ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಂಗಸ್ವಾಮಿ ಮೂಕನಹಳ್ಳಿ


ರಂಗಸ್ವಾಮಿ ಮೂಕನಹಳ್ಳಿ 

ರಂಗಸ್ವಾಮಿ ಮೂಕನಹಳ್ಳಿ  ಅವರು  ಆರ್ಥಿಕ ತಜ್ಞರಾಗಿ ಪ್ರಸಿದ್ಧ ಹೆಸರು. ಕನ್ನಡಲ್ಲಿನ ಅವರ ಆರ್ಥಿಕ ಬರಹಗಳಂತೂ ಜನಪ್ರಿಯ.  ಅವರ ಪ್ರಸಿದ್ಧ ಅಂಕಣಕ್ಕೆ ಅನುರೂಪವಾಗಿ ಅವರನ್ನು ಜನ "ಹಣಕ್ಲಾಸು ರಂಗಸ್ವಾಮಿ" ಎಂದು ಗುರುತಿಸುವುದೂ ಉಂಟು.

ರಂಗಸ್ವಾಮಿ ಅವರು ತುಮಕೂರು ಜಿಲ್ಲೆಯ ಸಿರಾದಲ್ಲಿ 1975ರ ಮೇ 18ರಂದು ಜನಿಸಿದರು.  ತಂದೆ ರಾಮಶೇಷ ಅವರು ಉದ್ಯಮಿಯಾಗಿ ಬದುಕು ಕಂಡುಕೊಂಡವರು. ಪ್ರಯತ್ನವೇ ಪರಮಾತ್ಮ ಎನ್ನುವುದನ್ನ ಕಲಿಸಿಕೊಟ್ಟವರು. ಅಮ್ಮ ನಾಗಲಕ್ಷ್ಮಿ , ಎಲ್ಲಾ ಅಮ್ಮಂದಿರಂತೆ 'ಮಕ್ಕಳಿಗಾಗಿ' ಟ್ಯಾಗ್ ಲೈನ್ನಲ್ಲಿ ಎಲ್ಲವನ್ನೂ ತ್ಯಾಗ ಮಾಡಿದ ಚೇತನ. ತಾತ ಅಂದಿನ ಗುಬ್ಬಿ ನಾಟಕ ಕಂಪನಿಯಲ್ಲಿ ತಬಲದ ರಾಮರಾಯ ಎಂದು ಪ್ರಸಿದ್ಧರಾಗಿದ್ದವರು. ಅಜ್ಜಿ ಲಕ್ಷಮ್ಮ ಅಂದಿನ ದಿನದ ಬದುಕಿನಂತೆ ತಾತನ ಯಶಸ್ಸು ತನ್ನದೆನ್ನುವಂತೆ ಅವರ ಜೊತೆಗೆ ಬಾಳು ಹಂಚಿಕೊಂಡವರು.  ದೊಡ್ಡ ತಾತ ನಟ ಭಯಂಕರ ಬಿರುದಾಂಕಿತ ಗಂಗಾಧರ ರಾಯರು. ಇವರು ತಮ್ಮ ಅಭಿನಯನದ ಮೂಲಕ ಕರ್ನಾಟಕದ ಜನತೆಗೆ ಪರಿಚಿತವಾಗಿದ್ದವರು. ಮೈಸೂರಿನ ಅಂದಿನ ಮಹಾರಾಜಾ ಜಯಚಾಮರಾಜೇಂದ್ರ ಒಡೆಯರ್ ಅವರಿಂದ 'ನಟಭಯಂಕರ ' ಬಿರುದನ್ನ ಪಡೆದುಕೊಂಡವರು. 

ರಂಗಸ್ವಾಮಿ ಅವರ ಪ್ರಾಥಮಿಕ ಶಿಕ್ಷಣ ಸಿರಾ ತಾಲೂಕಿನ ಹೊಸೂರು ಎನ್ನುವ ಗ್ರಾಮದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ಬೆಂಗಳೂರಿನ ಪೀಣ್ಯದಲ್ಲಿನ ಸರಕಾರಿ ಶಾಲೆಯಲ್ಲಿ, ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ. ನಂತರ ವಿವೇಕಾನಂದ ಕಾಲೇಜಿನಲ್ಲಿ ಕಾಮರ್ಸ್ ಭಾಗದಲ್ಲಿ ಓದಿ ಬೆಂಗಳೂರು ಯೂನಿವರ್ಸಿಟಿಯಿಂದ ಕಾಮರ್ಸ್ ಪದವಿ ಪಡೆದರು. 23ನೆಯ ವಯಸ್ಸಿಗೆ ಕೆಲಸದ ಮೇಲೆ ದುಬೈ ಸೇರಿದರು. ದುಬೈನಲ್ಲಿ ಮೂರು ತಿಂಗಳ ಕೆಲಸದ ನಂತರ ಸ್ಪೇನ್ ದೇಶದ ಬಾರ್ಸಿಲೋನಾ ನಗರ 2017ರವರೆಗೆ ಇವರ ನೆಲೆಯಾಯಿತು. ಈ ಮಧ್ಯೆ 2001ರಲ್ಲಿ ಇಂಗ್ಲೆಂಡ್‌ನ ಇನ್‌ಸ್ಟಿಟ್ಯೂಟ್ ಆಫ್ ಇಂಟರ್ನಲ್ ಆಡಿಟರ್ಸ್ ಸಂಸ್ಥೆಯ ಮೂಲಕ ಸರ್ಟಿಫೈಡ್ ಇಂಟರ್ನಲ್ ಆಡಿಟರ್ ಪದವಿ ಪಡೆದರು. ಇದರ ಜೊತೆಗೆ ಇವರು ಸರ್ಟಿಫೈಡ್ SAP FICO ಕನ್ಸಲ್ಟೆಂಟ್ ಮತ್ತು ಫೈನಾನ್ಸಿಯಲ್ ಕನ್ಸಲ್ಟೆಂಟ್ ಕೂಡ ಆಗಿದ್ದಾರೆ. 

ರಂಗಸ್ವಾಮಿ ಅವರು ವೃತ್ತಿ ಹಾಗೂ ಪ್ರವೃತ್ತಿಯ ಸಲುವಾಗಿ ಇಲ್ಲಿಯವರೆಗೆ 66 ದೇಶಗಳನ್ನ ಸುತ್ತಿದ್ದಾರೆ. ಹೀಗೆ ತಾವು ಕಂಡ ದೇಶಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ಕನ್ನಡಪ್ರಭ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಸಮಾಜಮುಖಿ ಮತ್ತು ವಿಕ್ರಮ ಪತ್ರಿಕೆಗಳಲ್ಲಿ ಲೇಖನಗಳನ್ನು  ಬರೆದಿದ್ದಾರೆ. ಅಲ್ಲದೆ ತಾವು ಕಂಡ ದೇಶಗಳ ಪ್ರವಾಸಿ ಕಥನವನ್ನ ತರಂಗ, ಸುಧಾ, ಡಿಜಿಟಲ್ ಕನ್ನಡ ಮತ್ತು ರೀಡೂ ಕನ್ನಡದಲ್ಲಿ ಬರೆದಿದ್ದಾರೆ. ಇವರ ‘ಹಣಕ್ಲಾಸು' ಅಂಕಣ ಪ್ರತಿ ಗುರುವಾರ ಪ್ರಕಟವಾಗುತ್ತಿದೆ. ಹಣಕ್ಲಾಸು ರಂಗಸ್ವಾಮಿ ಎಂದು ಜನ ಗುರುತಿಸುವ ಮಟ್ಟಿಗೆ ಹಣಕ್ಲಾಸು ಅಂಕಣ ಪ್ರಸಿದ್ಧವಾಗಿದೆ. ಹಣಕ್ಲಾಸು ಅಂಕಣ 9 ವರ್ಷ ಪೂರೈಸಿ ಇಂದಿಗೂ ಪ್ರಕಟವಾಗುತ್ತಿದೆ. ಇದರ ಜೊತೆಗೆ ಸ್ಪ್ಯಾನಿಷ್ ಗಾದೆಗಳು , ಆರ್ಥಿಕರಂಗ , ವಿಚಕ್ಷು , ಸಸ್ಯಾಹಾರಿ ಲೋಕವಿಹಾರಿ , ಬಾರ್ಸಿಲೋನಾ ನೆನಪುಗಳು, ಡೈಲಿ ಮನಿ , ಅರ್ಥಕೋಶ , ರಂಗನೊಟ, ಹಣ ಹಣಿ, ವಿಶ್ವರಂಗ ಸೇರಿದಂತೆ ಒಟ್ಟಾರೆ 12 ಕಾಲಂಗಳನ್ನ ವಿವಿಧ ಪತ್ರಿಕೆಗಳಿಗೆ ಬರೆದಿದ್ದಾರೆ. ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಬರೆದ ವಿಶೇಷತೆ ಇವರದು. 

ರಂಗಸ್ವಾಮಿ ಅವರ ಸಾವಿರಕ್ಕೂ ಹೆಚ್ಚು ಬರಹಗಳು ಪ್ರಕಟಗೊಂಡಿವೆ. 25 ಪುಸ್ತಕಗಳು ಇವರ  ಹೆಸರಿನಲ್ಲಿ ಬೆಳಕು ಕಂಡಿವೆ. ಇವರ ಇತ್ತೀಚಿನ ಷೇರು ಸಾಮ್ರಾಜ್ಯ - ಕಲಿತವನೇ ಅಧಿಪತಿ ಪುಸ್ತಕದ ಹಲವು ಅಧ್ಯಾಯಗಳು ಐದಾರು ವಿಶ್ವವಿದ್ಯಾನಿಲಯಗಳಲ್ಲಿ ಪಠ್ಯವಾಗಿ ಸೇರ್ಪಡೆಯಾಗಿದೆ. ಷೇರು ಮಾರುಕಟ್ಟೆ ಎನ್ನುವ ಪುಸ್ತಕ ಕನ್ನಡ ವಾಣಿಜ್ಯ ಸಾಹಿತ್ಯ ಲೋಕಕ್ಕೆ ಒಂದು ಕೊಡುಗೆ ಎನ್ನುವುದು ವಿವಿಧ ಪ್ರಕಾಶಕರ ಮತ್ತು ವಿತರಕರ ಮಾತು. 25 ಪುಸ್ತಕದಲ್ಲಿ ಬಹುತೇಕ ಎಲ್ಲವೂ ಮರು ಮುದ್ರಣಗೊಂಡಿವೆ. ಎಕಾನಮಿ ಮತ್ತು ಹಣಕಾಸಿಗೆ ಸಂಬಂಧಿಸಿದ ಪುಸ್ತಕಗಳು ಬಹಳಷ್ಟು ಮರುಮುದ್ರಣ ಭಾಗ್ಯ ಕಂಡಿವೆ. 

ರಂಗಸ್ವಾಮಿ ಅವರು ಕೇವಲ ಮುದ್ರಣ ಮಾಧ್ಯಮಕ್ಕೆ ಸೀಮಿತವಾಗದೆ ಕಿರುತೆರೆ , ಆಕಾಶವಾಣಿ, ಎಫ್ಎಂ ಗಳಲ್ಲಿ ಕೂಡ ಹಣಕಾಸಿನ ಬಗ್ಗೆ ಮಾತನಾಡಿದ್ದಾರೆ. ಯೂಟ್ಯೂಬ್ ನಲ್ಲಿ ಆರ್ಥಿಕತೆ ಹೆಸರಿನಲ್ಲಿ ಇವರ ನೂರಾರು ವಿಡಿಯೋಗಳು ಕೂಡ ಲಭ್ಯವಿದೆ. ಯಾವುದೇ ಪ್ಲಾಟ್ಫಾರ್ಮ್ ಅನ್ನು ಸರಿಯಾಗಿ ಬಳಸಿಕೊಳ್ಳುವುದು ನಮ್ಮ ಕೈಲಿದೆ ಎಂದು ಬಲವಾಗಿ ನಂಬಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಕಳೆದ ಸುಮಾರು 300 ದಿನಗಳಿಂದ ಸತತವಾಗಿ ಪ್ರತಿ ದಿನವೂ ಫೇಸ್ಬುಕ್ ರೀಲ್ಸ್ - ದಿನಕ್ಕೊಂದು ಕಿವಿಮಾತು ಹೇಳುತ್ತಾ ಬಂದಿದ್ದಾರೆ.   ಪ್ರೇರಣಾತ್ಮಕ  ಬರಹಗಳು, ಪ್ರವಾಸಿ ಅನುಭವ ಕಥನಗಳು ಮತ್ತು ರಾಷ್ಟೀಯ ಹಾಗೂ ಅಂತರರಾಷ್ಟ್ರೀಯ ಆರ್ಥಿಕತೆಯ ಬಗ್ಗೆ ಅತೀವ ಆಸಕ್ತಿ ಇರುವ ಕಾರಣ, ಈ ಮೂರೂ ಪ್ರಕಾರಗಳಲ್ಲಿ ಇವರ ಬರಹಗಳು ಸಾಗುತ್ತಿವೆ. ಇವರು ಕನ್ನಡ, ಇಂಗ್ಲಿಷ್, ಹಿಂದಿ ಜೊತೆಗೆ ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಯನ್ನ ಬಲ್ಲವರಾಗಿದ್ದಾರೆ. 

ರಂಗಸ್ವಾಮಿ  ಅವರು ಹಣಕಾಸು ಸಲಹೆಗಾರರಾಗಿ ಜಗತ್ತಿನಾದ್ಯಂತ ಗ್ರಾಹಕರನ್ನು ಹೊಂದಿದ್ದಾರೆ.  ಇವರು ತಮ್ಮ ಜಿಆರ್ ಅಕೆಡೆಮಿಕ್ ಫೌಂಡೇಶನ್ ಮತ್ತು ಅನನ್ಯ ಮೂಕನಹಳ್ಳಿ ಫೌಂಡೇಶನ್ ಮೂಲಕ ಸಮಾಜಕ್ಕೆ ಮರಳಿ ನೀಡುವ ಕಾಯಕದಲ್ಲೂ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ. ಇವರು ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಠಾನದಲ್ಲಿ ಕೂಡ ಸಕ್ರಿಯ ಸದಸ್ಯರು. 

ಪ್ರಸಕ್ತದಲ್ಲಿ ರಂಗಸ್ವಾಮಿ  ಮೈಸೂರು ನಗರದಲ್ಲಿ ವಾಸವಿದ್ದಾರೆ. ಐದನೇ ತರಗತಿಯಲ್ಲಿದ್ದಾಗ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭ ಮಾಡಿದ ದಿನದಿಂದ ಇಲ್ಲಿಯವರೆಗೆ 'ಬ್ರೇಕ್ ' ಬಯಸದೆ ಸದಾ ಏನ್ನನ್ನಾದರೂ ಮಾಡುತ್ತಿರಬೇಕು ಎನ್ನುವುದು ಇವರ ನಿಲುವು. 

ಸಾಧಕರೂ, ನಿರಂತರ ಕ್ರಿಯಾಶೀಲರೂ, ಆತ್ಮೀಯರೂ ಆದ ರಂಗಸ್ವಾಮಿ ಮೂಕನಹಳ್ಳಿ  ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

On the birthday of our Financial Expert and columnist Rangaswamy Mookanahalli Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ