ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಹಿರಿಯಣ್ಣ


 ಎಂ. ಹಿರಿಯಣ್ಣ


ಪ್ರೊ. ಮೈಸೂರು ಹಿರಿಯಣ್ಣನವರು ಭಾರತೀಯ ತತ್ವಶಾಸ್ತ್ರಲೋಕದ ಹಿರಿಮೆ ಎಂದು ಪರಿಗಣಿತರಾದ ಮಹಾನ್ ವಿದ್ವಾಂಸರು.

ಸುಪ್ರಸಿದ್ಧ ವಿದ್ವಾಂಸರೂ, ತತ್ತ್ವಜ್ಞಾನಿಗಳೂ ಆದ ಹಿರಿಯಣ್ಣನವರು 1871ರ ಮೇ 7ರಂದು ಮೈಸೂರಿನಲ್ಲಿ ಜನಿಸಿದರು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲಿ ನೆರವೇರಿತು. ಮುಂದೆ  ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಮತ್ತು ಎಂ.ಎ. ಪದವಿ ಗಳಿಸಿದ ಹಿರಿಯಣ್ಣನವರು,   ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟಿನ ಲೈಬ್ರರಿಯನ್ ಆಗಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿದರು.  

ಹಿರಿಯಣ್ಣನವರು ಕೆಲಕಾಲ ಸರ್ಕಾರಿ ಕಚೇರಿಯಲ್ಲಿ ಗುಮಾಸ್ತೆ ಕೆಲಸ ನಿರ್ವಹಿಸಿದ ನಂತರ ಮದರಾಸಿನ ಸೈದಾ ಪೇಟೆಯ ಟೀಚರ್ಸ್ ಕಾಲೇಜಿನಲ್ಲಿ ಎಲ್.ಟಿ. ಪದವಿ ಪಡೆದು ಮೈಸೂರಿನ ಗೌರ್ನಮೆಂಟ್ ನಾರ್ಮಲ್ ಸ್ಕೂಲಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ನಂತರ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದರು. ಕನ್ನಡದ ಪ್ರಚಾರ, ಅಭಿವೃದ್ಧಿಗಳಿಗಾಗಿ ಶ್ರಮಿಸುತ್ತಿದ್ದ ಪ್ರಮುಖರಲ್ಲಿ ಹಿರಿಯಣ್ಣನವರೂ ಒಬ್ಬರು. ಕನ್ನಡ ಶಿಕ್ಷಣ ಬೋಧನೆಯ ಬಗೆಗೆ ಗ್ರಂಥವೊಂದನ್ನು ಸಹಾ ಅವರು ರಚಿಸಿದ್ದರು. 

ಹಿರಿಯಣ್ಣನವರು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಸಂಸ್ಕೃತ ಭಾಷಾ ಸಾಹಿತ್ಯವನ್ನಲ್ಲದೆ, ಭಾರತೀಯ ತತ್ತ್ವಶಾಸ್ತ್ರದ ಬೋಧನೆಯನ್ನೂ ನಿರ್ವಹಿಸುತ್ತಿದ್ದರು. ಭಾರತೀಯ ತತ್ತ್ವಶಾಸ್ತ್ರದ ಬಗ್ಗೆ ಅವರದ್ದು ಆಳವಾದ ಪಾಂಡಿತ್ಯ. ಅವರು ಮಹಾನ್ ವ್ಯಾಖ್ಯಾನಕಾರರೂ ಆಗಿದ್ದರು. ಡಾ. ರಾಧಾಕೃಷ್ಣನ್ ಮುಂತಾದ ಮಹಾನ್ ವ್ಯಕ್ತಿಗಳೊಡನೆ ನಿಕಟ ಸಂಪರ್ಕ ಹೊಂದಿದ್ದ ಹಿರಿಯಣ್ಣನವರು, ತತ್ತ್ವಶಾಸ್ತ್ರದ ಜಿಜ್ಞಾಸೆ. ತತ್ತ್ವಶಾಸ್ತ್ರದ ಆಧಾರದ ಮೇಲೆ ಹಲವಾರು ಗ್ರಂಥಗಳ ರಚನೆ ಮಾಡಿದ್ದರು. ಔಟ್‌ಲೈನ್ಸ್ ಆಫ್ ಇಂಡಿಯನ್ ಫಿಲಾಸಫಿ, ದಿ ಎಸೆನ್‌ಷಿಯಲ್ಸ್ ಆಫ್ ಇಂಡಿಯನ್ ಫಿಲಾಸಫಿ, ಪಾಪ್ಯುಲರ್ ಎಸ್ಸೇಸ್ ಇನ್ ಇಂಡಿಯನ್ ಫಿಲಾಸಫಿ, ದಿ ಕ್ವೆಸ್ಟ್ ಆಫ್ಟರ್ ಫರ್‌ಫೆಕ್ಷನ್, ಆರ್ಟ್ ಎಕ್ಸ್‌ಪೀರಿಯನ್ಸ್, ಸಂಸ್ಕೃತ ಸ್ಟಡೀಸ್, ಇಂಡಿಯನ್ ಫಿಲಾಸಫಿಕಲ್ ಸ್ಟಡೀಸ್, ದಿ ಮಿಷನ್ ಆಫ್ ಫಿಲಾಸಫಿ ಮುಂತಾದ ಅವರ  ಗ್ರಂಥಗಳಲ್ಲಿ ಭಾರತೀಯ ತತ್ತ್ವಶಾಸ್ತ್ರದ ಬೆಳವಣಿಗೆ, ಸಿದ್ಧಾಂತಗಳ ಬಗ್ಗೆ ಹೃದಯಂಗಮ ನಿರೂಪಣೆಯಿದೆ. ಇದಲ್ಲದೆ ಈಶಾವ್ಯಾಸೋಪನಿಷತ್, ಕೇನೋಪನಿಷದ್, ಕಾಠಕೋಪನಿಷದ್, ಬೃಹದಾರಣ್ಯಕೋಪನಿಷದ್ ಮುಂತಾದವು ಹಿರಿಯಣ್ಣನವರು ಇಂಗ್ಲಿಷ್‌ಗೆ ಅನುವಾದಿಸಿದ  ಗ್ರಂಥಗಳು. ನೈಷ್ಕರ್ಮ ಸಿದ್ಧಿ (ಸುರೇಶಾಚಾರ್ಯ), ವೇದಾಂತಸಾರ (ಸದಾನಂದ) ಇಷ್ಟಸಿದ್ಧಿ ಇವು ಸಂಪಾದಿತ ಗ್ರಂಥಗಳು. ಇವಲ್ಲದೆ ಏಷಿಯಾಟಿಕ್ ಸೊಸೈಟಿ (ಲಂಡನ್), ಮಿಥಿಕ್ ಸೊಸೈಟಿ ಬೆಂಗಳೂರು, ಮದರಾಸಿನ ಫಿಲಸಾಫಿಕಲ್ ಮ್ಯಾಗಜಿನ್ ಮುಂತಾದ ಪತ್ರಿಕೆಗಳಲ್ಲಿ ಅವರು ನೂರಾರು ಲೇಖನಗಳನ್ನು ಮೂಡಿಸಿದ್ದರು. ಭಾರತೀಯ ತತ್ತ್ವಜ್ಞಾನದ ಅಧ್ಯಯನ, ಅನುಷ್ಠಾನ, ಪರಿಶೀಲನೆ, ಪ್ರತಿಪಾದನೆಗಳು ಹಿರಿಯಣ್ಣನವರ  ವಿಶಿಷ್ಟ ಕೊಡುಗೆಗಳು.

ಹಿರಿಯಣ್ಣನವರನ್ನು ಹಲವಾರು ವಿದ್ವಾಂಸರ ಪರಿಷತ್ತು, ಸಮ್ಮೇಳನಗಳು ಅಧ್ಯಕ್ಷ ಪದವಿಯನ್ನು ಸಲ್ಲಿಸಿ ಗೌರವ ತೋರಿ ಸನ್ಮಾನಿಸಿದ್ದವು. ಸಂಸ್ಕೃತ ಅಕಾಡಮಿಯಿಂದ ‘ಸಂಸ್ಕೃತ ಸೇವಾಧುರೀಣ’ ಎಂಬ ಪ್ರಶಂಸೆ ಸಂದಿತ್ತು. 

ಪ್ರೊ. ಹಿರಿಯಣ್ಣನವರು ಸೆಪ್ಟೆಂಬರ್ 19, 1950ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಹಿರಿಯಣ್ಣನವರ ನಿಧನಾನಂತರ ಅವರ ಅಭಿಮಾನಿಗಳು ಶತಮಾನೋತ್ಸವ ಸ್ಮರಣಾ  (ಕಮೆಮೊರೇಷನ್ ವಾಲ್ಯೂಮ್) ಗ್ರಂಥವನ್ನು  1972ರಲ್ಲಿ ಪ್ರಕಟಿಸಿ  ಗೌರವ ಸಲ್ಲಿಸಿದರು.

ಡಿವಿಜಿ ಅವರು ತಮ್ಮ ಹೃದಯಸಂಪನ್ನರು ಕೃತಿಯಲ್ಲಿ ಮೊಟ್ಟ ಮೊದಲಿಗೆ ಹೆಸರಿಸಿರಿವುದು ಪ್ರೊ. ಹಿರಿಯಣ್ಣನವರನ್ನು.  ಹಿರಿಯಣ್ಣನವರ ಕುರಿತ ಡಿವಿಜಿ ಅವರು ಬರೆದ ಕೊನೆಯ ಈ ಸಾಲು ನನ್ನ ಮನದಲ್ಲಿ ಆಗಾಗ ಮಿಂಚುತ್ತಿರುತ್ತದೆ
"ಹಿರಿಯಣ್ಣನವರು ಮಹಾನುಭಾವರು. ಅವರ ಸ್ಮರಣೆ ನನಗೆ ಸಂತೋಷವೂ ಹೌದು. ಸುಕೃತವೂ ಹೌದು." ಹೀಗೆ ಡಿವಿಜಿ ಅಂತಹ ಮಹಾತ್ಮರಿಗೆ ಅನಿಸಿದ್ದರೆ ಆ ಹಿರಿಯ ಜೀವ ಇನ್ನೆಷ್ಟು ಮಹನೀಯವಾಗಿದ್ದರಬಹುದು.  ಹೃದಯ ಮೌನದಲ್ಲಿ ಶಿರಬಾಗಿ ವಂದಿಸುತ್ತಿದೆ🌷🙏🌷

On the birth anniversary of great scholar Prof. Mysore Hiriyanna 🙏

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ