ಶ್ರೀನಿವಾಸಮೂರ್ತಿ
ಶ್ರೀನಿವಾಸಮೂರ್ತಿ
ಕನ್ನಡ ಚಿತ್ರರಂಗದ ಪ್ರಮುಖ ಪ್ರತಿಭಾನ್ವಿತ ನಟರಲ್ಲಿ ಶ್ರೀನಿವಾಸಮೂರ್ತಿ ಒಬ್ಬರು. ಅವರು ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನಾಗಿ ವಿಜೃಂಭಿಸಿದ ರೀತಿ ಅವಿಸ್ಮರಣೀಯವಾದದ್ದು. ವಿವಿಧ ಪಾತ್ರಗಳಲ್ಲಿ ಭಾವನಾತ್ಮಕವಾಗಿ ತಲ್ಲೀನರಾಗಿ ಅಭಿನಯಿಸುವ ಅವರ ಕಣ್ಗಳ ಹೊಳಪು ವಿಶಿಷ್ಟವಾದದ್ದು.
ಶ್ರೀನಿವಾಸಮೂರ್ತಿ ಅವರು 1949ರ ಮೇ 15 ರಂದು ಈಗಿನ ಚಿಕ್ಕಾಬಳ್ಳಾಪುರ ಜಿಲ್ಲೆಯ ಜಡಲತಿಮ್ಮನಹಳ್ಳಿಯಲ್ಲಿ ಜನಿಸಿದರು. ತಂದೆ ಕೃಷ್ಣಪ್ಪನವರು ಮತ್ತು ತಾಯಿ ನಾಗಮ್ಮನವರು. ಶ್ರೀನಿವಾಸಮೂರ್ತಿ ಅವರು ಕರ್ನಾಟಕ ಸರಕಾರದ ಸರ್ವೇ ಇಲಾಖೆಯಲ್ಲಿ ಕೆಲಕಾಲ ಕಾರ್ಯನಿರ್ವಹಿಸುತ್ತಿದ್ದರು.
ಶ್ರೀನಿವಾಸಮೂರ್ತಿ ಅವರು ವೃತ್ತಿರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳೆರಡರಲ್ಲೂ ಸಕ್ರಿಯರಾಗಿದ್ದರು. 1977ರಲ್ಲಿ ಶ್ರೀನಿವಾಸಮೂರ್ತಿಯವರು ಮಹಾನ್ ನಿರ್ದೇಶಕ ಸಿದ್ಧಲಿಂಗಯ್ಯನವರ 'ಹೇಮಾವತಿ' ಮೂಲಕ ಚಿತ್ರರಂಗಕ್ಕೆ ಬಂದರು. ಸಿದ್ಧಲಿಂಗಯ್ಯನವರ ಪರಾಜಿತ, ಕೂಡಿಬಾಳಿದರೆ ಸ್ವರ್ಗಸುಖ ಚಿತ್ರಗಳಲ್ಲೂ ಅವರು ನಾಯಕ ಪಾತ್ರಧಾರಿಯಾಗಿದ್ದರು.
ಶ್ರೀನಿವಾಸಮೂರ್ತಿ ಅವರು ಮನೆ ಮನೆ ಕಥೆ, ಕವಿರತ್ನ ಕಾಳಿದಾಸ, ಹೊಸ ಬೆಳಕು ಮುಂತಾದ ಚಿತ್ರಗಳಲ್ಲಿ ನಾಯಕ ಸ್ನೇಹಿಯಾಗಿ ಮಿಂಚಿದ ರೀತಿ ಇಂದಿಗೂ ಬಹು ಸ್ಮರಣೀಯ. ಮುನ್ನೂರಕ್ಕೂ ಹೆಚ್ಚು ಪಾತ್ರಗಳಲ್ಲಿ ಸಹೃದಯಿಯಾದ ಪೋಷಕ ಪಾತ್ರಗಳಲ್ಲಿ ಅವರದ್ದು ಭಾವಪೂರ್ಣ ಅಭಿನಯ.
ಶ್ರೀನಿವಾಸಮೂರ್ತಿ ಅವರು ಗೆಳೆಯ ಜೈಜಗದೀಶ್ ಅವರೊಡಗೂಡಿ ಕೆಲವು ಚಿತ್ರಗಳನ್ನು ನಿರ್ಮಿಸಿದರು. ಕಾಶಿನಾಥ್ ಅವರೊಂದಿಗೂ ಚಿತ್ರ ನಿರ್ಮಿಸಿದ ಅವರು ಮುಂದೆ ಸ್ವಯಂ ತಾವೇ ಕೆಲವು ಚಿತ್ರಗಳನ್ನು ನಿರ್ಮಿಸಿದರು. 'ದೇವರ ಮಕ್ಕಳು' ಎಂಬ ಮಕ್ಕಳ ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ಅದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಗಳಿಸಿತು.
ಶ್ರೀನಿವಾಸಮೂರ್ತಿ ಅವರು ಕಿರುತೆರೆಯಲ್ಲಿ ಅಣ್ಣಾ ಬಸವಣ್ಣ, ಪಾತಾಳ ಭೈರವಿ, ತ್ರಿವೇಣಿ ಸಂಗಮ ಮತ್ತು ಕನಕದಾಸ ಅಂತಹ ಸದಭಿರುಚಿಯ ಧಾರಾವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ.
ನಾರಿ ಸ್ವರ್ಗಕ್ಕೆ ದಾರಿ, ಶ್ರೀರಸ್ತು ಶುಭಮಸ್ತು ಚಿತ್ರಗಳಲ್ಲಿನ ಅಭಿನಯಕ್ಕೆ ಕರ್ನಾಟಕ ರಾಜ್ಯಸರ್ಕಾರದ ಚಲನಚಿತ್ರ ಪೋಷಕನಟ ಪ್ರಶಸ್ತಿ ಮತ್ತು ಚಲನಚಿತ್ರರಂಗದಲ್ಲಿನ ಕೊಡುಗೆಗಾಗಿ ಡಾ. ರಾಜ್‍ಕುಮಾರ್ ಪ್ರಶಸ್ತಿಗಳು ಶ್ರೀನಿವಾಸಮೂರ್ತಿ ಅವರಿಗೆ ಸಂದಿವೆ.
On the birthday of our good actor Sreenivasamurthy
ಕಾಮೆಂಟ್‌ಗಳು