ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರ್ತಾರ್ ಸಿಂಗ್ ಸರಾಭಾ


 ಕರ್ತಾರ್ ಸಿಂಗ್ ಸರಾಭಾ


ಕ್ರಾಂತಿಯ ಸಿಂಹ ಕರ್ತಾರ್ ಸಿಂಗ್ ಸರಾಭಾ ಬದುಕಿದ್ದು ಕೇವಲ 19 ವರ್ಷ.  ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ, ಅನೇಕ ತರುಣ ತರುಣಿಯರಿಗೆ ಸ್ಪೂರ್ತಿಯಾಗಿ ಬದುಕಿದ ವೀರ ಪುರುಷನೀತ. ಇವರು ಭಗತ್ ಸಿಂಗರಿಗೂ ಪ್ರೇರಣೆ ಕೊಟ್ಟಂತಹ ಹುಡುಗ.  

ಕರ್ತಾರ್ ಸಿಂಗ್ ಸರಾಭಾ 1896ರ ಮೇ 24ರಂದು ಪಂಜಾಬಿನ ಅಮೃತಸರ ಜಿಲ್ಲೆಯ ಲುಧಿಯಾನದಲ್ಲಿ ಜನಿಸಿದರು. ಬಾಲ್ಯದಲ್ಲೇ ಅಪ್ಪ ಅಮ್ಮನ ಪ್ರೀತಿ ಕಳೆದುಕೊಂಡ ಸರಾಭಾನ ಜವಾಬ್ದಾರಿ ವಹಿಸಿಕೊಂಡಿದ್ದು ಈತನ ಅಜ್ಜ. ಮುಂದೆ ಅಮೆರಿಕಾಕ್ಕೆ ಹೆಚ್ಚಿನ ವ್ಯಾಸಂಗಕ್ಕಾಗಿ ಹೋದರು.  ಅಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟವನ್ನು ಗಮನಿಸಿದ ಈತನಿಗೆ ತನ್ನ ದೇಶಕ್ಕೂ ಸ್ವಾತಂತ್ರ್ಯ ಗಳಿಸಿಕೊಡಬೇಕೆನ್ನುವ ಆಸೆ ಮೂಡಲಾರಂಭಿಸಿತು. ಅಮೆರಿಕಾದಲ್ಲಿ ಗಧರ್ ಎಂಬ ಸಂಘಟನೆಯೊಂದಿತ್ತು, ಈ ಸಂಘಟನೆಯೊಂದಿಗೆ ಗುರುತಿಸಿಕೊಂಡ ಸರಾಭಾರಿಗೆ ಕ್ರಾಂತಿಕಾರಿ ಹೋರಾಟಕ್ಕೆ ಪ್ರೇರಣೆ ಸಿಕ್ಕಿದ್ದು ಇಲ್ಲೇ. ಮೊದಲು ಈ ಸಂಘಟನೆ ವಾರ ಪತ್ರಿಕೆಯಾಗಿ ಆರು ಭಾಷೆಯಲ್ಲಿ ರೂಪುಗೊಂಡು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿತು. ಇದರ ಮೊದಲ ಪ್ರತಿ 1913ರ ನವಂಬರ 13ರಂದು ಪ್ರಕಟಣೆಗೊಂಡಿತು.

ಮೊದಲ ಸಂಚಿಕೆಯ ಮುಖಪುಟದಲ್ಲಿ ಗಧರ್ ಪತ್ರಿಕೆ ತನ್ನ ಪರಿಚಯವನ್ನು ಹೀಗೆ ಮಾಡಿಕೊಂಡಿತ್ತು

"ನಮ್ಮ ಹೆಸರು – ಬಂಡಾಯ, ನಮ್ಮ ಕೆಲಸ – ಬಂಡಾಯ, ಬಂಡಾಯ ನಡೆಯುವ ಸ್ಥಳ – ಭಾರತ, ಯಾವಾಗ – ಇನ್ನು ಕೆಲವೇ ವರ್ಷಗಳಲ್ಲಿ, ಏತಕ್ಕಾಗಿ ಬಂಡಾಯ – ಬ್ರಿಟಿಷರ ಆಡಳಿತದ ದಬ್ಬಾಳಿಕೆ ವಿರುದ್ದ, ಬೇಕಾಗಿದ್ದಾರೆ – ಭಾರತದಲ್ಲಿ ಬಂಡಾಯ ಎಬ್ಬಿಸಲು ಉತ್ಸಾಹಿ ತರುಣರು, ಸಂಬಳ – ಸಾವು, ಬಹುಮಾನ – ಹುತಾತ್ಮತೆ. ಕಾರ್ಯಕ್ಷೇತ್ರ – ಭಾರತ"

ಪತ್ರಿಕೆಯ ಮೊದಲ ಪ್ರತಿಯನ್ನು ಓದಿ ಸ್ವಾತಂತ್ರ್ಯದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿಕೊಂಡ ಸರಾಭಾ, ಸತ್ಯೇನ್ ಸೇನ್ ಮತ್ತು ವಿಷ್ಣು ಗಣೇಶ್ ಪಿಂಗ್ಲೆ ಜೊತೆ ಕೊಲಂಬೋ ಮೂಲಕ ನವೆಂಬರ್ 1914ರಂದು ಕೊಲ್ಕತ್ತಾ ಪ್ರವೇಶಿಸಿದರು. ಅಲ್ಲಿ ಜತಿನ್ ಮುಖರ್ಜಿ ಅವರು ನೀಡಿದ ಪತ್ರದ ಮೂಲಕ ರಾಸ್ ಬಿಹಾರಿ ಬೋಸ್ ಎನ್ನುವ ಕ್ರಾಂತಿಕಾರಿ ಮುಖಂಡರನ್ನು ಭೇಟಿ ಮಾಡಿದ ಸರಾಭಾ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಬ್ರಿಟಿಷರ ವಿರುದ್ದ ಹೋರಾಡಲು ಸಜ್ಜಾಗಿದ್ದಾರೆ ಎನ್ನುವ ಹುಮ್ಮಸ್ಸಿನ ಮಾತನ್ನಾಡಿದರು.

ಗಧರ್ ಸಂಘಟನೆಯ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಿರುವುದನ್ನು ಅರಿತ ಇಂಗ್ಲಿಷರು, ಸಿಕ್ಕಸಿಕ್ಕಲ್ಲಿ ಈ ಸಂಘಟನೆಯವರನ್ನು ಬಂಧಿಸಲಾರಂಭಿಸಿದರು. ಇದಕ್ಕೆಲ್ಲಾ ಅಂಜದ ಗಧರ್ ಪಡೆ, ಹೋರಾಟಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಲು ಶ್ರೀಮಂತರ ಮನೆಯನ್ನು ದರೋಡೆ ಮಾಡಲಾರಂಭಿಸಿತು.  ಈ ಸಮಯದಲ್ಲಿ ಗಧರ್ ಸಂಘಟನೆಯ ಪ್ರಮುಖರಿಬ್ಬರಾದ ಭಾಯ್ ರಾಮ್ ರಖಾ ಮತ್ತು ವಾರ್ಯಂ ಸಿಂಗ್ ಎನ್ನುವವರು ಬಾಂಬ್ ಸ್ಪೋಟದಲ್ಲಿ ಅಸುನೀಗಿದರು. 

ಕೊಲ್ಕತ್ತಾದಿಂದ ಅಮೃತಸರಕ್ಕೆ ಜನವರಿ 1915ರಲ್ಲಿ ಬಂದ ಬೋಸ್, ಕೆಲವೊಂದು ನಗರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ, ಸಂಘಟನೆಯೊಳಗಿದ್ದ ಬ್ರಿಟಿಷರ ಮಾಹಿತಿದಾರನೊಬ್ಬನಿಂದ ಗಧರ್ ಪಡೆಯ ಮುಂದಿನ ಯೋಜನೆಯನ್ನು ಬ್ರಿಟಿಷರು ಅರಿತರು. ಹೀಗಾಗಿ ಸಂಘಟನೆಯ ಎಲ್ಲಾ ಯೋಜನೆಯನ್ನೂ ಬ್ರಿಟಿಷರು ಹತ್ತಿಕ್ಕಿದರು. ಯೋಜನೆ ವಿಫಲವಾಗುವುದರ ಜೊತೆಗೆ ಬಂಧನದಿಂದ ತಪ್ಪಿಸಿಕೊಳ್ಳಲು ಹೋರಾಟಗಾರರು ಭಾರತ ಬಿಟ್ಟು ತೊಲಗಲು ನಿರ್ಧರಿಸಿದ್ದು, ಅದರಲ್ಲಿ ಸರಾಭಾ ಕೂಡಾ ಒಬ್ಬರಾಗಿದ್ದರು.

ಮಾರ್ಚ್ 1915ರಲ್ಲಿ ದೇಶ ಬಿಟ್ಟು ಹೋಗುವ ವೇಳೆ ಇಂಗ್ಲೀಷರ ಕಣ್ಣಿಗೆ ಬಿದ್ದ ಕರ್ತಾರ್ ಸಿಂಗ್ ಸರಾಭಾ  ಅವರನ್ನು, ಅಫ್ಘಾನಿಸ್ಥಾನಕ್ಕೆ ಹೋಗಲು ಸೂಚಿಸಲಾಯಿತು. ಆದರೆ, ತನ್ನ ಅಸಂಖ್ಯಾತ ಸಹದ್ಯೋಗಿಗಳು ಬ್ರಿಟಿಷರ ಬಂಧನದಲ್ಲಿರುವಾಗ ದೇಶ ಬಿಟ್ಟು ಹೋಗುವುದು ನಾಚಿಕೆಗೇಡು ಎನ್ನುವ ನಿರ್ಧಾರಕ್ಕೆ ಬಂದ ಸರಾಭಾ, ತನ್ನ 63 ಸಹದ್ಯೋಗಿಗಳೊಂದಿಗೆ ಮತ್ತೆ ಬ್ರಿಟಿಷರ ಕಣ್ತಪ್ಪಿಸಿ ವಾಪಸ್ ಬಂದರು.

ಬಂಧನಕ್ಕೊಳಗಾಗಿ ಬ್ರಿಟಿಷರಿಂದ ಹಿಂಸೆಗೊಳಗಾಗುತ್ತಿದ್ದ ಸಂಘಟನೆಯ ಸದಸ್ಯರಿಗೆ ಬೋಲೋ ಭಾರತ್ ಮಾತಾಕೀ ಜೈ ಎಂದು ಸ್ಪೂರ್ತಿ ನೀಡಿದ ಸರಾಭಾ ಮತ್ತು ತಂಡದ ಸದಸ್ಯರನ್ನು ಬ್ರಿಟಿಷರು ಬಂಧಿಸಿ ಲಾಹೋರಿಗೆ ಕಳುಹಿಸಿದರು.

1915ರ ನವೆಂಬರ್ 13ರಂದು  ಲಾಹೋರ್ ನ್ಯಾಯಾಲಯವು ಬಂಧನಕ್ಕೊಳಗಾಗಿದ್ದ ಗಧರ್ ಸಂಘಟನೆಯ ಎಲ್ಲಾ 63 ಸದಸ್ಯರಿಗೆ ಗಲ್ಲು ಶಿಕ್ಷೆ ಪ್ರಕಟಿಸಿತು. ಅದರಲ್ಲಿ ಹತ್ತೊಂಬತ್ತು ವರ್ಷದ ಕರ್ತಾರ್ ಸಿಂಗ್ ಸರಾಭಾ ಎಂಬ ಯುವಶಕ್ತಿಯೂ ಒಂದಾಗಿತ್ತು. 6 ಅಡಿ ಉದ್ದ 6 ಅಡಿ ಅಂಗುಲದ ಬಂಧೀಖಾನೆಯಲ್ಲಿ ಬಂಧಿಯಾಗಿದ್ದ ಸರಾಭಾ, ಸಾವಿನ ಕೊನೇ ಕ್ಷಣದಲ್ಲೂ ಬೋಲೋ ಭಾರತ್ ಮಾತಾಕೀ, ವಂದೇ ಮಾತರಂ ಎಂದು ದೇಶಪ್ರೇಮ ಮೆರೆದು, ದೇಶದ ಮುಂದಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಆದರ್ಶಪ್ರಾಯರಾದರು.

On birth anniversary of great revolutionary freedom fighter Kartar Singh Sarabha

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ