ಶಾಂತಾ ಇಮ್ರಾಪೂರ
ಶಾಂತಾ ಇಮ್ರಾಪೂರ
ಶಾಂತಾ ಇಮ್ರಾಪೂರ ಅವರು ಸಾಹಿತ್ಯ ಲೋಕದಲ್ಲಿ ತಮ್ಮ ವಿಶಿಷ್ಟ ಕೊಡುಗೆಗಳಿಂದ ಹೆಸರಾದವರು.
ಶಾಂತಾ ಇಮ್ರಾಪೂರ 1954ರ ಜೂನ್ 9ರಂದು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ಶಾಲಾ ಕಾಲೇಜುಗಳಲ್ಲಿ ನಿರಂತರ ರ್‍ಯಾಂಕ್ ಸಾಧನೆಯಲ್ಲಿ ವಿದ್ಯಾಭ್ಯಾಸ ಮಾಡಿದ ಶಾಂತಾ ಇಮ್ರಾಪುರ ಅವರು ಬಿ. ಎ. ಮತ್ತು ಎಂ. ಎ. ಪದವಿಗಳನ್ನು ಗಳಿಸಿ, ಅಕ್ಕಮಹಾದೇವಿ ಜೀವನ, ಸಾಧನೆ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಚಿನ್ನದ ಪದಕದೊಡನೆ ಪಿಎಚ್.ಡಿ. ಸಾಧನೆಯನ್ನೂ ಮಾಡಿದ್ದಾರೆ.
ಶಾಂತಾ ಇಮ್ರಾಪೂರ ಧಾರವಾಡದ ಶ್ರೀ ಹುರಕಡ್ಡಿ ಅಜ್ಜ ಸಂಸ್ಥೆಯ ಮಹಿಳಾ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿ, ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿದ ನಂತರ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೀಡರ್ ಆಗಿ, ಪ್ರಾಧ್ಯಾಪಕಿಯಾಗಿ ಕಾರ‍್ಯನಿರ್ವಹಣೆ ಮಾಡಿದ್ದಾರೆ.
ಶಾಂತಾ ಇಮ್ರಾಪೂರ ಅವರು ಮಹಿಳಾ ಅಧ್ಯಯನ, ಅನುಭಾವ ಸಾಹಿತ್ಯ, ವಿಮರ್ಶೆ, ಸಂಶೋಧನೆ, ಆಧುನಿಕ ಸಾಹಿತ್ಯ, ಜನಪದ ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಕೊಂಡು ಸುಮಾರು 50 ಕೃತಿಗಳಲ್ಲಿ ಕೆಲಸಮಾಡಿದ್ದಾರೆ. ಮಧ್ಯಯುಗದ ಮಹಿಳಾ ಅನುಭಾವಿಗಳನ್ನು ಜಗತ್ತಿನ ಇತರ ಮಹಿಳಾ ಅನುಭಾವಿಗಳೊಂದಿಗೆ ತೌಲನಿಕ ಅಧ್ಯಯನ ನಡೆಸಿ ವಿಮರ್ಶಾತ್ಮಕವಾಗಿ ಮಹಿಳಾಪರ ಒಳನೋಟಗಳನ್ನು ತಿಳಿಸುವ ಅವರ ಕೃತಿಗಳು 'ಮಧ್ಯಯುಗದ ಮಹಿಳಾ ಯುಗದ ಸಾಹಿತ್ಯ ಮತ್ತು ಸೃಜನ ಶೀಲತೆ’, ‘ಧರ್ಮ-ಮಹಿಳೆ-ಸಮಾಜ’ ಮುಂತಾದವುಗಳಲ್ಲಿ ಕಾಣಬರುತ್ತವೆ. ವೈಚಾರಿಕ ವ್ಯಕ್ತಿತ್ವದ ಅನುಭಾವಿ ವಚನಕಾರ್ತಿ ಮುಕ್ತಾಯಕ್ಕನ ಜೀವನ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿ ‘ಮುಕ್ತಾಯಕ್ಕ’. ವಚನ ಸಾಹಿತ್ಯದ ವೈಚಾರಿಕ ಅಧ್ಯಯನದಿಂದ ಕೂಡಿರುವ ಇನ್ನೊಂದು ಕೃತಿ ‘ಮರುಳ ಶಂಕರ ದೇವ’.
ಆಧುನಿಕ ಮಹಿಳಾ ಸಾಹಿತ್ಯದ ಬಗೆಗೂ ವಿಶೇಷವಾಗಿ ಅಧ್ಯಯನ ನಡೆಸಿರುವ ಶಾಂತಾ ಇಮ್ರಾಪೂರ ಅವರು ಸಾಹಿತ್ಯ – ಸಂವೇದನೆ, ದೇವಾಂಗನಾ ಶಾಸ್ತ್ರಿ, ಸಂತೂಬಾಯಿ ನೀಲಗಾರ, ಶಾರದಾ ಗೋಕಾಕ, ಶಾಂತಾದೇವಿ ಮಾಳವಾಡ, ಡಾ. ಸರೋಜಿನಿ ಶಿಂತ್ರಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಶಾಂತಾ ಇಮ್ರಾಪುರ ಅವರು ಜಾನಪದ ತ್ರಿಪದಿಗಳು, ಒಡಪುಗಳು, ಗಾದೆಗಳು, ವೈದ್ಯಕೀಯ ವಿಚಾರ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮಹಿಳಾ ಜಾನಪದ ಅಧ್ಯಯನಕ್ಕೆ ಸಂಬಂಧಿಸಿದಂತೆ ‘ಮಹಿಳಾ ಸಾಹಿತ್ಯ – ಸಂಸ್ಕೃತಿ’, ಅಕ್ಕಮಹಾದೇವಿ ಚರಿತ್ರೆಯನ್ನಾಧರಿಸಿದ ‘ಅಕ್ಕಮಹಾದೇವಿ’ ಸಣ್ಣಾಟ, `ಅಲ್ಲಮ ಪ್ರಭು’ ಸಣ್ಣಾಟಗಳು ಮತ್ತು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಗಾಗಿ ‘ಗಾದೆಗಳು’ ಸಂಪುಟ ಮುಂತಾದವುಗಳನ್ನು ಸಂಪಾದಿಸಿಕೊಟ್ಟಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲೆಗಾಗಿ ಎಸ್.ಎಸ್.ಭೂಸನೂರ ಮಠ ಅವರನ್ನು ಕುರಿತು ವ್ಯಕ್ತಿಚಿತ್ರ ರಚಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಮಧ್ಯಯುಗದ ಮಹಿಳಾ ಅಭಿವ್ಯಕ್ತಿಯ ಚಾರಿತ್ರಿಕ ಅಧ್ಯಯನವನ್ನು ದಾಖಲಿಸುವ ನಿಟ್ಟಿನಲ್ಲಿ ಎಂಟು ನೂರು ವರ್ಷಗಳ ಮಹಿಳಾ ಸಾಹಿತ್ಯ ಪರಂಪರೆಯನ್ನು ಗುರುತಿಸುವ ‘ಮಹಿಳಾ ಸಾಹಿತ್ಯ ಚರಿತ್ರೆ’ಯ ರಚನೆಯಲ್ಲಿ ಸಹಕರಿಸಿದ್ದಾರೆ. ಇವಲ್ಲದೆ ಆಧುನಿಕ ಕನ್ನಡ ಸಾಹಿತ್ಯದ ಅಧ್ಯಯನದ ವಿಮರ್ಶಾ ಕೃತಿ ‘ಪೂರ್ವಾಪರ’, ಪ್ರೊ. ಲಲಿತಾಂಬ ವೃಷಬೇಂದ್ರಸ್ವಾಮಿಯವರ ಸಮಗ್ರ ಸಾಹಿತ್ಯ ಸಂಪಾದನೆಯ ‘ವಚನಾಂಜಲಿ – ಕಾವ್ಯಾಂಜಲಿ’, ‘ಕಥಾಂಜಲಿ – ಚಿಂತನಾಂಜಲಿ’ ಎರಡು ಸಂಪುಟಗಳು; ಶಾಂತಾದೇವಿ ಮಾಳವಾಡ, ಸರೋಜಿನಿ ಶಿಂತ್ರಿ, ಶಿವಲಿಂಗಮ್ಮ ಕಟ್ಟಿ, ಡಾ.ವೀಣಾ ಶಾಂತೇಶ್ವರ ಮುಂತಾದವರುಗಳ ಸಮನ್ವಯ, ವಿಚಾರ ಪತ್ನಿ, ಅಕ್ಕಾ ಕೇಳವ್ವ, ನಿರ್ದಿಗಂತ (ಭಾಗ ೧-೨) ಮುಂತಾದ ಸಮಗ್ರ ಅಧ್ಯಯನ ಕೃತಿಗಳನ್ನು ಸಂಪಾದಿಸಿದ್ದಾರೆ.
ಶಾಂತಾ ಇಮ್ರಾಪೂರ ಅವರು ಆಡಳಿತಾತ್ಮಕವಾಗಿ ಕರ್ನಾಟಕ ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್, ಸೆನೆಟ್, ಸಿಂಡಿಕೇಟ್ ಸದಸ್ಯೆಯಾಗಿ; ಉತ್ತರ ಕರ್ನಾಟಕ ಲೇಖಕಿಯರ ಸಂಘ, ಪ್ರೊ. ಸಂ.ಶಿ. ಭೂಸನೂರುಮಠ ಪ್ರತಿಷ್ಠಾನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ವಿದ್ಯಾವರ್ಧಕ ಸಂಘ ಮುಂತಾದವುಗಳ ಸದಸ್ಯೆಯಾಗಿ, ಕೋಶಾಧಿಕಾರಿಯಾಗಿ, ಕಾರ‍್ಯಾಧ್ಯಕ್ಷೆಯಾಗಿ ಕಾರ‍್ಯ ನಿರ್ವಹಿಸಿದ್ದಾರೆ. ಅವರು ಸಾರ್ವಜನಿಕವಾಗಿ, ಶೈಕ್ಷಣಿಕವಾಗಿ ರಾಜ್ಯ – ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು ಮತ್ತು ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಶಾಂತಾ ಇಮ್ರಾಪೂರ ಅವರು ವಚನ ಸಾಹಿತ್ಯದ ವಿಶೇಷಾಧ್ಯಯನಕ್ಕಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಕದಳಿ ಶ್ರೀ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪತಿ ಡಾ. ಸೋಮಶೇಖರ ಇಮ್ರಾಪುರ ಅವರೊಂದಿಗೆ ಸಾಹಿತಿ – ದಂಪತಿ ಸನ್ಮಾನ, ಮೈಸೂರಿನ ಸುತ್ತೂರ ಶಿವರಾತ್ರೀಶ್ವರ ಮಠ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಗ್ರಂಥ ಪ್ರಶಸ್ತಿ, ಶ್ರೀ ಸಿರಸಂಗಿ ಲಿಂಗರಾಜ ಪ್ರತಿಷ್ಠಾನ ಪ್ರಶಸ್ತಿ; ಅಕ್ಕಮಹಾದೇವಿ (ಸಣ್ಣಾಟ) ಕೃತಿಗೆ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜ್ಞಾನ – ವಿಜ್ಞಾನ ಪ್ರಶಸ್ತಿ, ಅಲ್ಲಮಪ್ರಭು (ಸಣ್ಣಾಟ) ಕೃತಿಗೆ ಗ್ರಂಥ ಪ್ರಶಸ್ತಿ; ಪ್ರೊ. ಸ.ಸ.ಮಾಳವಾಡ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.
On the birthday of writer Prof. Shantha Imrapur
ಕಾಮೆಂಟ್‌ಗಳು