ಯೋಗನರಸಿಂಹಂ
ಎಚ್. ಯೋಗನರಸಿಂಹಂ
ಎಚ್. ಯೋಗನರಸಿಂಹಂ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಸ್ಕೃತ ಪ್ರಾಧ್ಯಾಪಕರು.
ಯೋಗನರಸಿಂಹಂ ಅವರು 1897ರ ಮೇ 17ರಂದು ಕೋಲಾರದಲ್ಲಿ ಜನಿಸಿದರು. ತಂದೆ ಹೊಳೆನರಸೀಪುರದ ನಾರಣಪ್ಪನವರು. ತಾಯಿ ಲಕ್ಷ್ಮೀದೇವಮ್ಮ. ಯೋಗಾನರಸಿಂಹಂ ಮೈಸೂರಿನಲ್ಲಿ ಮಹಾರಾಜಾ ಕಾಲೇಜಿನಿಂದ ಬಿ.ಎ. ಪದವಿ ಮತ್ತು 1921ರಲ್ಲಿ ಚಿನ್ನದ ಪದಕದೊಡನೆ ಎಂ.ಎ. ಪದವಿ ಪಡೆದರು.
ಯೋಗನರಸಿಂಹಂ ಮೈಸೂರಿನ ವಿದ್ಯಾ ಇಲಾಖೆಯಲ್ಲಿ ಸಂಸ್ಕೃತ ಶಾಲಾ ಇನ್‌ಸ್ಪೆಕ್ಟರಾಗಿ ಉದ್ಯೋಗಕ್ಕೆ ಸೇರಿದರು. 1929ರಲ್ಲಿ ಮೈಸೂರಿನ ಸಂಸ್ಕೃತ ಪಾಠಶಾಲೆಯ ಪ್ರಿನ್ಸಿಪಾಲರಾದರು. 1937ರಲ್ಲಿ ಬೆಂಗಳೂರಿನ ಸಂಸ್ಕೃತ ಪಾಠಶಾಲೆಯ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು. ನಂಜನಗೂಡು, ದಾವಣಗೆರೆ, ತೀರ್ಥಹಳ್ಳಿ, ಕೋಲಾರ ಮುಂತಾದೆಡೆ ಹೈಸ್ಕೂಲು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1952ರಲ್ಲಿ ನಿವೃತ್ತರಾದರು. ನಂತರ ಕೆಲವು ಕಾಲ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರಿನಲ್ಲಿ ನೆಲೆಸಿದರು.
ಯೋಗನರಸಿಂಹಂ ಅವರು ಬೆಳೆದದ್ದು ಸಂಗೀತದ ವಾತಾವರಣದಲ್ಲಿ. ತಾಯಿ ಒಳ್ಳೆಯ ಗಾಯಕಿ. ನಿಂತಾಗ, ಕುಳಿತಾಗ, ಕೆಲಸ ಮಾಡುತ್ತಿದ್ದಾಗ ಹಾಡುತ್ತಿದ್ದ ಹಾಡುಗಳನ್ನು ಗಮನಿಸಿ ಇವರೂ ಕಲಿತರು. ಮೈಸೂರಿನಲ್ಲಿ ಸಂಗೀತಕ್ಕೆ ದೊರೆಗಳಿಂದ ದೊರೆತ ಪ್ರೋತ್ಸಾಹದ ಫಲವಾಗಿ ಪ್ರಾರಂಭವಾದ ಸಂಗೀತ ಶಾಲೆಯಲ್ಲಿ ಇವರಿಗೂ ಸಂಗೀತ ಕಲಿಕೆಯಾಯಿತು. ವೀಣೆ ಶೇಷಣ್ಣ, ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ಕೆ. ವಾಸುದೇವಾಚಾರ್ಯ ಮುಂತಾದವರ ಸಂಗೀತ ಶಿಕ್ಷಣವನ್ನು ನೋಡಿ ಕಲಿತರು. ಗುರುಮುಖೇನ ಪಾಠವಾಗಿಲ್ಲದಿದ್ದರೂ ಬಿಡಾರಂ ಕೃಷ್ಣಪ್ಪನವರು ಹಾಡುತ್ತಿದ್ದ ಕೃತಿಗಳನ್ನು ಸ್ವರ ಸಹಿತ ಬರೆದಿಟ್ಟುಕೊಂಡು ಸ್ವತಃ ಸಂಗೀತ ಕಲಿತರು. ಸಂಗೀತ ಶಾಸ್ತ್ರ ಗ್ರಂಥಗಳನ್ನು ಅಪಾರವಾಗಿ ಓದಿದರು. ಅಂದಿನ ಸಂಗೀತ ದಿಗ್ಗಜರಾದ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ, ಎನ್. ಚನ್ನಕೇಶವಯ್ಯ, ಬಿ.ಕೆ. ಪದ್ಮನಾಭಯ್ಯ ಮುಂತಾದವರ ಮನೆಗಳಲ್ಲಿ ವಾರಕ್ಕೊಮ್ಮೆ ಭಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಯೋಗಾನರಸಿಂಹಂ ಧನಾರ್ಜನೆಯ ಆಸೆ ಇಲ್ಲದೆ ಸ್ವ-ಸಂತೋಷಕ್ಕಾಗಿ, ಸ್ವಾನುಭವ, ಆತ್ಮೋನ್ನತಿಗಾಗಿ ಸಂಗೀತ ಕಲಿತರು.
ಯೋಗನರಸಿಂಹಂ ಹೆಚ್ಚಾಗಿ ಕಚೇರಿ ಮಾಡದಿದ್ದರೂ ನೆಂಟರಿಷ್ಟರ ಮನೆಯ ಸಮಾರಂಭಗಳಲ್ಲಿ, ಅಪೇಕ್ಷೆ ಪಟ್ಟವರ ಎದುರಿನಲ್ಲಿ ಹಾಡುತ್ತಿದ್ದರು. ಬೆಂಗಳೂರು ಆಕಾಶವಾಣಿಯಲ್ಲಿ ಕೆಲವು ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ಸಂಸ್ಕೃತದಲ್ಲಿ ಪಾಂಡಿತ್ಯವಿದ್ದುದರಿಂದ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.
ಯೋಗನರಸಿಂಹಂ ಶಾಕುಂತಲ ನಾಟಕ ನಿರ್ದೇಶಿಸಿದರು. ಅವರು ನಿರ್ದೇಶಿಸಿದ ಸಂಗೀತ ರೂಪಕಗಳಲ್ಲಿ ಓಂಕಾರ ಪಂಜರ ಶುಕೀಂ, ಶಾಮಲ ದಂಡಕ, ನಾದಬ್ರಹ್ಮ ಮುಂತಾದುವು ಸೇರಿವೆ. ಸಂಗೀತ ಕಲಿಸಲು ಸಂಗೀತ ಕಲಾಭಿವರ್ಧಿನಿ ಸಭಾ ಪ್ರಾರಂಭಿಸಿದರು. ಮಹಾನ್ ವಾಗ್ಗೇಯಕಾರರಾದ ಮೈಸೂರು ವಾಸುದೇವಾಚಾರ್ಯರು ಇದರ ಪೋಷಕರಾಗಿದ್ದರು. ಯೋಗಾನರಸಿಂಹಂ ಇದರ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಎಚ್. ಯೋಗಾನರಸಿಂಹಂ ಅವರು ಮೈಸೂರು ಸದಾಶಿವರಾಯರು, ವೀಣೆ ಶೇಷಣ್ಣನವರ ಮುಂತಾದ ಶ್ರೇಷ್ಠರ ಕೃತಿಗಳನ್ನು ಸಂಪಾದಿಸಿದರು. ಈ ಕೃತಿಗಳನ್ನು ಮೈಸೂರು ಕಲಾವರ್ಧಿನಿ ಸಭಾ ಪ್ರಕಟಿಸಿತು.
ಯೋಗನರಸಿಂಹಂ ಹಲವಾರು ಸಂಗೀತ ಕೃತಿಗಳ ರಚನೆ ಮಾಡಿದರು. ಇವರ ಸಮಗ್ರ ರಚನೆಗಳ ಪುಸ್ತಕ ’ಗೀತಕುಸುಮಾಂಜಲಿ’. ಇದರಲ್ಲಿ 10 ವಿಭಿನ್ನ ಶೈಲಿಗಳ 36 ಭವ್ಯ ಕೃತಿಗಳಿವೆ. ಇವರ ಕೃತಿಗಳ ಸೊಬಗನ್ನು ಮೆಚ್ಚಿದ ಭಾರತರತ್ನ ಎಂ. ಎಸ್. ಸುಬ್ಬಲಕ್ಷ್ಮಿಯವರು ಹಾಡಿದ ಧ್ವನಿ ಮುದ್ರಿಕೆ 1986ರಲ್ಲಿ ಬಿಡುಗಡೆಯಾಯಿತು.
ಯೋಗನರಸಿಂಹಂ ಅವರ ಪತ್ನಿ ಸರಸ್ವತಮ್ಮ ಅವರು ಪ್ರಸಿದ್ಧ ಮೈಸೂರು ಮಕ್ಕಳ ಕೂಟವನ್ನು ಸ್ಥಾಪಿಸಿದರು. ಅವರು ಮಕ್ಕಳಿಗೆ ಕಥೆಗಳನ್ನು ಹೇಳಿ ಅವರನ್ನು ಹೃದಯವಂತರನ್ನಾಗಿ ಬೆಳೆಸುತ್ತಿದ್ದ ರೀತಿ ಅದ್ಭುತವಾದದ್ದು ಎಂಬ ಪ್ರಸಿದ್ಧಿಯಿತ್ತು.
ಈ ದಂಪತಿಗಳಿಗೆ ಎಂಟು ಮಕ್ಕಳಿದ್ದು ಪ್ರತಿಯೊಬ್ಬರೂ ಅದ್ಭುತ ಸಾಧನೆ ಮಾಡಿದವರು. ಇವರ ಹಿರಿಯ ಪುತ್ರ ಎಚ್. ವೈ. ಶಾರದಾ ಪ್ರಸಾದ್ ಅವರು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಮತ್ತು ಬರೆಹಗಾರರಾಗಿ ಪ್ರಸಿದ್ಧರಾದವರು. ಪುತ್ರಿ ನೀರಜಾ ಅಚ್ಯುತ ರಾವ್ ಕರ್ನಾಟಕ ಸಂಗೀತದಲ್ಲಿ ಹೆಸರಾದವರು.
ಸದಾ ಕ್ರಿಯಾಶೀಲರಾಗಿದ್ದ ಎಚ್. ಯೋಗನರಸಿಂಹಂ ಅವರು ಇತರ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದರು. 'ಮನಸ್ಸಿಲ್ಲದ ಮದುವೆ' ಅವರ ಕೃತಿಗಳಲ್ಲೊಂದು. ಅವರ ಅನುವಾದಿತ ಕೃತಿಗಳಲ್ಲಿ ಮಹರ್ಷಿ ಕರ್ವೆ, ಬರ್ಟ್ರಾಂಡ್ ರಸೆಲ್ ಅವರ 'ಕಾನ್ಕ್ವೆಸ್ಟ್ ಆಫ್ ಹ್ಯಾಪಿನೆಸ್' ಸೇರಿದ್ದವು. ಅವರು ನಾಟಕಗಳಲ್ಲೂ ಪಾತ್ರವಹಿಸುತ್ತಿದ್ದರು.
ಯೋಗನರಸಿಂಹಂ ಅವರು ರಬೀಂದ್ರನಾಥ ಠಾಗೂರರಿಂದ ಅಪಾರ ಪ್ರಭಾವಿತರಾಗಿದ್ದು ಶಾಂತಿ ನಿಕೇತನಕ್ಕೆ ಹೋಗಿದ್ದರು. 'ದೇವಿ ಭುವನಮನಮೋಹಿನಿ' ಬಂಗಾಳಿ ಗೀತೆಯನ್ನು ಕಲಿತು ಮಕ್ಕಳಿಗೂ ಕಲಿಸಿದ್ದರು. 1942ರಲ್ಲಿ ರಬೀಂದ್ರರು ಮೈಸೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನಿಶಾದ್ ಭಾಗ್ನಲ್ಲಿ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಿದ್ದರು.
ಎಚ್. ಯೋಗನರಸಿಂಹಂ ಅವರು 1971ರ ಮೇ 14ರಂದು ಈ ಲೋಕವನ್ನಗಲಿದರು. ಇವರ ಪತ್ನಿ ಸರಸ್ವತಮ್ಮನವರು 1993ರಲ್ಲಿ ನಿಧನರಾದರು. ’ಸಂಗೀತ ಸಿರಿ ಎಚ್.ಯೋಗಾನರಸಿಂಹಂ’ ಪುಸ್ತಕವನ್ನು ವಿ. ಸೀ. ಸಂಪದ ಹೊರತಂದಿದೆ. ಇದರಲ್ಲಿ ನಾಡಿನ ಶ್ರೇಷ್ಠವರೇಣ್ಯರು ಯೋಗಾನರಸಿಂಹಂ ಅವರ ಅದ್ಭುತ ವ್ಯಕ್ತಿತ್ವಗಳನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದ್ದಾರೆ.
H. Yoganarasimham
ಕಾಮೆಂಟ್‌ಗಳು