ಶಾಂತವೇರಿ ಗೋಪಾಲಗೌಡ
ಶಾಂತವೇರಿ ಗೋಪಾಲಗೌಡ ಕರ್ನಾಟಕ ಕಂಡ ಮಹಾನ್ ಸಮಾಜವಾದಿ ಚಿಂತನೆಯ ಹೋರಾಟಗಾರರು ಮತ್ತು ರಾಜಕಾರಣಿ. ನಾವು ಈಗ ಈ ಮಹಾನುಭಾವರ ಶತಮಾನೋತ್ಸವ ವರ್ಷದಲ್ಲಿದ್ದೇವೆ.
ಗೋಪಾಲಗೌಡರು 1923ರ ಮಾರ್ಚ್ 14ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಶಾಂತವೇರಿಯ ಗೇಣಿದಾರ ರೈತ ಕುಟುಂಬದಲ್ಲಿ ಹುಟ್ಟಿದರು. ತಂದೆ ಕೊಲ್ಲೂರಯ್ಯಗೌಡ. ತಾಯಿ ಶೇಷಮ್ಮ. ಶಿವಮೊಗ್ಗದಲ್ಲಿ ಇಂಟರ್ ಮೀಡಿಯಟ್ ವರೆಗೆ ವಿದ್ಯಾಭ್ಯಾಸ ನಡೆಸಿದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೆ ನಾಯಕತ್ವದ ಗುಣಗಳನ್ನು ರೂಪಿಸಿಕೊಂಡಿದ್ದ ಗೋಪಾಲಗೌಡರು 1942ರ 'ಕ್ವಿಟ್ ಇಂಡಿಯಾ' ಚಳವಳಿಗೆ ದುಮುಕಿ ಜೈಲುವಾಸ ಅನುಭವಿಸಿದರು.
ಡಾ. ರಾಮಮನೋಹರ ಲೋಹಿಯಾ ಅವರ ನೆಚ್ಚಿನ ಶಿಷ್ಯರಾಗಿದ್ದ ಗೋಪಾಲಗೌಡರು, ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದ ಸಂಘಟನೆಗೆ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡರು. 1951 ರಲ್ಲಿ ನಡೆದ ಕಾಗೋಡು ರೈತ ಸತ್ಯಾಗ್ರಹ, ಸಮಾಜವಾದಿ ಪಕ್ಷಕ್ಕೆ ಭದ್ರವಾದ ಸೈದ್ದಾಂತಿಕ ನೆಲೆಗಳನ್ನು ಒದಗಿಸಿ, ಗೋಪಾಲಗೌಡರನ್ನು ರಾಜ್ಯದ ಸಮಾಜವಾದಿ ನಾಯಕರನ್ನಾಗಿ ರೂಪಿಸಿತು. ಕಾಗೋಡು ರೈತ ಸತ್ಯಾಗ್ರಹದ ಪ್ರೇರಣೆಯಿಂದಾಗಿ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ಭೂಹೀನ ಮತ್ತು ಕೃಷಿ ಕೂಲಿಕಾರರಿಂದ ಅನೇಕ ಹೋರಾಟಗಳು ಹುಟ್ಟು ಪಡೆದವು. ಕರ್ನಾಟಕ ಏಕೀಕರಣ, ರಾಜಧನ ರದ್ದತಿ, ಭೂಸುಧಾರಣೆ, ಆಡಳಿತದಲ್ಲಿ ಕನ್ನಡ ಭಾಷೆಯ ಅನುಷ್ಠಾನ, ಗೋವಾ ವಿಮೋಚನೆ, ಕಾನೂನುಭಂಗ ಚಳವಳಿಗಳಲ್ಲಿ ಸಕ್ರಿಯ ಪಾತ್ರ ವಹಿಸಿದರು. ಅನೇಕ ಬಾರಿ ಬಂಧನಕ್ಕೆ ಒಳಗಾದರು. ಹೀಗೆ ಹೋರಾಟಗಳಿಂದಲೇ ರೂಪುಗೊಂಡ ವ್ಯಕ್ತಿತ್ವ ಶಾಂತವೇರಿ ಅವರದು.
ಶಾಂತವೇರಿ ಗೋಪಾಲಗೌಡರು ರಾಜ್ಯ ವಿಧಾನಸಭೆಗೆ ಒಟ್ಟು ಮೂರು ಸಲ ಶಾಸಕರಾಗಿ ಆಯ್ಕೆಯಾದರು. ಶಾಸನ ಸಭೆಯಲ್ಲಿ ಜನಭಾಷೆಯಲ್ಲಿ ಇಲ್ಲದ ರಾಜ್ಯಪಾಲರ ಇಂಗ್ಲಿಷ್ ಭಾಷಣದ ಪ್ರತಿಯನ್ನು ಹರಿದು ತುಳಿದಿದ್ದು, ಮಂತ್ರಿಮಾನ್ಯರ ಅವಿವೇಕ ಮತ್ತು ಅಪ್ರಮಾಣಿಕತೆಯನ್ನು ಸಹಿಸದೆ ನೈತಿಕ ಸಿಟ್ಟಿನಿಂದ ಮೈಕ್ ಮುರಿದೆಸೆದಿದ್ದು; ಮೈಸೂರು ದಸರಾ ವಿರೋಧಿಸಿದ್ದು, ಇವೇ ಮುಂತಾದ ಗೋಪಾಲಗೌಡರ ಸೈದ್ದಾಂತಿಕ ಹೋರಾಟದ ಕೆಲವು ಚಿತ್ರಿಕೆಗಳು ನಾಡಿನ ನೆನಪಿನಲ್ಲಿ ಇಂದಿಗೂ ಉಳಿದಿವೆ. ತತ್ವನಿಷ್ಠ ರಾಜಕಾರಣದ ಪ್ರತಿರೂಪವಾಗಿದ್ದ ಶಾಂತವೇರಿಯವರು 1962ರಲ್ಲಿ ಡಾ. ರಾಮಮನೋಹರ ಲೋಹಿಯಾ ಅವರ ನಿಧನದ ನಂತರ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದರು. ಸಾಹಿತ್ಯ, ಸಂಗೀತ ಕಲೆಗಳ ಬಗ್ಗೆ ಅಪಾರ ಒಲವಿದ್ದ ಗೋಪಾಲಗೌಡರು ಅರವತ್ತರ ದಶಕದಲ್ಲಿ 'ಮಾರ್ಗದರ್ಶಿ' ಪತ್ರಿಕೆಯನ್ನು ಹೊರತಂದರು.
ಐವತ್ತರ ದಶಕದಲ್ಲೇ ಸಮಾಜವಾದಿ ಚಳವಳಿಯ ಪ್ರಭಾವಕ್ಕೊಳಗಾದ ಗೋಪಾಲಗೌಡರು ಕಾಗೋಡು ಸತ್ಯಾಗ್ರಹದ ಮೂಲಕ ರಾಜಕೀಯವನ್ನು ಪ್ರವೇಶಿಸಿದರು. ತಮ್ಮ29ನೇ ವಯಸ್ಸಿನಲ್ಲಿ ಅಂದಿನ ಮೈಸೂರು ರಾಜ್ಯದ ಮೊದಲ ಮಹಾಚುನಾವಣೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ಹೊಸನಗರ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಬದರಿನಾರಾಯಣ ಅಯ್ಯಂಗಾರರ ಎದುರು ಸ್ಪರ್ಧಿಸಿದ ಗೋಪಾಲಗೌಡರಿಗೆ ಠೇವಣಿ 250 ರೂಪಾಯಿ ಕಟ್ಟಲು ಕೂಡ ಹಣವಿರಲಿಲ್ಲ ಅವರ ಮಿತ್ರರೆ ಸಂಗ್ರಹಿಸಿ ಕಟ್ಟಿದರು. ಬಡ ಗೇಣಿದಾರರು, ಕೂಲಿಕಾರರು, ಮಧ್ಯಮ ವರ್ಗದವರು ಜಾತಿ ಮತ ಭೇದವಿಲ್ಲದೆ ಗೌಡರ ಚುನಾವಣಾ ಪ್ರಚಾರಕ್ಕಿಳಿದರು. ವಾಹನದಲ್ಲಿ ಪ್ರಚಾರ ಮಾಡಲು ಹಣವಿರಲಿಲ್ಲ. ಗೋಪಾಲಗೌಡರು ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ಹಳ್ಳಿ ಹಳ್ಳಿಗೆ ಹೋಗಿ ಕರಪತ್ರಗಳನ್ನು ಹಂಚಿ ಮತ ಯಾಚಿಸಿದರು. ಜನಸಾಮಾನ್ಯರೇ ಹಣ ಸಂಗ್ರಹ ಮಾಡಿ ಖರ್ಚಿಗೆ ಕೂಟ್ಟರು. 1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬದರಿ ನಾರಾಯಣ ಅಯ್ಯಂಗಾರರಂಥ ಭಾರೀ ಭೂಮಾಲಿಕ ಅಭ್ಯರ್ಥಿ ಎದುರು ಸ್ಪರ್ಧಿಸಿ ಜಯಶಾಲಿಯಾದ ಗೋಪಾಲಗೌಡರು ಆ ಚುನಾವಣೆಯಲ್ಲಿ ಮಾಡಿದ ಒಟ್ಟು ಖರ್ಚು 5 ಸಾವಿರ ರೂಪಾಯಿ. ಅಲ್ಲಲ್ಲಿ ಸಾಲ ಮಾಡಿ ತಂದ ಈ 5 ಸಾವಿರ ರೂಪಾಯಿಯನ್ನು ಗೌಡರು ತಮಗೆ ಬರುತ್ತಿದ್ದ ಶಾಸಕರ ವೇತನ, ಭತ್ಯೆಗಳ ಮೂಲಕ ತೀರಿಸಿದರು.
ಗೌಡರ ಜೇಬಿನಲ್ಲಿ ದುಡ್ಡು ಇರುತ್ತಿರಲಿಲ್ಲ. ಶಿವಮೊಗ್ಗದಿಂದ ಬೆಂಗಳೂರಿಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಓಡಾಡಲು ಬಸ್ ಚಾರ್ಜ್‌ಗೂ ಕಾಸಿಲ್ಲದಾಗ ಜೊತೆಗಿದ್ದವರೆ ಪ್ರಯಾಣದ ವೆಚ್ಚವನ್ನು ಭರಿಸುತ್ತಿದ್ದರು. ವಿಧಾನಸಭೆಯಲ್ಲಿ ಅಸ್ಪಲಿತವಾಗಿ ಮಾತನಾಡುತ್ತಿದ್ದ ಗೋಪಾಲಗೌಡರು ಜನಸಾಮಾನ್ಯರ, ರೈತಕಾರ್ಮಿಕರ ಪ್ರಶ್ನೆ ಬಂದರೆ ಹುಲಿಯಂತೆ ಗುಡುಗುತ್ತಿದ್ದರು. ವೈಯಕ್ತಿಕವಾಗಿ ಸರಕಾರದಿಂದ ಏನನ್ನೂ ಬಯಸದ ಗೋಪಾಲಗೌಡರು ಅಂದಿನ ಮುಖ್ಯ ಮಂತ್ರಿಗಳು ಇರಲು ಗೃಹ ಮಂಡಲಿಯ ಮನೆಯನ್ನು ತಾವಾಗಿ ಮಂಜೂರು ಮಾಡಲು ಮುಂದಾದರೂ ಅದನ್ನು ನಿರಾಕರಿಸಿದರು. ತಮಗೆ ಕೊಡಬೇಕೆಂದಿರುವ ಮನೆಯನ್ನು ಮನೆಯಿಲ್ಲದವರಿಗೆ ಕೊಡಲು ತಿಳಿಸಿದರು. ಶಾಸಕರಾಗಿದ್ದಾಗ ಬೆಂಗಳೂರಿಗೆ ಬಂದರೆ ಶಾಸಕರ ಭವನದ ತಮ್ಮ ಕೊಠಡಿಯಲ್ಲಿ ಇರುತ್ತಿದ್ದ ಗೋಪಾಲಗೌಡರಿಗೆ ತಮ್ಮ ಊರು ತೀರ್ಥಹಳ್ಳಿ ತಾಲೂಕಿನ ಆರಗದಲ್ಲಿದ್ದ ಪುಟ್ಟ ಗುಡಿಸಲು ಬಿಟ್ಟರೆ ಬೇರೆ ಆಸ್ತಿ ಇರಲಿಲ್ಲ. ಶಾಸಕರ ಭವನವನ್ನು ಬಿಟ್ಟರೆ ಅವರು ತಂಗುತ್ತಿದ್ದುದು ಮೆಜೆಸ್ಟಿಕ್‌ನ ಸುಬೇದಾರ ಛತ್ರ ರಸ್ತೆಯ ಸಮಾಜವಾದಿ ಪಕ್ಷದ ಕಚೇರಿಯಲ್ಲಿ. ಅನಿಶ್ಚಿತ ಹಣಕಾಸಿನ ಪರಿಸ್ಥಿತಿ, ಅವರಿವರಿಂದ ಹಣ ಕೇಳಬೇಕಾದಾಗ ಉಂಟಾಗುವ ಮುಜುಗರ, ದೈಹಿಕ ಅಸ್ವಾಸ್ಥ್ಯ ಹೀಗೆ ಹಲವಾರು ಕಾರಣಗಳಿಂದ ಗೌಡರು ಸುಸ್ತಾಗಿ ಹೋದರು.
ಗೋಪಾಲಗೌಡರಿಗೆ ಅವರ ಬದುಕಿನ ಕೊನೆಯ ದಿನದವರೆಗೆ ಸ್ವಂತದ ಮನೆ ಇರಲಿಲ್ಲ ಮೊದಲ ಸಲ ಶಾಸಕರಾಗಿದ್ದಾಗ ಅಂದಿನ ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯನವರು ಶಾಸಕರ ಕೋಟಾದಲ್ಲಿ ನಿವೇಶನ ಮಂಜೂರು ಮಾಡಿದಾಗ ಗೋಪಾಲಗೌಡರು ನಿರಾಕರಿಸಿದರು. 1957ರ ಚುನಾವಣೆಯಲ್ಲಿ ಗೌಡರು ಪರಾಭವಗೊಂಡಾಗ ಆಗಿನ ಕಂದಾಯ ಮಂತ್ರಿ ಕಡಿದಾಳ ಮಂಜಪ್ಪನವರು ಐದಾರು ಏಕರೆ ಜಮೀನು ಕೊಡಲು ಮುಂದಾದಾಗ ಗೌಡರು, ನನ್ನೊಬ್ಬನಿಗೆ ಆರು ಏಕರೆ ಜಮೀನು ಕೊಡುವ ಬದಲಾಗಿ ಆರು ಜನ ಬಡವರಿಗೆ ಕೊಡಿ. ನಾನು ಸ್ವಂತ ಸಾಗುವಳಿ ಮಾಡುವವನಲ್ಲ. ಉಳುವವನೇ ಹೊಲದೊಡೆಯನಾಗಬೇಕೆಂದು ಹೋರಾಡುತ್ತಿರುವ ನಾನು ಸಾಗುವಳಿ ಮಾಡುವುದಿಲ್ಲ ನನಗೇಕೆ ಭೂಮಿ ಎಂದು ನಿರಾಕರಿಸಿದರು. ಇನ್ನೇನು ಗೋಪಾಲಗೌಡರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಮಂಜೂರು ಮಾಡಿದ ನಿವೇಶನವನ್ನು ಗೌಡರು ಹಿಂದಿರುಗಿಸಲು ಮುಂದಾದರು. ಆದರೆ, ಅವರ ಪತ್ನಿ ಸೋನಕ್ಕ ಕಷ್ಟ ಪಟ್ಟು ಆ ನಿವೇಶನ ಉಳಿಸಿಕೊಂಡರು. ಶಿಕ್ಷಕಿಯಾಗಿದ್ದ ಸೋನಕ್ಕ ತನ್ನ ಸಂಬಳದಲ್ಲಿ ನಿವೇಶನದ ಕಂತುಗಳನ್ನು ಕಟ್ಟಿದರು.ಇಲ್ಲವಾಗಿದ್ದರೆ ಗೋಪಾಲಗೌಡರ ಕುಟುಂಬಕ್ಕೆ ಸ್ವಂತದ ನಿವೇಶನವೇ ಇರುತ್ತಿರಲಿಲ್ಲ.
ಕಟ್ಟಾ ಸಮಾಜವಾದಿಯಾಗಿದ್ದ ಗೋಪಾಲಗೌಡರು ರಾಮ ಮನೋಹರ ಲೋಹಿಯಾ ಅವರ ನಿಕಟವರ್ತಿಯಾಗಿದ್ದರು. ಸೈದ್ಧಾಂತಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಪಾಂಡಿತ್ಯ ಪೂರ್ಣವಾಗಿ ಮಾತಾಡುವಂತೆ ಸಾಹಿತ್ಯ ಸಂಗೀತ, ಮುಂತಾದ ಸಾಂಸ್ಕ್ರೃತಿಕ ಲೋಕದ ಒಡನಾಟ ಹೊಂದಿದ್ದರು. ನವೋದಯ ಕಾಲದ ಕುವೆಂಪು, ಬೇಂದ್ರೆ, ಕಾರಂತರ ಸಾಹಿತ್ಯ ಹಾಗೂ ಪ್ರಗತಿಶೀಲ ಸಾಹಿತ್ಯಕ್ಕೆ ಹೆಸರಾದ ಬಸವರಾಜ ಕಟ್ಟೀಮನಿ, ನಿರಂಜನ ಅವರ ಒಡನಾಟ ಹೊಂದಿದ್ದರು. ನಂತರ ಬಂದ ನವ್ಯ ಸಾಹಿತ್ಯದ ಪಿ.ಲಂಕೇಶ್, ಅಡಿಗ,ಅನಂತಮೂರ್ತಿ, ತೇಜಸ್ವಿ, ಚಂಪಾ ಮೊದಲಾದವರ ಸಾಹಿತ್ಯವನ್ನು ಓದಿಕೊಂಡಿದ್ದರು. ಪಾರದರ್ಶಕ ಪ್ರಮಾಣಿಕತೆ, ತುಂಬು ಮಾನವ ಪ್ರೀತಿ, ನಿರ್ಭೀತಿಯ ಜಾಯಮಾನಕ್ಕೆ ಹೆಸರಾಗಿದ್ದ ಶಾಂತವೇರಿಯವರು 1972 ರ ಜೂನ್ 9 ರಂದು ತಮ್ಮ 49ನೇ ವಯಸಿನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು.
ಮಾಹಿತಿ ಕೃಪೆ: ಸನತ್ ಕುಮಾರ ಬೆಳಗಲಿ ಅವರ ಬರಹ ಮತ್ತು ಇತರ ಅಂತರಜಾಲ ಮಾಧ್ಯಮಗಳು
Shantaveri Gopalagowda 🌷🙏🌷
ಕಾಮೆಂಟ್‌ಗಳು