ಗೀಚಾ ಬೋಳ್ಕಟ್ಟೆ
ಗೀಚಾ ಬೋಳ್ಕಟ್ಟೆ
ಕೆಲವರ ಬಗ್ಗೆ ನಮಗೆ ಏನೂ ಗೊತ್ತಿರಲ್ಲ. ಆದರೆ ಅವರು ನಮಗೆ ತಮ್ಮ ಸೃಜನಶೀಲತೆಯಿಂದ ಇಷ್ಟ ಆಗ್ತಾ ಹೋಗ್ತಾರೆ.
ನನಗೆ ಗೀಚಾ ಬೋಳ್ಕಟ್ಟೆ ಅವರು ಫೇಸ್ಬುಕ್ ಮೂಲಕ ಕಾಣಬಂದವರು. ನಮ್ಮಿಬ್ಬರಲ್ಲಿ ಯಾರು ಯಾರಿಗೆ ಸ್ನೇಹ ಕೋರಿಕೆ ಕಳಿಸಿ ಫ್ರೆಂಡ್ ಆದ್ವೋ ಗೊತ್ತಿಲ್ಲ. ನಾವು ಅವರು ಒಬ್ಬರ ಪೋಸ್ಟಿಗೆ ಒಬ್ರು ಉದ್ದುದ್ದ ಕಾಮೆಂಟ್ ಹಾಕಿ ಇಲ್ಲವೇ ಲೈಕ್ ಮಾಡಿ ಒಬ್ಬರನ್ನೊಬ್ಬರು ಮೆಚ್ಚಿಸಿದವರೂ ಅಲ್ಲ.
ಆದರೆ ಈ ಯುವ ಹುಡುಗ ಚಿತ್ರದ ಸ್ಕೆಚ್ ಬಿಡಿಸೋದಿದೆಯೆಲ್ಲ ನನಗೆ ಆಗಾಗ ಅಟ್ಟಿಸಿಕೊಂಡು ಹೋಗಿ ನೋಡಬೇಕು ಅನಿಸುತ್ತೆ.
ಅಂದ ಹಾಗೆ ಗೀಚಾ ಬೋಳ್ಕಟ್ಟೆ ಅವರ ನಿಜ ಹೆಸರು ಗಿರೀಶ್ ನಾಯ್ಕ. ಇವರ ಊರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಕೋಡಕಣಿಯ ಬೋಳ್ಕಟ್ಟೆ. ಜನಿಸಿದ್ದು 1992ರ ಮೆ 24. ತಂದೆ ಗಣಪತಿ ನಾಯ್ಕ. ತಾಯಿ ಯಮುನಾ.
ಕೋಡ್ಕಣಿ, ಕುಮಟಾಗಳಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪಾಲಿಟೆಕ್ನಿಕ್ವರೆಗೆ ಓದಿ ಮುಂದೆ ಕಾರವಾರದ ಸರಕಾರಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದವರು ಈ ಗೀಚಾ ಬೋಳ್ಕಟ್ಟೆ. ಸರಕಾರಿ ಶಾಲಾ ಕಾಲೇಜಲ್ಲಿ ಪ್ರತಿಭೆ ಹುಟ್ಟಲ್ಲ ಅನ್ನೋವ್ರು ಇವರ ಬಿಡಿಸೋ ಚಿತ್ರ ನೋಡಿ.
ಇಂತಹ ಅದ್ಭುತ ಕಲಾರೇಖೆಗಳು ಅವರಿಗೆ ಈ ಯುವ ವಯಸ್ಸಲ್ಲಿ ಹೇಗೆ ಲಭ್ಯವಾಯ್ತು?.
ಒಮ್ಮೆ ಯುವ ಕಲಾವಿದ ವಿಲಾಸ್ ನಾಯಕ್ ಸುವರ್ಣ ವಾಹಿನಿಯ 'ಸೂಪರ್ ಸ್ಟಾರ್ ಆಫ್ ಕರ್ನಾಟಕ' ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ನೋಡಿ ಗಿರೀಶ್ ಪ್ರೇರೇಪಿತರಾದರು. ತಮ್ಮ ನೋಕಿಯ 2700 ಕೀಪ್ಯಾಡ್ ಸೆಟ್ನಲ್ಲಿ 'ಪೆನ್ಸಿಲ್ ಸ್ಕೆಚ್' ವಿಷಯಕ್ಕೆ ಸರ್ಚ್ ಕೊಟ್ರು. ಅಲ್ಲಿ ಕಾಣಿಸಿಕೊಂಡ ನಿಶಾ ಕರಿಯಣ್ಣ ಅವರ ಹಲವು ಸಾಧಕರ ಪೆನ್ಸಿಲ್ ಸ್ಕೆಚ್ ಬೆರಗು ಮೂಡಿಸಿತು. ಮುಂದೆ ರಘುಪತಿ ಶೃಂಗೇರಿ ಸಾರಥ್ಯದ ವ್ಯಂಗ್ಯ ತರಂಗ ಪೇಸ್ಬುಕ್ ಗ್ರೂಪಲ್ಲಿ ಹಲವು ಸಾಧ್ಯತೆಗಳು ಗೋಚರಿಸಿದವು. ಚಿತ್ರ ಬಿಡಿಸುತ್ತಾ, ಬಹುಮಾನ ಗೆಲ್ಲುತ್ತಾ, ಇನ್ನೂ ಕಲಿಯುತ್ತಾ, ಜನ ಮೆಚ್ಚುಗೆ ಪಡೆಯುತ್ತಾ ಅವರ ಸಾಧನೆಯ ಬಂಡಿ ನಿರಂತರ ಓಡ್ತಾನೇ ಇದೆ.
ಗೀಚಾ ಬೋಳ್ಕಟ್ಟೆ ಹೇಳ್ತಾ ಇದ್ರು, “ಚಿಕ್ಕಂದಿನಿಂದ ಚಿತ್ರ ಬರೆಯೋದು ಕಲೀಬೇಕು ಅಂತ ಆಸಕ್ತಿ ಇತ್ತು ಮನೆಯವರು ಒಪ್ಪಲಿಲ್ಲ ಅಂತ”. ನಾನಂದೆ: "ಬಯಸಿದ್ದು ಸಾಧ್ಯ ಆಗಬೇಕು ನಿಜ. ಆದರೆ ಎಲ್ಲರಿಗೂ ಬಯಸಿದ ಹಾಗೆ ಪ್ರೋತ್ಸಾಹ ಸಿಕ್ಕಿದರೆ ಮಾತ್ರಾ ಸ್ಟಾರ್ ಆಗಲ್ಲ. ಅವಶ್ಯಕ ಬದುಕಿಗೆ ಬೇಕಾದ ನೆಲೆ ಕಲ್ಪಿಸಿಕೊಳ್ಳಲು ಮರೆಯದೆ, ಬಯಸಿದ ದಾರಿಯನ್ನೂ ಪ್ರೀತಿಯಿಂದ ಕಂಡು ಬದುಕನ್ನು ಕಾಣಹೊರಟವರಿಗೆ ಯಶಸ್ಸು ಖಂಡಿತ ಸಿಗುತ್ತೆ. ಅಂದು ಪ್ರೋತ್ಸಾಹ ಸಿಗಲಿಲ್ಲ ಎಂದು ಚಿಂತಿಸಬೇಕಿಲ್ಲ. ಇಂದು ಮತ್ತು ಮುಂದು ಕಿರಿಯರಾದ ನಿಮ್ಮ ಜೊತೆ ಜೊತೆಗೇ ಇದೆ" ಅಂತ. ನಮ್ಮ ಗೀಚಾ ಅವರು ಫೇಮಸ್ ಆಗಿ, ಅವರ ಪ್ರಸಿದ್ಧಿ ಎಲ್ಲೆಲ್ಲೂ ಮೂಡೋದ್ರಲ್ಲಿ ಯಾವ ಸಂಶಯವೂ ಇಲ್ಲ.
ಉತ್ಸಾಹಿ ಕಲಾವಿದ ಗೆಳೆಯ ಗೀಚಾ ಬೋಳ್ಕಟ್ಟೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Geecha Bolkatte Giridhar Naik
ಕಾಮೆಂಟ್ಗಳು