ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವಶಂಕರ ಬಣಗಾರ


 ಶಿವಶಂಕರ ಬಣಗಾರ


ಶಿವಶಂಕರ ಬಣಗಾರ ನಮ್ಮ ನಡುವೆ ಎದ್ದುಕಾಣುವ ಭವ್ಯ ಛಾಯಾಗ್ರಾಹಕರು. ಹಂಪೆಯ ವೈಭವವನ್ನು, ಅದು ಎಷ್ಟೇ ಹಾಳಾಗಿದ್ದರೂ ಅದನ್ನು ಪ್ರತಿದಿನ ತಪ್ಪದಂತೆ ತಮ್ಮ ಬದುಕಿನ ತಪಸ್ಸೇ ಏನೋ ಎಂಬಂತೆ ಆದರಿಸಿ, ಸೂರ್ಯನ ಹೊಂಗಿರಣಗಳಲ್ಲಿ ಬೆಳಗುವಂತೆ ತೆರೆದಿಡುವ ಶಿವಶಂಕರ ಬಣಗಾರರ ಬಂಗಾರದಂತಹ ಚಿತ್ರಗಳನ್ನು ಕಾಣುವಾಗ ‘ನೂರು ಕಣ್ಣು ಸಾಲದು’ ಎಂದು ಹೃದಯ ಹಾಡುವಂತೆ ಮಾಡುತ್ತದೆ.

ಶಿವಶಂಕರ ಬಣಗಾರ ಅವರು 1971ರ ಮೇ 18ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಜನಿಸಿದರು.  ತಂದೆ ಶಿವಲಿಂಗಪ್ಪ. ತಾಯಿ ಶಂಕರಮ್ಮ.   

ಶಿವಶಂಕರ್ ಅವರು ಪಿಯುಸಿ ಓದುವಾಗಲೇ ಪತ್ರಿಕೋದ್ಯಮದ ಸೆಳೆತದಿಂದ 'ಹೊಸಪೇಟೆ ಟೈಮ್ಸ್'ನ ವರದಿಗಾರರಾಗಿ ಮತ್ತು ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು.  ಮುಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಪದವಿಗೆ ಓದಿದರು.

ಶಿವಶಂಖರ್ ಬಣಗಾರ್ ಅವರು ಹೊಸಪೇಟೆ ಟೈಮ್ಸ್ ಅಲ್ಲದೆ, ಈ ನಮ್ಮ ಕನ್ನಡ ನಾಡು ಉಪಸಂಪಾದಕರಾಗಿ, ವಿಜಯ ಕರ್ನಾಟಕ ಪತ್ರಿಕೆಗೆ ಹೊಸಪೇಟೆ ವರದಿಗಾರರಾಗಿ - ಜಾಹಿರಾತು ಪ್ರತಿನಿಧಿಯಾಗಿ - ಜಾಹಿರಾತು ಮುಖ್ಯಸ್ಥರಾಗಿ; ವಿಜಯವಾಣಿ ವರದಿಗಾರರಾಗಿ, ಉದಯವಾಣಿ ಹಂಪಿ ವರದಿಗಾರರಾಗಿ, ಸಂಯುಕ್ತ ಕರ್ನಾಟಕದ ವರದಿಗಾರರಾಗಿ, ಹೊಸ ದಿಗಂತದ ವರದಿಗಾರರಾಗಿ ಹೀಗೆ ವಿವಿಧ ಅವಧಿಗಳಲ್ಲಿ ವಿವಿಧ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಪ್ರಸಕ್ತದಲ್ಲಿ ಅವರು ಬಣಗಾರ ಮೀಡಿಯಾ ಸಲ್ಯೂಷನ್ಸ್ ಎಂಬ ಜಾಹಿರಾತು ಸಂಸ್ಥೆ ನಿರ್ವಹಿಸುತ್ತಿದ್ದಾರೆ.

ಶಿವಶಂಕರ ಬಣಗಾರ್ ಅವರಿಗೆ ಚಿಕ್ಕಂದಿನಿಂದಲೂ ಛಾಯಾಗ್ರಹಣದಲ್ಲಿ ಆಸೆ ಇದ್ದರೂ ಕೈಯಲ್ಲಿ ಕ್ಯಾಮರಾ ಇರಲಿಲ್ಲ.  2008ರಲ್ಲಿ ವರದಿಗಾರಿಕೆಗಾಗಿ ಸೋನಿ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾ ಕೊಂಡರು. ಅದೂ ನೀರುಕಾಗೆಯ ಒಂದು ಸುದ್ಧಿ ಇವರ ಛಾಯಾಗ್ರಹಣಕ್ಕೆ ಮೊದಲ ಕಾರಣವಾಯ್ತು. 

ಶಿವಶಂಕರ ಬಣಗಾರ್ ಅವರಿಗೆ ವನ್ಯಜೀವಿ ಪಂಪಯ್ಯ ಸ್ವಾಮಿ ಮಳೆಮಠ ಅವರ ಸಾಂಗತ್ಯದಿಂದ ಪಕ್ಷಿಗಳ ಚಿತ್ರ ತೆಗೆಯುವ ಹವ್ಯಾಸ ಬೆಳೆಯಿತು. 10 ಎಕ್ಸ್ ಕ್ಯಾಮೆರಾದಿಂದ, 30 ಎಕ್ಸ್ ಸೋನಿ ಕ್ಯಾಮೆರಾಗೆ ಬಂದು,  ಮುಂದೆ ಕ್ಯಾನಾನ್ 50 ಎಕ್ಸ್ ಬಳಸಿ ಛಾಯಾಚಿತ್ರಗಳನ್ನು ತೆಗೆಯಲು ತೊಡಗಿದರು.  

ಪೇಸ್ಬುಕ್ನಲ್ಲಿ ಅಂತೂ ಶಿವಶಂಕರ ಬಣಗಾರರ ಚಿತ್ರಗಳು ಜನಸ್ತೋಮವನ್ನು ಅಪಾರವಾಗಿ ಆಕರ್ಷಿಸಿವೆ.  ಹಂಪಿಯ ಅವರ ಚಿತ್ರಗಳಂತೂ ಪ್ರತಿಯೊಬ್ಬರಿಗೂ ಆಕರ್ಷಣೆ.  ಇವರ ಚಿತ್ರಗಳು ಜಪಾನ್ ದೇಶದಲ್ಲೂ ಪ್ರದರ್ಶನಗೊಂಡಿವೆ. ಪುರಾತನ ದೇಗುಲಗಳ ಕುರಿತಾದ ಸಮೂಹಗಳಲ್ಲಿ ಮತ್ತು ಅನೇಕ ಪುಸ್ತಕಗಳಲ್ಲಿ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಮುಖಪುಟ ಮತ್ತು ಪ್ರಮುಖ ಪುಟಗಳಾಗಿ ನಿರಂತರವಾಗಿ ಕಂಗೊಳಿಸುತ್ತಿವೆ.  2016ರಲ್ಲಿ ಅಮೆರಿಕದ 'ಅಕ್ಕ' ಸಮ್ಮೇಳನದಲ್ಲಿ ಪ್ರಕಟಗೊಂಡ 'ಐಸಿರಿ ಕಾಫಿಟೇಬಲ್ ಬುಕ್'ನಲ್ಲಿ ಶಿವಶಂಕರ್ ಅವರ ಹಂಪಿ ಮತ್ತು ಪಟ್ಟದಕಲ್ಲಿನ ಭವ್ಯ ಚಿತ್ರಗಳಿವೆ.

ಶಿವಶಂಕರ್ ಬಣಗಾರ್ ಅವರ ಛಾಯಾಚಿತ್ರಗಳ ಕುರಿತು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಸಂಯುಕ್ತ ಕರ್ನಾಟಕ, ಉದಯವಾಣಿ, ತೆಲುಗು ದೈನಿಕವಾದ ಈನಾಡು ಪತ್ರಿಕೆಗಳು ನುಡಿಚಿತ್ರಾವಳಿಯನ್ನು ಪ್ರಕಟಿಸಿವೆ.

ಯಾವುದೇ ಕಲಾಕಾರನ ಕಲೆಯನ್ನು ಜನ ಮೆಚ್ಚುತ್ತಾರೆ, ಎಲ್ಲೆಡೆ ಉಪಯೋಗಿಸುತ್ತಾರೆ ಎಂಬುದು ಸಂತೋಷವಾದರೂ ಅಂಂತದ್ದು ಅವರ ಬದುಕಿನ ಆಸರೆಗೂ ಬೆಂಬಲವಾಗುವ ದಿನಗಳು ಮೂಡುವಂತಾಗಬೇಕು.

ಅತ್ಯುತ್ತಮ ಛಾಯಾಚಿತ್ರಗಳನ್ನು ನಮಗೆ ನೀಡುತ್ತಿರುವ ಶಿವಶಂಕರ ಬಣಗಾರ ಅವರ ಬದುಕು ಬಂಗಾರವಾಗಿರಲಿ.  ಅವರ ಬದುಕು ಸಕಲ ಸುಖ, ಸಂತಸ, ಸೌಭಾಗ್ಯ, ಸಂಪದ, ಸಾಧನೆ ಮತ್ತು ಸಂತೃಪ್ತಿಗಳಿಂದ ಕಂಗೊಳಿಸುತ್ತಿರಲಿ.  ನಮಸ್ಕಾರ.

Happy birthday Shivashankar Banagar Sir.  Always happy to see your astonishing clicks 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ