ಜಯಶ್ರೀ ದೇಶಪಾಂಡೆ
ಜಯಶ್ರೀ ದೇಶಪಾಂಡೆ
ಜಯಶ್ರೀ ದೇಶಪಾಂಡೆ ಅಂದರೆ ತಕ್ಷಣವೇ ಮನಸ್ಸಿನಲ್ಲಿ ಮೂಡಿಬರುವುದು ವಿಶ್ವದೆಲ್ಲೆಡೆಯ ಮನಗಳ ಸೂಕ್ಷ್ಮಾತಿಸೂಕ್ಷ್ಮಗಳ ಎಳೆಗಳನ್ನು ಒಂದೆಳೆಯಾಗಿ ಪೋಣಿಸುವ ವಿಶಿಷ್ಟ ಬರಹಗಳು.
ಮೇ 17 ಜಯಶ್ರೀ ದೇಶಪಾಂಡೆಯವರ ಜನ್ಮದಿನ. ಜಯಶ್ರೀ ದೇಶಪಾಂಡೆ ಅವರು ಉತ್ತರ ಕರ್ನಾಟಕದ ವಿಜಯಪುರದವರು. ಅವರ ತಂದೆಯವರು ಪೋಲೀಸ್ ಅಧಿಕಾರಿಯಾಗಿದ್ದರು. ನಾಲ್ವರು ಅಣ್ಣ ತಮ್ಮಂದಿರು, ಇಬ್ಬರು ಅಕ್ಕಂದಿರ ತುಂಬು ಕುಟುಂಬ ಅವರದು. ಒಬ್ಬರು ಅಣ್ಣ ಸುಪ್ರೀಂ ಕೋರ್ಟಿನ ಹಿರಿಯ ಅಡ್ವೋಕೇಟ್ ಆಗಿದ್ದಾರೆ. ಕಿರಿಯ ಸಹೋದರ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದವರು. ಇನ್ನಿಬ್ಬರು ಅಣ್ಣಂದಿರು ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳ ಸರ್ಕಾರದ ಸೇವೆಯಲ್ಲಿದ್ದು ನಿವೃತ್ತರಾಗಿದ್ದಾರೆ. ಇಬ್ಬರು ಸೋದರಿಯರಲ್ಲಿ ಒಬ್ಬರು ನಮ್ಮೆಲ್ಲರ ಆಪ್ತರಾದ ಹಿರಿಯ ಲೇಖಕಿ ಸುಧಾ ಸರನೋಬತ್. ಮತ್ತೊಬ್ಬ ಸಾಹಿತ್ಯಾಸಕ್ತೆ ಸೋದರಿ ಪುಣೆಯಲ್ಲಿದ್ದಾರೆ. ಜಯಶ್ರೀ ಅವರ ಪತಿ ದಿವಂಗತ ನ್ಯಾಯಮೂರ್ತಿ ದೇಶಪಾಂಡೆ ಅವರು ಕರ್ನಾಟಕದ ನ್ಯಾಯಾಂಗದಲ್ಲಿ ಸೆಶನ್ಸ್ ಜಡ್ಜ್ ಆಗಿ ಸೇವೆ ಸಲ್ಲಿಸಿದವರು.
ಜಯಶ್ರೀ ಅವರಿಗೆ ಚಿಕ್ಕಂದಿನಿಂದಲೇ ಸಾಹಿತ್ಯದ ಒಲವು ಬೆಳೆದು ಬಂತು. ಹೀಗಿದ್ದರೂ ಶಾಲೆ ಕಾಲೇಜುಗಳಲ್ಲಿದ್ದಾಗ ಓದುವ ಕಡೆ ಹೆಚ್ಚು ಗಮನಹರಿಸಿ ನಂತರದ ವರ್ಷಗಳಲ್ಲಿ ಬರವಣಿಗೆಗೆ ಇಳಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿ ಆಗಿದ್ದ ಜಯಶ್ರೀ ಅವರು ಮನಃಶ್ಯಾಸ್ತ್ರ ಮತ್ತು ಇಂಗ್ಲಿಷ್ ವಿಷಯದಲ್ಲಿ ಪದವಿ ಗಳಿಸಿದ್ದಾರೆ.
ಕಳೆದ ಇಪ್ಪತ್ತೈದಕ್ಕೂ ಹೆಚ್ಚು ವರ್ಷಗಳಿಂದ ಜಯಶ್ರೀ ದೇಶಪಾಂಡೆ ಅವರ ಬರಹಗಳು ಕನ್ನಡದ ಎಲ್ಲ ನಿಯತಕಾಲಿಕೆಗಳಲ್ಲಿ ಕಥೆ, ಕಾದಂಬರಿ, ಕವನ, ವಿಮರ್ಶೆ, ವೈಚಾರಿಕ ಪ್ರಬಂಧ, ಲಲಿತ ಪ್ರಬಂಧ, ಪ್ರವಾಸ ಕಥನ ಮುಂತಾದ ವಿವಿಧ ರೂಪಗಳಲ್ಲಿ ನಿರಂತರವಾಗಿ ಮೂಡಿಬರುತ್ತಿವೆ. ಅವರ ಹಲವಾರು ಕತೆಗಳು ಹಿಂದೀ ಮತ್ತು ಮರಾಠಿ ಭಾಷೆಗಳಿಗೆ ಅನುವಾದಗೊಂಡಿವೆ. ಅವರು ಹಲವಾರು ರೇಡಿಯೋ ಕಾರ್ಯಕ್ರಮಗಳನ್ನೂ ಕೊಟ್ಟಿದ್ದಾರೆ,
ಜಯಶ್ರೀ ದೇಶಪಾಂಡೆ ಅವರು ಸುಮಾರು 85 ಕತೆಗಳನ್ನು ಬರೆದಿದ್ದು ಅವುಗಳು ಪದ್ಮಿನಿ, ಮೂರನೆಯ ಹೆಜ್ಜೆ, ರೇಖೆಗಳ ನಡುವೆ, ಸ್ಥವಿರ ಜಂಗಮಗಳಾಚೆ, ಉತ್ತರಾರ್ಧ ಎಂಬ 5 ಸಂಕಲನಗಳಲ್ಲಿ ಮೂಡಿಬಂದಿವೆ. 'ಯತ್ಕಿಂಚಿತ್' ಎಂಬುದು ಜಯಶ್ರೀ ಅವರ ಕಾವ್ಯ ಸಂಕಲನ. 'ಮಾಯಿ ಕೆಂದಾಯಿ ಸ್ಮೃತಿ ಲಹರಿ' ಮತ್ತು 'ಹೌದದ್ದು ಅಲ್ಲ ಅಲ್ಲದ್ದು ಹೌದು' , 'ನೋಟ್ ಬುಕ್‍ನ ಕಡೆಯ ಪುಟ' ಎಂಬವು ಜಯಶ್ರೀ ಅವರ ಲಲಿತ ಪ್ರಬಂಧ ಸಂಕಲನಗಳು. 'ಹಲವು ನಾಡು ಹೆಜ್ಜೆ ಪಾಡು' ಅವರ ಪ್ರವಾಸಾನುಭವ ಕಥನ.
ಜಯಶ್ರೀಯವರ ಅವರ ಕಾದಂಬರಿಗಳಾದ 'ಕಾಲಿಂದಿ' ಮಯೂರದಲ್ಲಿ, 'ಕೆಂಪು ಹಳದಿ ಹಸಿರು' ಮತ್ತು 'ದೂರ ದಾರಿಯ ತೀರ' ತರಂಗದಲ್ಲಿ, 'ಬೇವು' ವಿಜಯ ಕರ್ನಾಟಕದಲ್ಲಿ, 'ಚಕ್ರವಾಕ' ನೂತನದಲ್ಲಿ, ಹಾಗೂ 'ಸರಸ್ವತಿ ಕಾಯದ ದಿನವಿಲ್ಲ' ಉದಯವಾಣಿಯಲ್ಲಿ ಪ್ರಸಿದ್ಧ ಧಾರಾವಾಹಿಗಳಾಗಿ ಮೂಡಿ ಕೃತಿರೂಪದಲ್ಲಿಯೂ ಹಲವು ಜನಪ್ರಿಯ ಮುದ್ರಣಗಳನ್ನು ಕಂಡಿವೆ. ಅವರ ಮತ್ತೊಂದು ಕಾದಂಬರಿ 'ಧರಾಶಯ್ಯಿ' ಹಸ್ತಪ್ರತಿಯಾಗಿ ರೂಪುಗೊಂಡಿದೆ.
ಪ್ರಪಂಚದ ಮೂರು ಭೂಖಂಡಗಳ ಉದ್ದಗಲಕ್ಕೆ ಸಂಚರಿಸಿರುವ ಜಯಶ್ರೀಯವರು ಅಲ್ಲಿನ ಭಾಷೆ, ಸಂಸ್ಕೃತಿ, ಜನಜೀವನ, ಪರಿಸರ ಹಾಗೂ ಇತಿಹಾಸಗಳ ಬಗ್ಗೆ ಓದುಗರ ಕಣ್ಮುಂದೆ ನಿಲುಕುವಂತೆ ಭಿತ್ತಿಚಿತ್ರ ಮೂಡಿಸುವ ಹವ್ಯಾಸವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ಜಯಶ್ರೀ ಅವರು ಪ್ರಥಮ್ ಬುಕ್ಸ್ ಸಂಸ್ಥೆಯ ‘ರೀಡ್ ಇಂಡಿಯಾ’ ಮಕ್ಕಳ ಬಹುಭಾಷಾ ಪುಸ್ತಕದ ಮಾಲಿಕೆಯಡಿಯಲ್ಲಿ ಇಂಗ್ಲಿಷ್, ಮರಾಠಿ ಹಾಗೂ ಹಿಂದಿಯಿಂದ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಈ ಮಾಲಿಕೆಯಲ್ಲಿ ಇವರು ಬರೆದ ಕನ್ನಡ ಕತೆಗಳು ಭಾರತದ ಅನೇಕ ಭಾಷೆಗಳಿಗೆ ಅನುವಾದಗೊಂಡಿವೆ. ಅಕ್ಷರ ಫೌಂಡೇಶನ್ ಅವರ ‘ಕಲಿಕಾ ಏಣಿ’ ಎಂಬ ಮಕ್ಕಳ ಶೈಕ್ಷಣಿಕ ಮಾಲಿಕೆಯಲ್ಲಿ ಮಕ್ಕಳು ಕಲಿಯುವ ಕನ್ನಡ ಭಾಷೆಯ ಸರಳ, ಸುಧಾರಿತ ಆವೃತ್ತಿಯ ಸಲುವಾಗಿ ಕೆಲಸ ಮಾಡಿದ್ದಾರೆ.
ಮರಾಠೀ ಮತ್ತು ಇಂಗ್ಲಿಷ್ ಭಾಷೆಯಿಂದ ಕನ್ನಡಕ್ಕೆ ಭಾವಾನುವಾದ, ಸಂಗೀತ, ಚಲನಚಿತ್ರಗಳ ವಿಮರ್ಶಾ ಬರವಣಿಗೆ, ಕಥೆ ಮತ್ತು ವಿಮರ್ಶಾ ಕಮ್ಮಟಗಳಲ್ಲಿ ಭಾಗವಹಿಸುವಿಕೆ, ವಿದೇಶಗಳ ಪ್ರವಾಸ, ಚರ್ಚೆಗಳಲ್ಲಿ ಭಾಗವಹಿಸುವಿಕೆ ಇವು ಜಯಶ್ರೀ ಅವರ ವಿವಿಧ ಹವ್ಯಾಸಗಳಲ್ಲಿ ಸೇರಿವೆ. ದೂರದರ್ಶನ, ಉದಯ ಟಿವಿ ವಾಹಿನಿಗಳಲ್ಲಿ ಅವರ ಸಂದರ್ಶನಗಳು ಪ್ರಸಾರವಾಗಿವೆ.
ಜಯಶ್ರೀ ದೇಶಪಾಂಡೆ ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. 2018 ಸೆಪ್ಟೆಂಬರ್ ನಲ್ಲಿ ಅಟ್ಲಾಂಟಾ ಜಾರ್ಜಿಯಾ,(ಅಮೇರಿಕಾ) ನೃಪತುಂಗ ಕನ್ನಡ ಕೂಟದ ನಲವತ್ತೈದನೆಯ ವಾರ್ಷಿಕೋತ್ಸವದಲ್ಲಿ ಆಹ್ವಾನಿತ ಅತಿಥಿಗಳಾಗಿ 'ಕನ್ನಡ ಭಾಷೆ ಬೆಳೆದು ಬಂದ ದಾರಿ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ್ದರು.
ಜಯಶ್ರೀ ದೇಶಪಾಂಡೆ ಅವರಿಗೆ 'ಯತ್ಕಿಂಚಿತ್' ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ನೀಲಗಂಗಾ ಪ್ರಶಸ್ತಿ, 'ಸ್ಥವಿರ ಜಂಗಮಗಳಾಚೆ' ಕಥಾ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ 'ಸುಧಾ ಮೂರ್ತಿ ತ್ರಿವೇಣಿ ಸಾಹಿತ್ಯ ಪ್ರಶಸ್ತಿ', 'ಹೌದದ್ದು ಅಲ್ಲ ಅಲ್ಲದ್ದು ಹೌದು' ಲಲಿತ ಪ್ರಬಂಧ ಸಂಕಲನಕ್ಕೆ ಅತ್ತಿಮಬ್ಬೆ ಪ್ರಶಸ್ತಿ, 'ಮೂರನೆಯ ಹೆಜ್ಜೆ' ಕಥಾಸಂಕಲನಕ್ಕೆ ಗೊರೂರು ಪ್ರತಿಷ್ಠಾನದ 'ಶ್ರೇಷ್ಠ ಪುಸ್ತಕ' ಪ್ರಶಸ್ತಿ, ಬೆಳಗಾಂವಕರ್ ನಾಸು ಅವರ 'ಕಾದಂಬರಿ ಸುನಂದಾ' ಕರಿತಾದ ವಿಮರ್ಶೆಗೆ ರಾಜ್ಯಮಟ್ಟದ ಕಾದಂಬರಿ ವಿಮರ್ಶಾ ಪ್ರಶಸ್ತಿ, ದಿ| ಸಿ ಎನ್ ಜಯಲಕ್ಷ್ಮೀದೇವಿ ಸ್ಮಾರಕ ಕಥಾಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ
ಹೀಗೆ ವೈವಿಧ್ಯಮಯ ಸಾಧನೆಗಳನ್ನು ಮಾಡಿದ್ದರೂ ಸರಳ ಆತ್ಮೀಯ ಮನಸ್ಸಿನಿಂದ ನಮ್ಮನ್ನೆಲ್ಲ ಕಾಣುವ ಜಯಶ್ರೀ ದೇಶಪಾಂಡೆ ಅವರ ಬದುಕು ನಿತ್ಯ ಸುಂದರವಾಗಿರಲಿ ಮತ್ತು ಅವರ ಮೂಲಕ ನಮಗೆ ವಿಶ್ವದರ್ಶನ ನಿರಂತರವಾಗಿ ದೊರಕುತ್ತಿರಲಿ ಎಂದು ಆಶಿಸೋಣ.
Jayashree Deshpande
ಕಾಮೆಂಟ್‌ಗಳು