ರಾಮ್ ಪ್ರಸದ್ ಬಿಸ್ಮಿಲ್
ರಾಮ್ ಪ್ರಸಾದ್ ಬಿಸ್ಮಿಲ್
"ಕ್ರಾಂತಿಯ ಆಸೆ ನಮ್ಮ ಹೃದಯಗಳಲ್ಲಿ ಮನೆಮಾಡಿದೆ.ಶತ್ರುವಿನ ಶತ್ರುವಿನ ತೋಳ್ಬಲ ಎಷ್ಟಿದೆ ಎಂದು ನೋಡಿಯೇ ಬಿಡೋಣ" ಹೀಗೆ ಹೇಳುವುದು ಅಳ್ಳೆದೆಯವರಿಗೆ ಸಾಧ್ಯವಿಲ್ಲ. ಇದನ್ನು ನುಡಿದವರು ರಾಮ್ ಪ್ರಸಾದ್ ಬಿಸ್ಮಿಲ್.
ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ, ಪಖ್ಯಾತ ಹಿಂದಿ ಮತ್ತು ಉರ್ದು ಕವಿ ರಾಮ್ ಪ್ರಸಾದ್ ಬಿಸ್ಮಿಲ್ ಅವರು 1897ರ ಜೂನ್ 11ರಂದು ಜನಿಸಿದರು. ಉತ್ತರ ಪ್ರದೇಶದ ಶಹಜಹಾನಪುರ ಬಿಸ್ಮಿಲ್ ಅವರು ಜನಿಸಿದ ಊರು. ರಾಮ್, ಅಗ್ಯಾತ್ ಮತ್ತು ಬಿಸ್ಮಿಲ್ ಅವರ ಕಾವ್ಯನಾಮಗಳು. ಅವರು ಬಿಸ್ಮಿಲ್ ಎಂದೇ ಹೆಚ್ಚು ಜನಪ್ರಿಯರು. ಆರ್ಯ ಸಮಾಜಕ್ಕೆ ನಿಷ್ಠಾವಂತರಾಗಿದ್ದ ಬಿಸ್ಮಿಲ್, ಸ್ವಾಮಿ ದಯಾನಂದ ಸರಸ್ವತಿ ಅವರ ‘ಸತ್ಯಪ್ರಕಾಶ’ ಕೃತಿಯಿಂದ ಅಪಾರವಾಗಿ ಪ್ರಭಾವಿತರಾದರು. ತಮ್ಮ ಗುರು ಸೋಮದೇವ್ ಅವರ ಮುಖೇನ ಅವರು ಆರ್ಯ ಸಮಾಜದ ಪ್ರಾಚಾರ್ಯರಾಗಿದ್ದ ಲಾಲಾ ಹರ ದಯಾಳ್ ಅವರಿಗೆ ಸಮೀಪವರ್ತಿಗಳಾಗಿದ್ದರು.
ತಮ್ಮ ಹಲವು ಗೆಳೆಯರೊಡಗೂಡಿ ಬಿಸ್ಮಿಲ್, ‘ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಶನ್’ ಸ್ಥಾಪಿಸಿದರು. ಭಗತ್ ಸಿಂಗ್ ಅವರನ್ನೊಳಗೊಂಡಂತೆ ಅಂದಿನ ಎಲ್ಲ ಯುವಕರಿಗೆ ಅವರು ಪ್ರೇರಕರಾಗಿದ್ದರು. ಭಗತ್ ಸಿಂಗರು ರಾಮ್ ಪ್ರಸಾದರನ್ನು ಮಹಾನ್ ಕವಿ ರಾಷ್ಟ್ರಭಕ್ತರೆಂದು ಕೊಂಡಾಡಿದ್ದಾರೆ. ಇಂಗ್ಲಿಷ್ ಭಾಷೆಯ ಕ್ಯಾಥೆರಿನ್, ಬಂಗಾಳಿ ಭಾಷೆಯ ಬೋಲ್ಶಿವಿಕಾನ್ ಕಿ ಕರ್ತೂಟ್ ಮುಂತಾದ ಅನೇಕ ಕೃತಿಗಳನ್ನು ಅವರು ಹಿಂದಿ ಮತ್ತು ಉರ್ದು ಭಾಷೆಗೆ ಭಾಷಾಂತರಿಸಿದ್ದಲ್ಲದೆ ಅನೇಕ ದೇಶಭಕ್ತಿಗೀತೆಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಮಹಮದ್ ರಫಿ ಅಂತಹ ಪ್ರಖ್ಯಾತ ಗಾಯಕರ ಕಂಠದಲ್ಲೂ ಹರಿದಿರುವ ‘ಸರ್ಫರೋಷ್ ಕಿ ತಮನ್ನಾ’ ಪ್ರಮುಖವಾದುದು.
ಶಾಂತಿಯುತವಾಗಿ ಬ್ರಿಟಿಷರ ವಿರುದ್ಧದ ಕಾರ್ಯಾಚರಣೆ ಬಯಸಿದ್ದ ಬಿಸ್ಮಿಲ್ ಅವರು, ಬ್ರಿಟಿಷರ ಹಿಂಸಾತ್ಮಕ ಧೋರಣೆಗಳಿಂದಾಗಿ ಕ್ರಾಂತಿಕಾರಿಯಾಗಿ ಮಾರ್ಪಟ್ಟರು. 1918ರ ವರ್ಷದ ಮಣಿಪುರಿ ಪ್ರಕರಣ ಮತ್ತು 1925ರ ವರ್ಷದ ಕಾಕೋರಿ ಪ್ರಕರಣಗಳಲ್ಲಿ ಅವರು ಪ್ರಮುಖ ಪಾತ್ರಧಾರಿಯಾಗಿದ್ದರು. ಬ್ರಿಟಿಷ್ ಸರ್ಕಾರ ಈ ಮಹಾನ್ ದೇಶಭಕ್ತರನ್ನು 1927ರ ಡಿಸೆಂಬರ್ 19ರಂದು ಗೋರಖ್‍ಪುರದಲ್ಲಿ ಗಲ್ಲಿಗೇರಿಸಿತು.
ಇತ್ತೀಚಿನ ವರ್ಷದಲ್ಲಿ ಈ ಸ್ಥಳದಲ್ಲಿ ಈ ಊರಿನ ಜನ ಅವರ ಮೇಲಿನ ಭಕ್ತಿಯಿಂದ ಒಂದು ದೇಗುಲವನ್ನೂ ಕಟ್ಟಿದ್ದಾರೆ.
ಈ ಮಹಾನ್ ದೇಶಭಕ್ತರಿಗೆ ನಮ್ಮ ಸಾಷ್ಟಾಂಗ ಪ್ರಣಾಮಗಳು.
The desire for revolution is in our hearts, we shall see how much strength lies in the arms of the enemy - Ram Prasad Bismil
ಕಾಮೆಂಟ್‌ಗಳು