ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್ ವಿಶ್ವ ಟೆನ್ನಿಸ್ ಆಟದಲ್ಲಿ ಒಂದು ಮಹಾನ್ ಹೆಸರು.
ಲಿಯಾಂಡರ್ ಪೇಸ್ 1973ರ ಜೂನ್ 17ರಂದು ಜನಿಸಿದರು. ಎಂಭತ್ತರ ದಶಕದಲ್ಲಿ ಜೋನ್ ಬೋರ್ಗ್, ಜಿಮ್ಮಿ ಕಾನರ್ಸ್, ಮೆಕೆನ್ರೋ, ಬೋರಿಸ್ ಬೆಕ್ಕರ್, ಕ್ರಿಸ್ ಎವರ್ಟ್, ಮಾರ್ಟಿನ ನವ್ರೋಟಿಲೋವಾ, ಸ್ಟೆಫಿ ಗ್ರಾಫ್ ಅಂತಹ ಮಹಾನ್ ಆಟಗಾರರ ಆಟವನ್ನು ಆಸಕ್ತಿಯಿಂದ ಕಾಣುತ್ತಾ ಅವರು ವಿಂಬಲ್ಡನ್ ಅಂತಹ ಸುಂದರ ಕ್ರೀಡಾಂಗಣಗಳಲ್ಲಿ ತಮ್ಮ ಆಟದ ಮೂಲಕ ರಾರಾಜಿಸುತ್ತಿದ್ದುದನ್ನು ಕಾಣುತ್ತಿದ್ದಾಗ ಅಯ್ಯೋ ನಮ್ಮವರು ಇಲ್ಲಿಲ್ಲವಲ್ಲ ಎಂಬ ವ್ಯಥೆಯನ್ನು ಕಡಿಮೆ ಮಾಡುವಲ್ಲಿ ಸಮರ್ಥನೀಯರಾದವರಲ್ಲಿ ಲಿಯಾಂಡರ್ ಪೇಸ್ ಮಹತ್ವದವರು. ಎಂಟು ಜೋಡಿ ಡಬ್ಬಲ್ಸ್ ಮತ್ತು ಹತ್ತು ಮಿಶ್ರ ಡಬ್ಬಲ್ಸ್ ಟೆನ್ನಿಸ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗಳಿಸಿ ಅವರು ಮಾಡಿರುವ ಸಾಧನೆ ಅಮೋಘವಾದದ್ದು. ವಿಶ್ವದಲ್ಲೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಹಿರಿಯ ವಯಸ್ಸಿಗರೆಂಬ ಕೀರ್ತಿ ಕೂಡಾ ಅವರದ್ದಾಗಿದೆ. 1989ರ ವರ್ಷದ ವಿಂಬಲ್ಡನ್ ಸ್ಪರ್ಧೆಗಳಲ್ಲಿ ಅತ್ಯಪರೂಪವೆನಿಸಿರುವ ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ಎರಡೂ ಕಣಗಳಲ್ಲೂ ಜಯಿಸಿದ ಸಾಧನೆ ಕೂಡಾ ಅವರ ವೈವಿಧ್ಯಮಯ ಸಾಧನೆಗಳಲ್ಲಿ ಸೇರಿವೆ. ಅದರಲ್ಲೂ ಮಾರ್ಟಿನಾ ನವ್ರೋಟಿಲೋವಾ ಎಂಬ ಸಾರ್ವಕಾಲಿಕ ಶ್ರೇಷ್ಠ ಮಹಿಳಾ ಟೆನ್ನಿಸ್ ಪಟು ಲಿಯಾಂಡರ್ ಪೇಸ್ ಅವರನ್ನು ತಮ್ಮ ಟೆನ್ನಿಸ್ ಆಟಕ್ಕೆ ಜೋಡಿ ಮಾಡಿಕೊಂಡು ಹಲವು ಪ್ರಶಸ್ತಿಗಳನ್ನು ಗಳಿಸಿದ್ದು ಇಡೀ ಭಾರತಕ್ಕೆ ಒಂದು ಹೆಮ್ಮೆಯ ಕಿರೀಟ ಕೂಡ. ಮಹೇಶ್ ಭೂಪತಿ ಜೊತೆಗೂಡಿ ಡಬ್ಬಲ್ಸ್ ಟೆನ್ನಿಸ್ ಆಟದಲ್ಲಿ ಭಾರತವನ್ನು ಪ್ರತಿಷ್ಠಿತ ಟೆನ್ನಿಸ್ ಲೋಕದಲ್ಲಿ ಗಣನೀಯವಾಗಿಸಿದ ಕೀರ್ತಿ ಈ ಪೇಸ್ ಎಂಬ ಮಹಾನ್ ಪ್ರತಿಭೆಯದು.
ಅಟ್ಲಾಂಟ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ತಂದುಕೊಟ್ಟದ್ದುರ ಜೊತೆಗೆ ಡೇವಿಸ್ ಕಪ್ ಸ್ಪರ್ಧೆಗಳಲ್ಲಿ ತನ್ನ ದೇಶಕ್ಕಾಗಿ ವೀರಾವೇಶದಿಂದ ಆಡಿ ಅತ್ಯಂತ ಮಹತ್ವದ ಗೆಲುವುಗಳನ್ನು ತಂದುಕೊಟ್ಟ ಲಿಯಾಂಡರ್ ಪೇಸ್ ಸಾಧನೆ ಉತ್ಕೃಷ್ಟವಾದದ್ದು ಮತ್ತು ಟೆನ್ನಿಸ್ ಆಟದಲ್ಲಿ ಮುಂದೆ ಬರಲಿಚ್ಚಿಸಿದ ಭಾರತೀಯ ಮಕ್ಕಳಿಗೆ ಸ್ಫೂರ್ತಿ ತಂದುಕೊಟ್ಟಂತದ್ದು. ವಿಶ್ವ ಡೇವಿಸ್ ಕಪ್ ಸ್ಪರ್ಧೆಗಳಲ್ಲಿ ಅತ್ಯಂತ ಹೆಚ್ಚು ಗೆಲುವು ಸಾಧಿಸಿದ ದಾಖಲೆ ಪೇಸ್ ಅವರದ್ದೇ.
ವಿಂಬಲ್ಡನ್ ಸ್ಪರ್ಧೆಗಳಲ್ಲಿ ಲಿಯಾಂಡರ್ ಪೇಸ್ 2010 ವರ್ಷದಲ್ಲಿ ಪ್ರಶಸ್ತಿ ಗೆದ್ದಾಗ ರಾಡ್ ಲೇವರ್ ನಂತರದಲ್ಲಿ ಮೂರು ವಿಭಿನ್ನ ದಶಕಗಳಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದ ಏಕೈಕ ಆಟಗಾರ ಎಂದೆನಿಸಿದ್ದು ಭಾರತೀಯರಿಗೆಲ್ಲಾ ಪ್ರತಿಷ್ಠೆಯ ವಿಷಯ. ಲಿಯಾಂಡರ್ 43ರ ವಯಸ್ಸಿನಲ್ಲೂ 2016ರ ಫ್ರೆಂಚ್ ಓಪನ್, 2015ರ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಯು.ಎಸ್. ಓಪನ್ ಹೀಗೆ ಎಲ್ಲಾ ಶ್ರೇಷ್ಠ ಗ್ರಾಂಡ್ ಸ್ಲಾಮ್ ಟೆನ್ನಿಸ್ ಸ್ಪರ್ಧೆಗಳಲ್ಲೂ ಜಯಭೇರಿ ಬಾರಿಸಿದ್ದಾರೆ ಎನ್ನುವುದು ಅವರ ಕ್ರೀಡಾ ಬೆಳವಣಿಗೆ, ಕ್ರೀಡಾ ನಿಷ್ಠೆ ಮತ್ತು ಸುದೀರ್ಘ ಕಾಲದ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಂತಿದೆ. ವಿಶ್ವದ ನಾಲ್ಕೂ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಕೆಲವೇ ವಿಶ್ವಶ್ರೇಷ್ಠರಲ್ಲೊಬ್ಬರೆನಿಸಿರುವ ಲಿಯಾಂಡರ್ ಪೇಸ್ ಓವೆನ್ ಡೇವಿಡ್ಸನ್ ಅವರ ಹೆಸರಿನಲ್ಲಿದ್ದ ಅತ್ಯಂತ ಹೆಚ್ಚಿನ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಪುರುಷರ ವಿಭಾಗದಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡವರು.
ಒಮ್ಮೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಇನ್ನೇನು ಆತನ ಕ್ರೀಡಾವಧಿ ಮುಗಿದು ಹೋಯ್ತು ಎಂದು ಇಡೀ ವಿಶ್ವ ಭಾವಿಸಿದ್ದಾಗ ತನ್ನ ಮನಃಶಕ್ತಿಯಿಂದ ಪುನಃ ಕ್ರೀಡಾ ಲೋಕಕ್ಕೆ ಬಂದ ಈತನ ದೃಢಸಂಕಲ್ಪ, ಕ್ರೀಡಾ ಪ್ರೇಮ ಮೆಚ್ಚುವಂತದ್ದು. ಸುಮಾರು 48 ವರ್ಷಗಳ ವಯಸ್ಸಿನ ವರೆಗೆ ನಿರಂತರ ಶ್ರೇಷ್ಠ ಆಟ ಆಡಿದ ಲಿಯಾಂಡರ್ 2020ರ ವರ್ಷದಿಂದ ಪ್ರೊಫೆಷನಲ್ ಟೆನ್ನಿಸ್ ಆಟಕ್ಕೆ ವಿದಾಯ ಹೇಳಿದರು.
ಭಾರತದಲ್ಲಿ ಕ್ರಿಕೆಟ್ಟಿಗೆ ಹೊರತಾದ ಕ್ರೀಡೆಗಳಲ್ಲಿ ಕ್ರೀಡಾಳುಗಳನ್ನು ಬೆಳೆಸಲು ನಮ್ಮ ಪ್ರಕಾಶ್ ಪಡುಕೋಣೆ ಮತ್ತು ಗೀತ್ ಸೇತಿ ಸ್ಥಾಪಿಸಿರುವ ‘ಒಲಿಂಪಿಕ್ ಗೋಲ್ದ್ ಕ್ವೆಸ್ಟ್’ ಕಾಯಕದಲ್ಲಿ ತಮ್ಮನ್ನೂ ಪಾಲುದಾರರಾಗಿಸಿಕೊಂಡಿರುವ ಲಿಯಾಂಡರ್ ಪೇಸ್ ಅಂತಹ ಮಹತ್ವದ ಪ್ರತಿಭೆಗಳ ಕ್ರೀಡಾ ಸಾಧನೆ ಮುಂಬರುವ ಹಲವು ಕ್ರೀಡಾ ತಲೆಮಾರುಗಳಿಗೆ ಸ್ಫೂರ್ತಿ ತುಂಬುವುದರಲ್ಲಿ ಸಂದೇಹವಿಲ್ಲ.
(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಕಾಮೆಂಟ್‌ಗಳು