟೆಯನ್ನೇ ಧರಿಸುತ್ತಿದ್ದ ಇವರ ಸಂಚಾರವಿದ್ದೆಡೆಯೆಲ್ಲ ಭಕ್ತರು ಸುತ್ತುವರಿಯುತ್ತಿದ್ದರು. ಇವರು ಬಹುತೇಕ ಹಳ್ಳಿಗಳಲ್ಲಿಯೇ ಸಂಚರಿಸಿ ಅಧ್ಯಾತ್ಮಮಾರ್ಗದಲ್ಲಿ ಸಾಗುವಂತೆ ಜನರನ್ನು ಪ್ರೇರೇಪಿಸುತ್ತಿದ್ದರು. ಜನ ಇವರನ್ನು ‘ನಡುಮಾಡುದೈವಂ’ ಎಂದೇ ಕರೆಯುತ್ತಿದ್ದರು. ಸಂಪ್ರದಾಯದಲ್ಲಿ ಶ್ರದ್ಧೆ, ಆಚಾರ-ವಿಚಾರಗಳಲ್ಲಿ ನಿಷ್ಠೆ ಇಟ್ಟುಕೊಂಡ ಇವರು ಪ್ರತಿವರ್ಷ ಚಾತುರ್ಮಾಸ್ಯವನ್ನು ನಗರಕ್ಕೆ ದೂರವಿದ್ದ ಹಳ್ಳಿಗಳಲ್ಲಿಯೇ ಆಚರಿಸುತ್ತಿದ್ದರು. ಆಗ ದೇಶದ ವಿವಿಧೆಡೆಯ ಸಹಸ್ರಾರು ಜನರು ಬಂದು ಇವರ ದರ್ಶನ, ಆಶೀರ್ವಾದ ಪಡೆದು ಧನ್ಯರಾಗುತ್ತಿದ್ದರು. ತಮ್ಮಲ್ಲಿಗೆ ಬಂದ ಭಕ್ತರು ಮಾತಾಡುವ ಭಾಷೆಯಲ್ಲೇ ಆಚಾರ್ಯರು ಉತ್ತರಿಸುತ್ತಿದ್ದರು, ಅವರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.
ಪರಮಾಚಾರ್ಯರ ಆಧ್ಯಾತ್ಮಿಕ ಪ್ರಯಾಣವೂ ವಿಶಿಷ್ಟವಾದುದು. ಪ್ರತಿನಿತ್ಯ ಸಂಧ್ಯಾವಂದನೆಯ ನಂತರ, ಶ್ರೀ ಚಂದ್ರಮೌಳೀಶ್ವರ ಹಾಗೂ ಕಂಚಿ ಕಾಮಾಕ್ಷಿ ಪೂಜೆಯನ್ನು ನೆರವೇರಿಸುತ್ತಿದ್ದರು. ಜತೆಗೆ ಪಂಚಧಾನ್ಯ ಪೂಜೆಯೂ ಸಾಗುತ್ತಿತ್ತು. ಇವರನ್ನು ಕಾಣಲು ಬರುತ್ತಿದ್ದ ದೇಶ-ವಿದೇಶಗಳ ಜನರಲ್ಲಿ ಮುಸಲ್ಮಾನರು, ಕ್ರೖೆಸ್ತರೂ ಇರುತ್ತಿದ್ದುದು ವಿಶೇಷ. ಕೇವಲ ನಾಮಾಂಕಿತ ಜಗದ್ಗುರುವಾಗದೆ, ವ್ಯಕ್ತಿತ್ವದಿಂದಲೇ ‘ಜಗದ್ಗುರು’ ಎನಿಸಿಕೊಂಡಿದ್ದ ಇವರು ರಾಮತಾರಕ ಮಂತ್ರವನ್ನು ದೇಶಾದ್ಯಂತ ಧಾರ್ವಿುಕ ಆಂದೋಲನವಾಗಿ ರೂಪಿಸಿದರು. ತಮ್ಮ ಬಳಿ ಬಂದವರಿಗೆ ‘ರಾಮತಾರಕ ಮಂತ್ರ’ವನ್ನೇ ಅನುಗ್ರಹಿಸುತ್ತಿದ್ದರು. ದೇಶದಾದ್ಯಂತದ ಆಧ್ಯಾತ್ಮಿಕ ಪ್ರವಚನಗಳಲ್ಲಿ ಆದಿಶಂಕರರ ತತ್ವೋಪದೇಶಗಳನ್ನು ಅನುಗ್ರಹಿಸುತ್ತಿದ್ದರು. ತಮಿಳುನಾಡಿನ ಜನ ಇವರನ್ನು ‘ಮಹಾಪೆರಿಯವ’ ಎಂದೇ ಗೌರವಿಸುತ್ತಿದ್ದರು. ತಮ್ಮ ಗಮನಕ್ಕೆ ಬಂದ ಪಾಳುಬಿದ್ದ ದೇವಸ್ಥಾನಗಳ ಜೀಣೋದ್ಧಾರಕ್ಕೆ ಶ್ರಮಿಸುತ್ತಿದ್ದ ಆಚಾರ್ಯರು ಜನಸಾಮಾನ್ಯರೆಲ್ಲರೂ ವಿಷ್ಣುಸಹಸ್ರನಾಮವನ್ನು ಹಾಡಲು ಉತ್ತೇಜಿಸುತ್ತಿದ್ದರು, ಭಕ್ತಿಸಂಗೀತದ ಮೂಲಕ ಆಧ್ಯಾತ್ಮಿಕಯಾನ ಪ್ರಾರಂಭಿಸಬೇಕೆಂದು ಮಹಿಳೆಯರನ್ನು ಪ್ರೋತ್ಸಾಹಿಸುತ್ತಿದ್ದರು. ಭಕ್ತರೊಂದಿಗಿನ ಇವರ ಸಂವಾದಗಳಲ್ಲಿ, ಧರ್ಮ, ಪ್ರಾಚೀನ ಸಂಸ್ಕೃತಿಯಂಥ ವೈವಿಧ್ಯಮಯ ವಿಷಯಗಳು ಹಾದುಹೋಗುತ್ತಿದ್ದವು. ಯತಿಗಳಿಗೆ ಯತಿಧರ್ಮವನ್ನು, ರಾಜಕಾರಣಿಗಳಿಗೆ ರಾಜನೀತಿ-ಪ್ರಜಾಪರಿಪಾಲನೆಯ ರಹಸ್ಯಗಳನ್ನು ಬೋಧಿಸುತ್ತ ಎಲ್ಲರ ಪ್ರೀತಿಯ ‘ನಡೆದಾಡುವ ದೈವ’ವೇ ಆಗಿದ್ದ ಅವರು ಸನಾತನ ಧರ್ಮ ಮತ್ತು ವೇದಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಕಾಪಿಡಲು ಅನೇಕ ಕ್ರಮಗಳನ್ನು ಕೈಗೊಂಡರು. ಇದರ ಅಂಗವಾಗಿ ವೇದಾಧ್ಯಾಯೀ ಬ್ರಾಹ್ಮಣರನ್ನು ಸನ್ಮಾನಿಸುತ್ತಿದ್ದರು, ಪ್ರತಿವರ್ಷ ವೈದಿಕ ವಿದ್ವಾಂಸರ ಸಭೆ ನಡೆಸಿ ಅವರನ್ನು ಗೌರವಿಸುತ್ತಿದ್ದರು. ತ್ರಿಕಾಲಜ್ಞಾನಿಯಾಗಿ ‘ಮೌನತಪಸ್ವಿ’ಯಾಗಿ, ಅನುಗ್ರಹ ಪ್ರೇಮವಾತ್ಸಲ್ಯ ಹಾಗೂ ಅಹಿಂಸೆ-ಅಭಯಗಳಿಂದ ಸಮನ್ವಯಗೊಂಡಿದ್ದ ಅವರ ತತ್ವೋಪದೇಶ ಸಮಗ್ರ ರಾಷ್ಟ್ರದ ಹಿತದೃಷ್ಟಿಯನ್ನು ಹೊಂದಿದ್ದಲ್ಲದೆ ಆಧ್ಯಾತ್ಮಿಕ ಹಿರಿಮೆಗೆ ಸಾಧನವಾಗಿತ್ತು. ‘ಗುರು-ಹಿರಿಯರನ್ನು ಗೌರವಿಸಬೇಕು. ಗುರುವಿನಿಂದ ಮಾತ್ರ ಮಾನವನು ಐಹಿಕ ಮತ್ತು ಆಮುಷ್ಮಿಕ ಫಲವನ್ನು ಪಡೆಯುತ್ತಾನೆ. ದೈವವು ಕರುಣಿಸಿದ ಸಂಪತ್ತನ್ನು ಪರೋಪಕಾರಕ್ಕಾಗಿ ದೀನರ ಉದ್ಧಾರಕ್ಕಾಗಿ ವಿನಿಯೋಗಿಸಬೇಕು. ನ್ಯಾಯಯುತವಾಗಿ ಬಾಳಬೇಕು. ಭಗವಂತನ ನೇರವಾಣಿಯಾದ ವೇದಗಳ ಅಧ್ಯಯನ ಹಾಗೂ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬರೂ ಸ್ವಧರ್ಮ ನಿರತರಾಗಬೇಕು. ಅನ್ಯಮತ, ಆಚಾರ-ವಿಚಾರಗಳನ್ನು ನಿಂದಿಸದೆ, ಕೇವಲ ಆತ್ಮಜ್ಞಾನಕ್ಕಾಗಿ ಯತ್ನಿಸಿ ಮೋಕ್ಷ ಹೊಂದಬೇಕು’- ಇದು ಪರಮಾಚಾರ್ಯರ ನಿತ್ಯೋಪದೇಶವಾಗಿತ್ತು.
ಭಾರತದ ಸ್ವಾತಂತ್ರ್ಯ ಆಂದೋಲನದಲ್ಲೂ ಪರಮಾಚಾರ್ಯರು ಪರೋಕ್ಷವಾಗಿ ಭಾಗವಹಿಸಿದ್ದುಂಟು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1920ರಲ್ಲಿ ಪ್ರಾರಂಭಿಸಿದ ಅಸಹಕಾರ ಚಳವಳಿಗೆ ಜನರು ಬೀದಿಬೀದಿಗಳಲ್ಲಿ ಬೆಂಬಲ ಸೂಚಿಸಿದರು. ತಿರುಚನಾಪಳ್ಳಿಯ ಕಾಂಗ್ರೆಸ್ ಮುಖಂಡ ಎಫ್.ಜಿ. ನಟೇಶ್ ಅಯ್ಯರ್ ಪರಮಾಚಾರ್ಯರಿಗೆ ಚಳವಳಿಯ ಉದ್ದೇಶವನ್ನು ವಿವರಿಸಿದಾಗ, ಅವರ ಮಾತಿನಿಂದ ಪ್ರಭಾವಿತರಾಗಿದ್ದರು. ಅಸಹಕಾರ ಆಂದೋಲನ ನಡೆದಾಗ ತ್ರಿವರ್ಣ ಧ್ವಜ ಮತ್ತು ಧರ್ಮಚಕ್ರದ ಮಹತ್ವವನ್ನು ಪರಮಾಚಾರ್ಯರು ಸಭೆಗೆ ವಿವರಿಸಿದ್ದುಂಟು. ಪರಮಾಚಾರ್ಯರಿಗೆ ಬಡವರನ್ನು, ದಲಿತರನ್ನು ಕಂಡರೆ ಅನುಕಂಪ. ಇವರೊಮ್ಮೆ ಚಾತುರ್ಮಾಸ್ಯದಲ್ಲಿ ನಿರತರಾಗಿದ್ದ ಊರಿನಲ್ಲಿ ಹರಿಜನರೇ ಹೆಚ್ಚಾಗಿದ್ದರು. ಅವರು ಆಚಾರ್ಯರ ದರ್ಶನಕ್ಕೆ ಹಂಬಲಿಸಿದಾಗ ಅವರನ್ನು ಸಂತೋಷದಿಂದ ಮಾತನಾಡಿಸಿ, ಹಣ್ಣು-ಹಂಪಲು, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಹೀಗೆ, ಸರ್ವರಲ್ಲೂ ಸಮಭಾವ ಮೆರೆಯುತ್ತಿದ್ದ ಪರಮಾಚಾರ್ಯರ ದರ್ಶನ ಪಡೆದವರಲ್ಲಿ ನೇಪಾಳದ ರಾಜ-ರಾಣಿ, ಗ್ರೀಕ್ ನ ಮಹಾರಾಣಿ, ಗಾಂಧೀಜಿ, ಸಿ. ರಾಜಗೋಪಾಲಾಚಾರಿ, ಬೌದ್ಧಗುರು ದಲೈಲಾಮ, ಸತ್ಯಸಾಯಿಬಾಬ, ರಾಷ್ಟ್ರಪತಿಯಾಗಿದ್ದ ಆರ್. ವೆಂಕಟರಾಮನ್, ಕಲಾವಿದರಾದ ಶಿವಾಜಿ ಗಣೇಶನ್, ರಜಿನಿಕಾಂತ್, ಕಮಲಹಾಸನ್ ಮುಂತಾದ ಪ್ರಮುಖರು ಸೇರಿದ್ದಾರೆ.
ಪರಮಾಚಾರ್ಯರು ಗಣ್ಯರು ಮತ್ತು ಶ್ರೀಸಾಮಾನ್ಯರ ನಡುವೆ ಪಕ್ಷಪಾತ ಮಾಡುತ್ತಿರಲಿಲ್ಲ; ಶ್ರೀಸಾಮಾನ್ಯರಿಗೆ ದರ್ಶನ ನೀಡುತ್ತಿದ್ದ ಗೋಶಾಲೆಯಲ್ಲೇ, ರಾಷ್ಟ್ರಾಧ್ಯಕ್ಷರಾಗಿದ್ದ ನೀಲಂ ಸಂಜೀವರೆಡ್ಡಿ ಅವರಿಗೂ ದರ್ಶನ ನೀಡಿದ್ದುಂಟು. ಇಂದಿರಾ ಗಾಂಧಿ, ಆರ್. ವೆಂಕಟರಾಮನ್ ಅವರ ವಿಷಯದಲ್ಲೂ ಹೀಗೇ ನಡೆದುಕೊಂಡಿದ್ದರು. ಒಮ್ಮೆ ಗಾಂಧೀಜಿ ತಮಿಳುನಾಡಿನ ಪ್ರವಾಸದಲ್ಲಿದ್ದಾಗ ಪರಮಾಚಾರ್ಯರ ದರ್ಶನ ಮಾಡಿದರು. ಈ ಪರಸ್ಪರ ಭೇಟಿ ಆಧ್ಯಾತ್ಮಿಕ ಅನುಭೂತಿಯಿಂದ ಕೂಡಿತ್ತು. ಅಂದು ಸಂಜೆ ಪರಮಾಚಾರ್ಯರೊಡನೆ ಗಾಂಧೀಜಿ ಹಿಂದಿಯಲ್ಲಿ ಮಾತನಾಡಿದರೆ, ಪ್ರತಿಯಾಗಿ ಆಚಾರ್ಯರು ಸರಳ ಸಂಸ್ಕೃತದಲ್ಲಿ ಸಂಭಾಷಿಸಿದರು. ಹೀಗೆ ಮಾತನಾಡುತ್ತಿರುವಾಗ ಪ್ರಾರ್ಥನೆಯ ವೇಳೆಯಾಯಿತು. ಗಾಂಧೀಜಿ ಅವರಿಗೆ ಇದನ್ನು ತಿಳಿಸಿದಾಗ, ‘ನಾವು ಈವರೆಗೂ ಪ್ರಾರ್ಥನೆಯಲ್ಲೇ ಇದ್ದೇವೆ, ನಿಜವಾದ ಪ್ರಾರ್ಥನೆಯನ್ನು ಮಾಡಿದ್ದೇವೆ’ ಎಂದರಂತೆ. ಸತ್ಯಾಗ್ರಹ, ಅಹಿಂಸೆ, ಅಸ್ಪಶ್ಯತಾ ನಿವಾರಣೆ ಕುರಿತಾದ ಗಾಂಧೀಜಿಯವರ ಪ್ರತಿಪಾದನೆಗಳಿಗೆ ಪರಮಾಚಾರ್ಯರು ಸಹಮತ ವ್ಯಕ್ತಪಡಿಸಿದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕಂಚಿ ಬಳಿಯ ಕಲವೈ ಎಂಬಲ್ಲಿ ಸ್ವಾಮೀಜಿಯನ್ನು ಭೇಟಿಯಾಗಿದ್ದರು. ಹೊಳೆಯ ಒಂದು ಬದಿಯಲ್ಲಿ ಪರಮಾಚಾರ್ಯರು, ಎದುರು ಬದಿಯಲ್ಲಿ ಇಂದಿರಾ ಸ್ವಲ್ಪಹೊತ್ತು ಮೌನವಾಗಿ ಕುಳಿತಿದ್ದರಂತೆ. ಸ್ವಾಮೀಜಿ ಶಬ್ದಗಳನ್ನಾಡದೆ ತಮ್ಮ ಇಂಗಿತವನ್ನು ಕೈಬೆರಳುಗಳಿಂದ ಸೂಚಿಸಿದ್ದರು. ತತ್ತ್ವರಹಿತವಾದ, ಅಧಿಕಾರವೇ ಗುರಿಯಾಗಿರುವ ರಾಜಕಾರಣದಲ್ಲಿ ಸ್ವಾಮೀಜಿಗೆ ಆಸಕ್ತಿಯಿರಲಿಲ್ಲ. ಮಾನವೀಯತೆ ಮತ್ತು ಸೇವೆ ಅವರ ಮುಖ್ಯಕಾಳಜಿಯಾಗಿತ್ತು. ಅವರ ದೃಷ್ಟಿಯಲ್ಲಿ ಇದೇ ಆಧ್ಯಾತ್ಮಿಕ ಸ್ವರೂಪ ಮತ್ತು ವಿಕಾಸವಾಗಿತ್ತು. ರಾಷ್ಟ್ರಪತಿಯಾಗಿದ್ದ ನೀಲಂ ಸಂಜೀವರೆಡ್ಡಿಯವರು ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಗೋಶಾಲೆಯ ಬಳಿ ಪರಮಾಚಾರ್ಯರ ದರ್ಶನ ಮಾಡಿ, ಕುಟುಂಬ ಹಾಗೂ ದೇಶದ ಜನತೆಗಾಗಿ ಆಶೀರ್ವಾದ ಬೇಡಿದರು. ನಂತರ ಜನತೆಯ ಸೇವಾಕಾರ್ಯದ ಬಗೆಗೆ ಸಂಭಾಷಿಸಿ ಸಂತೃಪ್ತರಾದರು.
ಪರಮಾಚಾರ್ಯರು ಕಾಲ್ನಡಿಗೆಯಲ್ಲಿಯೇ ಸಂಚರಿಸುತ್ತಿದ್ದರು. ಜತೆಗೆ ಭಜನೆ ಹಾಡುತ್ತ ಭಕ್ತರು ಇರುತ್ತಿದ್ದರು. ದಾರಿಯಲ್ಲಿ ಸಿಗುವ ತೊರೆ ಹಳ್ಳ ಪ್ರದೇಶಗಳನ್ನು ಸ್ವಲ್ಪ ಹೊತ್ತು ನಿಂತು ನೋಡುತ್ತ ಪ್ರಕೃತಿದೈವದಲ್ಲಿ ಲೀನರಾಗುತ್ತಿದ್ದರು. ಸಂಜೆವೇಳೆ ನೀರಿನಂಚಿನಲ್ಲಿ ನಿಂತು ಮೆಲ್ಲನೆ ಹೆಜ್ಜೆಯಿಟ್ಟು ಮೊಳಕಾಲು ಮುಳುಗುವಷ್ಟು ನೀರಿದ್ದ ಜಾಗದಲ್ಲಿ ಕಾವಿಬಟ್ಟೆ ತೆಗೆಯದೆ ಕುಳಿತುಬಿಡುತ್ತಿದ್ದರು. ನೀರಲ್ಲಿ ತಲೆಯನ್ನು 3 ಸಲ ಮುಳುಗಿಸಿ ಮೇಲೆತ್ತಿ ಹತ್ತಿರದ ಹುತ್ತದ ಮಣ್ಣನ್ನು ಪುಡಿಮಾಡಿ ತಲೆ-ಮೈಗೆ ತಿಕ್ಕಿಕೊಳ್ಳುತ್ತಿದ್ದರು. ನಂತರ ನೀರಿನಲ್ಲಿ ತಲೆಯನ್ನು ಮುಳುಗಿಸಿ ಮೇಲೆದ್ದು ಹನಿಬೀಳುತ್ತಿದ್ದ ಒದ್ದೆಬಟ್ಟೆಯಲ್ಲಿ ದಡಕ್ಕೆ ಬರುತ್ತಿದ್ದರು. ಇದೆಲ್ಲ 15 ನಿಮಿಷದಲ್ಲಿ ಮುಗಿಯುತ್ತಿತ್ತು. ನಂತರ ಸ್ವಚ್ಛ ಕಾವಿಯುಟ್ಟು ಮೇಲುಹೊದಿಕೆ ಹೊದ್ದು ಒದ್ದೆಬಟ್ಟೆಯನ್ನು ಕಳಚಿಬಿಡುತ್ತಿದ್ದರು. ಸಂಧ್ಯಾವಂದನೆಯ ವೇಳೆ ಮೇಲಿನ ಅಂಗವಸ್ತ್ರವನ್ನು ಎಡಗಡೆಯಿಂದ ಬಲಕ್ಕೆ ತಲೆಗೆ ಸುತ್ತಿಕೊಳ್ಳುತ್ತಿದ್ದರು. ಮೂರು ತುಂಡು ಕಾವಿಬಟ್ಟೆಗಳೇ ಅವರ ಉಡುಪಾಗಿರುತ್ತಿತ್ತು. ಶಿಷ್ಯರು ನೀರಿನಲ್ಲಿದ್ದ 3-4 ಕಲ್ಲು ತಂದು ಹತ್ತಿರ ಹತ್ತಿರ ಇಟ್ಟು ಹುಲ್ಲುಚಾಪೆಯುಳ್ಳ ಮರದ ಮಣೆಯನ್ನು ಅದರ ಮೇಲಿಟ್ಟು ಕುಳಿತುಕೊಳ್ಳಲು ಅಣಿಗೊಳಿಸುತ್ತಿದ್ದರು. ಆಚಾರ್ಯರು ಅದರ ಮೇಲೆ ಕುಳಿತು ಶರೀರಕ್ಕೆ ವಿಭೂತಿ ಲೇಪಿಸಿ ಪದ್ಮಾಸನದಲ್ಲಿ ಕುಳಿತುಕೊಳ್ಳುವ ರೀತಿಯಂತೂ ನೋಡಿದವರಿಗೆ ಆಶ್ಚರ್ಯಕರವಾಗಿರುತ್ತಿತ್ತು. ಸೂರ್ಯನ ಕಡೆಗೆ ಮುಖಮಾಡಿ ಮಾನಸಪೂಜೆ ಪ್ರಾರಂಭಿಸುತ್ತಿದ್ದರು. ಕೈಯಲ್ಲಿದ್ದ ಮಣಿಗಳನ್ನು ತಿರುಗಿಸುತ್ತ ಜಪ ಮಾಡುತ್ತಿದ್ದರು. ಪರಮಾಚಾರ್ಯರು ಸಂಚಾರದಲ್ಲಿದ್ದಾಗಲೂ ಪ್ರತಿನಿತ್ಯ ಬೆಳಗ್ಗೆ-ಮಧ್ಯಾಹ್ನ-ಸಂಜೆ ಸಂಧ್ಯಾವಂದನೆ ಮಾಡುತ್ತಿದ್ದುದುಂಟು.
ಪರಮಾಚಾರ್ಯರು ತಮಿಳಿನಲ್ಲಿ ಹಲವು ಕೃತಿಗಳನ್ನು ಬರೆದಿದ್ದು ಅವು ಇಂಗ್ಲಿಷ್ ಗೆ ಅನುವಾದಗೊಂಡು ಪ್ರಕಟವಾಗಿವೆ. ಮುಂಬೈನ ಭಾರತೀಯ ವಿದ್ಯಾಭವನ ಈ ಕೃತಿಗಳನ್ನು ಪ್ರಕಟಿಸಿದೆ.
ಪರಮಾಚಾರ್ಯರು ಜೀವಿತದುದ್ದಕ್ಕೂ ಭಾರತೀಯ ಸಂಸ್ಕೃತಿಯ ಉನ್ನತಾದರ್ಶಗಳನ್ನು ತಮ್ಮ ವ್ಯಕ್ತಿತ್ವದ ಮೂಲಕ ಪಸರಿಸಿದರು. ಅವರ ಮಹಾಸಮಾಧಿ ಒಂದು ತಿಂಗಳಿರುವಾಗ್ಗೆ ಸಂಡೂರಿಗೆ ಭೇಟಿಕೊಟ್ಟು ಎಂ.ವೈ. ಘೊರ್ಪಡೆ ಸ್ಥಾಪಿಸಿದ ‘ವಿದ್ಯಾರಣ್ಯ ಸಂಸ್ಕೃತ ಪಾಠಶಾಲೆ’ಯನ್ನು ಉದ್ಘಾಟಿಸಿ ಉನ್ನತೋನ್ನತವಾಗಿ ಬೆಳೆಯಲೆಂದು ಹಾರೈಸಿದ್ದರು. ಗುರುಕುಲ ಮಾದರಿಯ ಸಂಸ್ಕೃತ ಪಾಠಶಾಲೆ ಎಲ್ಲ ಕಡೆ ಪ್ರಾರಂಭವಾಗಬೇಕೆಂದು ಬಯಸಿದ್ದರು. ದಕ್ಷಿಣಭಾರತದ ಅನೇಕ ಸಂಸ್ಕೃತ ವಿದ್ಯಾಲಯಗಳಿಗೆ ಆರ್ಥಿಕ ಮತ್ತು ಭೌತಿಕ ನೆರವು ನೀಡಿದ್ದ ಅವರು, ಎಲ್ಲೇ ಇರಲಿ ಶಂಕರ ಭಗವತ್ಪಾದರ ಭಾಷ್ಯಪಾಠ ಮಾಡುತ್ತಿದ್ದರು. ವಿದ್ವಾಂಸರೊಂದಿಗೆ ಗಹನ ವಿಷಯಗಳನ್ನು ರ್ಚಚಿಸುತ್ತಿದ್ದರು.
ಪರಮಾಚಾರ್ಯರು ಶತಾಯುಷಿಗಳಾದಾಗ ನಾಡಿಗೆ ನಾಡೇ ಸಂಭ್ರಮಿಸಿತು, ಭಕ್ತಿಭಾವದಿಂದ ಕೊಂಡಾಡಿತು. ಕೊನೆಯವರೆಗೂ ಆಶೀರ್ವದಿಸುತ್ತ ಅಧ್ಯಯನ-ಅಧ್ಯಾಪನದಲ್ಲೇ ಇರುತ್ತಿದ್ದ ಪರಮಾಚಾರ್ಯರು, ತಮ್ಮ ನಂತರದ ಪೀಠಾಧಿಪತಿಯಾಗಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳಿಗೆ ಪಟ್ಟಾಧಿಕಾರ ಕೊಟ್ಟು, ಜಪ-ತಪ-ಧ್ಯಾನದಲ್ಲಿ ಮಗ್ನರಾದರು. ಕಂಚಿ ಮಠದಲ್ಲಿಯೇ ಕೊನೆಗಾಲವನ್ನು ಕಳೆದರು. 1994ರ ಜನವರಿ 8ರಂದು ದೇಹತ್ಯಜಿಸಿ ಬ್ರಹ್ಮೀಭೂತರಾದರು. ಜನ ತಮಿಳುನಾಡಿನತ್ತ ಪ್ರವಾಹೋಪಾದಿಯಲ್ಲಿ ಸಾಗಿಬಂದರು. ಅವರ ಪಾರ್ಥಿವ ಶರೀರಕ್ಕೆ ಜಯೇಂದ್ರ ಸರಸ್ವತಿಗಳು ವಿಧಿಪೂರ್ವಕ ಧಾರ್ವಿುಕ ಸಂಸ್ಕಾರ ನಡೆಸಿದ ನಂತರ ಕಂಚಿಮಠದ ಆವರಣದಲ್ಲಿ ಸಮಾಧಿ ಮಾಡಲಾಯಿತು. ಹೀಗೆ, ಜೀವನದುದ್ದಕ್ಕೂ ವೈದಿಕವಿದ್ಯೆಯ ಪ್ರಚಾರ, ಅಸಾಧಾರಣ ತಪೋನಿಷ್ಠೆ, ಸೀಮಾತೀತ ಪ್ರೀತಿ, ದಯೆ ಮತ್ತು ಕರುಣೆಗಳ ಮೂರ್ತರೂಪವೇ ಆಗಿದ್ದರು ಕಂಚಿ ಪರಮಾಚಾರ್ಯರು.
ಲೇಖನ ಕೃಪೆ: ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು.
On birth anniversary of Paramacharya Sri Shankarendra Saraswathi
ಕಾಮೆಂಟ್‌ಗಳು